Tuesday, December 30, 2008

ಅಪ್ಪಯ್ಯಾ..ಅಪ್ಪಯ್ಯಾ.. ಆನು ಟೂರಿಗೆ ಹೋಕ್ತಿ..

ಅಂತ ಏಳನೆ ಕ್ಲಾಸಿನಲ್ಲಿ ಓದುತ್ತಿರುವ ಮಗ ವರಾತ ಶುರು ಹಚ್ಚಿದ. ಏಕಮಾತ್ರ ಒಬ್ಬನೇ ಒಬ್ಬ(!!!!) ಮಗನನ್ನು ಶಾಲೆಯ ಟೂರಿಗೆ ಕಳುಹಿಸುವುದೆಂದರೆ ಅದೇನೋ ಆತಂಕ ಮನೆಯವಳಿಗೆ. ನನಗೂ ಆತಂಕ ಇಲ್ಲವೆಂದಲ್ಲ ಆದರೂ ಅವಳಷ್ಟಿಲ್ಲ. ನನ್ನ ಆತಂಕದ ಕಾರಣ ಇಲ್ಲಿಂದ ಚಿತ್ರದುರ್ಗ ಸರಿ ಸುಮಾರು ಇನ್ನೂರಾ ಐವತ್ತು ಕಿಲೋಮೀಟರ್ ದೂರ. ಹೋಗಿ ಬರುವುದು ಒಂದೇ ದಿನದಲ್ಲಿ. ಸುಸ್ತಾಗುತ್ತಲ್ಲ ಎಂಬುದು. ಆದರೂ ಅವನ ಆರಂಬಿಕ ಉತ್ಸಾಹಕ್ಕೆ "ಟೂರು ಗೀರು ಎಲ್ಲಾ ಬ್ಯಾಡ ಸುಮ್ನಿರು" ಎಂದು ತಣ್ಣೀರೆರಚಿದೆ. (ನನ್ನ ಅಪ್ಪಯ್ಯನೂ ಹೀಗೆ ಮಾಡುತ್ತಿದ್ದ ನನಗೆ) ನನ್ನೆದುರು ಸುಮ್ಮನಾದ ಮಗ ದೊಡ್ಡಪ್ಪನ ಮನೆಗೆ ಹೋದ. ಸಂಜೆ ದೊಡ್ಡಪ್ಪನ " ಹೋಗ್ಬರ್ಲಾ ಹುಡುಗ್ರು ಟೂರಿಗೆ ಹೋಪ್ದು ಅಂದ್ರೆ ಖುಷಿಯಪಾ ಪಾಪ" ಎಂಬ ವಶೀಲಿಬಾಜಿಯೊಂದಿಗೆ ವಾಪಾಸು ಬಂದ. ಆದರೂ ನಾನು ಬಗ್ಗಲಿಲ್ಲ. ಮಾರನೇ ದಿನ ಅವನ ಮಂಜುಮಾವನ ವಶೀಲಿ ಸಿಕ್ಕಾಪಟ್ಟೆ ಬಿಗಿಯಾಗಿದ್ದರಿಂದ ಹಾಗೂ ಮಗನ ಕಡೆ ಪಾರ್ಟಿ ದೊಡ್ದದಾದ್ದರಿಂದ ಟೂರಿಗೆ ತಾತ್ವಿಕ ಒಪ್ಪಿಗೆ ಕೊಟ್ಟೆ. ಮಗ ದಿಲ್ ಕುಷ್.
ಇವಿಷ್ಟು ಟೂರಿಗೆ ಇನ್ನೂ ಹದಿನೈದು ದಿವಸ ಇರುವಾಗಲೇ ಮುಗಿದ ಮಾತುಕತೆ. ಈ ಮಾತುಕತೆ ಮುಗಿದ ಮಾರನೇ ದಿನ ಅಡಿಗೆ ಮನೆಯಲ್ಲಿ ದಡಾರನೆ ಬಿದ್ದು ಮಳ್ಳಂಡೆಯನ್ನು ಬುರುಬುರು ಉಬ್ಬಿಸಿಕೊಂಡು ಕೂತ ಮಗರಾಯ. ಸರಿ ಡಾ. ಪ್ರಸನ್ನರಲ್ಲಿಗೆ ಕರೆದುಕೊಂಡು ಹೋಗಿ ಅದಕ್ಕೊಂದು ರಿಮೂವಬಲ್ ಬ್ಯಾಂಡೇಜ್ ಸುತ್ತಿಸಿ ಸಾವಿರ ರೂಪಾಯಿ ತೆತ್ತು ಮನೆಯತ್ತ ಮಗನನ್ನು ಕರೆದುಕೊಂಡು ಹೊರಟೆ. ಆವಾಗ " ಅಪ್ಪಯ್ಯಾ ಡಾಕ್ಟ್ರಿಗೆ ಎಷ್ಟು ಖರ್ಚಾತು..?" ಎಂದ. " ಸಾವಿರ ರೂಪಾಯಿ" ಎಂದೆ. ಸ್ವಲ್ಪ ಹೊತ್ತು ಸುಮ್ಮನಿದ್ದವ ನಂತರ " ನಿಂಗೆ ಸುಮ್ನೆ ದುಡ್ಡು ದಂಡ ಮಾಡ್ಸಿ ಬಿಟ್ಟಿ ಹಂಗಾಗಿ ಟೂರಿಗೆ ಆನು ಹೋಕ್ತ್ನಲ್ಲೆ ಅದರ ದುಡ್ಡು ನಿಂಗೆ ಉಳತ್ತು ತಗ" ಎಂದ. ಇರ್ಲಿ ಬಿಡು ಅಂತ ಸುಮ್ಮನುಳಿದೆ.
ಕಾಲಿಗೆ ಬ್ಯಾಂಡೇಜ್ ಸುತ್ತಿದ್ದರಿಂದ ಮಡಚಲು ಆಗುತ್ತಿರಲಿಲ್ಲ. ಹಾಗಾಗಿ ಸ್ಕೂಲಿಗೆ ದಿನಾಲೂ ಬೈಕಿನಲ್ಲಿ ಬಿಟ್ಟು ಬರುವುದು ಹಾಗೂ ಸಂಜೆ ಕರೆದುಕೊಂಡು ಬರುವುದು ನಿತ್ಯದ ಕಾಯಕವಾಯಿತು. ಏತನ್ಮಧ್ಯೆ ಸ್ಕೂಲಿನ ಚಿತ್ರದುರ್ಗದ ಟೂರು ಹತ್ತಿರ ಬರುತ್ತಿತ್ತು. ಪ್ರಾಯಶ: ನಿತ್ಯ ಕ್ಲಾಸಿನಲ್ಲಿ ಟೂರಿನದ್ದೇ ಮಾತುಕತೆ ನಡೆಯುತ್ತಿತ್ತು . ಹಾಗಾಗಿ ಸಂಜೆ ಮನೆಗೆ ಬರುವಾಗ ಮಗರಾಯನಿಗೆ ಟುರಿನದೇ ಕತೆ " ಅಪ್ಪಯ್ಯ ಚಿತ್ರದುರ್ಗ ಅಂದ್ರೆ ಬಯಲು ಸೀಮೆ ಸಿಕ್ಕಾಪಟ್ಟೆ ಬಿಸಿಲು, ಅಲ್ಲಿಗೆ ಹೋಪ್ದು ಎಷ್ಟು ತ್ರಾಸು, ಆನು ಹೋಪದು ಇಲ್ಲೆ ಅರಾಮಾತು ಯಂಗೆ" ಅಂತಲೋ ಅಥವಾ " ಅಪ್ಪಯ್ಯಾ ಬೆಳಗಿನ ಜಾವ ಐದು ಗಂಟೆಗೆ ಹೊರಡಕಡ, ರಾತ್ರಿ ವಾಪಾಸು ಸ್ಕೂಲಿಗೆ ಬಂದು ಉಳಿಯಕಡ, ಆನು ಹೋಪದು ಇಲ್ಲೆ ಅರಾಮಾತು ಯಂಗೆ " ಹೀಗೆ ಒಂಥರಾ ಹೋಗಲಾರೆನಲ್ಲ ಎಂಬುದನ್ನು ಒಳ್ಳೆಯದೇ ಆತು ಎಂದು ತನ್ನಷ್ಟಕ್ಕೆ ಸಮಾಧಾನದ ಕಾರಣದೊಂದಿಗೆ ನಿತ್ಯ ಸುದ್ದಿ ಹೇಳಲು ಶುರು ಮಾಡಿದ. ಅಲ್ಲಿಗೆ ನನಗೆ ಅವನ ಟೂರಿನ ಗುಂಗು ಮನವರಿಕೆಯಾಗತೊಡಗಿತು. ಆದರೆ ಡಾಕ್ಟರ್ ಇಪ್ಪತ್ತು ದಿವಸ ಬ್ಯಾಂಡೇಜ್ ಬಿಚ್ಚುವಂತಿಲ್ಲ ಎಂದಿದ್ದರು.ಅದಕ್ಕೊಂದು ಉಪಾಯ ಟೂರಿಗೆ ಇನ್ನು ಮೂರು ದಿನ ಬಾಕಿ ಇದೆ ಎನ್ನುವಾಗ ಶುರುವಾಯಿತು.
ಬೆಳಿಗ್ಗೆ ಸ್ನಾನ ಮಾಡಲು ಬ್ಯಾಂಡೇಜ್ ಬಿಚ್ಚಿದಾಗ " ಅರೆ ಒಂಚೂರು ನೋವೇ ಇಲ್ಲೆ" ಎಂದು ದಡಬಡ ಬಚ್ಚಲು ಮನೆಯಿಂದ ನಡೆದುಕೊಂಡು ಬಂದು ಹೇಳಿದ. ಪಟಪಟ ಮಡಚಿದ. ಆದರೆ ಬಡ್ಡಿಮಗಂದು ಕಾಲು ಸ್ವಲ್ಪ ನೋಯುತ್ತಿತ್ತು ಎಂಬುದು ಮುಖದಲ್ಲಿ ಗೊತ್ತಾಗುತ್ತಿತ್ತು. ಆದರೂ ಹಲ್ಲುಕಚ್ಚಿ ಸಹಿಸಿಕೊಂಡ. ಅಂತೂ ಹಾಗೂ ಹೀಗೂ ಮಾಡಿ ಟೂರಿಗೆ ಹೋಗುವುದು ಇನ್ನೊಂದು ದಿನ ಬಾಕಿ ಇದೆ ಎನ್ನುವಾಗ ಸೈಕಲ್ ಹೊಡೆದು ತಾನು ಪರ್ ಫೆಕ್ಟ್ ಎಂದು ರುಜುವಾತು ಪಡಿಸಿ " ಅಪ್ಪಯ್ಯಾ ಬಿಸಿಲು ಜೋರಾದ್ರೆ ಹೆಂಗಿರ್ತು ಅಂತ ಗೊತ್ತಾಪ್ಲೆ ಬಯಲು ಸೀಮೆಗೆ ಹೋಯಕು ಅಲ್ದಾ..? ಬೆಳಿಗಿನ ಜಾವ ಎದ್ದು ಹೋಪ್ಲೆ ಲಾಯ್ಕಿರ್ತು ಅಲ್ದಾ?. ರಾತ್ರಿ ಸ್ಕೂಲಲ್ಲೇ ಉಳ್ಕಂಬದು ಎಂದ್ರೆ ಒಂಥರಾ ಮಜಾ ಅಲ್ದಾ?" ಎನ್ನುವ ಪ್ರಶ್ನೆಗಳ ಮೂಲಕ ತಾನು ಟೂರಿಗೆ ಹೋಗುವೆ ಅನ್ನುವ ವಿಚಾರ ಮನದಟ್ಟು ಮಾಡಿದ.
ಹೊರಡುವ ಮುನ್ನಾದಿನ ರಾತ್ರಿ ನಿದ್ರೆಯೇ ಇಲ್ಲ. ಅಮ್ಮ " ನಾಲ್ಕು ಗಂಟೆ ಆತಾ" ಎಂದು ಹನ್ನೆರಡೂವರೆಯಿಂದಲೇ ಶುರು ಹಚ್ಚಿ ಕೊನೆಗೂ ಮೂರೂವರೆಗೆ ಎದ್ದು ಸ್ನಾನ ಸಂದ್ಯಾವಂದನೆ ಪೂರೈಸಿ ತಾನೆ ಬಟ್ಟೆ ಹುಡುಕಿ ಹಾಕಿಕೊಂಡ ( ದಿನನಿತ್ಯ ಇವಕ್ಕೆಲ್ಲಾ ತಾಯಿ ಮಗನ ಮಧ್ಯೆ ಒಂದು ದೊಡ್ಡ ಯುದ್ಧವೇ ನಡೆಯುತ್ತಿತ್ತು) "ಸರ್ ಕ್ಯಾಮೆರಾ ತರಲು ಹೇಳಿದ್ದಾರೆ ಎಂದು ಅದನ್ನು ತೆಗೆದುಕೊಂಡು ಖರ್ಚಿಗೆ ಅಂತ ಇನ್ನೂರು ಇಸಕೊಂಡು ಟಾ ಟಾ ಹೇಳಿದ.
ಮತ್ತೆ ಯಥಾಪ್ರಕಾರ ಚಿತ್ರದುರ್ಗಕ್ಕೆ ಟೂರಿಗೆ ಹೋಗಿ ಬಂದ. ಅದು ಮಕ್ಕಳೆಂದರೆ ಹಾಗೆ ಮತ್ತು ಅಪ್ಪಯ್ಯನೆಂದರೆ ಹೀಗೆ ಹಾಗೂ ಯಾವತ್ತೂ ಯಾವಕಾಲಕ್ಕೂ ಹಾಗೆ ಹೀಗೆ. ನಾನೂ ಮೂವತ್ತು ವರ್ಷಗಳ ಹಿಂದೆ ಹೀಗೆ ಟೂರಿಗೆ ಬೇಡ ಅಂದಾಗ ಅಂದಿದ್ದೆಲ್ಲ ನೆನಪಾಯಿತು . ಕಾಲ ಚಕ್ರವೇ ಉರುಳು ಉರುಳುರುಳು. ಅದೆಷ್ಟು ಬೇಗ ನಾನು ಹೀಗೆಯೇ ಟೂರಿಗೆ ಹೋಗಿದ್ದ ನೆನಪು ಹಸಿರಿರುವಾಗಲೇ ನನ್ನ ಮಗನೂ ಹೀಗೊಂದು ಟೂರಿಗೆ ಹೋಗಿ ಬರುವ ಸಮಯ ಬಂತು. ಅಲ್ಲಿಗೆ ನನಗೆ.......?
ಹಾ ಮರೆತೆ ಅದೇ ಸೂರ್ಯ ಅದೇ ಭೂಮಿ ಅದೇ ನೀರು ಅದೇ ಗಾಳಿ ಅಂತ ಹೊರನೋಟಕ್ಕೆ ಅನಿಸಿದರೂ ಎಲ್ಲವೂ ಬೇರೆಯದೇ. ಹೋದ ವರ್ಷ ನಗು ನಗುತ್ತಾ ಇದ್ದವರು ಇಂದು ಅಳುತ್ತಿರಬಹುದು ಹೋದ ವರ್ಷ ಅಳುತ್ತಾ ಇದ್ದವರು ಇಂದು ನಗುತ್ತಾ ಇರಬಹುದು ನಗು ಅಳು ಎಲ್ಲಾ ಆರಂಭವೂ ಅಲ್ಲ ಅಂತ್ಯವೂ ಅಲ್ಲ. ಮತ್ತೆ ಮತ್ತೆ ಹುಟ್ಟುತ್ತವೆ ಸಾಯುತ್ತವೆ ಬದಲಾಗುತ್ತವೆ. ಈ ನಡುವೆ ಮತ್ತೊಂದು ವರ್ಷ ಬಂದಿದೆ. ನನಗೆ ನಿಮಗೆ ಹರ್ಷ ತರಲಿ, ಕಷ್ಟ ಎದುರಿಸುವ ಶಕ್ತಿ ಬರಲಿ.

ಬಾಯಿಗೆ ಬಂದಿತು ಹೃದಯಾ....!


ನೋಡಿ ಈ ಹುಡುಗನಿಗೆ ಹೆದರಿಕೆಯೂ ಇಲ್ಲ ಹೇಸಿಕೆಯೂ ಇಲ್ಲ. ಕುರಿಯೆಂಬ ಕುರಿಯ ಹೃದಯವನ್ನು ಬಾಯಿಗಿಟ್ಟುಕೊಂಡು ಪೀಪಿ ಊದುತ್ತಿದ್ದಾನೆ. ನಮ್ಮೂರ ಬಸ್ಟ್ಯಾಂಡ್ ಗೆ ನಡೆದು ಹೋಗುತ್ತಿದ್ದೆ. ಕೂಲಿಕಾರ್ಮಿಕರು ಕೆರೆಯ ಬಳಿ ಹೊಳೆ ಹಬ್ಬದ ಸಮಾರಂಭಕ್ಕೆ ಸೇರಿದ್ದರು. ಒಂದಿಷ್ಟು ಜನ ಕುರಿಯ ಚರ್ಮ ಸುಲಿಯುತ್ತಿದ್ದರು ಮತ್ತೊಂದಿಷ್ಟುಜನ ಕುರಿಮಾಂಸ ಪಾಲು ಹಾಕುತ್ತಿದ್ದರು. ದೊಡ್ಡವರು ಅತ್ತ ಪಾಲು ಹಾಕುತ್ತಿದ್ದಾಗ ಈತ ಹೃದಯವನ್ನೇ ಎತ್ತಿಕೊಂಡು ಬಂದು ರಸ್ತೆಬದಿಯಲ್ಲಿ ಆಟವಾಡುತ್ತಿದ್ದ. ಹೃದಯ ಬಾಯಿಗೆ ಬಂದ ಹಾಗೆ ಆಯಿತು ಎಂದು ನಾವೆಲ್ಲ ಆವಾಗ ಈವಾಗ ಆಡಿಕೊಳ್ಳುತ್ತೇವಲ್ಲ ಅದು ಹೀಗೆಯೇ ಇರಬೇಕು...!?. ಹುಡುಗ ಹೃದಯಕ್ಕೆ ರಕ್ತ ಪೂರೈಸುವ ನಾಳವನ್ನು ಊದುವ ಪರಿ ನೋಡಿದರೆ ಮತ್ತೆ ಸಂಚಲನ ಉಂಟುಮಾಡಿ ಕುರಿಯನ್ನು ಬದುಕಿಸುತ್ತಾನೇನೋ ಎಂಬಂತಿದೆ. ನನಗೆ ಪೋಟೋ ತೆಗೆಯಲು ಒಮ್ಮೆ ಮುಜುಗರವಾದರೂ ನಂತರ ನಿಮ್ಮಗಳ ನೆನಪಾಗಿ ಗಟ್ಟಿ ಮನಸ್ಸಿನಿಂದ ಚಕ ಚಕ ಪೋಟೋ ತೆಗೆದೆ. ನಿಮಗೆ ಇಂತಹ ದೃಶ್ಯ ಸಿಕ್ಕುವುದು ಅಸಾದ್ಯ. ಈ ಮನುಷ್ಯನೆಂಬ ಮನುಷ್ಯನಿಗೆ ಹೀಗೆ ನೂರಾರು ಜೀವಿಗಳು ಚೆಲ್ಲಾಟದ ವಸ್ತು ಅವುಕ್ಕೋ ಪ್ರಾಣ ಹೋದರೂ ಪ್ರಾಣಸಂಕಟ. ಏನೇ ಇರಲಿ ಅವರವರ ಭಾವಕ್ಕೆ ಅವರವರ ಭಕುತಿಗೆ....ಅಲ್ವಾ..? ನೂರು ಪುಟದಲ್ಲಿ ಹೇಳಲಾಗದ್ದು ಒಂದು ಪಟ(ಚಿತ್ರ)ದಲ್ಲಿ ಹೇಳಬಹುದಂತೆ. ಇದಕ್ಕೆ ಇಷ್ಟು ಹೆಚ್ಚಾಯಿತು. ಇನ್ನು ಮುಂದಿನದು ನಿಮಗೆ ಬಿಟ್ಟದ್ದು....
ವಿಸೂ: ಪಟದಲ್ಲಿ ಇರುವುದು ಹೃದಯ ಅಲ್ಲ ಶ್ವಾಸಕೋಶ ಅಂತ ನಮ್ಮ ವಿಕಾಸ್ ತಿದ್ದಿದ್ದಾರೆ. ಇದ್ದರೂ ಇರಬೈದು ನಂಗೆ ಇನ್ನೂ ದೇಹದ ಹೊರಗಿನದ್ಡೇ ಸಂಪೂರ್ಣ ಗೊತ್ತಿಲ್ಲ ಒಳಗಿನದ್ದು ಆಮೆಲಾಯಿತು. ಬಾಯಿಗೆ ಬಂದಿತು ಶ್ವಾಸಕೋಶ ಎಂದು ಓದಿಕೊಳ್ಳಿ

Sunday, December 28, 2008

ಎರಡು ಬ್ಲಾಗ್ ಗಳು

"ನನಗೇಂತ ಹಣ್ಣು ಕೊಳ್ಳಲು ಅಪ್ಪಯ್ಯ(ಮಾವ) ಹಣ್ಣಿನಂಗಡಿಗೆ ಹೋಗಿದ್ದರಿರಬೇಕು. ಬಸ್ಸು ಇನ್ನೇನು ಬಿಡಬೇಕು ಅನ್ನುವಷ್ಟರಲ್ಲಿ ಬಂದೇ ಬಿಟ್ಟರು. ಕಿಟಕಿಯಲ್ಲಿ ಹಣ್ಣು ಕೊಟ್ಟರು. ತಗೊಂಡೆ. ಇನ್ನೊಂದು ಬಾರಿ ಅವರನ್ನಪ್ಪಿ ಅಳಬೇಕೆನ್ನಿಸಿದರೂ ಬಸ್ಸು ಹೊರಟೇ ಬಿಟ್ಟಿತು. ಟಾ...ಟಾ..." ಹೀಗೆ ಶಾಂತಲಾ ಭಂಡಿಯವರ ನಕ್ಕುಬಿಡಿ ಒಮ್ಮೆ ಬರಹ ನೆನಪು ಕನಸುಗಳ ನಡುವೆ ಎಂಬ ಬ್ಲಾಗ್ ಮುಖಾಂತರ ತಲುಪುತ್ತದೆ http://shantalabhandi.blogspot.com/). ಊರಿಂದ ವಾಪಾಸು ಹೊರಟಾಗ, ಕೊಟ್ಟ ಮನೆಯಲ್ಲಿ ನಡೆಯುವ ಸಣ್ಣ ಘಟನೆಯನ್ನು ನಮ್ಮ ಕಣ್ಣಮುಂದೆ ಬಿಚ್ಚಿಡುವಲ್ಲಿ ಶಾಂತಲಭಂಡಿ ಯಶಸ್ಸು ಸಾಧಿಸುತ್ತಾರೆ. ಬರಹದ ಆರಂಭದಲ್ಲಿ ನಮಗೆ ಶಾಂತಲಾ ಭಂಡಿ ಯಾಗಿದ್ದವರು ಬರಹದ ಮುಕ್ತಾಯದಲ್ಲಿ ನಮಗೆ ಗೊತ್ತಿಲ್ಲದಂತೆ ತನ್ನದೇ ಕಥೆ ಹೇಳುತ್ತಾ ನಮ್ಮ ನಿಮ್ಮ ಅಕ್ಕತಂಗಿಯರಂತೆ ಅನಿಸಿ ಶಾಂತಲಕ್ಕ ಆಗಿಬಿಡುತ್ತಾರೆ. ಅವರೆಲ್ಲೋ ನಾವೆಲ್ಲೋ ಎನ್ನುವ ಸಂಬಂಧ ಬ್ಲಾಗ್ ಮೂಲಕ ನಮಗೆ ಅವರಿಗೆ ಗೊತ್ತಿಲ್ಲದಂತೆ ಒಂದು ಸುಮಧುರ ಬಾಂಧವ್ಯ ಹುಟ್ಟಿಕೊಂಡಿರುತ್ತದೆ. ಇದಕ್ಕೆ ಬರಹಗಳು ಎನ್ನುವುದು. ಓದಿನ ಆರಂಭದಲ್ಲಿ ಅಪರಿಚಿತರು ಓದಿದನಂತರ ಅಪರಿಚಿತರಾದರೂ ಅದು ಹೇಗೋ ಪರಿಚಿತರು. ಹೀಗೆ ಎಲ್ಲಿಯದೋ ಕಥೆಯನ್ನು ಯಾರಿಗೋ ತಲುಪಿಸುವ ಬ್ಲಾಗ್ ಗೆ ಜೈ ಅನ್ನೋಣ.
ಇದು ತೀರ್ಪು ಅಂದ್ಕೊಬೇಡಿ, ಚಪ್ಪಾಳೆ ಅನ್ನಿ, ಹಸ್ತಲಾಘವ ಅನ್ನಿ, 'ಗೋ-ಪರಾಕ್' ಅನ್ನಿ ಅಥವಾ 'ಭೇಷ್' ಎಂಬ ಹೆಸರಿನಲ್ಲಿ ಬೆನ್ನಿಗೊಂದು ಮೆದುಬಾರು ಅಂದುಕೊಳ್ಳಿ. ಉತ್ತಮ, ನಂಬಲಸಾಧ್ಯ ಕೆಲಸ ಮಾಡುತ್ತಿದ್ದೀರಿ. ನಿಮ್ಮೊಳಗೊಬ್ಬ ಇಷ್ಟೊಂದು ಚಟುವಟಿಕೆಯ, ಚಲನಶೀಲ, ರಂಜನೀಯ, ಜೀವಪರ, ರೈತಪರ, ಸಹೃದಯೀ ಶ್ರಮಿಕ ಉದಯಶಂಕರ್ ಇದ್ದಾರೆ ಅನ್ನೋದೇ ಗೊತ್ತಿರಲಿಲ್ಲ. ನಾನು ಪ್ರಜಾವಾಣಿಯಲ್ಲಿದ್ದಾಗ ದಿನಾ ಮೆಲ್ಲಗೆ ಬಂದು 'ಇಂದಿನ ಈದಿನ' ವನ್ನು ತೋರಿಸಿ ಹೋಗುತ್ತಿದ್ದ ದೊಗಲೆ ಅಂಗಿಯೊಳಗಿನ ಉದಯಶಂಕರ್ ಬೇರೆಯೇ ಇರಬಹುದೆ?
ನಿಮ್ಮ ಬ್ಲಾಗ್ ನಿತ್ಯ ನೂತನವಾಗಿದೆ, ಸುಂದರವಾಗಿದೆ, ಸಮೃದ್ಧವಾಗಿದೆ. ಹೀಗೆಯೇ ಸುದೀರ್ಘ ಸುಮಂಗಲಿಯಾಗಿರಲಿ ಎಂದು ಹಾರೈಸುತ್ತೇನೆ.
ಅಂತ
ನಾಗೇಶ್ ಹೆಗಡೆಯವರು ಬ್ಲಾಗ್ ಗೆ ಹಾರೈಸಿದ್ದಾರೆ ಎಂದಮೇಲೆ ಆ ಬ್ಲಾಗ್ ಬಗ್ಗೆ ನಾವು ಹೇಳುವುದು ಇನ್ನೇನು ಉಳಿದಿದೆ..!?. ಅದು ನೆತ್ರಕೆರೆ ಉದಯಶಂಕರ್ ರವರ ಬರಪ್ಪೂರ ಮಾಹಿತಿಯ (http://paryaya.blogspot.com/) ಬ್ಲಾಗ್. ಅಲ್ಲಿ ಏನುಂಟು ಏನಿಲ್ಲ?, ಇಂದಿನ ಇತಿಹಾಸ ಎಂಬ ಬರವಣಿಗೆಯ ಮೂಲಕ ನಮಗೆ ಪ್ರಪಂಚ ತೋರಿಸುತ್ತಾರೆ ನೆತ್ರಕೆರೆ. ಪ್ರಿಂಟ್ ಮೀಡಿಯಾದಲ್ಲಿ ಉದ್ಯೋಗಿಯಾಗಿರುವ ನೆತ್ರಕೆರೆ ತಾವು ಕೆಲಸ ಮಾಡುವ ಪ್ರಜಾವಾಣಿಯಷ್ಟೇ ತಮ್ಮ ಬ್ಲಾಗನ್ನೂ ಒಪ್ಪ ಓರಣವಾಗಿದ್ದಾರೆ. ಬ್ಲಾಗ್ ನ ಬದಿಯಲ್ಲಿ ಮಾಹಿತಿ ಮಾಹಿತಿ ಮಾಹಿತಿ ಕ್ರಿಕೆಟ್ ನಿಂದ ಶೇರ್ ಸೂಚ್ಯಂಕದ ವರೆಗೂ ಹರಿದು ಹೊಳೆಯಾಗಿದೆ.
ಹೀಗೆ ತಮ್ಮದೇ ವಿಷಯವನ್ನು ತಮ್ಮದೇ ಘಟನೆಯನ್ನು ಬೇರೆಯದೇ ವಿಷಯವನ್ನು ಬೇರೆಯದೇ ಮಾಹಿತಿಯನ್ನು ಶ್ರದ್ದೆಯಿಂದ ಯಾವ ಪ್ರತಿಪಲಾಪೇಕ್ಷೆ ಇಲ್ಲದೆ ಅಪ್ಲೋಡ್ ಮಾಡುವ ಬ್ಲಾಗಿಗಳಿಗೆ ಒಂದು ತ್ಯಾಂಕ್ಸ್ ಸಲಾಮ್. ಮತ್ತೆ ಮುಂದಿನವಾರದವ್ ಬೇಟೆಗೆ ಯಾರು ಸಿಗುತ್ತಾರೋ ನೋಡೋಣ. ಅಲ್ಲಿಯವರೆಗೆ ಟೆಕ್ ಕೇರ್. -ಕೆ.ಆರ್.ಶರ್ಮಾ.ತಲವಾಟ

Thursday, December 25, 2008

ಬಿಗ್ನೋನಿಯಾ ಎಂಬ ಮಾಂತ್ರಿಕ ಹೂವು






ಹೂವುಗಳ ಅಂದಕ್ಕೆ ಅದರ ಪರಿಮಳಕ್ಕೆ ಮನಸೋಲದವರಿಲ್ಲ. ಸಹಸ್ರಾರು ಜಾತಿಯ ಹೂವುಗಳ ನೂರಾರು ತರಹದ ಅದರ ಪರಿಮಳ ಆಹಾ ಸೂಪರ್. ಕಣ್ಣಿಗೆ ಚಂದದ ಜತೆ ಪರಿಮಳ ಸೂಸುವ ಮಲ್ಲಿಗೆ ಜಾಜಿ ಸಂಪಿಗೆ ಗುಲಾಬಿ ಮುಂತಾದವುಗಳಾದರೆ ಡಬ್ಬಲ್ ಪ್ರಾಫಿಟ್. ಪರಿಮಳಯುಕ್ತ ಮಲ್ಲಿಗೆ ಮುಂತಾದ ಹೂವುಗಳು ಶೃಂಗಾರ ರಸಕ್ಕೂ ಸೈ. ಹೀರೋಯಿನ್ ಗೆ ಒಂದೇ ಒಂದು ಮಲ್ಲಿಗೆ ದಂಡೆ ಮುಡಿಸಿದರೆ ಅಲ್ಲಿಯೇ ಪಟಾಯಿಸಿಕೊಳ್ಳಬಹುದು ಎಂಬುದು ಸಿನೆಮಾದವರ ನಂಬಿಕೆ. ಅದೇನು ತೀರಾ ಸುಳ್ಳಲ್ಲ ಮಲ್ಲಿಗೆ ಜಾಜಿ ಮುಂತಾದ ಹೂವುಗಳಿಗೆ ಮನಸ್ಸನ್ನು ಶೃಂಗಾರಕ್ಕೊಯ್ಯುವ ತಾಕತ್ತಿದೆ.
ಇನ್ನು ಪರಿಮಳ ರಹಿತ ಆದರೆ ನೊಡಲು ಸುಂದರವಾದ ಹೂವುಗಳೂ ನೂರಾರು ಇವೆ. ದಾಸವಾಳ ಮುಂತಾದವುಗಳು ಆ ವರ್ಗಕ್ಕೆ ಸೇರುತ್ತವೆ. ಅವು ಹೂವನ್ನು ಯಾಕೆಬಿಡುತ್ತವೆ ಎನ್ನುವುದೂ ಇಲ್ಲಿಯವರೆಗೆ ಗೊತ್ತಿಲ್ಲ. ಕಾರಣ ಹಲವು ಜಾತಿ ತನ್ನ ಬೀಜದ ಮೂಲಕ ವಂಶಾಭಿವೃದ್ಧಿಗಾಗಿ ದುಂಬಿಯನ್ನು ಆಕರ್ಷಿಸಲು ಹೂವುಬಿಡುತ್ತವೆ. ತನ್ಮೂಲಕ ಕಾಯಿ ಫಲಿತಗೊಳ್ಳುತ್ತವೆ. ಆದರೆ ದಾಸವಾಳ ಗುಲಾಬಿ ಮಲ್ಲಿಗೆ ಮುಂತಾದವುಗಳು ಕಾಯಿಇಡುವುದೇ ಇಲ್ಲ. ಗೆಲ್ಲಿನ ಮೂಲಕವಷ್ಟೇ ವಂಶಾಭಿವೃದ್ಧಿ. ಹಾಗಾದರೆ ಅವು ಹೂವು ಬಿಡುತ್ತವೇಕೆ?. ನಾಗೇಶ ಹೆಗಡೆಯವರನ್ನೇ ಕೇಳಬೇಕು. ಮನುಷ್ಯನ ಜಾತಿಯಲ್ಲಿ ಗಂಡು ಎಂಬುದಿದೆ ಅದು ಹೆಣ್ಣಿಗಾಗಿ ಹಪಹಪಿಸುತ್ತಿರುತ್ತದೆ ತಾನು ಅರಳಿ ಅವನ ಕೈಗೆ ಸಿಕ್ಕಿ ಅವನಮೂಲಕ ಅವಳ ಮುಡಿಸೇರಿ ಒಂದೇ ಒಂದು ಡ್ಯುಯೆಟ್ ಹಾಡುವಂತಾಗಲಿ ಎಂದು ಯಾವ ಹೂವು ಬಿಟ್ಟಿರಲಿಕ್ಕಿಲ್ಲ. ಸರಿ ಹಾಗಾದರೆ ಹೂವು ಬಿಟ್ಟಿದ್ದ್ಯಾಕೆ?. ಸುಮ್ಮನೆ ಅರಳಿ ಮುದುಡುವುದ್ಯಾಕೆ? ಎಂಬ ಪ್ರಶ್ನೆಗೆ ಸಮರ್ಪಕವಾದ ಉತ್ತರ ಸಿಗದು. ಆದರೂ ಒಂದಾನೊಂದು ಕಾಲದಲ್ಲಿ ಅವು ಕಾಯಾಗುತ್ತಿದ್ದವು ಕಾಲಾನಂತರ ಪ್ರಕೃತಿಯಲ್ಲಿನ ಏರುಪೇರು ಅವುಕ್ಕೆ ಕಾಯಾಗುವ ಸಂದರ್ಭವನ್ನು ತಪ್ಪಿಸಿತು. ಆದರೆ ಗಿಡಗಳ ಯೋಚನಾ ಕೋಶಕ್ಕೆ ಅವು ರವಾನೆಯಾಗಿಲ್ಲ. ಅವುಕ್ಕೆ ಅದು ತಿಳಿಯದೆ ಇನ್ನೂ ಹೂ ಬಿಡುತ್ತಲೇ ಇವೆ ಅಂತ. ಇರಲಿ ಯಾವ ಕಾರಣಕ್ಕಾದರೂ ಹೂ ಬಿಡಲಿ ನಾವಂತೂ ಅದರಿಂದ ಮಜ ತೆಗೆದುಕೊಳ್ಳೋಣ.
ಇಂತಹ ಕಾಯಾಗದ ಆದರೆ ಚಂದನೆಯ ಗೊಂಚಲು ಗೊಂಚಲು ಹೂ ಬಿಡುವ ವರ್ಗಕ್ಕೆ ಈ ಬಿಗ್ನೋನಿಯಾ ಸೇರುತ್ತದೆ. ದಕ್ಷಿಣ ಅಮೇರಿಕಾ ಇದರ ಮೂಲ. ಅಲ್ಲಿ ಕಾಡಿನಲ್ಲಿ ಕಾಲಾಬಾಷ್ ಮರಗಳಿಗೆ ಇವು ಸುತ್ತಿ ಬೆಳೆಯುತ್ತಂತೆ. ಇದರ ವಂಶ ಫಿಗ್ವರ್ಟ್ ಅಂತೆ. ಹೂ ಅರಳಿದಾಗ ಇಡೀ ಕಾಡು ಸುಂದರವಾಗಿ ಕಾಣಿಸುತ್ತದೆಯಂತೆ. ಅದ್ಯಾರೋ ಪುಣ್ಯಾತ್ಮರು ಒಂದೆರಡು ಗೆಲ್ಲನ್ನು ನಮ್ಮ ಮಲೆನಾಡಿಗೆ ತಂದರಿರಬೇಕು. ಹಾಗಾಗಿ ಜನವರಿಯಿಂದ ಏಪ್ರಿಲ್ ವರೆಗೆ ಹಲವಾರು ಮನೆಯ ಹೊರಗೆ ಬಿಗ್ನೋನಿಯಾ ನೋಡುಗರನ್ನು ಸೆಳೆಯುತ್ತದೆ. ಇದು ಸಿಹಿಯಾದ ಮಕರಂದವನ್ನು ಹೊಂದಿದ್ದು ಆದರೆ ಕಹಳೆಯಾಕಾರದ ಪಕಳೆಯನ್ನು ಹೊಂದಿರುವುದರಿಂದ ಪರಾಗಸ್ಪರ್ಷವಾಗಲಾರದು. ಅಷ್ಟುದ್ದ ಕೊಕ್ಕಿನ ಹಕ್ಕಿಗಳು ನಮ್ಮಲ್ಲಿ ಇಲ್ಲ. ಈ ಹೂವಿನ ತವರೂರು ದಕ್ಷಿಣ ಅಮೆರಿಕಾದಲ್ಲಿ ಕಾಯಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ ಒಂದೇ ಒಂದು ಗೆಲ್ಲು ಮನೆಯೆದುರು ನೆಟ್ಟರೆ ಕಣ್ಣಿಗೆ ಹಬ್ಬವಂತೂ ಖಂಡಿತ. ನೀವೂ ಪ್ರಯತ್ನಿಸಿ. ಹ್ಯಾಪಿ ಕ್ರಿಸ್ ಮಸ್

Monday, December 22, 2008

ದೇವರೆಂಬ ದೇವರು

ನಿಜವಾಗಿಯೂ ದೇವರು ಎಂಬುವವನು ಆಕಾಶದಲ್ಲಿ ಇರಬೇಕಿತ್ತು. ಆತ ಪಾಪ ಪುಣ್ಯಗಳನ್ನು ಗುಣಿಸಿ ಭಾಗಿಸಿ ಟೋಟಲ್ ನೀಡಬೇಕಿತ್ತು. ಅಂತ ನನಗೆ ಬಹಳ ಸಾರಿ ಅನ್ನಿಸುತ್ತದೆ. ಸ್ವರ್ಗ ನರಕ ದೇವರು ದೇವತೆಗಳು ರಾಕ್ಷಸರು ಮುಂತಾದ ಕಲ್ಪನೆ ವಾಸ್ತವವಾಗಿದ್ದರೆ ಅದರ ಮಜವೇ ಬೇರಿತ್ತು ಅಂತ ಬಹುಪಾಲು ಜನರಿಗೆ ಅನ್ನಿಸದೇ ಇರದು. ಈಗ ನಾವು ಕೇವಲ ಜೀವನಕ್ಕಾಗಿ, ಸೋಲು ಗೆಲುವಿಗಾಗಿ ದೇವರೆಂಬ ದೇವರಿಗೆ ನೂರಾರು ತರಹದ ಕಲ್ಪನೆಯನ್ನಿಟ್ಟುಕೊಂಡು ಆನಂತರ ಒಳ್ಳಯದೇ ಆಗುತ್ತದೆ ಎಂಬ ನಂಬಿಕೆಯನ್ನು ಇಟ್ಟುಕೊಂಡು ಒದ್ದಾಡುವುದಕ್ಕಿಂತ ಹಾಗೊಂದು ಸತ್ಯ ಇದ್ದಿದ್ದರೆ ಆಹಾ ಏನು ಮಜಾ ಏನು ಮೋಜು. ಘಟೋತ್ಕಚ ಸಿನೆಮಾದಲ್ಲಿ ಶ್ರೀ ಕೃಷ್ಣ ಪ್ರತ್ಯಕ್ಷನಾದಂತೆ ನಮ್ಮೆದುರು ಆಕಾಶದಲ್ಲಿ ಗಿರಿಗಿರಿ ಚಕ್ರ ತಿರುಗಿಸುತ್ತಾ ಮುಗಳ್ನಗುತ್ತಾ " ಭಕ್ತಾ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ ವರವನ್ನು ಕೇಳಿಕೋ" ಎಂದು ಹೇಳುವಂತಿದ್ದರೆ, ಆಹಾ ಅದರ ಮಜ ಹೇಗೆ ವರ್ಣಿಸಲಿ?. ಈಗ ನಾವು ಸಿನೆಮಾದಲ್ಲಷ್ಟೇ ನೋಡಿ ಹಾಗೆ ಕಲ್ಪಿಸಿಕೊಳ್ಳಬೇಕಿದೆ. ಅಂದು ಹಿರಣ್ಯ ಮತ್ತು ಪ್ರಹ್ಲಾದರ ಮಧ್ಯೆಯ ಗಲಾಟೆಯಲ್ಲಿ ಡಣಾರ್ ಎಂದು ಪ್ರತ್ಯಕ್ಷನಾಗಿ ಅಪ್ಪನನ್ನು ಮುಕ್ತಿಗೊಳಿಸಿದಂತೆ ಇಂದು "ದೇವಾ....." ಎಂದು ಕೈಮುಗಿದು ಭಕ್ತಿಯ ರಸದಲ್ಲಿ ಒಂದು ಹಾಡು ಒಗೆದಿದ್ದರೆ ದಣ್ ದಣಾ ದಣ್ ಎಂದು ಮೇಲಿಂದ ಇಳಿದು ಬರುವಂತಿದ್ದರೆ. ಆಹಾ ಬಿಡಿ ಬಿಡಿ ರೇ ಪ್ರಪಂಚದ ಮಾತುಗಳನ್ನು ಎಷ್ಟು ಹೇಳಿದರೂ ಅಷ್ಟೆ. ಇಲ್ಲ ಆವಾಗಿನಷ್ಟೇ ಭಕ್ತಿಯಿಂದ ಪ್ರಾರ್ಥಿಸಿದರೆ ಇಂದೂ ದೇವರು ಪ್ರತ್ಯಕ್ಷನಾಗುತ್ತಾನೆ ಅಂತ ಪರಮ ಭಕ್ತಿಯ ಜನರು ಹೇಳಬಹುದು. ಇಲ್ಲ ಕಣ್ರಿ ಈಗ ಹತ್ತು ವರ್ಷದ ಹಿಂದೆ ಸೊರಬದ ಹತ್ತಿರ ಒಬ್ಬಾತ ಇಸ್ಪೀಟಿನಲ್ಲಿ ಸೋತು ಸುಣ್ಣವಾಗಿ ದೇವಸ್ಥಾನಕ್ಕೆ ಬಂದು "ಹೇ ಈಶ್ವರಾ... ತಂದೆ.. ನನಗೆ ಒಂದಿಷ್ಟು ಹಣ ಕೊಡೋ " ಎಂದು ವಿವಿಧ ಭಂಗಿಯಲ್ಲಿ ಬೆಳಗಿನವರೆಗೂ ಬೇಡಿ ಕೊನೆಗೂ ಈಶ್ವರ ಯಾವ ರೂಪದಲ್ಲಿಯೂ ಪ್ರತ್ಯಕ್ಷವಾಗದಾಗ ಅಲ್ಲಿಯೇ ದೇವಸ್ಥಾನದ ತೊಲೆಗೆ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದ. ದೇವರು ಪ್ರತ್ಯಕ್ಷನಾಗಲೇ ಇಲ್ಲ. ಮೊನ್ನೆ ಮೊನ್ನೆ ಟಿವಿಯಲ್ಲಿ ನೀವು ನೋಡಿರಬಹುದು ಒಬ್ಭಾತ ಬೇಡರ ಕಣ್ಣಪ್ಪನಂತೆ ತನ್ನ ಕಣ್ಣನ್ನೇ ತಾನು ಕಿತ್ತು ದೇವರಿಗೆ ಅರ್ಪಿಸಿದ್ದ . ಆದರೂ ದೇವರು ಇಳಿದು ಬರಲಿಲ್ಲ, ಟಿವಿ೯ ನವರು ಬಂದು "ಹೀಗೂ....ಉಂಟೇ..." ಎನ್ನುತ್ತಾ ಕೈಕುಣಿಸಿದರಷ್ಟೇ. ಆವತ್ತು ಕಣ್ಣಪ್ಪನಿಗಾದರೆ ಒಂದು ನೀತಿ ಇವತ್ತು ಈ ಭಕ್ತನಿಗಾದರೆ ಇನ್ನೊಂದು ನೀತಿ....!. ಇವೆಲ್ಲಾ ಘಟನೆಗಳು ನಡೆದಮೇಲೆ ನನಗೆ ನಿಚ್ಚಳ, ಅವತ್ತಿನ ಕಾಲದಲ್ಲಿ ಕರೆದೆ ಹಾಗೆ ಕರೆದರೂ ದೇವರು ಭುವಿಗೆ ಬರುವುದಿಲ್ಲ ಕಾರಣ ಆತ ಇಲ್ಲ.. ಆದರೂ ಆತ ಇರಬೇಕಿತ್ತು.....! ಅಂತ ನನಗೆ ದಿನನಿತ್ಯ ಮೂರ್ನಾಲ್ಕು ಗಂಟೆಗಳ ಕಾಲ ಪೂಜೆ ಮಾಡುವವರನ್ನು ನೋಡುವಾಗೆಲ್ಲಾ ಹಾಗೆ ಅನ್ನಿಸುತ್ತದೆ. ಆದರೇನು ಮಾಡುವುದು. ಎಲ್ಲಾ ನಮ್ಮ ಕೈ ಯಲ್ಲಿ ಇಲ್ಲವಲ್ಲ.

Sunday, December 21, 2008

ಎರಡು ಬ್ಲಾಗ್ ಗಳು

ಬಾಳೆಹೊಳೆ ಪೆಜತ್ತಾಯರು ನನ್ನ ಬ್ಲಾಗ್ ಬರಹ ಪಬ್ಲಿಶ್ ಆದಾಗಲೆಲ್ಲಾ ಫೋನ್ ಮಾಡಿ ಸರಿತಪ್ಪುಗಳ ಕುರಿತು ವಿಮರ್ಶೆ ಮಾಡುತ್ತಾರೆ. ಅಲ್ಲಿಯೇ ಕಾಮೆಂಟ್ ಮಾಡಲು ನನಗೆ ಆಗದು ಹಾಗಾಗಿ ಪೋನ್ ಮಾಡುವುದು ಎಂಬುದು ಅವರ ಆಂಬೋಣ. ಹೀಗೆ ಅವರು ಪೋನ್ ಮಾಡಿದಾಗಲೆಲ್ಲಾ ನಾನು ಒಳಗೊಳಗೆ ಖುಷಿಯಾಗಿಬಿಡುತ್ತೇನೆ.ಇರಲಿ ಅದು ಹಾಗೆಯೇ ನಮ್ಮದೊಂದು ಬರಹ ಮತ್ತೊಬ್ಬರಿಗೆ ಇಷ್ಟವಾಯಿತು ಅಂದರೆ ಎಲ್ಲ ಬರಹಗಾರರ ಕಥೆಯೂ ಹಾಗೆಯೇ. ಅರವತ್ತೆರಡರ ಹರೆಯದಲ್ಲಿ ಅವರ ಓದುವಾಸಕ್ತಿ ಹಾಗೂ ಜೀವನೋತ್ಸಾಹ ನಾನು ಪ್ರತೀ ಕ್ಷಣಕ್ಕೂ ಬಸಿದುಕೊಳ್ಳಲು ಕಾತರಿಸುತ್ತೇನೆ.
ಇಂದು ಬ್ಲಾಗ್ ಲೋಕ ಬಹು ವಿಸ್ತಾರವಾದ ಒಳಹರಿವನ್ನು ಹೊಂದಿದೆ.ಇಂದು ಶ್ರದ್ಧೆಯಿಂದ ಆರ್ಥಿಕ ಪ್ರತಿಫಲಾಪೇಕ್ಷೆ ಇಲ್ಲದೆ ನಿಗದಿತ ಸಮಯಕ್ಕೆ ಬ್ಲಾಗ್ ಅಪ್ಲೋಡ್ ಮಾಡುವ ನೂರಾರು ಬರಹಗಾರರು ಇದ್ದಾರೆ. ಹಾಗೆಯೇ ಪುರುಸೊತ್ತು ಇದ್ದಾಗ ಬರೆಯೋಣ ಅನ್ನುವವರು ಇದ್ದಾರೆ ಜತೆಯಲಿ ನನ್ನದೂ ಒಂದು ಬ್ಲಾಗ್ ಎಂದು ಓಪನ್ ಮಾಡಿ ಮೊದಲ ಬರಹ ಬರೆದು ಕೈಬಿಟ್ಟವರ ಸಂಖ್ಯೆಯೂ ಕಡಿಮೆಯೇನಿಲ್ಲ. ಇದು ನಾವೇ ಪ್ರಕಟಿಸುವ ನಮ್ಮದೇ ಪತ್ರಿಕೆ ಅಂತ ಅನ್ನಿಸಿದ್ದನ್ನೆಲ್ಲಾ ಬರೆಯುವವರೂ ಇದ್ದಾರೆ ಹೀಗೆ ಹತ್ತು ಹಲವು ತರಹ.
ಇವೆಲ್ಲದರ ನಡುವೆ ಸೂಪರ್ರಾಗಿ ಬರೆಯುವ ಮಂದಿಗೇನೂ ಕೊರತೆಯಿಲ್ಲ. ಸುಶ್ರುತನ "ಮೋಡ ಕವಿದ ವಾತಾವರಣ"(http://hisushrutha.blogspot.com/2008/11/blog-post_27.html ) ದ ಕೊನೆಯ ಸಾಲೊಂದು ಹೀಗಿದೆ ಹುಡುಗಿಯ ಸ್ಕೂಟಿ ಇನ್ನೂ ಸ್ಟಾರ್ಟ್ ಆಗಿಲ್ಲ. ನನಗೆ ಒದ್ದೆಯಾಗುವೆನೆಂಬ ಹಿಂಜರಿಕೆ. ಮುಂಬೈ ಧಾಳಿಯ ಸಮಯದಲ್ಲಿ ಬರೆದ ಆ ಬರಹ ಅದೆಷ್ಟು ಶ್ರದ್ದೆಯಿಂದ ಬರೆದದ್ದೆಂದರೆ ನಿಜವಾಗಿಯೂ ಅದರ ಭಾವಾರ್ಥ ತುಂಬಾ ಆಳವಾಗಿದೆ. ಇಂತಹ ಕೃತ್ಯ ನಡೆದಾಗ ಜನಸಾಮಾನ್ಯ ಹೇಗೆ ಪಟ್ಟಂಗ ಹೊಡೆದು ಬಾಯಿಮಾತಿನಲ್ಲಿ ಸಿಟ್ಟುತೀರಿಸಿಕೊಳ್ಳುತ್ತಾನೆ ನಂತರ ತಾನು ಏನಾದರೂ ಮಾಡಬೇಕೆಂಬ ಸಮಯದಲ್ಲಿ ಹೇಗೆ ಜಾರಿಕೊಳ್ಳುತ್ತಾನೆ ಎಂಬುದನ್ನು ಅತ್ಯುತ್ತಮವಾಗಿ ನಿರೂಪಿಸಿಬಿಡುತ್ತಾರೆ ನಮ್ಮ ಸುಶ್ರುತ. ಇಂತಹ ಒಳಾರ್ಥದ ಬರಹಗಳಿಗಾಗಿ ನಾವು ಬ್ಲಾಗ್ ಲೋಕಕ್ಕೆ ಧನ್ಯವಾದ ಹೇಳಲೇ ಬೇಕು. ಕಾರಣ ಇಂತಹ ಬರಹಗಳನ್ನು ಯಾವ ಪತ್ರಿಕೆಗಳೂ ಪ್ರಕಟಿಸುತ್ತಿರಲಿಲ್ಲ. ಆದರೆ ಬ್ಲಾಗ್ ಗಳಲ್ಲಿ ಬರಹದ ಆಸಕ್ತಿ ಇರುವವರಿಗೆ ಮುಕ್ತ ಅವಕಾಶ.
ಹಾಗೆಯೇ ನಮ್ಮ ಹೊಸಮನೆ (http://mruthyu.blogspot.com/2008/12/blog-post_18.html ) ಬ್ಲಾಗ್. ಹದಿನೈದು ದಿನಕ್ಕೊಮ್ಮೆ ಹೊರಹೊಮ್ಮುವ ಮೃತ್ಯುಂಜಯ ಅವರ ಬರಹಗಳು. ಅವು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಇರುವೆಯ ಇರುವಿಕೆಯೆ ಕುರಿತು ಆರಂಬಿಸುತ್ತಾ ಮೆಲ್ಲಗೆ ಬರಹಗಾರರ ಒಣ ಹಮ್ಮನ್ನು ಚುಚ್ಚುತ್ತಾರೆ . ನನ್ನ ಲೇಖನಕ್ಕೆ ಹೊಗಳಿಕೆ ಬರದಿದ್ದರೆ ಯಾರಾದರೂ ಪ್ರಸಿದ್ಧ ಲೇಖಕರನ್ನು ಟೀಕಿಸುವಾ ಅನಿಸುತ್ತೆ. ಎನ್ನುವ ಸಾಲುಗಳಲ್ಲಿನ ಒಳಾರ್ಥ ಹಲವಾರು ಲೇಖಕ ಮಹಾಶಯರುಗಳ ಗುಟ್ಟನ್ನು ಬಿಚ್ಚಿಟ್ಟು ಬಿಡುತ್ತದೆ. ಸುಮ್ಮನೆ ಹೆಸರು ಬರಲಿ ಎಂದು ಬರೆಯುವ ಬರಹಗಳ ಬಗ್ಗೆ ನವಿರಾಗಿ ಟೀಕಿಸುತ್ತದೆ. ನಂತರ ಇರುವೆಯ ಮೂಲಕ ನಮ್ಮ ಇರುವಿಕೆಯನ್ನು ಹುಡುಕಿಕೊಳ್ಳುವ ಆ ಬರಹ ಒಮ್ಮೆ ನಮ್ಮನ್ನು ಪ್ರಶ್ನಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ಸು ಸಾಧಿಸುತ್ತದೆ. ಬಹುಶ: ಬ್ಲಾಗ್ ಎಂಬುದೊಂದು ಇರದಿದ್ದರೆ ಇಂತಹ ಬರಹ ನಮಗೆ ಓದಲು ಸಿಗುತ್ತಿರಲಿಲ್ಲವೇನೋ..?. ಎನಿ ವೆ ಥ್ಯಾಂಕ್ಸ್ ಬ್ಲಾಗ್ಸ್ ಎಂಡ್ ಬ್ಲಾಗರ್ಸ್
ಮುಂದಿನವಾರ ಮತ್ತೆ ಒಂದಿಷ್ಟು ಬ್ಲಾಗ್ ಗಳ ಒಳಗೆ ಇಣುಕಿ ನೋಡೋಣ. ಇಲ್ಲಿಯವರೆಗೆ ಓದುತ್ತಾ ಬಂದಿರುವ ನಿಮಗೂ ಹ್ಯಾಪಿ ವೀಕೆಂಡ್

Friday, December 19, 2008

ಮಾವಿನ ಚಿಗುರನು ಮೆಲ್ಲುತ ಕೋಗಿಲೆ.........


"ಮಾವಿನ ಚಿಗುರನು ಮೆಲ್ಲುತ ಕೋಗಿಲೆ ಪಂಚಮ ಸ್ವರದಲಿ ಹಾಡೀತು" ಎಂದು ನಮ್ಮ ಗಿಂಡಿಮನೆ ಮೃತ್ಯುಂಜಯ ಅವರು ತಮ್ಮದೊಂದು ಕವಿತೆಯಲ್ಲಿ ಹೇಳಿದ್ದಾರೆ. ಆ ಕವಿತೆಯಲ್ಲಿ ಪ್ರಕೃತಿಯ ಶಬ್ದ ವನ್ನು ನಮಗೆ ತಿಳಿಸುವುದರ ಜತೆ ಮಾವಿನ ಚಿಗುರು ಕೋಗಿಲೆಯ ಸಂಬಂಧದ ಎಳೆಯನ್ನು ನವಿರಾಗಿ ಬಿಚ್ಚಿಡುತ್ತದೆ. ಇರಲಿ ಈಗ ಆ ಸುಮಧುರ ಕವಿತೆಯಲ್ಲಿನ ಮಾವಿನ ಬಗ್ಗೆ ಹೇಳೋಣ.
ಮಾವಿನ ಹಣ್ಣು ಮಾವಿನ ಮಿಡಿ ಉಪ್ಪಿನಕಾಯಿ, ಮಾವಿನ ಕಾಯಿ ತಂಬುಳಿ ಯಾರಿಗೆ ಗೊತ್ತಿಲ್ಲ? ಆಹಾ ಎಂಥ ಮಧುರಾ ವಾಸನೆ ಎನ್ನುವವರೆ ಎಲ್ಲ. ಪರಿಮಳ ಅಪ್ಪೆ ಮಾವಿನ ಕಾಯಿ ಹುಳಿ ಹುಳಿ ತಂಬುಳಿಯನ್ನು ನೆನೆಸಿಕೊಂಡಾಗಲೆಲ್ಲ ಚೊಳ್ ಅಂತ ಬಾಯಲ್ಲಿ ನೀರುಬರುತ್ತದೆ. ಮೊಸರು ಅನ್ನದ ಜತೆ ಕಚಕ್ ಅಂತ ಮಿಡಿಯನ್ನು ಕಚಿಕೊಂಡಾಗ ಆಗುವ ಆನಂದ ವರ್ಣಿಸಲಸದಳ. ಕಂಚಪ್ಪೆ. ಅನಂತ ಭಟ್ಟನ ಅಪ್ಪೆ ದ್ಯಾವ್ರಪ್ಪೆ ಹೀಗೆ ಸ್ಥಳೀಯವಾಗಿ ನೂರಾರು ಹೆಸರಿನಿಂದ ಕರೆಯಿಸಿಕೊಳ್ಳುವ ಮಾವಿನ ರುಚಿಗೆ ಸರಿಸಾಟಿಯಿಲ್ಲ. ಹೀಗೆ ಮನುಷ್ಯನ ಊಟದ ಜತೆಗೆ ಗುಡ್ ಕಾಂಬಿನೇಷನ್ ಆಗಿರುವ ಮಾವು ಪಕ್ಷಿ ಸಂಕುಲಕ್ಕೂ ಅಪಾರ ಉಪಕಾರಿ. ವಾಸಕ್ಕೆ ಆಹಾರಕ್ಕೆ ಸಂತತಿ ಬೆಳಸುವುದಕ್ಕೆ ಹೀಗೆ ಹತ್ತಾರು ಕಾರಣಗಳು ಅದರ ಜತೆ ತಳಕು ಹಾಕಿಕೊಂಡಿವೆ. ಆಯಿತು ಕೊರೆತ ಸಾಕು ಏನು ಹೇಳ ಹೊರಟಿವೆಯೋ ಅದನ್ನು ಹೇಳು ಮಾರಾಯ ಅಂದಿರಾ..! ಆಯಿತು ವಿಷಯಕ್ಕೆ ಬರೋಣ.
ಹೀಗೆ ಮಾವಿನ ಉತ್ಪನ್ನಗಳನ್ನು ಬಳಸುವ ಮಾನವ ಪರೋಕ್ಷವಾಗಿ ಮಾವಿನಮರಗಳ ಮಾರಣ ಹೋಮಕ್ಕೆ ಕಾರಣವಾಗುತ್ತಿದ್ದಾನೆ. ಅದು ಈಗ ನಾನು ಮೇಲೆ ಹೇಳಿದ ರುಚಿರುಚಿಯಾದ ಉತ್ಪನ್ನಗಳನ್ನು ಬಳಸುವ ಕಾರಣಕ್ಕಿಂತ ಹೆಚ್ಚು ಮಾವಿನ ಎಲೆಯನ್ನು ತೋರಣಕ್ಕಾಗಿ ಬಳಸುವ ಕಾರಣದಿಂದ ಎಂದು ಹೇಳಲು ಬಹು ಬೇಸರವೆನಿಸುತ್ತದೆ. ಹೌದು ಅದು ದೊಡ್ಡ ದುರಂತ. ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಮಾವಿನ ಸೊಪ್ಪನ್ನು ತೋರಣದ ಕಾರಣಕ್ಕಾಗಿ ಯಥೇಚ್ಚವಾಗಿ ಬಳಸಲಾಗುತ್ತಿದೆ. ಮದುವೆಮನೆ ಉಪನಯನ ಹೀಗೆ ಧಾರ್ಮಿಕ ಸಮಾರಂಭಗಳಲ್ಲಂತೂ ಈ ಮಾವಿನ ಸೊಪ್ಪಿನ ಮಾರಣ ಹೋಮ ನೋಡಲಾಗದು. ಸಮಾರಂಭ ನಡೆಯುವ ಜಾಗಕ್ಕೆ ನೀವು ಹೋದಾಗ ಗಮನಿಸಿ ಅಲ್ಲಿ ಕಮಾನಿನಾಕರಾದಲ್ಲಿ ದಪ್ಪನೆಯ ಮಾವಿನ ಸೊಪ್ಪಿನ ಹೊದಿಕೆಯನ್ನೇ ನಿರ್ಮಿಸಿಬಿಟ್ಟಿರುತ್ತಾರೆ. ನನಗಂತೂ ಅವುಗಳನ್ನು ನೋಡಿದಾಗ ಸಮಾರಂಭದ ಉತ್ಸಾಹವೇ ಉಡುಗಿಹೋಗುತ್ತದೆ. ಮಾವಿನ ಎಲೆಗಳು ನನ್ನನ್ನು ಉಳಿಸಿ ಹೀಗೆ ಹಿಂಸಿಸಬೇಡಿ ಎಂದು ಚಿತ್ಕಾರ ಹೊರಡಿಸಿದಂತೆ ಭಾಸವಾಗುತ್ತದೆ. ಇತ್ತೀಚಿನ ದಿನಗಳಲ್ಲಂತೂ ರಾಜಕೀಯ ಸಮಾರಂಭಕ್ಕೂ ಮಾವಿನ ಎಲೆಗಳ ತೋರಣದ ಬಳಕೆಯಾಗುತ್ತಿದೆ. ಒಂದೆರಡು ದಿವಸದಲ್ಲಿ ಬಾಡಿಹೋಗುವ ಈ ಕಾರ್ಯಕ್ರಮಕ್ಕೆ ವರ್ಷಗಟ್ಟಲೆ ಮರದಲ್ಲಿ ಹಸಿರಾಗಿರುವ ಸೊಪ್ಪನ್ನು ಬಳಸುವುದು ಯಾವ ನ್ಯಾಯ ಅಂತ ಮಾವಿನ ಮರ ಮಾತನಾಡಲು ಬರುತ್ತಿದ್ದರೆ ಕೇಳುತ್ತಿತ್ತೇನೋ ಅಂತ ನನಗೆ ಅನ್ನಿಸುತ್ತದೆ.
ಅದ್ಯಾರೋ ಶಾಸ್ತ್ರಕಾರ ಮಾವಿನ ಸೊಪ್ಪು ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಬೇಕು ಆಂದ, ಅದಕ್ಕೆ ನವ್ಯ ಶಾಸ್ತ್ರಕಾರ ಮಾವಿನ ಸೊಪ್ಪಿನಲ್ಲಿ ವೈರಸ್ ನಿರೋಧಕ ಶಕ್ತಿಯಿದೆ ಹಾಗಾಗಿ ಅದನ್ನು ಹತ್ತಾರು ಜನ ಓಡಾಡುವ ಜಾಗದ ಸಮಾರಂಭ ಸ್ಥಳದಲ್ಲಿ ಕಟ್ಟಿ ಸಮೂಹ ಕಾಯಿಲೆ ಹರಡದಂತೆ ತಡೆಯಬೇಕೆಂದು ನಮ್ಮ ಹಿಂದಿನವರು ಆ ಶಾಸ್ತ್ರ ಮಾಡಿದ್ದಾರೆ ಎಂದು ತನ್ನದೇ ತರ್ಕದ ...! ಮೂಲಕ ಸೇರಿಸಿದ, ಈಗಿನವರು ಕುಂಡೆ ಮೇಲೆ ಮಾಡಿಕೊಂಡು ಮನೆಯಲ್ಲಿ ಕಾರ್ಯಕ್ರಮ ಎಂದಕೂಡಲೆ ಮಾವಿನ ಸೊಪ್ಪು ಕಡಿದು ಕಡಿದು ತಂದು ಕಟ್ಟುತ್ತಿದ್ದಾರೆ. ಹಾಗಂತ ಅದೇ ಶಾಸ್ತ್ರಕಾರ ದೇವರು ನಿಮಗೆ ಸುಗಿ ಸುಗಿದು ಧನಕನನ ಕೊಡುತ್ತಾನೆ ವರ್ಷಕ್ಕೊಂದು ಮಾವಿನ ಸಸಿ ನಾಟಿ ಮಾಡಿ ಎಂದು ಸೇರಿಸಬಹುದಿತ್ತು. ಆದರೆ ಆತ ಹಾಗೆ ಮಾಡಿಲ್ಲ ಕಾರಣ ಆತನ ಕಾಲದಲ್ಲಿ ಕಾಡು ಹೇರಳವಾಗಿತ್ತು ಅವನ್ನು ನಾಶಮಾಡುವುದಕ್ಕೆ ಮಾರ್ಗ ಬೇಕಿತ್ತು ಹೀಗಾಗಿ ಹೀಗೊಂದು ಸಿಂಪಲ್ ಉಪಾಯ ಮಾಡಿದ. ಆದರೆ ಅದು ಈ ಕಾಲಕ್ಕೆ ದುಭಾರಿಯಾಗಿ ಪರಿಣಮಿಸಿದೆ. ಇದೊಂದು ತೋರಣದ ಬಳೆಕೆಯ ಕಾರಣದಿಂದಾಗಿ ಮಾವಿನಮರ ವರ್ಷದಿದ ವರ್ಷಕ್ಕೆ ಬೋಳುಬೋಳಾಗಿ ಮಾಯವಾಗುವತ್ತ ಸಾಗುತ್ತಿದೆ. ಇದು ತೋರಣಕ್ಕಾಗಿ ಮಾವುನಾಶದ ಕಥೆಯಾದರೆ ನಂತರದ್ದು ಮಾವಿನ ಮಿಡಿ ಕೊಯ್ಯುವವರ ದುರಾಸೆಯಿಂದ ಇಡೀ ಟೊಂಗೆಯೇ ಮಾಯವಾಗುವತ್ತ ಹೊರಟದ್ದೂ ಕಾಡು ಮಾವಿನ ಮರಗಳ ಸಂತತಿ ಕ್ಷೀಣಿಸಲು ಕಾರಣವಾಗುತ್ತಿದೆ.
ಹೀಗೆ ಮನುಷ್ಯನ ದುರ್ಬಳಕೆಯಿಂದ ಅಪರೂಪದ ಕಾಡುಮಾವಿನಮರದ ಸಂತತಿ ಬರ್ಬಾದೆದ್ದು ಹೋಗುತ್ತಿದೆ. ರಕ್ಷಿಸುವ ದೃಷ್ಟಿಯಿಂದ ಕೇವಲ ಲೇಖನ ಬರೆಯುತ್ತಾ ಕುಳಿತುಕೊಂಡರೆ ಆಗದು. ನಾನಂತೂ ವರ್ಷಕ್ಕೆ ನನ್ನ ಹತ್ತಿರ ಸಾದ್ಯವಾದಷ್ಟು ಕಾಡುಮಾವಿನ ಮರಗಳನ್ನು ನೆಡುತ್ತಿದ್ದೇನೆ. ಹಿಂದೆ ಅಶೋಕ ಮಹಾರಾಜನ ಕಾಲದಲ್ಲಿ ಸಾಲುಮರಗಳಾಗಿ ಕಂಡುಬರುತ್ತಿದ್ದ ಮಾವು ಇಂದಿನ ಪ್ರಜಾಪ್ರಭುತ್ವ ಎಂಬ ನಮ್ಮದೇ ಆಳ್ವಿಕೆಯಲ್ಲಿ ಕಾಣಬರುತ್ತಿಲ್ಲ.
ಕಳೆದ ವರ್ಷ ಹೊನ್ನೆಮರಡುವಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಗೋಷ್ಠಿ ನಡೆದಾಗ ಮಾವಿನ ತೋರಣ ಕಟ್ಟಲು ಹೊರಟಿದ್ದರು. ನಂತರ ಅವರಿಗೆ ಗಂಟೆಗಟ್ಟಲೆ ಕೊರೆದು ಅಕೇಶಿಯಾ ತೋರಣ ಕಟ್ಟಿಸಲಾಯಿತು. ಬಂದವರೆಲ್ಲರೂ ಅದು ಮಾವಿನ ತೋರಣ ಎಂದೇ ಭಾವಿಸಿದ್ದರು. ಹಾಗಾಗಿ ನಾವು ನೀವು ಹೀಗೆ ಒಂದಿಷ್ಟು ನಮ್ಮ ಮಟ್ಟದ ತೀರ್ಮಾನ ಕೈಗೊಳ್ಳುವುದರಲ್ಲಿ ಅರ್ಥವಿದೆ. ನಿಮಗೆ ಸಂದರ್ಭ ಸಿಕ್ಕಾಗ ತೋರಣಕ್ಕಾಗಿ ಯಡ್ಡಾದಿಡ್ಡಿ ಮಾವಿನ ಸೊಪ್ಪನ್ನು ಬಳಸುವವರಿಗೆ ತಿಳಿ ಹೇಳಿ. ಸ್ವಲ್ಪ ಶಾಸ್ತ್ರಕ್ಕೆ ಬಳಸಲಿ. ಆ ವರ್ಷ ಒಂದೇ ಒಂದು ಗಿಡ ನೆಡಲು ಹೇಳಿ. ಇದು ಮಾವಿನ ಮರಗಳು ನನ್ನ ಮೂಲಕ ಮಾಡಿಕೊಂಡ ಮನವಿ ಅಂತ ಬೇಕಾದರೂ ಅಂದುಕೊಳ್ಳಿ. ಕಾಡುಮಾವಿನ ಮರಗಳು ಹೀಗೆಯೇ ದುರ್ಬಳಕೆಯಾದಲ್ಲಿ ಮತ್ತೆ ಕವಿಗಳ ಕವಿತೆಯಲ್ಲಿ ಮಾತ್ರಾ ಇದನ್ನು ಕಲ್ಪಿಸಿಕೊಳ್ಳಬೇಕಾದೀತು. ಅದು ನಮ್ಮ ಮುಂದಿನ ತಲೆಮಾರಿನವರಿಗೆ ಆಸಕ್ತಿ ಇದ್ದರೆ..! .
ಇನ್ನೂ ಮುಂದೆ ಯೋಚಿಸಿದಲ್ಲಿ ಮಾವು ಮಾಯವಾಗಿ ಅದು ಹೇಗಿತ್ತು ಅಂತ ತಿಳಿಯದ ಕವಿಗಳು " ಅಕೆಶಿಯಾ ಚಿಗುರನು ಮೆಲ್ಲುತ ಕೋಗಿಲೆ ಪಂಚಮ ಸ್ವರದಲಿ ಹಾಡೀತು" ಅನ್ನಬೇಕಾಗುತ್ತದೆ. ಹಾಗಾಗಲು ಬಿಡುವುದು ಬೇಡ. ಈ ಬಾರಿ ಮದುವೆ ಮುಂಜಿಗೆಂದು ನೀವು ಎರಡು ದಿವಸ ಮೊದಲು ಊರಿಗೆ ಬಂದಾಗ ನಾನು ಹೇಳಿದ್ದು ನೆನಪಾಗಿ ಅನುಷ್ಠಾನಕ್ಕೆ ಬರುತ್ತದೆ ಎಂಬ ಆಶಯ ನನ್ನದು. ಅದು ಸಕ್ಸಸ್ಸು ಹೌದು ಕಾರಣ ಊರಿನಲ್ಲಿ ನಿಮ್ಮ ಮಾತು ಕೇಳುತ್ತಾರೆ, ನಾವೆಲ್ಲ ಹೇಳಿದರೆ ಇವಕ್ಕೆಲ್ಲಾ ಎಂತ ಗೊತ್ತು ಅಂತ ಬಾಯಿಮುಚ್ಚಿಸುತ್ತಾರೆ. ಹಾಗಾಗಿ ನೀವು ಶಂಖವಾಗಿ ಮಾವು ತೀರ್ಥವಾಗಲಿ.

Thursday, December 18, 2008

ಇಶ್ಯಿಶ್ಶೀ......

ನಮ್ಮ ಊರುಗಳಲ್ಲಿ ಬಹುಪಾಲು ಅಡಿಕೆ ಬೆಳೆಗಾರರು. ಆದರೆ ಗುಟ್ಕಾ ತಿನ್ನುವವರನ್ನು ಕಂಡು ಗುರಾಯಿಸುತ್ತಾರೆ. ಎಲೆ ಅಡಿಕೆ ಹಾಕಿಕೊಂಡು ಬಾಯಿ ಕೆಂಪು ಮಾಡಿಕೊಂಡರೆ ಇಶ್ಯಿಶ್ಶೀ ಎನ್ನುತ್ತಾರೆ. ಬಹಳಷ್ಟು ಜನ ಅಡಿಕೆಯನ್ನು ಮೂಸಿಯೂ ನೋಡುವುದಿಲ್ಲ. ಹಾಗಂತ ಅಡಿಕೆಗೆ ದರ ಇಲ್ಲ ಅಂತ ಹಲುಬುತ್ತಾರೆ. ತಾವು ತಿನ್ನುವುದಿಲ್ಲ ತಿನ್ನುವವರನ್ನು ನಿಕೃಷ್ಟವಾಗಿ ಕಾಣುತ್ತಾರೆ ದರ ಜಾಸ್ತಿಯಾಗಲಿ ಎಂಬ ವಿಪರ್ಯಾಸದ ಮಾತು. ಇರಲಿ ಅದು ಪ್ರಪಂಚ ಅಂದು ಬಿಡೋಣ.

ಅವನದು ಲಿಕ್ಕರ್ ಫ್ಯಾಕ್ಟರಿಯಲ್ಲಿ ದೊಡ್ಡ ಹುದ್ದೆ. ಆದರೆ ಆತ ಕುಡಿಯುವವರನ್ನು ಕಂಡು ಗುರಾಯಿಸುತ್ತಾನೆ. ಏನೋ ಸ್ವಲ್ಪ ರಂಗಾಗಿ ತೂರಾಡುತ್ತಿದ್ದರೆ ಇಶ್ಯಿಶ್ಶಿ ಎನ್ನುತ್ತಾನೆ. ಆತ ಹೆಂಡವನ್ನೂ ಮೂಸಿಯೂ ನೋಡುವುದಿಲ್ಲ ಹಾಗಂತ ಸಂಬಳ ಕಡಿಮೆಯಾಯಿತೆಂದು ಹಲುಬುತ್ತಾನೆ. ತಾನು ಕುಡಿಯುವುದಿಲ್ಲ ಕುಡಿಯುವವರನ್ನು ಕಂಡರೆ ನಿಕೃಷ್ಟವಾಗಿ ಕಾಣುತ್ತಾನೆ ಸಂಬಳ ಜಾಸ್ತಿಯಾಗಲಿ ಎಂಬ ವಿಪರ್ಯಾಸದ ಮಾತು. ಆಗಲಿ ಅದೂ

ಆತ ಮಹಾನ್ ರಾಜಕಾರಣಿ, ಜನರಿಂದ ನಾನು ಮೇಲೆ ಬಂದೆ ಎಂದು ಚುನಾವಣೆಯ ಮೊದಲು ಹಾಡುತ್ತಾನೆ. ಮಣ್ಣಿನ ಮಗ ನಾನು ಅಂತಾನೆ. ಬಡಜನರ ಏಳ್ಗೆಯೇ ನನ್ನ ಗುರಿ ಅಂತಾನೆ. ಆದರೆ ಗೆದ್ದಮೇಲೆ ಜನಸಾಗರವನ್ನು ಕಂಡು ಇಶ್ಯಿಶ್ಶೀ ಅನ್ನುತ್ತಾನೆ. ದುಡಿಯಲಾರದ ಸೋಮಾರಿಗಳು ಅಂತಾನೆ. ದರ್ಪ ದವಲತ್ತುಗಳನ್ನು ಪ್ರದರ್ಶಿಸುತ್ತಾನೆ. ದೇವಸ್ಥಾನ ಸುತ್ತುತ್ತಾನೆ. ಆಯಿತು ಅದುವೇ ಪ್ರಪಂಚ ಅಂದು ಬಿಡೋಣ

ಆತ "ಮಾತೃ ದೇವೋ ಭವ, ಆಚಾರ್ಯ ದೇವೋ ಭವ " ಎನ್ನುವ ವೇದದ ಸಾರವೇ ಜೀವನ ಎನ್ನುವ ಘನಂದಾರಿ ಪುರೋಹಿತ. ಮನೆಯಲ್ಲಿ ವಯಸ್ಸಾದ ಅಮ್ಮನನ್ನು ಕಂಡು ಗುರಾಯಿಸುತ್ತಾನೆ. ಆಕೆ ಹುಷಾರಿಲ್ಲದೆ ಹಲುಬಿದರೆ ಇಶ್ಯಿಶ್ಶೀ ಎನ್ನುತ್ತಾನೆ. ಅಮ್ಮನನ್ನು ಮಾತನಾಡಿಸುವುದೂ ಇಲ್ಲ. ತಾನು ಪಾಲಿಸುವುದೂ ಇಲ್ಲ ಆದರೆ ನಿತ್ಯ ಮಾತೃದೇವೋ ಭವ ಎಂದು ಭಾಷಣ ಮಾಡುವುದನ್ನು ಬಿಡುವುದಿಲ್ಲ ಜತೆಗೆ ಪ್ರಪಂಚ ಆಚಾರ ವಿಚಾರಗಳನ್ನು ಕೈಬಿಟ್ಟು ಕೆಟ್ಟು ಹೋಗಿದೆ ಎಂಬ ವಿಪರ್ಯಾಸದ ಮಾತು.

ಆದರೆ ಇದನ್ನು ಮಾತ್ರಾ ಪ್ರಪಂಚ ಅಂತ ಸುಮ್ಮನಿರಲಾಗುವುದಿಲ್ಲ. ಯಾಕೆಂದರೆ ಮುಂದೊಂದು ದಿನ ನಾವು ಅಮ್ಮನಂತೆ ವಯಸ್ಸಾದವರಾಗುತ್ತೀವಿ ಅನ್ನುವ ಕಾರಣಕ್ಕಾದರೂ....?

Tuesday, December 16, 2008

ತರಬೇಕು..ತರಬೇಕು... ಒಂದು ಕಥಾ ಸಂಕಲನ

ಕಟ್ಟು ಕಥೆಯ ಕಟ್ಟು ಅಂತ ಅದರ ಹೆಸರು ಇಡಬೇಕು. ಅದರಲ್ಲಿ ನನ್ನ ಇಲ್ಲಿಯವರೆಗೆ ಪ್ರಕಟವಾದ ಕಥೆಗಳನ್ನು ಮುದ್ರಿಸಬೇಕು ಅಂತ ಒಂದು ಆಸೆ ಚಿಗುರಿದೆ. ಪ್ರಜಾವಣಿ-ಕನ್ನಡಪ್ರಭ-ಉದಯವಾಣಿ-ಕರ್ಮವೀರ-ಸುಧಾ ಸೇರಿದಂತೆ ಒಟ್ಟು ಪ್ರಕಟವಾಗಿದ್ದು ಇಪ್ಪತ್ತೈದು ಕಥೆಗಳು. ಅವುಗಳಲ್ಲಿ ಹದಿನೈದು ಆರಿಸಿ ಮುದ್ರಿಸಬೇಕು. ಅದಕ್ಕಾಗಿ ಹದಿನೈದು ಸಾವಿರ ರೂಪಾಯಿಗಳನ್ನು ವ್ಯಯಿಸಬೇಕು ಆಮೇಲೆ ಹೇಗೂ ಇದ್ದೇ ಇದೆ. " ಹೋಯ್ ಆರಾಮ, ಮತ್ತೆ ಸಮಾಚಾರ , ನನ್ನದೊಂದು ಕಥಾ ಸಂಕಲನ ಬಂದಿದೆ? " ಅಂತ ಅಪರೂಪದವರು ಕಂಡಕೂಡಲೆ ಕೇಳಬೇಕು. " ಓ ಹೋ ಹೌದಾ ನೀನು ಕಥೆ ಬರಿತೀಯಾ..?" ಎಂಬ ಪ್ರಶ್ನೆ ಬರುತ್ತದೆ . ತಾಳ್ಮೆಗೆಡಬಾರದು " ಹೌದು" ಅನ್ನಬೇಕು. ( ನಮ್ಮಲ್ಲಿ ಜನಜನಿತವಾದ ಮಾತಿದೆ. ಅದ್ಯಾರದ್ದೋ ಹೆಸರು ಹೇಳಿ " ಅವ ಹಡೆದ್ಲಡ ಗಂಡು ಮಗುವಡಾ.." ಅಂದಕೂಡಲೆ ಎದುರಿದ್ದವನಿಂದ " ಅರೆ ಅವ ಯಂಗೆ ಬಸಿರಾಗಿದ್ದೆ ಗೊತ್ತಿಲ್ಯಲ" ಎನ್ನುವ ಜೋಕ್ ರೂಪದ ವ್ಯಂಗ್ಯ. ಇದೂ ಹಾಗೆಯೆ, ಕಥೆ ಬರೆಯದೆ ಕಥಾ ಸಂಕಲನ.. ಬರಲು ಸಾಧ್ಯವೇ? ಇರಲಿ ) ಆನಂತರ ಬಗಲು ಚೀಲದಿಂದ ಒಂದು ಪುಸ್ತಕ ತೆಗೆದುಕೊಡಬೇಕು . ಆಗ ಅವರು " ಚಲೋ ಇದ್ದು " ಎಂದು "ಬರ್ಲಾ ಬಸ್ ಬಂತು" ಎನ್ನುತ್ತಾ ಹೋಗುವುದನ್ನು ನೋಡಬೇಕು. ಮನೆಗೆ ಬಂದು ಹೆಂಡತಿಯ ಬಳಿ ಇವತ್ತು ಹತ್ತು ಪುಸ್ತಕ ಖರ್ಚಾಯಿತು ಎನ್ನುವ ಸತ್ಯ ಹೇಳಬೇಕು. ಅಡಿಕೆ ಮಾರಿದ ದುಡ್ಡನ್ನು ಪುಸ್ತಕದಿಂದ ಬಂದದ್ದು ಎಂಬ ಹಸಿಹಸಿ ಸುಳ್ಳನ್ನು ಪೋಣೀಸಬೇಕು. ಇವಿಷ್ಟು ಸನ್ ಎರಡುಸಾವಿರದ ಒಂಬತ್ತನೆ ಇಸವಿ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಆಗಬೇಕಾದ ಕೆಲಸಗಳು. ಒಂದು ಜೇನಿನ ಹಿಂದೆ ಎಂಬ ಪುಸ್ತಕ ೨೦೦೭ ರಲ್ಲಿ ಬರೆದಿದ್ದು ನಾಲ್ಕುನೂರು ಖಾಲಿಯಾಗಿದೆ.ಇನ್ನು ನೂರು ಪುಸ್ತಕ ಖಾಲಿಯಾದರೆ ಅಸಲಾದಂತೆ. ...! . ( ಹೆಂಡತಿಯ ಬಳಿ ಅದರ ಲಾಭದ ದುಡ್ಡಿನಿಂದ ಇನ್ನೊಂದು ಕಥಾ ಸಂಕಲನ ತರುತ್ತಿದ್ದೇನೆಂದು ಸುಳ್ಳು ಹೇಳಿಯಾಗಿದೆ. ಸಧ್ಯ ಆಕೆ ಈ ಬ್ಲಾಗ್ ಓದುವುದಿಲ್ಲ ಬಚಾವ್). ಮೊನ್ನೆ ನಮ್ಮ ವಿನಾಯಕ ತನ್ನ ಬ್ಲಾಗಿನಲ್ಲಿ ಅವನದೊಂದು ಬರಹ ಪ್ರಕಟವಾಗದ ಕುರಿತು ನೋವು ತೋಡಿಕೊಂಡಿದ್ದ. ಪ್ರಕಟವಾಗಲಿಲ್ಲ ಎಂದು ಬೇಸರ ಮಾಡಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಹೀಗೆ ನನ್ನಂತೆ ಅವರನ್ನ ಇವರನ್ನ ಹಿಡಿದು ನಮ್ಮದೇ ಒಂದು ಪ್ರಕಾಶನ ಸಂಸ್ಥೆ ಅಂತ ಶುರುವಿಟ್ಟುಕೊಂಡು ಪ್ರಕಟಿಸಿಬಿಡಬೇಕು. ಆನಂತರ ಅಷ್ಟು ಲಾಭ ಬಂತು ಇಷ್ಟು ಲಾಭ ಬಂತು ಅಂತ ಓಳು ಬಿಟ್ಟರೆ ಫಿನಿಷ್. ಪಾಪ ನಮ್ಮಂತಹ ಲೇಖಕರು ಸಾವಿರಾರು, ಅವರೆಲ್ಲರ ಕಥೆಗಳನ್ನು ಸಂಕಲನಗಳನ್ನಾಗಿಸಿದರೆ ಪ್ರಕಾಶಕರು ದಿವಾಳಿಯಾಗುತ್ತಾರೆ. ಹಾಗಾಗಿ ನಾವೇ ನಾವು ತಯಾರಾಗಿಬಿಟ್ಟರೆ ಯಾವ ಸಮಸ್ಯೆಯೂ ಇಲ್ಲ ಅನ್ನುವುದು ನನ್ನ ಸ್ವಾನುಭವ. ಬೇಕಾದರೆ ನೀವೂ ಹಾಗೆ ಮಾಡಿ ನೋಡಿ, ರಾಯಲ್ಟಿ ನನಗೇನು ಕೊಡಬೇಕಾಗಿಲ್ಲ. ಇರಲಿ ಅವೆಲ್ಲಾ ಎಲ್ಲಾ ಕಡೆ ಇದ್ದದ್ದೆ. ಫೆಬ್ರವರಿ ತಿಂಗಳಿನಲ್ಲಿ ಕಥಾ ಸಂಕಲನ ಪ್ರಕಟವಾಗುವ ನಿರೀಕ್ಷೆ ಇದೆ. ಅದಕ್ಕೊಂದು ಚಿಕ್ಕ ಸಮಾರಂಭವೂ ಇರುತ್ತದೆ. ಅದಕ್ಕೆ ತಪ್ಪದೇ ನೀವು ಬರಬೇಕು. ಇದು ಮಾತ್ರಾ ಬರೀ ಬಾಯಿಮಾತಿನ ಕರೆಯ ಅಲ್ಲ. ಖಂಡಿತಾ ಬರುವಿರಿ ತಾನೆ?.

ಮಮತೆಯ ಕರೆಯೋಲೆ

ಕ್ಷೇಮ /ಶ್ರೀ// ಸಾಂಪ್ರತ
ಪ್ರೀತಿಯ ಓದುಗರೆ ನಿಮಗೆ ಸಾಷ್ಟಾಂಗ ನಮಸ್ಕಾರ. ಇತ್ತ ನಾನು ಕ್ಷೇಮ. ನೀವು ಕ್ಷೇಮವಾಗಿದ್ದೀರೆಂದು ಭಾವಿಸುತ್ತೇನೆ. ಈ ಪತ್ರ ಬರೆಯಲು ಮುಖ್ಯ ಕಾರಣ ಇದೇ ತಿಂಗಳು ಇಪ್ಪತ್ತೇಳನೇ ತಾರೀಕಿನ ಶನಿವಾರ ಹೊನ್ನೇಮರಡುವಿನಲ್ಲಿ ಹೊಳೆ ಊಟಕ್ಕೆ ನಾವು ಹೋಗಬೇಕೆಂದು ತೀರ್ಮಾನಿಸಿಯಾಗಿದೆ. ಯಳ್ಳು ಇಲ್ಲದಿದ್ದರೂ ಯಳ್ಳಮವಾಸೆಯ ಆ ದಿನ ನಮ್ಮ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೀಗೆ ಹೊರ ಸಂಚಾರ ಹೊರಟು ಹೊಳೆಯ ಪಕ್ಕದಲ್ಲಿ ಊಟ ಮಾಡಿಕೊಂಡು ಬರುವುದು ಸುಮಾರು ಐವತ್ತು ವರ್ಷಗಳಿಂದ ನಡೆದು ಬಂದ ಪದ್ದತಿ. ಯಾವಾಗಲೂ ಜೋಗ ಜಲಪಾತ ಬೀಳುವ ಜಾಗಕ್ಕೆ ತೆರಳುತ್ತಿದ್ದ ನಾವು ಈ ಬಾರಿ ಹೊನ್ನೇಮರಡುವನ್ನು ಆಯ್ಕೆಮಾಡಿಕೊಂಡಿದ್ದೇವೆ. ಕಾರಣ ಅಲ್ಲಿ ಜಾಕೆಟ್ ಕಟ್ಟಿಕೊಂಡು ಈಜಾಡಬಹುದು ಬೋಟಿಂಗ್ ಮಾಡಬಹುದು.
ಈ ಹೊಳೆ ಊಟದ ಮಜ ನೀವೂ ಅನುಭವಿಸಬಹುದು. ಬನ್ನಿ ಖಂಡಿತಾ ಬರುವಿರಾಗಿ ಆಶಿಸುವ ಮತ್ತು ಬರುಅ ಮುಂಚೆ ನನಗೊಂದು ಮಾಹಿತಿ ತಿಳಿಸುವಿರಾಗಿ ಭಾವಿಸುವ ನಿಮ್ಮವ
ಮನೆಯಲ್ಲಿ ಹಿರಿಯರಿಗೆ ನಮಸ್ಕಾರ ಕಿರಿಯರಿಗೆ ಆಶೀರ್ವಾದಗಳು
ಇಂತಿ ನಿಮ್ಮ ಹಿತೈಷಿ.
ಆರ್.ಶರ್ಮಾ. ತಲವಾಟ
9342253240

Friday, December 12, 2008

ಹವ್ಯಕರ ಹಳ್ಳಿಗಳು ಖಾಲಿ ಖಾಲಿ

ದಿನದಿಂದ ದಿನಕ್ಕೆ ಹಳ್ಳಿತೊರೆದು ಪಟ್ಟಣ ಸೇರುವ ವಲಸೆಯೆಂಬ ಹೀಗೊಂದು ಪ್ರಕ್ರಿಯೆ ಹವ್ಯಕ ಬ್ರಾಹ್ಮಣರ ಸಮುದಾಯದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ. ಅದು ಯಾರ ಗಮನಕ್ಕೂ ಬಾರಾದಂತೆ ಮುಗುಮ್ಮಾಗಿ ತನ್ನಷ್ಟಕ್ಕೆ ತಾನೇ ಆಗುತ್ತಿದೆ. ನಾನು ಸ್ವತಹ ಗಮನಿಸಿದಂತೆ ಹತ್ತು ವರ್ಷ ದಿಂದ ಈಚೆಗೆ ನಮ್ಮ ಊರಿನ ಸುತ್ತ ಮುತ್ತ ಸುಮಾರು ಇಪ್ಪತ್ತು ಮನೆಗಳು ಬಾಗಿಲು ಮುಚ್ಚಿವೆ. ಅದರಲ್ಲಿ ಮುಕ್ಕಾಲು ಪಾಲು ವಲಸೆ ಕಾರಣಕ್ಕಾಗಿಯಾದರೆ ಇನ್ನು ಕಾಲು ಭಾಗ ಕುಟುಂಬದ ಸದಸ್ಯರು ಇಲ್ಲವಾಗಿದ್ದು. ಕಾರಣಗಳು ಸಾವಿರ ಇವೆ. ಇರುವ ಒಬ್ಬ ಮಗ ಬೆಂಗಳೂರಿನಲ್ಲಿ ಇಂಜನಿಯರ್ , ಇರುವ ಎರಡು ಹೆಣ್ಣು ಮಕ್ಕಳೂ ಮದುವೆಯಾಗಿ ಹೋಗಿದ್ದಾರೆ ಅಲ್ಲೇ ಪಕ್ಕದಲ್ಲಿ ಒಂದು ಮನೆ ಮಾಡಿ ವಾಸ, ವಯಸ್ಸಾದವರು ಕೈಲಾಸ ಸೇರಿದರು ಮಕ್ಕಳು ಅಲ್ಲಿಂದ ಇಲ್ಲಿಗೆ ಬಂದು ಜಮೀನು ನೋಡಿಕೊಳ್ಳಲಾಗುವುದಿಲ್ಲ ಹಾಗಂತ ಜಮೀನು ಮಾರೋಣ ಎಂದರೆ ಮುಂದೆ ಬೇಕಾಗುತ್ತೇನೋ ಅನ್ನುವ ಭಯ ಆಕಾರಣಕ್ಕಾಗಿ ಮನೆಯ ಬಾಗಿಲಿಗೆ ಒಂದು ಗೋಡ್ರೇಜ್ ಬೀಗ. ಹೀಗೆ . ಇನ್ನಷ್ಟು ಜನ ಹಳ್ಳಿಯ ಬಿಟ್ಟು ಓಡಿ ಹೋಗುವ ತವಕದಲ್ಲಿದ್ದಾರೆ. ಅವರಿಗೂನ್ ಅಷ್ಟೆ ಮಗ ಅಥವಾ ಮಗಳು ಸೆಟ್ಲ್ ಇಲ್ಲಿ ಬೇಜಾರು. ಇಂತಹ ಅನಿವಾರ್ಯ ಕಾರಣದಿಂದ ಹಳ್ಳಿಗಳು ಭಣಭಣ ಎನ್ನತೊಡಗಿವೆ. ಈ ಪ್ರಕ್ರಿಯೆ ನಿಲ್ಲದಿದ್ದಲ್ಲಿ ಅಥವಾ ಪಟ್ಟಣದಿಂದ ವಾಪಾಸಾತಿ ಆಗದಿದ್ದಲ್ಲಿ ಇನ್ನು ಹತ್ತು ವರ್ಷದಲ್ಲಿ ಹವ್ಯಕರ ಹಳ್ಳಿಗಳು ಭಾಗಶಃ ಖಾಲಿಯಾಗುವುದು ಖಂಡಿತ. ಹಾಗಂತ ಹಳ್ಳಿಯಲ್ಲಿ ಉಳಿದವರ ಪರಿಸ್ಥಿತಿಯೇನೋ ಸ್ವರ್ಗ ಅಂತ ಅನ್ನುವಂತಿಲ್ಲ. ದಿನದಿಂದ ದಿನಕ್ಕೆ ಆರ್ಥಿಕವಾಗಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ವೆನಿಲಾ ರೋಗದ ಕಾರಣ ಮಾಯ ಅಡಿಕೆ ದರ ಇಳಿತ, ಕೂಲಿಕಾರರ ಅಭಾವ, ಕೂಲಿಕಾರರು ಸಿಕ್ಕಿದರೂ ಹೆಚ್ಚಿದ ಸಂಬಳ. ಮುಂತಾದ ಹತ್ತಾರು ಸಮಸ್ಯೆಗಳು. ಇದರ ಜತೆಗೆ ಹವ್ಯಕರ ಗಂಡುಗಳಿಗೆ ಹೆಣ್ಣಿಲ್ಲದ ಭೀಕರ ಸಮಸ್ಯೆ. ಮೂವತ್ತರಿಂದ ನಲವತ್ತು ವರ್ಷದವರೆಗಿನ ಮದುವೆಯಾಗದ ಗಂಡುಗಳು ಪ್ರತೀ ಊರಿನಲ್ಲಿಯೂ ಹತ್ತೆಂಟು ಸಿಗುತ್ತಾರೆ. ಇವುಕ್ಕೆ ಹೆಣ್ಣು ಕೊಡುವವರು ಇಲ್ಲ ಎನ್ನುವ ಸಮಸ್ಯೆಯ ಜತೆ ಅವರುಗಳಿಗೆ ಮದುವೆಯಾಗುವ ಆಲೋಚನೆಯೇ ಇಲ್ಲದಿರುವುದು ಮತ್ತೊಂದು ದುರಂತ. ಮದುವೆ ಎನ್ನುವುದು ಯೋಚಿಸಿ ಆಗುವ ಕ್ರಿಯೆ ಅಲ್ಲ. ಅದು ಸಂಸಾರ ಎಂಬುದು ಜಂಜಡ ಎಂದು ಸಾವಿರ ಜನ ಹೇಳುತ್ತಿದ್ದರೂ ಅಲ್ಲ ಅಲ್ಲಿದೆ ಸ್ವರ್ಗ ಎಂದು ತಿಳಿದಿಕೊಳ್ಳುವಂತಹ ವಯಸ್ಸಿನಲ್ಲಿ ಆಗುವಂತಹ ಪ್ರಕ್ರಿಯೆ. ಆದರೆ ಗಂಡುಗಳಿಗೆ ಮೂವತ್ತು ನಲವತ್ತು ಆಗಿದ್ದರಿಂದ ಅವುಕ್ಕೆ ಸಂಸಾರ ಎನ್ನುವುದು ಸಸಾರ ಅಲ್ಲ ಅನ್ನುವುದು ಅರಿವಾಗಿ ಮದುವೆ ಮಾಡಿಕೊಳ್ಳದೇನೆ ನಾನು ಸುಖವಾಗಿ ಇರಬಲ್ಲೆ ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ. ಇಂತಹ ಕಾರಣಗಳು ಭವಿಷ್ಯದಲ್ಲಿಯೂ ಹವ್ಯಕರ ಹಳ್ಳಿಗಳು ಖಾಲಿ ಖಾಲಿ ಅನ್ನಿಸಿಕೊಳ್ಳುವುದಕ್ಕೆ ಕಾರಣವಾಗಿಬಿಟ್ಟಿವೆ. ಈ ವಲಸೆ ಪ್ರಕ್ರಿಯೆ ನಿರಂತರವಾಗಿ ನಿಧಾನವಾಗಿ ಹಬ್ಬಲು ಮುಖ್ಯ ಕಾರಣ ಇಂದಿನ ಆರ್ಥಿಕ ಮಾನದಂಡ. ಎಲ್ಲರೂ ಎಲ್ಲವನ್ನೂ ಅವನ ಬಳಿ ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ? ಎನ್ನುವ ತತ್ವಕ್ಕೆ ಇಳಿದಿರುವುದರಿಂದ ಹಳ್ಳಿ ಹಣದ ಥೈಲಿ ತರದಾದ್ದರಿಂದ ವಲಸೆ ಅನಿವಾರ್ಯವಾಗತೊಡಗಿದೆ. ಹಿಂದಿನ ಹಳ್ಳಿಗಳಲ್ಲಿ ಈ ಅರ್ಥಪ್ರಧಾನ ವ್ಯವಸ್ಥೆ ಆಷ್ಟೊಂದು ಗಾಢವಾಗಿರಲಿಲ್ಲ. ಇಂದಿನ ಮಾಹಿತಿ ತಂತ್ರಜ್ಞಾನದ ಪ್ರಗತಿಯಿಂದ ಹಳ್ಳಿಗರಿಗೆ ಪ್ರಪಂಚ ದರ್ಶನ ಮನೆಯಬಾಗಿಲಿನಲ್ಲಿಯೇ ದೊರೆಯುವುದರಿಂದ ಮತ್ತು ಅವುಗಳು ಪಟ್ಟಣದ ಬದುಕು ಸುಖ ಎಂದು ಬಿಂಬಿಸುವುದರಿಂದ ಇಲ್ಲಿ ಬದುಕಲಾರದೆ ಅಲ್ಲಿಗೆ ಹೋಗಲಾರದೆ ತ್ರಿಶಂಕು ಜೀವನದ ಕತೆಯಾಗಿದೆ. ಮೂವತ್ತು ನಲವತ್ತು ವರ್ಷದ ಹಿಂದಿನ ಸಿನೆಮಾಗಳಲ್ಲಿ ಹಳ್ಳಿಯ ಬದುಕನ್ನು ಬಿಂಬಿಸಿ ನಾಯಕ ನಟಿಸುತ್ತಿದ್ದ. ಮಣ್ಣಿನ ಜತೆಗಿನ ಬದುಕು ಉತ್ತಮ ಎಂಬ ಸಂದೇಶ ರವಾನಿಸುತ್ತಿದ್ದ. ಹೈಕಳು ಅದರಿಂದ ಏನೋ ಪ್ರಭಾವಿತರಾಗಿ ಹಾಡು ಹೇಳುತ್ತಾ ಉಳುಮೆ ಮಾಡುತ್ತಿದ್ದರು. ಮನಸ್ಸಿನಲ್ಲಿ ನಾನು ದೇಶದ ಬೆನ್ನೆಲುಬು ಎಂಬುದನ್ನು ಆಹ್ವಾನಿಸಿಕೊಂಡು ಸುಖಿಸುತ್ತಿದ್ದರು. ಇಂದಿನ ಸಿನೆಮಾ ಟಿವಿಗಳು ರೈತರ ಆತ್ಮಹತ್ಯೆಯನ್ನು ಬಿಂಬಿಸುತ್ತವೆ, ಹಳ್ಳಿಯ ಜೀವನ ಮಧುರ ಅಲ್ಲ ಅಂದು ಸಾರುತ್ತವೆ. ಇವೆಲ್ಲಾ ಕೊಂಚ ಮಟ್ಟಿಗೆ ಹಳ್ಳಿಯ ಜೀವನ ತೊರೆಯಲು ಪ್ರೇರೇಪಿಸುತ್ತವೆ. ಹಾಗಂತ ಪಟ್ಟಣದಲ್ಲಿದ್ದವರು ಸುಖವೊಂದರಲ್ಲೇ ತೇಲುತ್ತಿದ್ದಾರೆ ಅಂಬರ್ಥವಲ್ಲ, ಬಹಳಷ್ಟು ಜನ ಹಾಗೆ ತಿಳಿದುಕೊಂಡಿದ್ದಾರೆ.
ಹೀಗೆ ಗೊತ್ತಿರುವ ಗೊತ್ತಿಲ್ಲದ ನೂರಾರು ಕಾರಣಗಳು ಹವ್ಯಕರ ಹಳ್ಳಿಯ ಮೇಲೆ ಪರಿಣಾಮ ಆಗುತ್ತಿರುವುದಂತೂ ಸತ್ಯ. ದೂರಗಾಮಿ ಪರಿಣಾಮ ಆ ಪ್ರಕೃತಿಗೇ ಬಿಟ್ಟದ್ದು. ಹೀಗಿದೆ ಅಂತ ಒಂದು ಹುಳ ಬಿಡುವ ಕ್ರಿಯೆಯನ್ನು ನಾವು ಮಾಡಬಹುದು.

Thursday, December 11, 2008

ಜೇನುಗವನಗಳು

ಮಿನಿಗವನ, ಹನಿಗವನ, ಚುಟುಕ ಎಂದು ಕರೆಯಿಸಿಕೊಳ್ಳುವ ಬರಹಗಳೆಂದರೆ ನನಗೆ ಬಲು ಇಷ್ಟ. ಅದನ್ನು ಬರೆಯುವವರು ಅತೀಬುದ್ದಿವಂತರು ಎಂಬುದು ನನ್ನ ನಂಬಿಕೆ. ಪುಟಗಟ್ಟಲೆ ಕೊರೆದು ಒಂದು ಸಾಲಿನ ಅರ್ಥಹೇಳುವ ಬರಹಗಾರ ನಾಲ್ಕೇ ನಾಲ್ಕು ಸಾಲಿನಲ್ಲಿ ಒಳ್ಳೆಯ ಅರ್ಥ ತರುವ ಹಾಗೂ ಮುಗುಳ್ನಗೆ ಮೂಡಿಸುವ ಇವರೆದುರು ಪೇಲವನಾಗಿಬಿಡುತ್ತಾನೆ. ದುಂಡಿರಾಜ್ ಒಮ್ಮೆ ಬರೆದಿದ್ದರು
ಹುಡುಗ ಹೇಳಿದ:
ಪ್ರಿಯೆ ಹೃದಯ ಶ್ರೀಮಂತಿಕೆಯಲ್ಲಿ ನಾನು ಟಾಟಾ ಬಿರ್ಲಾ
ಹುಡುಗಿ ಹೇಳಿದಳು
ಸರಿ ಹಾಗಾದರೆ ನಾನು ಟಾಟಾ ಬರ್ಲಾ.
ಇಷ್ಟು ಸಾಲುಗಳಲ್ಲಿ ಎಂಥಹ ಮಜ ಇದೆ ನೋಡಿ. ಕವನ ಕವಿತೆಗಳಾದರೆ ಅರ್ಥಮಾಡಿಕೊಳ್ಳಲು ತಾಕತ್ತಿರಬೇಕು. ಅದನ್ನು ಆಳವಾಗಿ ಅಗಲವಾಗಿ ಪರಾಮರ್ಶಿಸಿ ಅಂತಿಮವಾಗಿ ಇದು ಹೀಗೆ ಅರ್ಥವಿರಬಹುದೇನೋ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಆದರೆ ಈ ಹನಿಯಂತಿರುವ ಹನಿಗವನ ಮಾತ್ರಾ ಪಾಮರರಿಗಾಗಿಯೇ ಇರುವುದು. ಓದಿದಕೂಡಲೇ ನಕ್ಕುಬಿಡಬಹುದು. ಡಿವಿಜಿ ಯವರ ಮಂಕುತಿಮ್ಮನ ಕಗ್ಗವೂ ಕೂಡ ನಾಲ್ಕೇ ಸಾಲು ಆದರೆ ಅರ್ಥಸಹಿತ ಕಗ್ಗವನ್ನು ಕೊಳ್ಳದಿದ್ದರೆ ನಮ್ಮನಿಮ್ಮಂತಹ ವರಿಗೆ ಅದು ತಿಳಿಯುವುದೇ ಇಲ್ಲ.
ಎಲ್ಲವೂ ಶೂನ್ಯದಿಂದಲೇ..
ಇದ್ದರೆ ಸಂಸಾರ
ಇಲ್ಲದಿದ್ದರೆ ಸಸಾರ.
ಮೂರೇ ಸಾಲಿನ ಈ ಚುಟುಕ ಪಟಕ್ಕನೆ ಅದೆಂತಹ ಘನಗಂಭೀರವಾದ ಅರ್ಥವನ್ನು ಕೊಡುತ್ತದೆ. ಹನಿಗವನದಲ್ಲಿ ನಗುಮೂಡಿಸುವ ಹನಿಗಳೇ ಹೆಚ್ಚು. ಸಣ್ಣದಾಗಿ ಚಮಕ್ ಕೊಡುವ ಸಾಹಿತ್ಯವೂ ಇದೆಯೆನ್ನಿ
ಹುಡುಗ ಹೇಳಿದ :
ಕನ್ನಡವೆಂದರೆ ಕುಣಿದಾಡುವುದೆನ್ನೆದೆ
ಹುಡುಗಿ ಹೇಳಿದಳು :
ಎನ್ನದಿದ್ದರೂ .............................!?
ಒಂದಿಷ್ಟು ಚುಕ್ಕಿ ನಂತರ ಆಶ್ಚರ್ಯಸೂಚಕ ಹಾಗೂ ಪ್ರಶ್ನಾರ್ಥಕದ ಚಿಹ್ನೆ. ಅದರ ಅರ್ಥ ಅಲ್ಲೆನೋ ಸಣ್ಣ ಡಬ್ಬಲ್ ಮೀನಿಂಗ್ ಇದೆ ಅಂತ ನಮಗೆ ಓದಿದ ಕೂಡಲೆ ತಿಳಿದು ಕಿರುನಗೆ ಮೂಡುತ್ತದೆ. ಇವತ್ತಿನ ಕಾಲದಲ್ಲಿ ಧಾವಂತದ ಬದುಕಿನಲ್ಲಿ ದುಡಿಯುವ ಭರಾಟೆಯಲ್ಲಿ ಗಂಟೆಗಟ್ಟಲೆ ಓದುತ್ತಾ ಕೂರುವುದರಲ್ಲಿ ಅರ್ಥ...!ವಿಲ್ಲ ಎಂದು ಈ ಹನಿಗವನ ಹುಟ್ಟಿಕೊಂಡಿತೇನೋ ಅಂತ ಅನ್ನಿಸುತ್ತದೆ. ಹಾಗೆಯೇ ನೂರಾರು ಈ ಹನಿಗವನಗಳ ಸೃಷ್ಟಿಕರ್ತರೂ ಹುಟ್ಟಿಕೊಂಡಿದ್ದಾರೆ. ಜೈ ಹನಿಗವನ.

Wednesday, December 10, 2008

ಹರೆ ಕೃಷ್ಣಾ ಹರೆ ರಾಮ

ಆತನ ಈಗಿನ ಹೆಸರು ಕುಲಶೇಖರ. ವಯಸ್ಸು ಇಪ್ಪತ್ತೈದು ಇಪ್ಪತ್ತಾರು ಇರಬಹುದು. ಇಸ್ಕಾನ್ ನ ಸನ್ಯಾಸಿ ಆತ. ಆತ ಓದಿದ್ದು ಡೆಂಟಲ್ . ಕೋರ್ಸ್ ಮುಗಿಯುತ್ತಿದ್ದಂತೆ ಆಧ್ಯಾತ್ಮದ ಕಡೆ ಎಳೆಯಿತಂತೆ ಹಾಗಾಗಿ ಆತ ಇಸ್ಕಾನ್ ಸೇರಿಕೊಂಡ. ತಂದೆತಾಯಿಗೆ ಒಬ್ಬನೇ ಮಗನಾದ ಆತನಿಗೆ ಮನೆಯಿಂದ ಇಸ್ಕಾನ್ ಸೇರಬೇಡ ಎಂಬ ಒತ್ತಡ ಮನವಿ ಬಹಳ ಇತ್ತಂತೆ. ಆದರೆ ಆತನಿಗೆ ಇಹದ ಬಗ್ಗೆ ಆಸಕ್ತಿಯೇ ಇರಲಿಲ್ಲ. ಎಲ್ಲವನ್ನೂ ಬಿಟ್ಟು "ಹರೆ ಕಿಷನಾ.. ಹರೆ ರಾಮ ಕಿಷ್ನ ಕಿಷ್ನ ಹರೆ. ಹರೇ..." ತುಂಬಾ ಇಷ್ಟವಾಯಿತು. ಎರಡೂ ಕೈಗಳನ್ನು ಮೇಲಕ್ಕೆತ್ತಿ ಕುಣಿಯುತ್ತಾ ಭಜನೆ ಮಾಡುತ್ತಾ ಮನಸ್ಸಿನಲ್ಲಿ ಕೃಷ್ಣನನ್ನು ಆಹ್ವಾನಿಸಿಕೊಳ್ಳುವ ಆ ಮಜ ನಮ್ಮ ಕುಲಶೇಖರಿನಿಗೆ ತಾನು ಓದಿದ್ದ ಎಂ.ಬಿ.ಬಿ.ಎಸ್ ನ್ನೂ ಮರೆಸುವ ತಾಕತ್ತು ಇತ್ತು. ಹಾಗಾಗಿ ಆತ ಇಸ್ಕಾನಿ. ನನಗೆ ಆತ ಒಂದು ಟ್ರೈನಿಂಗ್ ಪ್ರೋಗ್ರಾಂ ನಲ್ಲಿ ಸಿಕ್ಕಿದ್ದ. ನೋಡಲು ಮುದ್ದುಮುದ್ದಾಗಿದ್ದ ಆತ ಎಂತಹವರನ್ನೂ ಸೆಳೆಯುವ ಮುಖಾರವಿಂದ ಹೊಂದಿದ್ದ. ಆದರೆ ಸುಮ್ಮಸುಮ್ಮನೆ ಮಾತನಾಡಲಾರ. ಮೂರುದಿನದ ಕೃಷಿ ಟ್ರೈನಿಂಗ್ ನಲ್ಲಿ ಎರಡು ದಿನ ಆತನೊಟ್ಟಿಗೆ ಮುಗುಳ್ನಗೆಯ ವಿನಿಮಯದೊಂದಿಗೆ ಕಳೆದೆ. ನನಗೋ ಆತನೊಡನೆ ಮಾತನಾಡುವ ಹಂಬಲ. ಆದರೆ ಆತನಿಗೆ ಇಹದ ಬಗ್ಗೆ ಆಸಕ್ತಿಯೇ ಇಲ್ಲ ಯಾವಾಗಲೂ ಕೈಯಲ್ಲಿ ಜಪಮಣಿ ಬಾಯಲ್ಲಿ ಕೃಷ್ಣ ಕೃಷ್ಣ ಮಿಣಿಮಿಣಿ. ಅಂತೂ ಇಂತು ಎರಡು ದಿನದ ಮುಗಳ್ನಗು ಮೂರನೆಯ ದಿನ ಪ್ರಯೋಜನಕ್ಕೆ ಬಂದಿತ್ತು. ಬೆಳಿಗ್ಗೆ ತಿಂಡಿಯ ಸಮಯದಲ್ಲಿ ಆತ ವರಾಂಡದಲ್ಲಿ ಅಡ್ದಾಡುತ್ತಿದ್ದ. ತಿಂಡಿ ತಿನ್ನುತ್ತಿದ್ದ ನನಗೆ ನೀರಿನ ಅವಶ್ಯಕತೆ ಇತ್ತು. ಆದರೆ ಒಂದು ಕೈಯಲ್ಲಿ ಬಟ್ಟಲು ಇರುವ ಕಾರಣ ನಲ್ಲಿ ತಿರುಪದಾದೆ. ಆಗ ಆತ ಸಹಾಯಕ್ಕೆ ಬಂದ. ನೀರು ಲೋಟ ತುಂಬಿದ ನಂತರ ತ್ಯಾಂಕ್ಸ್ ಎಂದೆ ಆತ ಕೃಷ್ಣಾರ್ಪಣ ಎಂದ. ನನಗೆ ಆತನ ಕೃಷ್ಣ ಭಕ್ತಿಯನ್ನು ಕಂಡು ಅಚ್ಚರಿಯಾಯಿಯಿತು. ಹಗೂರ ಮಾತಿಗೆಳೆದ. ಪೂರ್ವಾಶ್ರಮದ ಬಗ್ಗೆ ಚುಟುಕಾಗಿ ಮುಗಿಸಿ ಅದರ ಬಗ್ಗೆ ಕೇಳಬೇಡಿ ಎಂದ. ನಿಮಗೆ ತಿಂಡಿ ಆಯಿತಾ ಎಂದೆ. ಇಲ್ಲ ಕೃಷ್ಣಾರ್ಪಣವಾದ ಮೇಲೆ ಕೃಷ್ಣನಿಗೆ ನೈವೇದ್ಯವಾದ ಮೇಲೆ ನಮಗೆ ಆಹಾರ ಎಂದ ಆತ. ಹಸಿವೆ ಯಾವ್ಗುವುದಿಲ್ಲವೇ? ಎಂದೆ. ಆ ಪರಮಾತ್ಮ ಕೃಷ್ಣನ ಆಸೆ ಹಾಗಿದ್ದರೆ ಹಾಗೆಯೇ ಆಗಲಿ ಎಂದ. ಮತ್ತೆ ಜಪಮಣಿ ತಿರುವುತ್ತಾ ಮಿಣ ಮಿಣ ಮುಂದುವರೆಸಿದ. ನನಗೆ ಆಯಾಚಿತವಾಗಿ ಪ್ರಶ್ನೆಯೊಂದು ಅಕಸ್ಮಾತ್ ಕೇಳಿ ಹೋಯಿತು. " ಈ ಕಾಲದಲ್ಲಿಯೂ ಕೃಷ್ಣ ಅಂತ ಒಬ್ಬ ಇದ್ದಾನೆ ಆತ ದೇವರು ಅವನು ಇಲ್ಲೆಲ್ಲೋ ನಿಂತು ನಿಮ್ಮನ್ನು ನೋಡುತ್ತಿದ್ದಾನೆ, ನಿಮ್ಮ ಆಶಯ ಈಡೇರಿಸುತ್ತಾನೆ ಎಂಬ ನಂಬಿಕೆ ನಿಮ್ಮಲ್ಲಿದೆಯಾ?" ಒಮ್ಮೆ ಆತನ ಮುಖ ಗಂಭೀರವಾಯಿತು. ಎರಡೂ ಕಣ್ಣಿನಿಂದ ದಳದಳ ನೀರಿಳಿಯಿತು. ಕಿವಿಯನ್ನು ಮುಚ್ಚಿಕೊಂಡು " ಹೇ ಪರಮಾತ್ಮ ಇಂತಹಾ ವಾಕ್ಯಗಲನ್ನು ನನ್ನ ಈ ಕಿವಿಗಳು ಕೇಳಬೇಕಾಯಿತಲ್ಲ " ಎಂದು ಹೇಳಿ ಮೌನವಾದ. ನಂತರ ನನಗೆ ಆ ಪ್ರಶ್ನೆ ಕೇಳಬಾರದಿತ್ತು ಅಂತ ಅನ್ನಿಸಿತು. ಆದರೆ ಕಾಲ ಮಿಂಚಿಹೋಗಿತ್ತು. ಕ್ಷಮಿಸಿ ನಿಮಗೆ ಈ ಪ್ರಶ್ನೆ ಕೇಳಿದ್ದಕ್ಕೆ ಎಂದೆ. ಮರುಕ್ಷಣ ಆತ" ಛೆ ಪರವಾಗಿಲ್ಲ, ಇದೂ ಕೂಡ ಆ ಪರಮಾತ್ಮನ ಪರೀಕ್ಷೆ, ಇದರ ಅರ್ಥ ನಾನು ಇನ್ನೂ ಆಧ್ಯಾತ್ಮಿಕ ಸಾಧನೆ ಮಾಡಬೇಕಿದೆ ಎಂದು ಮಿಣಮಿಣ ಮುಂದುವರೆಸಿದ,

ಇಂತಹ ಒಂದು ಪರಮ ಭಕ್ತಿಯ ಜನರನ್ನು ಇಲ್ಲಿಯವರೆಗೆ ನಾನು ನೊಡಿರಲೇ ಇಲ್ಲ. ನನಗೂ ಆಸೆಯಾಗುತ್ತದೆ. ಅಂತಹ ನಿರ್ಮಲ ನಿಸ್ವಾರ್ಥ ಭಕ್ತಿಯನ್ನು ಅನುಭವಿಸಬೇಕು. ಅದರಲ್ಲಿ ಅಂತಹ ಮಜ ಇದೆ ಎಂದು ಅನ್ನಿಸುತ್ತದೆ. ಮರುಕ್ಷಣ ನನ್ನಂತಹ ಮನುಷ್ಯನಿಗೆ ಅದು ಆಗದು ಎಂದು ಅನ್ನಿಸಲು ಶುರುವಾಗಿಬಿಡುತ್ತದೆ. ನಂಬಿಕೆಟ್ಟವರಿಲ್ಲವೋ ಅಂಬುದು ನಿಜ ಆದರೆ ನಂಬಲು ಆಗದಲ್ಲ ಅದು ಬಹಳ ಕಷ್ಟ. ನಂಬಲೇಬೇಕು ಎಂದು ಹೊರಟಾಗಲೆಲ್ಲ ಸಾವಿರ ಸಾವಿರ ತರ್ಕ ಕುತರ್ಕದ ಪ್ರಶ್ನೆಗಳು ಮೂಡಿ ಯಡವಟ್ಟಾಗಿಬಿಡುತ್ತದೆ.

Monday, December 8, 2008

ಚಮಕ್

ಜನ ಜನ ಜನ, ಎಲ್ಲಿನೋಡಿದರಲ್ಲಿ ಜನ , ಊರಿಗೆ ಹೊರಟವರು, ಊರಿಂದ ಬಂದವರು, ಹೊರಟವರನ್ನು ಕಳುಹಿಸುವವರು, ಬಂದವರನ್ನು ಸ್ವಾಗತಿಸುವವರು, ಬಸ್ಸಿಳಿದವರು, ರೈಲಿನಿಂದ ಬಂದವರು, ರೈಲಿಗೆ ಹೋಗುವವರು. ಅದು ಬೇರೆಲ್ಲೂ ಸಾಧ್ಯವಿಲ್ಲ ಮೆಜೆಸ್ಟಿಕ್ ಎಂದು ನಿಮಗೀಗಲೆ ಅರಿವಾಗಿರಬೇಕು. ಹೌದು ಅದು ಮೆಜೆಸ್ಟಿಕ್. ನಾನೂ ಆ ಜನರ ಸಂತೆಯಲ್ಲಿ ಒಂಟಿಯಾಗಿದ್ದೆ. ಹಸಿ ಹಸಿ ಬೆವರಿನ ವಾಸನೆಯಲ್ಲಿ ಕಳೆದುಹೋಗಿದ್ದೆ. ಸಾವಿರಾರು ಮುಖಗಳ ನಡುವೆ ಹುದುಗಿ ಹೋಗಿದ್ದೆ. ಕೆಂಪನೆಯ ಮುಖ ದುಂಡನೆಯ ಮುಖ ಕಪ್ಪನೆಯ ಮುಖ ಬಿಳಿಚಿಕೊಂಡ ಮುಖ ಹೀಗೆ ಎಷ್ಟೋ ಮುಖಗಳು ಏನನ್ನೋ ಅರಸುವ ಭಾವನೆಯೊಂದಿಗೆ ಅಲೆದಾಡುತ್ತಿದ್ದವು. ಆ ಅಲೆದಾಟದಲ್ಲಿ ನಾನೂ ಸೇರಿಹೋಗಿದ್ದೆ. ಆದರೆ ನನಗೆ ನನ್ನ ಮುಖ ಕಾಣುತ್ತಿರಲಿಲ್ಲ. ಬೇರೆ ಮುಖದಲ್ಲಿ ನನ್ನ ಮುಖ ನೊಡಿಕೊಳ್ಳುವ ಆಸೆ ಇತ್ತು. ಆದರೆ ಅಲ್ಲಿರುವ ಮುಖಗಳಿಗೆ ನನ್ನ ಮುಖದ ಪರಿಚಯವೇ ಇರಲಿಲ್ಲ. ಹಾಗಾಗಿ ನನ್ನ ಆಸೆಯನ್ನು ಅದುಮಿಕೊಳ್ಳುವುದು ಅನಿವಾರ್ಯವಾಗಿತ್ತು. ಇವರೆಲ್ಲಾ ಎಲ್ಲಿಗೆ ಹೊರಟಿದ್ದಾರೆ ಯಾಕೆ ಹೊರಟಿದ್ದಾರೆ ಎಲ್ಲಿಗೆ ತಲುಪುತ್ತಾರೆ ಎಂಬ ಉತ್ತರ ಇಲ್ಲದ ಪ್ರಶ್ನೆ ನನ್ನ ಬಳಿ ಪದೆಪದೆ ಮೊಳಗುತ್ತಿತ್ತು. ಪ್ರಶ್ನೆಗೆ ಉತ್ತರ ಸಿಗದು ಎಂದು ತಿಳಿದಮೇಲೆ ಸುಮ್ಮನಾದೆ. ಒಂದು ಸ್ವಲ್ಪವೇ ಸ್ವಲ್ಪ ಕುಡಿದು ಹೀಗೆ ಪರಿಚಯ ಇಲ್ಲದ ಜನರ ಮಧ್ಯೆ ಓಡಾಡುವಾಗೆಲ್ಲ ಸಾವಿರ ಪ್ರಶ್ನೆಗಳು.

ಆವಾಗ ಆಕೆ ದುತ್ತನೆ "ಹಲೋ" ಎನ್ನುತ್ತಾ ಎದುರಿಗೆ ಬಂದು ನಿಂತಳು. ಒಮ್ಮೆಲೆ ಬೆಚ್ಚಿಬಿದ್ದೆ. " ನೀನು ನೀನು ಇಲ್ಲಿ ಇಲ್ಲಿ" ತೊದಲು ಮಾತನ್ನಾಡಿದೆ. ಕುಡಿದ ಕ್ವಾಟರ್ ವಿಸ್ಕಿ ಜರ್ರನೆ ಇಳಿದುಹೋಯಿತು. ಆಕೆಗೇನಾದರೂ ವಿಸ್ಕಿಯ ಕಮಟು ವಾಸನೆ ಬರಬಹುದಾ ಎಂಬ ಅನುಮಾನ ಕಾಡತೊಡಗಿತು. ಕೈಗಳು ತನ್ನಿಂದ ತಾನೆ ಪ್ಯಾಂಟಿನ ಜೇಬಿನೊಳಗೆ ತೂರಿಕೊಂಡವು. ನಾನು ಸರಿಯಾಗಿದ್ದೇನೆ ಕುಡಿದಿಲ್ಲ ಎಂದು ತೋರಿಸಿಕೊಳ್ಳಲು ದೇಹ ನುಲಿಯತೊಡಗಿತು. "ಅಯ್ಯ ಅದೇಕೆ ಅಷ್ಟು ಆಶ್ಚರ್ಯ, ನಾನು ಈಗ ಬೆಂಗಳೂರಿನಲ್ಲಿಯೇ ಇರುವುದು, ಊರಿಗೆ ಹೊರಟಿದ್ದೇನೆ, ನೀನು ಸಂಗಂ ಟಾಕಿಸಿನ ಬಳಿ ನಡೆದು ಬರುತ್ತಾ ಇರುವುದನ್ನು ಬಿಟಿಎಸ್ ಬಸ್ಸಿನಿಂದ ನೋಡಿದೆ ಊರಿಗೆ ಹೊರಟೇಯಾ? ಲಗ್ಗೇಜ್ ಎಲ್ಲಿ? " ಆಕೆ ಮುಂದುವರೆಸುತ್ತಿದ್ದಳು. ಅಯ್ಯೋ ಬಾರ್ ನಿಂದ ಇಳಿಯುತ್ತಿದ್ದುದನ್ನು ನೋಡಿರಬಹುದೇ? ಸಿಕ್ಕಿಕೊಂಡು ಬಿದ್ದೆಯಾ ಒಳಮನಸ್ಸು ಹೆದರಿಸತೊಡಗಿತು. "ಹೋ ಹೌದಾ, ನಾನು ಊರಿಗೆ ಅಲ್ಲ ಊರಿಂದ ಯಾರೋ ಬರುವವರು ಇದ್ದಾರೆ ಹಾಗೆ ಸುಮ್ಮನೆ ಇಲ್ಲಿ ಬಂದೆ" ಮಾತುಗಳು ತೊದಲುತ್ತಿದ್ದಂತೆ ನನಗನಿಸಿತು "ಬಾಯಿಹುಣ್ಣು ಬೆಂಗಳೂರು ಇತ್ತೀಚೆಗೆ ಹೀಟ್" ತೊದಲಿಕೆಗೆ ಕಾರಣ ಹೇಳಿದೆ. "ಓ ಹೋ ಹೌದಾ ಗ್ಲಿಸರಿನ್ ಹಚ್ಚು ಊರಲ್ಲಾದರೆ ಅಮ್ಮ ಬಸಳೆ ಸೊಪ್ಪು ಕೊಡುತ್ತಿದ್ದಳು ಅಲ್ವಾ..? " ಆಕೆ ನಗುನಗುತ್ತಾ ಕೇಳಿದಳು. ಸ್ವಲ್ಪ ಧೈರ್ಯ ಬಂತು ನನಗೆ , ಆಕೆಗೆ ನನ್ನ ಕುಡಿತ ಗೊತ್ತಾಗಿಲ್ಲ ಸಾವಿರ ಸಾವಿರ ಬೆವರಿನ ವಾಸನೆಯ ನಡುವೆ ಎಲ್ಲಿಯದೂ ಅಂತ ಆಕೆಗೇನು ತಿಳಿಯುತ್ತೇ ಆದರೂ ಒಂದೇ ಒಂದು ಮಿಂಟ್ ತಿನ್ನಬೇಕಾಗಿತ್ತು ಅಂತ ಅನ್ನಿಸಿತು. ಕಾಲೇಜು ಮುಗಿದನಂತರ ಆಕೆಯನ್ನು ನೋಡಿರಲಿಲ್ಲ, ಒಮ್ಮೆ ಅಡಿಯಿಂದ ಮುಡಿಯವರೆಗೂ ಗಮನಿಸಿದೆ ಸಿಕ್ಕಾಪಟ್ಟೆ ಮಾಡ್ರನ್ ಆಗಿದ್ದಂತೆ ಅನ್ನಿಸಿತು. ಊರಿನಲ್ಲಿ ಶಾಸ್ತ್ರ ಸಂಪ್ರದಾಯ ಅಂತ ಬೀಗುತ್ತಿದ್ದ ಅಪ್ಪ ಅಮ್ಮನ ಮಗಳು ಇವಳೇನಾ ಅಂತ ಅನ್ನಿಸುವಷ್ಟು ಬದಲಾಗಿದ್ದಳು. "ಏನೋ ಹೊಸ ಹುಡುಗಿ ನೋಡುವ ಹಾಗೆ ನೋಡುತ್ತೀ" ಕಣ್ಣನ್ನು ಮಿಟುಕಿಸಿ ಚಮಕ್ ಕೊಟ್ಟಳು. ಇಲ್ಲ ಇಲ್ಲ ಹಾಗೇನಿಲ್ಲ, ಸುಮ್ಮನೆ ಸುಮ್ಮನೆ ಮತ್ತೆ ತೊದಲಿದೆ, ಈ ವಿಸ್ಕಿಯ ಹಣೇ ಬರಹವೇ ಹಾಗೆ ಒಂದೆಡೆ ಯೋಚನೆಗಳನ್ನು ಎಳೆದುಕೊಂಡು ಬಿಡುತ್ತದೆ. ಇನ್ನುಮೇಲೆ ಕುಡಿದು ಹೀಗೆ ಬಸ್ ಸ್ಟ್ಯಾಂಡ್ ತಿರುಗುವ ಚಟಕ್ಕೆ ತಿಲಾಂಜಲಿ ಇಡಬೇಕೆಂದೆನಿಸಿತು. ಸರಿ ಅದು ಮುಂದಿನ ಕತೆ ಈಗ ಸದ್ಯ ಇವಳಿಂದ ಬಚಾವಾಗಿ ಹೋದರೆ ಸಾಕು, ಅಕಸ್ಮಾತ್ ಇವಳಿಗೆ ನಾನು ಕುಡಿದದ್ದು ಗೊತ್ತಾಗಿ ಊರಿಗೆ ಹೋಗಿ ಟಾಂ ಟಾಂ ಮಾಡಿದರೆ ಮಾನಮರ್ಯಾದೆ ಹರಾಜಾಗುತ್ತದೆ ಎಂದು ಒಕೆ ಬರ್ಲಾ ಎಂದು ಹೇಳಿದೆ. "ಒಂದು ನಿಮಿಷ ಇರೋ ನಾನು ಒಭ್ಳೆ ಬಸ್ ಎಷ್ಟೊತ್ತಿಗೆ ಅಂತ ಕೇಳಿಬರ್ತೀನಿ" ಎಂದು ಉತ್ತರಕ್ಕೂ ಕಾಯದೆ ಓಡಿದಳು. ಹೀಗೆ ಹೋಗಿ ಹಾಗೆ ಬಂದು 'ಅಯ್ಯೋ ರಾಮ ಇವತ್ತು ಬಸ್ಸು ಇನ್ನೂ ಒಂದೂವರೆ ಗಂಟೆ ತಡವಂತೆ ನನಗೂ ಬೋರ್ ಪ್ಲೀಸ್ ಇರೋ" ರಾಗ ಎಳೆದಳು. ಅನಿವಾರ್ಯ ಇಲ್ಲ ಎನ್ನಲಾಗಲಿಲ್ಲ. ವಿಸ್ಕಿ ಕುಡಿಯದಿದ್ದರೆ ಖುಷಿಯಿಂದ ಇರಬಹುದಿತ್ತು. ಛೆ ಎಂತ ಯಡವಟ್ಟಾಯಿತಲ್ಲ ಎಂದು ಆದಷ್ಟು ಡಿಸ್ಟೆನ್ಸ್ ಕಾಪಾಡಿಕೊಳ್ಳುತ್ತಾ ನಿಂತೆ. "ಇಲ್ಲಿ ಮಾಡುವುದೇನು ಒಂದು ರೌಂಡ್ ಹೋಗಿಬರೋಣವಾ?. ಬೊಗಸೆ ಕಂಗಳನ್ನು ಅಗಲಿಸಿ ಕೇಳಿದಳು. ಇಲ್ಲ ಎನ್ನಲಾಗಲಿಲ್ಲ. ಅವಳ ಬ್ಯಾಗ್ ಗಳನ್ನು ಲಗ್ಗೇಜ್ ರೂಂನಲ್ಲಿ ಇಟ್ಟು ರೌಂಡ್ ಗೆ ಹೊರಟಾಯಿತು.
ಮತ್ತದೆ ಗಿಜಿ ಗಿಜಿ ಜನ , ಸೊಂಯ್ ಸೊಂಯ್ ಹಾಡು ಹೋಗುವ ವಾಹನ ಅವುಗಳನ್ನು ತಪ್ಪಿಸಿಕೊಳ್ಳುವ ಆಟ ಆಡುತ್ತಾ ಮೈನ್ ರೋಡ್ ಗೆ ಬಂದಾಯಿತು. ಏನಾದರೂ ತಿನ್ನೋಣವಾ? ಆಕೆ ಕೇಳಿದಳು. ಇಲ್ಲ ಎನ್ನಲಿಲ್ಲ. " ಅಯ್ಯೋ ಖಂಜೂಸು ಬುದ್ಧಿ ನೀನು ಇನ್ನೂ ಬಿಟ್ಟಿಲ್ಲವಾ? ನಾನೆ ಕೊಡಿಸುತ್ತೇನೆ ಬಾ " ಎಂದು ನನ್ನ ಉತ್ತರಕ್ಕೂ ಕಾಯದೆ ಹತ್ತಿರದ ಹೋಟೆಲ್ಲಿಗೆ ಎಳೆದುಕೊಂಡೇ ಹೋದಳು. ವಿಸ್ಕಿ ಕುಡಿಯದೇ ಇದ್ದಿದ್ದರೆ ಕೈ ಹಿಡಿದಾಗ ಅಪ್ಯಾಯಮಾನವಾಗುತ್ತಿತ್ತು , ಆದರೆ ಈಗ ಹಿಂಸೆಯಾಗುತ್ತಿತ್ತು.
ಟೇಬಲ್ ಮುಂದೆ ಕುಳಿತಾಗ ನನಗೆ ಅರಿವಾಗಿದ್ದು ಇದು ಎಲ್ಲರೂ ಹೋಗುವ ಹೋಟೆಲ್ ಅಲ್ಲ " ಏಯ್ ಇದು ನಾನ್ ವೆಜ್ ಹೋಟೆಲ್ ಕಣೇ" ಮೊದಲಬಾರಿಗೆ ಧೈರ್ಯವಾಗಿ ಹೇಳಿದೆ." ಸರಿ ಅದಕ್ಕೇನು ವಿಶೇಷ?" ಹುಬ್ಬು ಹಾರಿಸದಳು. ಅಷ್ಟರಲ್ಲಿ ವೈಟರ್ ಬಂದ.
"ನೀನು ಹಾಟೋ ಕೊಲ್ಡೋ?" ಆಕೆ ಕೇಳಿದಳು.
"..........." ನಾನು ಕೋಲ್ಡಾದೆ.
(ಚುಟುಕೊಂದರಿಂದ ಪ್ರೇರಿತ ಕತೆ)

Friday, December 5, 2008

ಅಪೂರ್ಣ ಕಥೆ ಪೂರ್ಣಗೊಳಿಸಿ

ಮಾಯೆ

" ವೆಂಕಟರಮಣ ಹೆಗಡೆ, ಎಂಥ ಚೆಂದದ ಹೆಸರು. ಆದರೆ ಎಲ್ಲ ಕರೆಯುವುದು ವೆಂಕಣ್ಣ.ವೆಂಕಿ, ವೆಂಕಾಟಿ. ಬೊಗಸೆ ಕಂಗಳ ಚೆಂದನೆಯ ಹುಡುಗಿ ಪಟಕ್ ಅಂತ ಟೋಪನ್ ತೆಗೆದು ಬೊಕ್ಕ ತಲೆಯಲ್ಲಿ ನಿಂತರೆ ಎಂಥಹಾ ಶಾಕ್ ಆಗುತ್ತೇ ಅಲ್ಲವೆ? ಹಾಗೆ ನನಗೆ ಹೀಗೆಲ್ಲಾ ವಿಚಿತ್ರವಾಗಿ ಕರೆದಕೂಡಲೆ ಅಂತಹದ್ದೇ ಆಘಾತವಾಗುತ್ತದೆ. ಆದರೆ ತಿರುಗಿ ಅನ್ನುವಂತಿಲ್ಲ ಅನ್ನದೇ ಬಿಡುವಂತಿಲ್ಲ." ಎಂದು ವೆಂಕಟರಮಣ ಹೆಗಡೆ ಅಪ್ಪಣ್ಣಯ್ಯನ ಬಳಿ ಅಲವತ್ತುಕೊಳ್ಳುತ್ತಿದ್ದ. ಅಪ್ಪಣ್ಣಯ್ಯ ವೆಂಕನ ಮಾತುಗಳಿಗೆ ಪ್ರತ್ಯುತ್ತರ ನೀಡದೆ ತನ್ನಷ್ಟಕ್ಕೆ " ಸೊಯಕ್ ಸೊಯಕ್" ಅಂತ ಹಂಡೆಯಿಂದ ಅಡಿಕೆ ತೋಡಿ ಬುಟ್ಟಿಗೆ ಸುರುವುದರಲ್ಲಿ ಮಗ್ನನಾಗಿದ್ದ. ಹಾಗಂತ ಅಪ್ಪಣ್ಣಯ್ಯನಿಗೆ ವೆಂಕನ ಮಾತು ಕೇಳಲಿಲ್ಲ ಅಂತೇನೂ ಅಲ್ಲ ಆದರೆ ಉತ್ತರ ಕೊಡುವ ಉತ್ಸಾಹದಲ್ಲಿ ಆತ ಇರಲಿಲ್ಲ. ಮಧ್ಯಾಹ್ನ ಕೊನೆಗೌಡ ಹೇಳಿದ ಸುದ್ದಿಯಿಂದ ಅನ್ಯಮನಸ್ಕನಾಗಿದ್ದ. ಆ ಸುದ್ಧಿಯಾದರೋ ಕೊನೆಗೌಡ ಅಪ್ಪಣ್ಣಯ್ಯನ ಬಳಿ ಹೇಳಿರಲಿಲ್ಲ. ಕೊನೆ ಹಿಡಿಯುವವನ ಬಳಿ ಹೇಳುತ್ತಿದ್ದಾಗ ಅಪ್ಪಣ್ಣಯ್ಯನ ಕಿವಿಗೆ ಆ ಸುದ್ಧಿ ಬಿದ್ದಿತ್ತು. "ಹೋಯ್ ವೆಂಕ ಅಂತ ಕರಿಯೋರಿಗೆ ಎಂತ ಹೇಳಿ ಹಾಗಂತ ಕರೆಯೋದನ್ನ ತಪ್ಪಿಸಲಿ, ಒಂದು ಉಪಾಯ ಹೇಳ ಮಾರಾಯ" ಮತ್ತೆ ವೆಂಕ ಮುಂದುವರೆಸಿದ. ಬಡಪೆಟ್ಟಿಗೆ ಇವನು ಬಿಡಲೊಲ್ಲ ಎಂದೆನಿಸಿ ಸಧ್ಯ ಇವನಿಂದ ತಪ್ಪಿಸಿಕೊಂಡರೆ ಸಾಕು ಎಂಬ ಇರಾದೆಯಿಂದ
" ಅಲ್ಲ ನಿಂಗೆ ವಯಸ್ಸು ನಲವತ್ತೈದು ಆತು ಇನ್ನೂ ಮದುವೆ ಚಿಂತೆ ಮಾಡದು ಬಿಟ್ಟು ಹೆಸರಿನ ಹಿಂದೆ ಬಿದ್ದೆಯಲ್ಲ, ಅದನ್ನ ಯೋಚಿಸು" ಎಂದು ವೆಂಕನ ಬುಡಕ್ಕೆ ಇಟ್ಟ ಅಪ್ಪಣ್ಣಯ್ಯ. ವೆಂಕನ ಕೊರೆತ ತಪ್ಪಿಸಿಕೊಳ್ಳಲು ಊರಲ್ಲಿ ಎಲ್ಲರೂ ಅನುಸರಿಸುತ್ತಿದ್ದ ಸುಲಭೋಪಾಯವನ್ನು ಅಪ್ಪಣ್ಣಯ್ಯ ಅನುಸರಿಸಿದ. ಮದುವೆ ವಿಷಯ ಬಂದ ತಕ್ಷಣ ದುರ್ದಾನ ತೆಗೆದುಕೊಂಡವರಂತೆ ಮಾಯವಾಗುತ್ತಿದ್ದ ವೆಂಕ ಇಂದು ಹಾಗೆ ಹೋಗಲಿಲ್ಲ." ಆಯ್ತು ಮದುವೆ ಆಗ್ತೇನೆ ಹೆಣ್ಣು ಹುಡುಕಿ ಕೊಡು, ಅತವಾ ನಾ ಕಂಡ ಹೆಣ್ಣಿನೊಡನೆ ಮದುವೆಯಾಗಲು ಸಹಾಯಮಾಡು" ಎಂದು ಹೇಳಿದ. ಅಪ್ಪಣ್ಣಯ್ಯನಿಗೆ ವೆಂಕಣ್ಣನ ವರ್ತನೆ ಅನಿರೀಕ್ಷಿತ. ಹಳ್ಳಿಯಲ್ಲಿದ್ದ ವಯಸ್ಸು ಚಿಮ್ಮೋ ಹುಡುಗರಿಗೆ ಮದುವೆ ಇಲ್ಲ ಇನ್ನು ನಲವತ್ತೈದರ ಗಡಿ ದಾಟಿದ ಇವನಿಗೆ ಎಲ್ಲಿಂದ ಹೆಣ್ಣುತರುವುದು ಅಂತ ಅಪ್ಪಣ್ಣಯ್ಯನಿಗೆ ಮನಸ್ಸಿನಲ್ಲಿಯೇ ಅನ್ನಿಸಿದರೂ ತಾನು ಯಾವುದೋ ಒಂದು ಹೆಣ್ಣ ಕಂಡಿದ್ದೇನೆ ಅಂತಾನಲ್ಲ ಅದು ಯಾರಿರಬಹುದು ಎಂಬ ಕುತೂಹಲ ಹುಟ್ಟಿತು. "ನೀ ಕಂಡ ಹೆಣ್ಣು ಯಾರ?" ಎಂಬ ಅಪ್ಪಣ್ನಯ್ಯನ ಪ್ರಶ್ನೆಗೆ "ನಾಳೆ ಹೇಳ್ತೇನೆ" ಎಂದು ಉತ್ತರಿಸಿ ವೆಂಕಟರಮಣ ಹೊರಟು ಹೋದ. ಆತ ಅತ್ತ ಹೋಗುತ್ತಿದ್ದಂತೆ ಅಪ್ಪಣ್ಣಯ್ಯನ ಮನಸ್ಸು ಮತ್ತೆ ಕೊನೆಗೌಡನ ಮಾತುಗಳನ್ನು ಮೆಲಕುಹಾಕತೊಡಗಿತು.
"ಹೋಯ್ ತಿಮ್ಮ ಒಂದು ವಿಷ್ಯ ಗೊತ್ತೈತನಾ ನಿಂಗೆ?"
"ಎಂತ್ರಾ ನೀವು ಕೊನೆ ಕೊಯ್ತಾ ಊರು ತಿರುಗೋರು ವಿಷಯ ನನಗೆಂತ ತಿಳಿತದೆ?"
"ಅದೇ ಬಾಗೀರಥಮ್ಮನ ಕಥೆಯಾ"
"ಯಂತು ಅಂತ ಬಿಡಿಸಿ"
"ಅವ್ರ ಗಂಡ ಹೋದ್ವರ್ಷೋದ್ರಲಾ. ಅದು ಸಹಜವಾಗಿ ಹೋಗಿದ್ದಲ್ಲಂತೆ ಬಾಗಿರಥಮ್ಮ ಮತ್ತೊಬ್ಬರ ಜತೆ ಸೇರಿಕೊಂಡು ಅವ್ರನ್ನ ಕೊಲೆ ಮಾಡಿದ್ದಂತೆ ಮಾರಾಯ"
" ಅದು ಹ್ಯಾಂಗೆ ನಿಮಗೆ ಗೊತ್ತಾತು?" ಮತ್ತೊಬ್ಬರು ಯಾರು?
"ಅದೆಲ್ಲಾ ನಿಂಗೆ ಬ್ಯಾಡ, ಸುದ್ಧಿಯಂತೂ ಸುಳ್ಳಲ್ಲ ನೋಡು ಸಧ್ಯ ವಿಷ್ಯ ಹೊರಗೆ ಬರ್ತದೆ. ಯಾರು ಅಂತ ಪೋಲೀಸರು ಬಂದು ಪಪ್ಪ ಹಾಕಿಕೊಂಡು ಹೋದ್ಮೇಲೆ ಗೊತ್ತಾಕ್ತದೆ"
ಅಪ್ಪಣ್ಣಯ್ಯನಿಗೆ ಮುಂದಿನ ವಿಚಾರ ಕೇಳಲು ಅಲ್ಲಿ ನಿಲ್ಲಲಾಗಲಿಲ್ಲ. ಕೊನೆಗೌಡ ಬೇಕಂತಲೇ ಆ ಸುದ್ಧಿ ಹೇಳಿದ್ದನಾ ಎಂಬ ಅನುಮಾನ ಕಾಡತೊಡಗಿತು. ಹೊಟ್ಟೆಯೊಳಗಿನಿಂದ ತರತರ ನಡುಗಿದಂತಾಗಿ ಮನೆಸೇರಿದ ಅಪ್ಪಣ್ಣಯ್ಯ. ಆ ಸುದ್ಧಿ ಕೇಳಿದಲ್ಲಿಂದ ಅಪ್ಪಣ್ಣಯ್ಯ ಮನುಷ್ಯನಾಗಿರಲಿಲ್ಲ. ಮಾಡುವ ಕೆಲಸಗಳೆಲ್ಲ ತನ್ನಷ್ಟಕ್ಕೆ ನಡೆಯುತ್ತಿತ್ತೇನೋ ಎಂಬಂತಿತ್ತು. ಈಗ ವೆಂಕಣ್ಣ ಬಂದು ಮದುವೆಯ ವಿಷಯ ಮುಗುಮ್ಮಾಗಿ ಹೇಳಿದಾಗ ವೆಂಕಣ್ಣ ಕಂಡ ಹುಡುಗಿ ಇವಳೇ ಇರಬಹುದಾ? ಎಂಬ ಅನುಮಾನ ಕಾಡತೊಡಗಿ ಇನ್ನಷ್ಟು ಅಧೀರನಾದ.
***
ಭಾಗೀರಥಿ ಮೂವತ್ತರ ಹರೆಯದ ಚೆಲುವೆ. ಅವಳನ್ನು ಈ ಹಳ್ಳಿಗಮಾರನಿಗೆ ಮದುವೆ ಮಾಡಿಕೊಟ್ಟದ್ದು ಆಕೆಯ ಗ್ರಹಚಾರ ಅಂತ ಊರಿನ ಹಲವಾರು ಗಂಡಸರ ಅಭಿಪ್ರಾಯ. ಅರ್ದ ಎಕರೆ ಅಡಿಕೆ ತೊಟ ಮಣ್ಣಿನಮನೆ ಬಾಯಿತುಂಬಾ ಕವಳ ಗುಜ್ಜುತ್ತಿದ್ದ ಸಾಂಬು ಅವಳ ಗಂಡನಾಗಲು ಅನರ್ಹ ಎಂದು ಊರವರು ತೀರ್ಮಾನಿಸಿದ್ದರು. ಆದರೆ ಭಾಗೀರಥಿ ಪಾಲಿಗೆ ಬಂದದ್ದು ಪಂಚಾಮೃತ ಎಂಬ ತತ್ವಕ್ಕೆ ಇಳಿದು ಚೆಂದವಾಗಿ ಪುಟ್ಟ ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಳು. ಪ್ರೀತಿ ಪ್ರೇಮ ಅಮಾಯಕತೆ ಬಡತನವನ್ನೂ ನುಂಗಿ ಹಾಕಬಲ್ಲದು ಎಂಬ ತತ್ವ ಅವಳದ್ದು. ಆದರೆ ವಿಧಿಗೆ ಅದು ಇಷ್ಟವಿರಲಿಲ್ಲ. ಮದುವೆಯಾಗಿ ಗಂಡನಮನೆ ಸೇರಿದ ಒಂದು ವರ್ಷದಲ್ಲಿ ಸಾಂಬು ಇಹಲೋಕ ತ್ಯಜಿಸಿದ್ದ. ರಾತ್ರಿ ಮಲಗಿದ್ದವನು ಬೆಳಿಗ್ಗೆ ಏಳಲಿಲ್ಲ. ಹೃದಯಾಘಾತ ಎಂದರು, ರಾತ್ರಿ ಮಣ್ಣಿನಗೋಡೆಯಿಂದ ಒಳಗೆ ಬಂದು ಸರ್ಪ ಕಚ್ಚಿದೆ ಎಂದರು ಕೆಲವರು ಅವನು ಮೊದಲಿನಿಂದಲೂ ಅನಾರೋಗ್ಯವಂತ ಎಂದರು ಹಲವರು. ಒಟ್ಟಾರೆ ಫಲಿತಾಂಶ ಭಾಗೀರಥಿಯ ಸುತ್ತ ಸುತ್ತುತ್ತಿತ್ತು. ಅಪ್ಪಣ್ಣಯ್ಯ ಭಾಗೀರಥಿಯ ದೂರದನೆಂಟನಾದ್ದರಿಂದ ಸಾಂಬುವಿಗೆ ಕೊಟ್ಟು ಮದುವೆಯಾದನಂತರ ಅಲ್ಲಿನ ಬಳಕೆ ಅಪ್ಪಣ್ಣಯ್ಯನಿಗೆ ಹೆಚ್ಚಿತ್ತು. ತೋಟಕ್ಕೆ ಹೋದಾಗಲೆಲ್ಲ ದಿನಕ್ಕೊಮ್ಮೆ ಸಾಂಬುವಿನ ಮನೆಗೆ ಹೋಗಿ ಕುಶಲ ವಿಚಾರಿಸಿ ಬರುವುದು ಅಪ್ಪಣ್ಣಯ್ಯನಿಗೆ ವಾಡಿಕೆಯಾಗಿತ್ತು ತಾಯಿಯ ವ ರೆಸೆ ಎಂದು ಭಾಗೀರಥಿ ಅಪ್ಪಣ್ನಯ್ಯನಿಗೆ ತುಸು ಹೆಚ್ಚಿನ ಕಾಳಜಿ ತೋರಿಸುತ್ತಿದ್ದಳು. ಅಪ್ಪಣ್ಣಯ್ಯನಿಗೂ ಅದೇನೋ ಒಂಥರಾ ಕಾಳಜಿ. ಏನಾದರೂ ಒಂದು ನೆಪಮಾಡಿಕೊಂಡು ಸಾಂಬುವಿನ ಮನೆಗೆ ಹೋಗಿ ಬರುತ್ತಿದ್ದ. ಅಂತಹ ಒಂದು ದಿನದಲ್ಲಿ ಸಾಂಬು ಇಹಲೋಕ ತ್ಯಜಿಸಿದ. ಆನಂತರವೂ ಅಪ್ಪಣ್ಣಯ್ಯ ಭಾಗೀರಥಿ ಮನೆಯ ಆಸ್ಥೆಯನ್ನು ಮುಂದುವರೆಸಿದ್ದ. ಭಾಗೀರಥಿಯ ವೈಧವ್ಯಕ್ಕೆ ಮರುಗುತ್ತಿದ್ದ. ಆದರೆ ಈಗ ಕೊನೆಗೌಡನ ಬಾಯಲ್ಲಿ ಇಂತಹ ವಿಷಯಗಳು ಕೇಳಿಬಂದಮೇಲೆ ತಾನು ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಹಾಗೆಯೇ ಇದಕ್ಕೊಂದು ಮಂಗಳ ಹಾಡಿ ಹೆಂಡತಿ ಮಕ್ಕಳೊಡನೆ ನೆಮ್ಮದಿಯಾಗಿರಬೇಕೆಂಬ ತೀರ್ಮಾನಕ್ಕೆ ಬಂದ.
***
ಪ್ರಿಯ ಓದುಗರೆ ಕಥೆಯಂತಿರುವ ಈ ಕಥೆ ಇನ್ನೂ ಮುಕ್ತಾಯವಾಗಿಲ್ಲ. ಇದರ ಮುಕ್ತಾಯ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಕಾಮೆಂಟ್ ನ ಜಾಗದಲ್ಲಿ ಕಥೆಗೊಂದು ಮುಕ್ತಾಯ ಕೊಡಿ ಉತ್ತಮ ಮುಕ್ತಾಯಕ್ಕೆ ಪುಸ್ತಕರೂಪದ ಬಹುಮಾನ ಗೆಲ್ಲಿ. ಹಾ ಮರೆಯಬೇಡಿ ಮುಕ್ತಾಯದ ಕೊನೆಯಲ್ಲಿ ನಿಮ್ಮ ಈ ಮೈಲ್ ವಿಳಾಸ ದಾಖಲಿಸಿ.

ಕತೆ ಮುಕ್ತಾಯಗೊಳಿಸಿದ ಪ್ರಜಾವಾಣಿ, ಮೂರ್ತಿ ಹಾಗೂ ಹರೀಶ್ ಗೆ ಧನ್ಯವಾದಗಳು. ಹರೀಶ ಮುಕ್ತಾಯವನ್ನು ಆಯ್ದುಕೊಳ್ಳಲಾಗಿದೆ.(ತೀರ್ಪುಗಾರರು: ವೇಣುಮಾಧವ)

ಬೆಳಿಗ್ಗೆಯಿಂದ ನಡೆದ ಘಟನೆಗಳನ್ನೆಲ್ಲ ಮೆಲುಕು ಹಾಕುತ್ತ ಮಲಗಿದ ಅಪ್ಪಣ್ಣಯ್ಯನಿಗೆ ಆ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ. ಕೊನೆ ಗೌಡ ಹೇಳಿದ್ದು ಮತ್ತೆ ಮತ್ತೆ ಕಿವಿಯಲ್ಲಿ ಗುಂಯ್ಗುಡುತ್ತಿತ್ತು.***ಮರುದಿನ ಬೆಳಿಗ್ಗೆ ದೇವರ ಪೂಜೆ ಮುಗಿಸಿ ತೋಟಕ್ಕೆ ಹೊರಡುವ ಹೊತ್ತಿಗೆ ಸರಿಯಾಗಿ ವೆಂಕಣ್ಣ ಬಂದ. ಏನೂ ತಿಳಿಯದಂತೆ ನಟಿಸುತ್ತ ಅಪ್ಪಣ್ಣಯ್ಯ ವೆಂಕಣ್ಣನನ್ನು ಮಾತನಾಡಿಸಿದ: "ಈ ವರ್ಷ ಫಸಲು ಕಮ್ಮಿ ವೆಂಕಣ್ಣ". ವೆಂಕಣ್ಣ ಮತ್ತೆ ಹಳೇ ರಾಗ ತೆಗೆದ: "ನನ್ನ ಪೂರ್ತಿ ಹೆಸರು ವೆಂಕಟರಮಣ". ತಟಕ್ಕನೆ ಸರಿಯಾದ ಸಂದರ್ಭ ಎಂದು ಅಪ್ಪಣ್ಣಯ್ಯ ಅರಿತ."ಆಯ್ತು, ವೆಂಕಟರಮಣ. ಅಲ್ದೋ ವೆಂಕಟರಮಣ, ನಿನ್ನೆ ಯಾವ್ದೋ ಹೆಣ್ಣು ನೋಡಿದ್ದೀನಿ ಅಂದಿದ್ಯಲ್ಲ ಯಾರೋ ಅವಳು" ಎಂದು ಕೇಳಿದ. "ಓಹ್ ಅದಾ.. ನೀವು ಸಹಾಯ ಮಾಡ್ತೀರಿ ಅನ್ನೋದಾದ್ರೆ ಹೇಳ್ತೀನಿ""ಯಾರು ಅಂತಾನೇ ತಿಳೀದೇ ಹೇಗ್ ಹೇಳ್ಲಿ.. ಆದ್ರೂ ನನ್ ಕೈಲಿ ಆದ್ ಸಹಾಯ ಮಾಡ್ತೀನಿ, ಅದ್ಯಾರು ಹೇಳು""ಯಾರೂ ಅಲ್ಲ ನಿಮಗ್ಗೊತ್ತಿರೋಳೆಯ""ಯಾರೋ ಅದು? ಭಾಗೀರಥಿಯ?" ಬಾಯ್ತಪ್ಪಿ ಭಾಗೀರಥಿಯ ಹೆಸರು ಅಪ್ಪಣ್ಣಯ್ಯನ ಬಾಯಿಂದ ಹೊರಬಿದ್ದಿತ್ತು. ತನ್ನ ಅಜ್ಞಾನಕ್ಕೆ ತನ್ನನ್ನೇ ಹಳಿದುಕೊಂಡ ಅಪ್ಪಣ್ಣಯ್ಯ. ಆದರೆ ಅಪ್ಪಣ್ಣಯ್ಯನನ್ನು ಗಮನಿಸದ ವೆಂಕಣ್ಣ "ಅಯ್ಯೊ ಅವ್ಳಲ್ರಾ.. ತುದೀ ಮನೆ ವಿಶಾಲೂ..." ಎಂದ ತುಸು ನಾಚುತ್ತ. "ಅವಳಿಗೆ ವಯಸ್ಸು ಮೂವತ್ತೈದು ದಾಟ್ತಾ ಬಂತು... ನೀವೇನಾದ್ರೂ ಹೇಳಿರೆ ಆಗ್ಬಹುದೇನೋ".ವಿಶಾಲಾಕ್ಷಿಗೆ ಹದಿನೈದು ವರ್ಷಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ಆದರೆ ಅದೇ ದಿನ ಮದುವೆ ಗಂಡಿಗೆ ಹಾವು ಕಚ್ಚಿ ಪ್ರಾಣ ಬಿಟ್ಟಿದ್ದ. ಅದಾದ ಮೇಲೆ ಅಪಶಕುನ ಎಂದು ಯಾರೂ ಮದುವೆಯಾಗಲು ಮುಂದೆ ಬಂದಿರಲಿಲ್ಲ. ಗಂಡು ಹುಡುಕಿ ಹುಡುಕಿ ಸಾಕಾದ ಮೇಲೆ ಮದುವೆಯೇ ಬೇಡವೆಂಬ ನಿರ್ಧಾರಕ್ಕೆ ಅವಳು ಬಂದಿದ್ದಳು. ಅಪ್ಪಣ್ಣಯ್ಯ ಈಗ ಇಬ್ಬಂದಿಯಲ್ಲಿ ಸಿಲುಕಿದ್ದ. "ಸರಿ ವೆಂಕಟರಮಣ, ಹಾಗಾದ್ರೆ ಯೋಚನೆ ಮಾಡ್ತೇನೆ" ಎಂದು ಅಪ್ಪಣ್ಣಯ್ಯ ತೋಟಕ್ಕೆ ಹೋದ.***ಮಧ್ಯಾಹ್ನದ ಹೊತ್ತಿಗೆ ಕೊನೆಗೌಡ ಹೇಳಿದಂತೆ ಭಾಗೀರಥಿಯ ಮನೆಗೆ ಪೊಲೀಸರಿಬ್ಬರು ಬಂದಿದ್ದರು. ಆಕೆಯನ್ನು ವಿಚಾರಣೆಗೆಂದು ಕರೆದುಕೊಂಡು ಹೋಗಲು ಬಂದಿದ್ದರು. ಎರಡು ದಿನ ವಿಚಾರಣೆಯ ನಂತರ ನಿಜಾಂಶ ಹೊರಬಿತ್ತು. ಅಪ್ಪಣ್ಣಯ್ಯ ತಲ್ಲಣಿಸಿದ್ದ.***ಒಂದು ವರ್ಷ ಚೆನ್ನಾಗಿದ್ದ ಭಾಗೀರಥಿಯ ಸಂಸಾರದಲ್ಲಿ ವೆಂಕಣ್ಣ ಬಂದಿದ್ದ. ತನ್ನ ಗಂಡ ಸಾಂಬುವಿಗಿಂತ ನೋಡಲು ಸುಂದರನಾಗಿದ್ದ, ಬುದ್ಧಿವಂತನಾಗಿದ್ದ ವೆಂಕಣ್ಣನ ಕಡೆಗೆ ಭಾಗೀರಥಿ ಸಹಜವಾಗಿಯೇ ಆಕರ್ಷಿತಳಾಗಿದ್ದಳು. ವೆಂಕಣ್ಣನ ಮನಸ್ಸಿನಲ್ಲೂ ಆಕೆಯ ಬಗ್ಗೆ ಆಕರ್ಷಣೆ ಇತ್ತು. ಆದರೆ ಸಾಂಬು ಇದನ್ನೂ ಗಮನಿಸದಷ್ಟು ಮುಗ್ಧನಾಗಿದ್ದ. ಒಂದು ದಿನ ಭಾಗೀರಥಿ-ವೆಂಕಣ್ಣ ಸೇರಿ ಸಾಂಬುವನ್ನು ಹೇಗಾದರೂ ತಮ್ಮಿಬ್ಬರ ಮಧ್ಯದಿಂದ ಸರಿಸಬೇಕೆಂದು ನಿರ್ಧರಿಸಿದರು. ಆ ದುರ್ದಿನದಂದು ರಾತ್ರಿ ಮಲಗುವಾಗ ಭಾಗೀರಥಿ ಸಾಂಬುವಿಗೆ ಸ್ವಲ್ಪ ನಿದ್ದೆ ಗುಳಿಗೆ ಬೆರೆಸಿದ ಹಾಲು ಕೊಟ್ಟು ಮಲಗಿಸಿದಳು. ಆದರೆ ನಿದ್ದೆ ಗುಳಿಗೆಯಿಂದ ಕೊಂದರೆ ಅನುಮಾನ ಬರಬಹುದೆಂದು ಹಾವು ಕಚ್ಚಿ ಸತ್ತನೆಂಬಂತೆ ಮಾಡಿದ್ದರು. ಅದರಂತೆ ಹಾವು ಹಿಡಿಯುವುದು ಗೊತ್ತಿದ್ದ ವೆಂಕಣ್ಣ ಒಂದು ವಿಷದ ಹಾವನ್ನು ಹಿಡಿದು ರಾತ್ರಿ ಸಾಂಬುವಿನ ಮೈ ಮೇಲೆ ಬಿಟ್ಟಿದ್ದ. ಗಾಢ ನಿದ್ದೆಯಲ್ಲಿದ್ದ ಸಾಂಬುವಿಗೆ ಹಾವು ಬಿಟ್ಟಿದ್ದೂ ಗೊತ್ತಾಗಲಿಲ್ಲ, ಕಚ್ಚಿದ್ದೂ ಗೊತ್ತಾಗಲಿಲ್ಲ. ಬೆಳಗಾಗುವಷ್ಟರಲ್ಲಿ ಇಹಲೋಕ ತ್ಯಜಿಸಿದ್ದ. ಅದಾಗಿ ಸ್ವಲ್ಪ ದಿನದ ನಂತರ ಏನೋ ಜಗಳವಾಗಿ ವೆಂಕಣ್ಣ-ಭಾಗೀರಥಿ ದೂರವಾಗಿದ್ದರು.***ತನ್ನೊಂದಿಗೆ ಅಷ್ಟೊಂದು ಸಲಿಗೆಯಿಂದಿರುತ್ತಿದ್ದ ಭಾಗೀರಥಿ ಬಾಯ್ಬಿಟ್ಟ ವಿಷಯ ಮಾತ್ರ ಅಪ್ಪಣ್ಣಯ್ಯನಿಗೆ ಅರಗಿಸಿಕೊಳ್ಳಲಾಗಲಿಲ್ಲ. ತನ್ನ ಜೊತೆ ಅಷ್ಟು ಸಲೀಸಾಗಿ ಹರಟುತ್ತಿದ್ದ ವೆಂಕಣ್ಣನೂ ಇದರಲ್ಲಿ ಶಾಮೀಲಾಗಿದ್ದನ್ನು ನಂಬಲಾಗಲಿಲ್ಲ.









Thursday, December 4, 2008

ಹಹಹ...ಅಂತಿಮ ಭಾಗ

ಇನ್ನು ಹೆಚ್ಚು ಹೊತ್ತು ಅಲ್ಲಿದ್ದರೆ ಬಾಯಿ ತಪ್ಪಿ ಅಕ್ಕಪಕ್ಕದವರ ಬಳಿ ಏನಾದರೂ ಹೇಳಿ ಅದು ಅವರ ಲೆಕ್ಕದಲ್ಲಿ ಉದ್ಧಟತನದ ಮಾತಾಗಿ ಲಾತಾ ತಿನ್ನಬೇಕಾದಿತೆಂದು ಹೊರಹೊರಟೆ. ಹೊರಗೆ ಬಾಗಿಲಬಳಿ ಬರುವಷ್ಟರಲ್ಲಿ ಶನಿದೇವನ ಅವತಾರ ಅಂದಿನ ಮಟ್ಟಿಗೆ ಪೂರೈಸಿತು. ಆದರೆ ದರಿದ್ರ ಕುತೂಹಲ ಹಳೇ ಪಾತ್ರಧಾರಿಯನ್ನು ಮಾತನಾಡಿಸಿದರೆ ಹೇಗೆ ಎಂಬ ಆಲೋಚನೆ ಸುಳಿದಾಡಿತು. ಅದು ಸ್ವಲ್ಪಮಟ್ಟಿಗೆ ಅಪಾಯದ ಕೆಲಸವೂ ಆಗಿತ್ತು. ಕಾರಣ ಅಲ್ಲಿದ್ದವರಿಗೆಲ್ಲ ಹಳೆಯಪಾತ್ರಿಯ ಮೇಲೆ ಎಲ್ಲಿಲ್ಲದ ಕೋಪ, ಆತ ಕುಡಿದಿದ್ದಾನೆ ಅದಕ್ಕಾಗಿ ಏನೆಲ್ಲಾ ಒದರುತ್ತಾನೆ ಅಂದುಕೊಂಡಿದ್ದರು. ಆತ ಕುಡಿದದ್ದು ನಿಜ ಆದರೆ ಸತ್ಯವನ್ನೇ ಹೇಳುತ್ತಿದ್ದ. (ಸತ್ಯ ಎಂಬುದು ಈ ಪ್ರಪಂಚಕ್ಕೆ ಯಾವಾಗಲೂ ಬೇಡ. ಸುಳ್ಳು ಹೆಚ್ಚು ಹೆಚ್ಚು ಹೇಳಿದರೆ ಎತ್ತರ ಎತ್ತರಕ್ಕೆ ಸಾಗಬಹುದು ಇಲ್ಲಿ.) ಪಾಪ ನನಗೂ ಕೂಡ ಆಂತರ್ಯದಲ್ಲಿ ಹಳೇಪಾತ್ರಿಯಬಗ್ಗೆ ಅನುಕಂಪ ಇತ್ತು ಆದರೆ ಬೀಳುವ ಲಾತಾದ ಭಯದಿಂದ ತೋರಿಸಿಕೊಳ್ಳಲಾಗುತ್ತಿರಲಿಲ್ಲ(ನೋಡಿ ನಾವೆಲ್ಲರೂ ಹೇಗೆ ಸುಳ್ಳಿಗೆ ಬೆಂಬಲಿಸುತ್ತೇವೆ..!). ಆದರೂ ಏನಾದರಾಘಲಿ ಎಂದು ಹಳೇ ಪಾತ್ರಿಯ ಬಳೈಗೆ ಹೋದೆ. ಅಷ್ಟರಲ್ಲಿ ಆತನ ಕೂಗಾಟ ಗೊಣಗಾಟವಾಗಿ ಪರಿವರ್ತನೆಗೊಂಡಿತ್ತು. "ಕಳ್ಳ ಬಡ್ಡಿ ಮಕ್ಕಳು ದುಡ್ಡಿಗಾಗಿ ಏನೇನೋ ಮಾಡ್ತವೆ( ಈತ ಹಿಂದೆ ಮಾಡಿದ್ದೂ.. ಅದನ್ನೆ. ಈಗ ತನಗೆ ಅವಕಾಶ ತಪ್ಪಿದ್ದಕ್ಕೆ ಸಿದ್ದಾಂತ) ಒಂದು ನೀತಿ ರಿವಾಜೂ ಎಂತೂ ಇಲ್ಲ, ಬರ್ಲಿ ಬರ್ಲಿ ಧರ್ಮಸ್ಥಳದಲ್ಲಿ ಬುದ್ದೀ ಕಲ್ಸತ್ತೀನಿ ಇವುಕ್ಕೆ ಹ್ಯಾ... ಪುಸ್" ಹೀಗೆ ಮುಂದುವರೆಯುತ್ತಿತ್ತು. "ಹೋಯ್ ಅವನ ಮೈಮೇಲೆ ಶನಿ ಬರುವುದು ಸುಳ್ಳಾ..?" ಮೆಲ್ಲಗೆ ಕೇಳಿದೆ. "ಸುಳ್ಳಲ್ದೆ ಸತ್ಯನಾ...? ನಿಮ್ಗೂ ಅನುಮಾನವಾ?. ಒಂದಿಷ್ಟು ಹೇಳ್ತಾನೆ ಸತ್ಯ ಆದ್ರೆ ಅವಂದು ಸುಳ್ಳಾದ್ರೆ ಅವ್ರಿದ್ದು. ಇವೆಲ್ಲಾ ನಾನು ಮಾಡಿಬಿಟ್ಟಿದ್ದೇಯಾ. ದೊಡ್ಡೋರಿಗೆ ಸೊಪ್ಪು ಹಾಕ್ಲಿಲ್ಲ ಹಂಗಾಗಿ ನನ್ನ ಹೊರಗೆ ಹಾಕಿದ್ರು..." ಮತ್ತೆ ನಿಧಾನ ಸ್ವರ ಏರತೊಡಗಿತು. ಇನ್ನು ನಾನು ಅಲ್ಲಿದ್ದರೆ ಕುಂಟುತ್ತಾ ಮನೆಸೇರಬೇಕಾದೀತೆಂದು ಹೊರಗೆ ಬಂದು ಶನಿದೇವಾಯ ನಮೋ ನಮಃ ಎಂದು ಮನೆಗೆ ಹೋಗಲು ಬೈಕನ್ನೇರಿದೆ.

ಇವೆಲ್ಲಾ ನಡೆದು ಈಗ ಹದಿನೈದು ವರ್ಷಗಳೇ ಸಂದಿವೆ. ಮತ್ತೆ ನಾನು ನನ್ನ ಜಂಜಡಗಳಲ್ಲಿ ಶನಿದೇವನ ಕತೆ ಮರೆತಿದ್ದೆ. ಈಗ ಮೂರು ವರ್ಷದ ಹಿಂದೆ ಅದ್ಯಾವುದೋ ಕೆಲಸದ ಮೇಲೆ ಅಲ್ಲಿ ಹೋಗುತ್ತಿದ್ದಾಗ ಅಚ್ಚರಿ ಮೂಡುವಷ್ಟು ಬದಲಾವಣೆ ಅಲ್ಲಿತ್ತು.ಸಣ್ಣ ಕುಟೀರ ಮಾಯವಾಗಿ ದೊಡ್ದ ದೇವಸ್ಥಾನ ತಲೆ ಎತ್ತಿತ್ತು. ಭಕ್ತರು ಹೊಸ ಹೊಸ ಸಮ್ಸ್ಯೆಯಲ್ಲಿ ಘನಗಂಭೀರ ಮುಖಾರವಿಂದದೊಡನೆ ಅಲ್ಲಿ ಸೇರಿದ್ದರು. ಅಬ್ಭಾ ಎಂದುಕೊಂಡೆ.

ಯಾವುದು ಏನೇ ಇರಲಿ ಶನಿದೇವ ಮೈಮೇಲೆ ಬರುತ್ತಾನೋ ಇಲ್ಲವೋ ಎನ್ನುವುದು ಟಿವಿ ೯ ನ "ಹೀಗೂ ಉಂಟೇ" ಟಿವಿ ಪ್ರೋಗ್ರಾಂ ನಡೆಸಿಕೊಡುವವ ಹೇಳುವಂತೆ ತರ್ಕಕ್ಕೆ ನಿಲುಕದ್ದು. ಆದರೆ ಅದೊಂದು ಬಹಳ ಜನರಿಗೆ ನೆಮ್ಮದಿಕೊಡುತ್ತಿದೆ ಅಂತ ಅನ್ನುವುದಂತೂ ಸತ್ಯವಾಯಿತಲ್ಲ. ಜನರಿಗೆ ಏನು ಬೇಕೋ ಅದು ನೀಡುವುದು ಪ್ರಜಾಪ್ರಭುತ್ವ...! ರಾಷ್ಟ್ರದ ಕರ್ತವ್ಯ ಅಲ್ಲವೇ.? ಆ ಕಾರಣಕ್ಕಾಗಿ ಇರಬೇಕು ನಮ್ಮ ಮಲೆನಾಡಿನಲ್ಲಿ ಜ್ಯೋತಿಷ್ಯರೂ, ಮಾತನಾಡುವ ದೇವರುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿವೆ. ಪ್ರಪಂಚ ಕಷ್ಟಕ್ಕೆ ಬಿದ್ದಂತೆಲ್ಲಾ ಇಲ್ಲಿ ಹಣದ ಹೊಳೆ ಹರಿಯುತ್ತದೆ. ಗೇರುಸೊಪ್ಪದ ಮಂಗನಂತೆ ಹಾರಿಹಾರಿ ಬೀಳುವ ಮಾರುತಿ ಭಟ್ಟರನ್ನು ಆಡಿಕೊಳ್ಳುವ ಮುಂದುವರೆದವರು ಇದ್ದಂತೆ ಅವರ ಭಂಡಾರಕ್ಕೆ ಹಣ ಸೇರಿಸುವ ನೂರಾರು ಜನ ಇದ್ದಾರೆ. ಎಸ್.ಎಸ್.ಎಲ್.ಸಿ ಪಾಸ್ ಆಗುವುದೂ ಬೇಡ ಇಂತಹದ್ದೊಂದು ಕೆಲಸಕ್ಕೆ. ಆದಾಯ ಮಾತ್ರಾ ಯಾವ ಸಾಪ್ಟ್ ವೇರ್ ನ ಜನಕ್ಕೂ ಇಲ್ಲ. ಅನಂತಣ್ಣ ಈ ಮಂದಿಯ ಹಣೆಬರಹ ಹೇಳುವ ಕೆಲಸ ಶುರುವಿಟ್ಟುಕೊಂಡಾಗ ಆತನ ಆಸ್ತಿ ಎರಡು ಎಕರೆ ಭಾಗಾಯ್ತು ಇತ್ತು. ಈಗ ಅದು ಹತ್ತು ಎಕರೆಗೆ ಏರಿದೆ ಇವತ್ತು ಆತ ಕೋಟ್ಯಾಧೀಶ ಮನೆ ಅರ್ದ ಕೋಟಿ ಬೆಲೆ ಬಾಳುತ್ತದೆ. ಶಾನುಭೋಗರಿಂದ ಹಿಡಿದು ಡಿಸಿ ವರೆಗಿನ ಸರ್ಕಾರಿ ಅಧಿಕಾರಿಗಳು, ದೊಡ್ಡ ದೊಡ್ಡ ರಾಜಕಾರಣಿಗಳು ಈಗ ಅವನ ಜೇಬಿನಲ್ಲಿ. ಬಂಗಾರುಮಕ್ಕಿಯ ಮಾರುತಿ ಭಟ್ಟರೂ ಇದಕ್ಕೆ ಹೊರತಲ್ಲ. ತುಮ್ರಿಯ ಸಮೀಪ ಸಿಗಂಧೂರು ಮೆರೆಯುತ್ತಿದ್ದಂತೆ ಅಲ್ಲಿಯೇ ಹತ್ತಿರದ ಗುಮಗೊಡು ಗಣಪತಿ ಎಂಬಾತ ಈಗ ಜನರ ಸಮಸ್ಯೆ ಪರಿಹರಿಸಲು ನಿಂತಿದ್ದಾನೆ. ಇನ್ನು ಕೆಲವರ್ಷದಲ್ಲಿ ಆತ ಹತ್ತಿರದ ಜಮೀನುಗಳನ್ನೆಲ್ಲಾ ಖರಿದಿಸುತ್ತಾನೆ. ಇದೊಂದು ವೃತ್ತಿಗೆ ಓದಿನ ಅಗತ್ಯ ಇಲ್ಲ. ಧೈರ್ಯದ ಅಗತ್ಯ ಇದೆ. ಪಾಪ ನಮ್ಮ ಸಾಪ್ಟ್ವೇರ್ ಹುಡುಗರು, ಸಿ.ಎ ಹುಡುಗರು ವರ್ಷಪೂರ್ತಿ ಕಷ್ಟಪಟ್ಟು ದುಡಿಮೆಗಾಗಿ ಒದ್ದಾಡುತ್ತಾರೆ. ಆದರೂ ಹೀಗೆ ಹತ್ತು ವರ್ಷದಲ್ಲಿ ಶ್ರೀಮಂತರಾಗಿಲ್ಲ. ನಾವೆಲ್ಲಾ ಬಿಡಿ ಅಬ್ಬೆಪಾರಿಗಳು..

ಹೀಗಿದೆ ನೋಡಿ ಪ್ರಪಂಚ. ಹಾಗಾಗಿ ನಾನೂ ಬೇರೆಯವರಿಗೆ ಭವಿಷ್ಯ ಹೇಳಬೇಕೆಂದು ತೀರ್ಮಾನಿಸಿದ್ದೇನೆ. ನಮ್ಮ ಭವಿಷ್ಯವಾದರೂ ಉಜ್ವಲವಾಗುತ್ತದೆ....! ನೀವೂ ಬನ್ನಿ ನಿಮ್ಮವರಿಗೂ ಹೇಳಿ " ಅಂವ ಕರೆಕ್ಟಾಗಿ ಹೇಳ್ತ ಮಾರಾಯ" ಎಂದು. ನಿಮಗೂ ಸ್ವಲ್ಪ ಪಾಲು ಕೊಡೋಣ...? ಉದರನಿಮಿತ್ತಂ ಬಹುಕೃತ ವೇಷಂ.

Wednesday, December 3, 2008

ಹ ಹ ಹ ನಾನು ಯಾರು ಗೊತ್ತಾ... ! (ಮುಂದುವರೆದದ್ದು)

ಹೊರಗಡೆ ವ್ಯಕ್ತಿಯೊಬ್ಬನ ಗಲಾಟೆ ಶುರುವಾಯಿತು. ಶನಿದೇವ ಕಣ್ಣು ಮುಚ್ಚಿ ಹಾ ಹಾ ಹೂ ಹೂ ಅನ್ನುತ್ತಲೇ ಇದ್ದ. ಆತ ಶನಿ ಇಳಿದಮೇಲೆ ಕಣ್ಣುಬಿಡುವುದಂತೆ. ಹೊರಗಡೆಯ ವ್ಯಕ್ತಿಯ ಧ್ವನಿ ಸ್ಪಷ್ಟವಿರಲಿಲ್ಲ. ಅದು ಕುಡಿದ ಮತ್ತಿನ ಧ್ವನಿಯಾಗಿತ್ತು. "ನೀನು ಸನಿ ದೇವನನಾ ಎಲ್ಲಾ ಕಂಡಿದೀನಿ ಬಿಡು ನಾ ಕಾಣದ ಸನಿದೇವ ನೀನಲ್ಲ. ನಂಗೆ ಈ ಮೈಮೇಲೆ ಬರಾದು ಹೋಗಾದು ಎಲ್ಲ ಹ್ಯಾಂಗೆ ಅಂತ ಗೊತ್ತೈತಿ. ಸನಿ ಅಂತೆ ಸನಿ, ತಗದು ನಾಕು ಬಿಟ್ರೆ ಸನಿ ಎಲ್ಲ ಹಾರಿ ಹೊಕ್ತಾನೆ ಎಮ್ಮಿಗೆ ಕಾಯಿ ಮಂತ್ರಿಸಿ ಹಾಲು ಕೊಡ ಹಂಗೆ ಮಾಡವ ನೀನೆಂತ ದೇವ್ರ? ದಂ ಇದ್ರೆ ಕ್ವಾಣ ಹಾಲು ಕೊಡ ಹಂಗೆ ಮಾಡು , ಕಳ್ ಬಡ್ಡಿ ಮಗನೆ" ಕ್ಷಣ ಕ್ಷಣಕ್ಕೂ ಹೊರಗಿನ ವ್ಯಕ್ತಿ ಕೂಗಾಟ ಜೋರಾಯಿತು. ಎಲ್ಲ ಭಕ್ತರ ಚಿತ್ತ ಈಗ ಹೊರಗಿನ ಶನಿಯತ್ತ.(ಟಿವಿ ೯ ವರದಿಗಾರರು ಹೀಗೆ ಹೇಳುತ್ತಿದ್ದರೇನೋ). ಪಕ್ಕದಲ್ಲಿ ಪ್ರಪಂಚವೇ ತಲೆಯಮೇಲೆ ಹೊತ್ತು ನಿಂತ ಮುಖ ಮಾಡಿಕೊಂಡಿದ್ದವನ ಬಳಿ ಹೊರಗಡೆ ಕೂಗುತ್ತಾ ಇರುವವನು ಯಾರು? ಎಮ್ದು ಕೇಳಿದೆ. ಅಯ್ಯೋ ಅದು ದೊಡ್ಡ ಯಡವಟ್ಟು ಸೋಮಿ, ಮುಂಚೆ ಅವನ ಮೈಮೇಲೆ ಶನಿ ದೇವ್ರು ಬರ್ತಿತ್ತು. ಅವನು ಕುಡಿಯದು ಜಾಸ್ತಿ ಮಾಡ್ಬುಟ್ಟಾ ಹಂಗಾಗಿ ಮೇಷ್ಟ್ರು ಅಂವ ಬ್ಯಾಡ ಅಂತ ಇವನ ಮೈಮೇಲೆ ಬರೋ ಹಂಗೆ ಮಾಡಿದಾರೆ. ನನಗೆ ಈಗ ಶನಿ ಮಹಾತ್ಮನ ಗಲಾಟೆಯ ಅರ್ಥವಾಯಿತು. ಅಲ್ಲಿ ಆಗಿದ್ದು ಇಷ್ಟೆ. ಕೆಲ ವರ್ಷಗಳ ಹಿಂದೆ ಭಕ್ತ ಸಮೂಹ ಹೆಚ್ಚಾಗಿ ಇತ್ತ ಕಡೆ ಸುಳಿಯದಿದ್ದ ದಿವಸಗಳಲ್ಲಿ ಹೊರಗಡೆ ನಿಂತು ಕೂಗುತ್ತಿದ್ದವನ ಮೈಮೇಲೆ ಪ್ರತೀ ಶನಿವಾರ ಮೈಮೇಲೆ ಬರುತ್ತಿತ್ತಂತೆ. ಆತ ಪಾಪ ಸಣ್ಣಪುಟ್ಟ ಭಕ್ತರ ಸಮಸ್ಯೆಗಳನ್ನು ಬಗೆ ಹರಿಸಿ ತನಗೆ ವಾರಕ್ಕಾಗುವ ಖರ್ಚು ಸಂಪಾದಿಸುತ್ತಿದ್ದ. ಇದನ್ನು ಗಮನಿಸುತ್ತಿದ್ದ ಬುದ್ದಿವಂತರೊಬ್ಬರು ಅಲ್ಲಿಯೇ ಇದ್ದ "ಸನಿ ಮಹಾತ್ಮನ" ಗುಡಿಯ ಜೀರ್ಣೋದ್ಧಾರ ಮಾಡಿದರು. ಅಷ್ಟಾದನಂತರ ಜನಸಮೂಹ ಹೆಚ್ಚು ಹೆಚ್ಚು ಬರತೊಡಗಿತು. ಆದರೆ ಹಳೆಯಪಾತ್ರಿ ಸ್ವಲ್ಪ ಎಣ್ಣೆ ಗಿರಾಕಿಯಾದ್ದರಿಂದ ರಗಳೆಮಾಡುತ್ತಿದ್ದ. ಇದನ್ನು ಮನಗಂಡ ಆಡಳಿತ ಕಮಿಟಿ ಶನಿ ಮೈಮೇಲೆ ಬರಲು ಹೊಸ ವ್ಯಕ್ತಿಯನ್ನು ನಿಯಮಿಸಿತು. ಪಾಪ ಈ ಪ್ರಕ್ರಿಯೆಯಿಂದ ಹಳೇ ಪಾತ್ರಿ ಸಂಪಾದನೆಯಿಲ್ಲದೆ ಅಬ್ಬೇಪಾರಿಯಾಗಿದ್ದ. ಈಗ ಆತ ಹೊರಗಡೆ ಬಂದು ಗಲಾಟೆಶುರುವಿಟ್ಟುಕೊಂಡಿದ್ದ. ಆತನೆದುರು ಪ್ರಸ್ತುತ ಶನಿ ಪಾತ್ರಧಾರಿ ಹೆಚ್ಚು ಮಾತನಾಡುವಂತಿರಲಿಲ್ಲ. ಅವನಿಗೆ ಶನಿ ಮೈಮೇಲೆ ಬರುವ ಮರ್ಮವೆಲ್ಲಾ ಗೊತ್ತಿತ್ತು. ಹಾಗಾಗಿ ಈತ ಒಂಥರಾ ಕಸಿವಿಸಿಗೊಳಗಾಗಿದ್ದ. ಜನರ ಮತ್ತು ಶನಿದೇವರ ನಡುವೆ ಮಾತುಕತೆಗೆ ಸಹಾಯ ಮಾಡಲು ಸೇರುಗಾರನೊಬ್ಬ ಇದ್ದ . ಆತ ಮಹಾ ಚಾಲಾಕಿ. ಆತ ಹೊಸಪಾತ್ರಿಯ ಪಾರ್ಟಿ. ಆತ ಹೇಳಿದ. " ಶನಿ ದೇವಾ ಈತನ ಗಲಾಟೆ ಇಲ್ಲಿ ತೀರ್ಮಾನವಾಗುವುದು ಬೇಡ , ಬೇರೆ ಯಾವುದಾದರೂ ಸ್ಥಳ ಸೂಚಿಸು". ಶನಿ " ಹೌದು ನಾನು ಇನ್ನು ಹೆಚ್ಚು ಹೊತ್ತು ಮೈಮೇಲೆ ಇರುವುದಿಲ್ಲ. ನಾಡಿದ್ದು ಧರ್ಮಸ್ಥಳಕ್ಕೆ ಇಬ್ಬರೂ ಬನ್ನಿ ಅಲ್ಲಿ ತೀರ್ಮಾನ ಹೆಗಡೆಯವರ ಬಾಯಿಂದ ಹೇಳಿಸುತ್ತೇನೆ. ಆದರೆ ಒಂದು ನೆನಪಿರಲಿ, ನಾನು ಯಾವುದೇ ಕಾರಣಕ್ಕೂ ಆತನ ಮೈಮೇಲೆ ಬರುವುದಿಲ್ಲ" ಎಂದು ಹೇಳಿದ. ಸೇರುಗಾರ "ಸರಿ ಹಾಗೆಯೇ ಆಗಲಿ" ಎಂದ . ಆಗ ಅಲ್ಲಿ ಕುಳಿತಿದ್ದವರೊಬ್ಬರು " ನಾಡಿದ್ದು ಬಸ್ ಮುಷ್ಕರ . ಧರ್ಮ ಸ್ಥಳಕ್ಕೆ ಹೋಗಲಾಗುವುದಿಲ್ಲ" ಎಂದರು. ಪಾಫ ಶನಿದೇವನಿಗೆ ಅದು ಗೊತ್ತಿರಲಿಲ್ಲ ಅಂತ ಕಾಣಿಸಿತ್ತು. ಆದರೂ ಶನಿದೇವ ಸೋಲಲಿಲ್ಲ." ನೀನು ನಿನ್ನ ವಾಹನವನ್ನು ಕಳುಹಿಸು ಅದರಲ್ಲಿ ಎಲ್ಲರೂ ಧರ್ಮಸ್ಥಳಕ್ಕೆ ಹೋಗಿಬರಲಿ" ಎಂದು ಭಕ್ತ ಸಮೂಹದತ್ತ ಕೈ ಮಾಡಿ ತೋರಿಸಿದ. ಕಣ್ಣು ಮುಚ್ಚಿದ್ದ ಶನಿದೇವರ ಪಾತ್ರಿ ಕೈ ತೋರಿಸಿದೆಡೆ ಒಬ್ಬ ಹಣ್ಣು ಹಣ್ಣು ಮುದುಕಿ ಕುಳಿತಿದ್ದಳು. ಅಲ್ಲಿ ಸ್ವಲ್ಪ ಯಡವಟ್ಟಾಗಿತ್ತು. ಶನಿ ಮೈಮೇಲೆ ಬರುವುದಕ್ಕೆ ಮೊದಲು ಅಲ್ಲಿ ಒಬ್ಬ ಲಾರಿಮಾಲಿಕರು ಕುಳಿತಿದ್ದರು ಆತ ಅದನ್ನೇ ನೆನಪಿಟ್ಟುಕೊಂಡು ಕೈ ತೋರಿಸಿದ್ದ ಆದರೆ ಅವರು ಅದ್ಯಾವ ಮಾಯಕದಲ್ಲೋ ಎದ್ದು ಹೋಗಿಬಿಟ್ಟಿದ್ದರು. ಆ ಜಾಗದಲ್ಲಿ ಕುಳಿತ ಅಜ್ಜಿಯಬಳಿ ವಾಹನವೆಂದರೆ ಮುರುಕು ಊರುಗೋಲು...?.
ನನಗೆ ಈ ಮಳ್ಳಾಟಗಳನ್ನು ನೋಡಿ ನಗು ಉಕ್ಕಿಬರುತ್ತಿತ್ತು. ಆದರೆ ನಗುವಂತಿಲ್ಲ ನಕ್ಕರೆ ಕೈಕಾಲು ಮುರಿದು ಹೆಡೆಮುರಿಕಟ್ಟಿ ಆಚೆ ಎಸೆಯುತ್ತಿದ್ದರು. ಎಲ್ಲರೂ ಘನಗಂಭೀರ ಮುಖ ಹೊತ್ತು ವೀಕ್ಷಿಸುತ್ತಿದ್ದರು. ಈ ಎಲ್ಲಾ ಘಟನೆ ತೀರಾ ಹದತಪ್ಪುತ್ತಿರುವುದು ಸೇರುಗಾರನ ಗಮನಕ್ಕೆ ಬಂತು. ಆತ : ಶನಿದೇವಾ... ನೀನು ಬಹಳ ಗೊಂದಲದಲ್ಲಿದ್ದೀಯಾ(ನಿಜವಾಗಿಯೂ ಹೌದು ಅಸ್ತಿತ್ವದ ಪ್ರಶ್ನೆ ) ಹಾಗಾಗಿ ಇಂದು ಬೇಡ ಮುಂದೆ ತೀರ್ಮಾನಿಸೋಣ" ಎಂದು ತಿಪ್ಪೆಸಾರಿಸಿದ. ನಂತರ ನಾನು..

ಹ ಹ ಹ ನಾನು ಯಾರು ಗೊತ್ತಾ... !

ಹ ಹ ಹ ನಾನು ಯಾರು ಗೊತ್ತಾ... ಸನಿ ದೇವ ಕನೋ... ನನ್ನನ್ನು ನಂಬಿ ಬಂದ ಭಕ್ತರನ್ನು ಕಾಪಾಡುವುದು ನನ್ನ ಕರ್ತ್ವವ್ಯ ಕನೋ... ಬಾ ಬಾ... ಮುಂದೆ ಬಾ ತಗ ಈ ತೆಂಗಿನ ಕಾಯಿ , ಮನಿಗೆ ತಗಂಡು ಹೋಗಿ, ಕೊಟ್ಟಿಗೇಲಿ ಇಡು ಎಲ್ಲಾ ನಿವಾರಣೆ ಆಗ್ತೈತಿ...ಹೋಗ್ ಹೋಗ್. ದೂರದ ಊರಿಂದ ಹೆಣ್ಣು ಮಗಳ ಸಮಸ್ಯೆ ಮನ್ಸಲ್ಲಿ ಇಟ್ಕೋಂಡು ಬಂದೋನು ಬಾ.. ನಿಂಗೆ ಉತ್ತರ ಹೇಳ್ತೀನಿ".
ಶೆಟ್ಟಿಸರದಲ್ಲಿ ಶನಿದೇವ ಮೈಮೇಲೆ ಬರ್ತಾನೆ ಮಕ್ಕಾಕ ಮಕ್ಕಿ ಹೇಳ್ತಾನೆ, ತಟಾಕು ಹೆಚ್ಚುಕಮ್ಮಿ ಆದ್ರೂ ಮರದ ಮೇಲಿದ್ದ ಜೇನು ಹುಳ ಹೊಡಿತದೆ ಒಂದ್ಸಾರಿ ಬಾ ನೋಡು ದೇವರ ಮಹಿಮೆ " ಅಂತ ಸುಬ್ಬಣ್ಣ ರಗಳೆಕೊಡುತ್ತಲೇ ಇದ್ದ. ಅಂತೂ ಒಂದು ದಿನ ಬೇರೆ ಕೆಲಸ ಇಲ್ಲದ್ದರಿಂದ ಶೆಟ್ಟಿಸರದತ್ತ ಬೈಕನ್ನೋಡಿಸಿದೆ. ನಾನು ಹೋಗುವಷ್ಟರಲ್ಲಿ ನೂರಾರು ಜನ ತಮ್ಮ ಘನಗಂಭೀರ ಮುಖಾರವಿಂದದೊಡನೆ ಅಲ್ಲಿ ಸೇರಿದ್ದರು. ಭಕ್ತರ ಭಕ್ತಿಯ ಸಾಲಿನಲ್ಲಿ ವಿನೀತನಾಗಿ ನಾನೂ ಸೇರಿಕೊಂಡೆ. ಶನಿದೇವ ಇನ್ನೂ ಮೈಮೇಲೆ ಬಂದಿರಲಿಲ್ಲ. ಶನಿದೇವನನ್ನು ಮಾತನಾಡಿಸುವ ಸೇರುಗಾರ ಅತ್ತಿತ್ತ ಸುಳಿಯುತ್ತಿದ್ದ. ಜನಸಾಗರದ ನಡುವೆ ದೇವಸ್ಥಾನದ ಆವರಣದಲ್ಲಿ ನಾನೂ ಒಂದು ಮೂಲೆ ಹಿಡಿದು ಗೋಡೆಗೊರಗಿದೆ. ಹೀಗೆ ಅರ್ದ ಘಂಟೆ ಕಳೆಯುವಷ್ಟರಲ್ಲಿ ಪಾತ್ರಿಯ ಮೈಮೇಲೆ ಶನಿದೇವ ಅವತರಿಸಿದ. ಸರಿ ಭಕ್ತ ಸಮೂಹದ ನಡುವೆ ಸಮಸ್ಯೆ ಇದ್ದವರು ಶುರುಹಚ್ಚಿಕೊಂಡರು. ಮನೆಯಲ್ಲಿ ಎಮ್ಮೆ ಹಾಲು ಕೊಡುತ್ತಿಲ್ಲ, ಗಂಡ ಕುಡಿಯುತ್ತಾನೆ, ಮಗ ಹೇಳಿದ ಮಾತು ಕೇಳೋದಿಲ್ಲ, ದಂಧೆ ಕೈ ಹತ್ತೋದಿಲ್ಲ, ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಾ ಭಕ್ತ ಸಮೂಹ ಕಣ್ಣುಮುಚ್ಚಿ ನಿಂತು ಹೂಂಕರಿಸುತ್ತಿದ್ದ ಶನಿದೇವನ ಪಾತ್ರಧಾರಿಯೆದುರು ನಿಲ್ಲತೊಡಗಿತು . "ಓಹೋ ಹೌದಾ? ಹಾಗಾ..? ಎಲ್ಲಾ ಸರಿಯಾಗುತ್ತೆ ಬಿಡು, ಈ ಕಾಯಿ ತಗಂಡು ಹೋಗು, ಆ ಕ್ಷೇತ್ರಕ್ಕೆ ಹೋಗ್ಬಾ? ಮುಂತಾದ ಪಾತ್ರಧಾರಿಯ ಮಾನಸಿಕ ಮಟ್ಟಕ್ಕೆ ತೋಚುತ್ತಿದ್ದ ಉತ್ತರಗಳನ್ನು ನೀಡುತ್ತಿದ್ದ. ನನಗೂ ಒಂದೇ ತರಹದ ಘಟನಾವಳಿಗಳನ್ನು ಕೇಳಿ ಬೇಸರಬರತೊಡಗಿತು. ಮನೆಗೆ ಹೋಗಿ ಅಂಗಾತ ಮಲಗಿ ಒಳ್ಳೆಯ ನಿದ್ರೆ ತೆಗೆದರೆ ಅದರಲ್ಲಿರುವ ಲಾಭ ಇದರಲ್ಲಿ ಇಲ್ಲ ಎಂದೆನಿಸಿತು. ಅಷ್ಟರಲ್ಲಿ ಶನಿ ದೇವ " ದೂರದಿಂದ ಹೆಣ್ಣು ಮಗಳೊಬ್ಬಳ ಸಮಸ್ಯೆ ಹೊತ್ತು ಪರಿಹಾರಕ್ಕೆ ಇಲ್ಲಿಗೆ ಬಂದವರು ಬರಬೇಕು" ಎಂಬ ಆಹ್ವಾನ ನೀಡಿದ. ಕೆಲನಿಮಿಷಗಳಾದರೂ ಸಭೆಯಿಂದ ಯಾರೂ ಎದ್ದೇಳಲಿಲ್ಲ. ಶನಿಪಾತ್ರಧಾರಿ ಪದೇ ಪದೇ ತನ್ನ ಮಾತು ಉಚ್ಚರಿಸುತ್ತಿದ್ದ. ಇಲ್ಲ ಒಬ್ಬೇ ಒಬ್ಬಾತನೂ ಕದಲಲಿಲ್ಲ. ಗುಸುಗುಸು ಪಿಸ ಪಿಸ ಮಾಡುತ್ತಾ ಅಲ್ಲೇ ಕುಳಿತರು. ನನಗೆ ಇವೆಲ್ಲಾ ಒಂಥರಾ ವಿಚಿತ್ರ ರಗಳೆಯೆಂದೆನಿಸಿತು. ಸರಿ ಹಗೂರ ಮನೆಗೆ ಹೋಗೋಣ ಎಂದು ಎದ್ದುನಿಂತೆ. ತತ್ ಕ್ಷಣ ನನಗೆ ಏನು ಎಂದು ಅರ್ಥವಾಗುವುದರೊಳಗೆ ಘಟನೆಯೊಂದು ನಡದೇ ಹೋಯಿತು. ನಾನು ಮನೆಗೆ ಹೊರಡಲು ಎದ್ದು ನಿಂತಿದ್ದನ್ನು ಗಮನಿಸಿದ ಸುತ್ತಮುತ್ತಲಿನ ಭಕ್ತರು ಶನಿ ದೇವ ಹೇಳುತ್ತಿದ್ದ ಸಮಸ್ಯೆ ಹೊತ್ತ ಜನ ನಾನೇ ಎಂದು ಭಾವಿಸಿತು. "ಮುಂಚೆ ಎದ್ದು ನಿಲ್ಲಾಕೆ ನಿಮಗೆ ಏನು ದಾಡಿ?. ಶನಿ ದೇವನ ಆಟ ಆಡಿಸ್ತೀರಾ?.ಆವಾಗಿಂದ ಕರಿತಾ ಇದೆ ದೇವ್ರು ಸುಮ್ನೆ ಕುಂತಿದೀರಲ್ಲ. ಮುಂತಾದ ಪ್ರಶ್ನೆಗಳೊಡನೆ ಅಕ್ಷರಶಃ ನನ್ನನ್ನು ಹೊತ್ತೊಯ್ದು ಶನಿ ದೇವನ ಮುಂದೆ ನಿಲ್ಲಿಸಿಬಿಟ್ಟಿತು. ನನಗೆ ಏನು ಮಾಡಬೇಕೆಂದು ತೋಚಲಿಲ್ಲ. ಸುಮ್ಮನೆ ನಿಂತೆ. "ಏನಾಗಿದೆ ಹೆಣ್ಣು ಮಗುವಿಗೆ"? ಶನಿ ದೇವ ಹೋಂಕರಿಸುತ್ತಾ ಪ್ರಶ್ನಿಸಿದೆ

"ನನಗೆ ಮದುವೆಯೇ ಆಗಿಲ್ಲ ಇನ್ನೆಲ್ಲಿ ಮಗು"

ಮತ್ತೇಕೆ ಇಲ್ಲಿ ಬಂದು ನಿಂತೆ? ನಿನ್ನ ತೊಂದರೆ ಏನು?

"ನಾನೆಲ್ಲಿ ಬಂದೆ, ಜನ ತಂದು ನಿಲ್ಲಿಸಿದರು. ತೊಂದರೆ ಏನೂ ಇಲ್ಲ ಸಧ್ಯಕ್ಕೆ. ಇದೆಲ್ಲಾ ಹೇಗೆ ಅಂತ ನೊಡಲು ಬಂದಿದ್ದೆ. "

ಏನು? ನನ್ನ ಹತ್ರಾನೆ ಹುಡುಗಾಟಿಕೆನಾ? ಪರಿಣಾಮ ಗೊತ್ತೈತಾ? ಹುಡುಗಾಟಿಕೆ ಮಾಡಕಾರು.

ನಾನು ಒಂಥರಾ ವಿಚಿತ್ರ ರೀತಿಯಲ್ಲಿ ನಕ್ಕೆ. ಶನಿ ದೇವನಿಗೆ ನನ್ನದು ಉದ್ಧಟತನವಿರಬೇಕೆಂದೆನಿಸಿತು." ಹೂ ಇರಲಿ ತಗಾ ಈ ತೆಂಗಿನಕಾಯಿ ಎಲ್ಲಾ ಒಳ್ಳೇದಾಕ್ತೈತಿ, ಹೊಗ್. ಶನಿ ದೇವ ಅಪ್ಪಣೆ ಕೊಟ್ಟ. ಪುಗ್ಸಟ್ಟೆ ಸಿಕ್ಕ ಕಾಯಿ ಹಿಡಿದುಕೊಂಡು ಮನೆಗೆ ಹೊರಡಲು ಬಾಗಿಲ ಬಳಿ ಬಂದೆ ಅಷ್ಟರಲ್ಲಿ......

Sunday, November 30, 2008

ಅಯ್ಯೋ ಸನ್ಮಾನ

ಹೊರಗಡೆ ಜಿಟಿ ಜಿಟಿ ಮಳೆ ಬರುವಂತಹ ವಾತಾವರಣ . ಬೆಂಗಳೂರಿನ ಮಠದ ಹಾಲ್ ನಲ್ಲಿ ಸನ್ಮಾನ ಕಾರ್ಯಕ್ರಮ. ಒಂಥರಾ ಬೆಚ್ಚಗೆ ಒಂಥರಾ ಈ ಪ್ರಪಂಚ ಅರ್ಥವಾಗದ ಮನಸ್ಥಿತಿಯಲ್ಲಿ ಮೂಲೆಯಲ್ಲಿ ಕುಳಿತಿದ್ದೆ. ನನಗೆ ಪರಿಚಿತರಾದವರು ಹಲವಾರು ಜನ ಅತ್ತಿಂದ್ದಿತ್ತ ಓಡಾಡುತ್ತಲಿದ್ದರು. ಇನ್ನಷ್ಟು ಜನ ವೇದಿಕೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಅವರ್ಯಾರಿಗೂ ನಾನು ಇದ್ದುದ್ದು ಗೊತ್ತಿರಲಿಲ್ಲ. ಗೊತ್ತಾಗುವ ಅವಶ್ಯಕತೆ ನನಗೆ ಇರಲಿಲ್ಲ. ಸನ್ಮಾನಿತ ವ್ಯಕ್ತಿ ನಾನು ಬಾಲ್ಯದಿಂದ ನೋಡಿದವರು. ಹೆಸರು ಇಲ್ಲಿಯ ಮಟ್ಟಿಗೆ ಶಿವಣ್ಣ ಎಂದಿಟ್ಟುಕೊಳ್ಳೋಣ. ಹಾಗಾಗಿ ಅವರ ಬಗ್ಗೆ ಏನೇನು ನಡೆಯುತ್ತದೆ ಎಂದು ಸುಮ್ಮನೆ ನೋಡುತ್ತಾ ಕುಳಿತೆ. ನಮ್ಮ ಶಿವಣ್ಣ ಒಂದುಕಾಲದಲ್ಲಿ ಪ್ರಶಸ್ತಿ ಸನ್ಮಾನಕ್ಕೆಲ್ಲಾ ಪರಮ ವಿರೋಧಿ. ಊರಲ್ಲೊಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಅದನ್ನು ತಪ್ಪಿಸಲು ಹರಸಾಹಸ ಪಟ್ಟಿದ್ದರು. ಅದನ್ನು ತಪ್ಪಿಸಲು ಆಗದಾಗ " ಸನ್ಮಾನ ಪ್ರಶಸ್ತಿ ಎಲ್ಲ ಅನಹ್ರ ವ್ಯಕ್ತಿಗಳಿಗೆ ಮಾತ್ರಾ ಎಂದು ಪ್ರಚಾರ ಮಾಡಿದ್ದರು. ಆದರೆ ಈಗ ಅವರು ವೇದಿಕೆಯಲ್ಲಿದ್ದರು.!!! . ಇರಲಿ ಬಿಡಿ ಆಗ ವಯಸ್ಸಿತ್ತು ಹಾಗೆ ಅನ್ನಿಸಿರಬಹುದು. ಈಗ ವಯೋವೃದ್ದರು ಅಂದುಬಿಡೋಣ. ವೇದಿಕೆಯಲ್ಲಿದ್ದ ಒಬ್ಬಾತ ಹೇಳಿದ."ಈ ಕಾರ್ಯಕ್ರಮ ಬೇರೆ ಕಡೆ ನಿಗದಿಯಾಗಿತ್ತು. ಆದರೆ ಸನ್ಮಾನಿತರು ಶ್ರೀಗಳ ಭಕ್ತರು. ಹಾಗಾಗಿ ಶ್ರೀ ಮಠದ ಈ ಆವರಣದಲ್ಲಿ ಶ್ರೀಗುರುಗಳ ಆಶೀರ್ವಾದದೊಂದಿಗೆ ನಡೆಯುವಂತಾಯಿತು......" ,. ನನಗೆ ಪರಮಾಶ್ಚರ್ಯ ಊರಿನಲ್ಲಿ ಇದೇ ಮಠದ ಕಾರಣವಿಲ್ಲದೆ ವಿರೋಧಕ್ಕಾಗಿ ವಿರೋಧಿಸುವ ಗುಂಪಿನ ಮುಖ್ಯ ಸದಸ್ಯ ಅರೆನಾಸ್ತಿಕ ಜಯಣ್ಣನ ಪಟ್ಟ ಶಿಷ್ಯ ಈ ನಮ್ಮ ಶಿವಣ್ಣ. ಎಂದೂ ಗುರು ಮಠ ಎಂದು ನಡೆದುಕೊಂಡವನಲ್ಲ. ಇರಲಿ ಊರಿನದು ಊರಿಗೆ ಬೆಂಗಳೂರಿನದು ಬೆಂಗಳೂರಿಗೆ. ಮತ್ಯಾರೋ ಹೇಳಿದರು "ಶ್ರೀ ರಾಮನಂತೆ ನಮ್ಮ ಶಿವಣ್ಣ...." . ಅಬ್ಬಾ...! ನಿಜ ನಿಜ .! ಮೊದಲನೆ ಹೆಂಡತಿ ಇದ್ದಂತೆ ಎರಡನೆಯ ಮದುವೆ ಮಾಡಿಕೊಂಡು ಎಪ್ಪತ್ತರ ಇಳಿವಯಸ್ಸಿನಲ್ಲಿ ಈಗ ಮೂರನೆಯ ಹೆಂಡತಿಯ ವಿಚಾರದಲ್ಲಿ ಮೊದಲನೆ ಹೆಂಡತಿಯನ್ನು ಓಡಿಸಿದ ವೀರ ನಮ್ಮ ಶಿವಣ್ಣ, ಆದರೆ ವೇದಿಕೆಯಲ್ಲಿ ಗುಣಗಾನ ಮುಂದುವರೆಯುತ್ತಿತ್ತು. ಇರಲಿಬಿಡಿ ನಾವು ಶ್ರೀ ಕೃಷ್ಣನ ನ್ನು ಪೂಜಿಸುತ್ತೇವೆ ಅವನೂ ರಾಮನ ಅವತಾರವೇ ಅಲ್ಲವೆ?. ನಂತರ "ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಸಾಲಸೋಲ ಮಾಡಿಕೊಂಡು ಯಕ್ಷಗಾನ ನಾಟಕಗಳ ಏಳ್ಗೆಗಾಗಿ ತಮ್ಮ ಆಯುಷ್ಯವನ್ನು ಸವೆಸಿದ್ದಾರೆ". ನನ್ನೊಳಗಿನವ ನಕ್ಕ. ಇಸ್ಪೀಟು ಆಟಕ್ಕಾಗಿ ಮತ್ತು ಮನೆಯಲ್ಲಿಯೇ ಇಸ್ಪೀಟಿನ ಕ್ಯಾಂಪ್ ನಡೆಸಿ ಸಾಲಸೋಲ ಮಾಡಿಕೊಂಡ ವಾಸ್ತವ ನೆನಪಾಯಿತು. ಸಂಘಟಕರು "ಸನ್ಮಾನ ಮಾಡುತ್ತೇವೆ ಎಂದಾಗ ಸುತಾರಾಂ ಬರಲೊಪ್ಪಲಿಲ್ಲ.. ಎಳೆದು ತರುವ ಹೊತ್ತಿಗೆ ಸುಸ್ತಾಯಿತು" ಎಂದು ಹೇಳಿದರು. ಹ ಹ ಹ ಇರಲಿ. "ಸಾಲ ಮಾಡಿಕೊಂಡು ಬಿಟ್ಟಿದ್ದೇನೆ ನನಗೊಂದು ಸನ್ಮಾನ ಮಾಡದಿದ್ದರೂ ಪರವಾಗಿಲ್ಲ ಒಂದು ಲಕ್ಷ ರೂಪಾಯಿ ಕೊಡಿ " ಅಂತ ನಿಮ್ಮೂರಿನ ಶಿವಣ್ಣ ಹೇಳುತ್ತಿದ್ದಾರೆ ಮಾರಾಯ, ಇಲ್ಲಿ ಈ ದೊಡ್ಡ ಪಟ್ಟಣದಲ್ಲಿ ನಮ್ಮದೇ ನಮಗೆ ಹರಮಂಗಳ ವಾಗಿದೆ, ಇವರದ್ದೊಂದು ದಿನಾ ರಗಳೆ" ಅಂತ ಪರಿಚಯಸ್ಥರೊಬ್ಬರು ಹೇಳಿದ್ದು ನೆನಪಾಯಿತು. "ಶ್ರವಣ ಕುಮಾರನಂತೆ ನಮ್ಮ ಶಿವಣ್ಣ......" ಮೈಕಿನ ಮುಂದೆ ಮತ್ತೊಬ್ಬಾತ ಮುಂದುವರೆಸುತ್ತಿದ್ದ. ಶಿವಣ್ಣ ತನ್ನ ಅಪ್ಪ ಅಮ್ಮಂದಿರನ್ನು ಇಳಿವಯಸ್ಸಿನಲ್ಲಿ ಕಣ್ಣೆತ್ತಿಯೂ ನೋಡದೆ ಇದ್ದುದು ಕಣ್ಣಿಗೆ ಕಟ್ಟಿತು. ಬರೊಬ್ಬರಿ ತಾಸು ಗುಣಗಾನದ ನಡುವೆ ಕಾರ್ಯಕ್ರಮ ಮುಕ್ತಾಯವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಶುರುವಾಯಿತು. ನಾನು ಊರಿನ ಬಸ್ಸು ಹಿಡಿಯಲು ಸಿಟಿ ಬಸ್ ಸ್ಟ್ಯಾಂಡ್ ನತ್ತ ಹೊರಟೆ.

ಬೆಳಿಗ್ಗೆ ಊರು ತಲುಪುವಾಗ ಜಿಟಿಜಿಟಿ ಮಳೆ ಮುಂದುವರೆಯುತ್ತಿತ್ತು. ನಮ್ಮ ಗಂಗಯ್ಯ ಎದುರು ಸಿಕ್ಕ. ಈ ಅಕಾಲದಲ್ಲಿ ಮಳೆ ಶುರುವಾಯ್ತಲ್ಲ ಮಾರಾಯ ಎಂದೆ. " ಹೌದು ಒಡೆಯಾ ನಿನ್ನೆ ಗದ್ದೆ ಕೊಯ್ದು ಹಾಕಿಕೊಂಡಿದ್ದೆ, ಎಲ್ಲಾ ಹೋಯ್ತು. ವರ್ಷದ ಕೂಳು ನಿಮಿಷಕ್ಕೆ ಹೋದಹಾಗೆ ಆಯ್ತು. ಅರ್ದ ಭತ್ತ ಬರಬಹುದು ಹುಲ್ಲಂತೂ ಪೂರಾ ಹೋತು. ಹೆಂಡರ ಮಕ್ಕಳ ಗತಿ ನೆನೆಸಿಕೊಂಡರೆ ದೇವರೇ ಗತಿ....". ಒಮ್ಮೆ ಪಿಚ್ ಎನ್ನಿಸಿತು. "ಇವನೆ ನೋಡು ಅನ್ನದಾತ ಹೊಲದಿ ದುಡಿವೆ ದುಡಿವೆ ದುಡಿವನು... ನಾಡ ಜನರು ಬದುಕಲೆಂದು ಧವಸ ಧಾನ್ಯ ಬೆಳೆವನು" ಎಂದು ಮೂರನೇ ಕ್ಲಾಸಿನ ಪುಸ್ತಕದಲ್ಲಿ ಸೇರಿಸಿ ಅಟ್ಟ ಹಚ್ಚಿದ್ದು ಬಿಟ್ಟರೆ ತಾನು ಕಷ್ಟದಲ್ಲಿದ್ದು ನಮಗೆ ಊಟಕೊಡುತ್ತಿರುವ ಗಂಗಯ್ಯನಿಗೆ ಏನೂ ಮಾಡಲಾಗುತ್ತಿಲ್ಲವಲ್ಲ ಎಂಬ ಹತಾಶೆ ಕಾಡತೊಡಗಿತು. ನಮ್ಮ ನಮಸ್ಕಾರ ಸನ್ಮಾನ ಎಲ್ಲವೂ ಗಿಡದಲ್ಲಿರುವ ಹೂವಿಗೆ ಸಲ್ಲುತ್ತಿದೆ , ಬೇರಿಗೆ ನೀರೂ ಹಾಕಲಾರೆವು ಅಂತ ಅನ್ನಿಸಿ ಶಿವಣ್ಣನ ಸನ್ಮಾನಕ್ಕೆ ಕೊಡಲು ತೆಗೆದಿರಿಸಿ ಕೊಂಡಿದ್ದ ಸಾವಿರ ರೂಪಾಯಿಯನ್ನು ಗಂಗಯ್ಯನಿಗೆ ಕೊಟ್ಟು ಮನೆಯತ್ತ ಹೆಜ್ಜೆ ಹಾಕಿದೆ. ಎದುರಿನಿಂದ ಇಬ್ಬರು ಬರುತ್ತಿದ್ದರು ಅವರಲ್ಲಿ ಒಬ್ಬಾತ ಮೊಬೈಲ್ ಮೂಲಕ ಹೇಳುತ್ತಿದ್ದ ." ಶಿವಣ್ಣ ಇವತ್ತು ರಾತ್ರಿ ಊರಿಗೆ ಬರ್ತಾನಂತೆ ನಾನೂರು ರೂಪಾಯಿ ಬುಕ್ ಇಸ್ಪೀಟ್ ಆಡೋಣ ಅಂದಿದ್ದಾನೆ ಬೇಗ ಬಂದುಬಿಡು..." . ಅವರ ಮಾತುಗಳನ್ನು ಕೇಳಿಸಿಕೊಂಡು ಒಮ್ಮೆ ಗಂಗಯ್ಯನತ್ತ ನೋಡಿದೆ ಆತ ಇನ್ನೂ ಸಾವಿರ ರೂಪಾಯಿ ಕೈಯಲ್ಲೇ ಹಿಡಿದುಕೊಂಡು ಗರಬಡಿದವನಂತೆ ನಿಂತಿದ್ದ. ಕಣ್ಣಾಲೆಗಳು ತುಂಬಿಕೊಂಡಿದ್ದವು. ಸನ್ಮಾನಕ್ಕೆ ಬೆಂಗಳೂರಿಗೆ ಹೋಗದಿದ್ದರೆ ಇನ್ನೂ ಆರು ನೂರು ರೂಪಾಯಿ ಗಂಗಯ್ಯನಿಗೆ ಹೆಚ್ಚು ಕೊಡಬಹುದಿತ್ತಲ್ಲ್ಲ ಎಂದೆನಿಸಿತು.
ಮನೆಗೆ ಬಂದು ಟಿವಿ ಆನ್ ಮಾಡಿದಾಗ ಸಂದೀಪ್ ಉನ್ನಿಕೃಷ್ಣನ್ ಅಶೋಕ್ ಕಾಮ್ಟೆ ಕರ್ಕೆರಾ ಹೀಗೆ ಹಲವಾರು ಪೋಲೀಸ್ ಅಧಿಕಾರಿಗಳ ಅಂತಿಮ ಯಾತ್ರೆ ನಡೆಯುತ್ತಿತ್ತು. ಬಾಂಬೆಯಲ್ಲಿನ ನರಮೇಧ ನರ್ತಿಸುತ್ತಿತ್ತು. ಸನ್ಮಾನ, ಹಣ ಹೆಸರು ದ್ವೇಷ ರಾಗ ಎಲ್ಲವೂ ಒಂಥರಾ ಪೇಲವ ಅಂತ ಅನ್ನಿಸಿತು. ಅವರಿಗೆಲ್ಲಾ ಅಂತರಾಳದಿಂದ ಸಲಾಂ ಎಂಬಷ್ಟೇ ಹೇಳಿ ಮಗುಮ್ಮಾದೆ. ಇದು ಪ್ರಪಂಚ ಇಲ್ಲಿ ಯಾರಿಗಾಗಿಯೋ ಯಾರೋ ಸಾಯುತ್ತಾರೆ ಮತ್ಯಾರೋ ಅದನ್ನು ಉಪಯೋಗಿಸಿಕೊಳ್ಳುತ್ತಾರೆ. ಅವರವರ ಹಣೆಬರಹ ಇವೆಲ್ಲಾ ಎಂಬ ಕರ್ಮ ಸಿದ್ಧಾಂತ ಒಳ್ಳೆಯದು ಸುಖಕ್ಕೆ ನೆಮ್ಮದಿಗೆ ಅಂದುಕೊಂಡೆ.
ಕೊನೆಯದಾಗಿ: ವೃದ್ಧ ತಂದೆಯೆದುರು ಮಗ " ಇದೊಂದು ದರಿದ್ರ ಪೀಡೆ, ಯಾವಾಗ ತೊಲಗುತ್ತೋ ಏನೋ?,ಇದರಿಂದಾಗಿ ನನ್ನ ಬದುಕೆ ಅಸಹನೀಯವಾಗಿದೆ" ಎಂದು ಹೇಳಿದ. ವೃದ್ಧನ ಕಣ್ಣುಗಳಿಂದ ದಳ ದಳ ನೀರು ಇಳಿಯ ತೊಡಗಿತು. ಹತ್ತಿರದಲ್ಲಿದ್ದವರು ಯಾರೋ ಕೇಳಿದರು. " ಕಣ್ಣೀರಿಡುತ್ತಿದ್ದೀರಲ್ಲ ....ಮಗನ ಕಟು ಮಾತುಗಳಿಂದ ಬೇಸರವಾಯಿತಾ?" . ವೃದ್ಧ ಹೇಳಿದ " ಇಲ್ಲ ಅಂದು ನಾನು ನನ್ನ ಅಪ್ಪನಿಗೆ ಹೀಗೆಯೇ ಹೇಳಿದ್ದು ನೆನಪಾಯಿತು".

Friday, November 21, 2008

ಸೂರ್ಯ ಮತ್ತು ಪಾನ


ಸೂರ್ಯಪಾನ ಹೆಸರು ಏನೋ ಒಂಥರಾ ಹಿತವಾಗಿದೆ. ಈಗ ನಾಲ್ಕೈದು ತಿಂಗಳಿನ ಹಿಂದೆ ಸುಧಾ ವಾರಪತ್ರಿಕೆಯಲ್ಲಿ ಸೂರ್ಯಪಾನದ ಕುರಿತು ಒಂದು ವಿಸ್ತೃತವಾದ ಲೇಖನ ಬಂದಿತ್ತು. ಸೂರ್ಯನ ಬೇಳಕನ್ನು ಹೀರಿಕೊಂಡೇ ಬದುಕಬಹುದು , ಆಹಾರದ ಅಗತ್ಯವೇ ಇಲ್ಲ ನಳನಳಿಸುವ ಆರೋಗ್ಯ ನಿತ್ಯ, ಎಂಬುದು ಆ ಲೇಖನದ ಒಟ್ಟಾರೆ ಸಾರಾಂಶ. ಸಿಕ್ಕಿದಾಗೆಲ್ಲ ಸಿಕ್ಕಷ್ಟು ತಿನ್ನುವ ನನ್ನಂತ ಜಾಯಮಾನದವರಿಗೆ ಆಹಾರ ಬಿಟ್ಟು ಸೂರ್ಯನ ಕಿರಣ ಕುಡಿದು ಬದುಕುವುದು ಎನ್ನುವ ವಿಚಾರವೇ ಹೆದರಿಕೆ ಹುಟ್ಟಿಸಿಬಿಡುತ್ತದೆ. ಆದರೆ ಈ ಪ್ರಪಂಚದಲ್ಲಿ ಇದ್ದಾರೆ ಅಂತಹವರು ಎಂತವರೂ ಎಂತೆಂತವರೂ. ಅವರುಗಳು ಇಂತಹ ದುಸ್ಸಾಹಸಕ್ಕೆ ಕೈಹಾಕುತ್ತಾರೆ. ಇರಲಿ ಅವರವರ ಜೀವನ ಅವರವರಿಗೆ. ಉಳ್ಳವರ ಆರೋಗ್ಯ ಕಾಪಾಡಲು ಹೀಗೆ ನೂರಾರು ವಿಧಿವಿಧಾನಗಳಿವೆ. ಧ್ಯಾನವಂತೆ, ಪ್ರಾರ್ಥನೆಯಂತೆ, ಹ ಹ ಹ ಎನ್ನುವ ನಗೆಕೂಟವಂತೆ. ತಿಂಗಳೂ ತಿಂಗಳು ಅಕಸ್ಮಾತ್ ಆರೋಗ್ಯ ಏರುಪೇರಾದರೆ ಎಂದು ಮಂತ್ಲಿ ಚೆಕ್ ಅಪ್ ಅಂತೆ ಹೀಗೆ ಹತ್ತು ಹಲವು. ಆದರೂ ಅವರಿಗೆ ಟೆನ್ಷನ್ ತಲೆಬಿಸಿ ತನ್ನ ನಂತರ ಆರನೇ ತಲೆಮಾರಿನವರ ಬಗ್ಗೆ ಕಾಡುವ ಚಿಂತೆ. ಇರಲಿ ಇದು ಉಳ್ಳವರ ಕಥೆಯಾಯಿತು. ಪಾಮರರ ಕಥೆ ನೋಡೋಣ.
ನಮ್ಮ ಊರಲ್ಲಿ ಗೋಪಾಲ ಎಂಬ ಕೂಲಿಕಾರ್ಮಿಕನಿದ್ದಾನೆ. ಆತನಿಗೆ ಎಪ್ಪತ್ತೈದರ ಹರೆಯ. ಈಗಲೂ ಆತನ ಖರ್ಚನ್ನು ಆತನೇ ಸಂಪಾದಿಸುತ್ತಾನೆ. ಅವನಿಗೊಬ್ಬ ತಮ್ಮ ಆತನ ಹೆಸರು ಮಾರಿ. ಈತನದೂ ಅಣ್ಣನಷ್ಟೆ ಸಿದ್ಧಾಂತ. ಇಬ್ಬರೂ ಬೆಳಿಗ್ಗೆ ಸೂರ್ಯ ಇನ್ನೇನು ಹುಟ್ಟುತ್ತಾನೆ ಎನ್ನುವಷ್ಟರಲ್ಲಿ ಬಿರಬಿರನೆ ಮನಮನೆಯೆಂಬ ಊರಿನತ್ತ ಹೆಜ್ಜೆಹಾಕುತ್ತಾರೆ. ಅಲ್ಲಿ ಹೋಗಿ ಒಂದೇ ಒಂದು ಕ್ವಾಟರ್ ಕಳ್ಳಬಟ್ಟಿ ನೇಟುತ್ತಾರೆ. ನಂತರ ಅಣ್ಣ ಬೀಡಿ ಹಚ್ಚುತ್ತಾನೆ ತಮ್ಮ ಹೊಗೆಸೊಪ್ಪಿನ ದಂಟು ಮುರಿದು ಕವಳ ಹಾಕುತ್ತಾನೆ. ಅದಾದ ನಂತರ ಅವರ ದಿನದ ಕಾಯಕ ಶುರು .ಮಧ್ಯಾಹ್ನ ಕೂಲಿ ಕೆಲಸ ಮುಗಿದನಂತರ ಮೂರುಗಂಟೆಗೆ ಒಂದು ಊಟಮಾಡಿ ಮತ್ತೆ ಮನಮನೆಗೆ ರೈಟ್. ಸಂಜೆ ಸೀದಾ ಹಾಸಿಗೆಗೆ. ಈ ಕಾಯಕ ಸುಮಾರು ಐವತ್ತು ವರ್ಷದಿಂದ ನಿತ್ಯ ನಡೆದು ಬಂದಿದೆ. ಅವರಿಬ್ಬರು ಈ ವಯಸ್ಸಿನಲ್ಲಿಯೂ ಒಳ್ಳೆಯ ಕೆಲಸಗಾರರು ಪ್ರಾಮಾಣಿಕರು ಹಾಗೂ ನಯವಿನಯ ಹೊಂದಿದವರು ಮತ್ತು ಒಳ್ಳೆಯ ಆರೋಗ್ಯ ಹೊಂದಿದವರು. ಎಪ್ಪತ್ತರ ದಶಕ ದಾಟಿರುವ ಅವರುಗಳು ಅವರ ಜೀವಮಾನದಲ್ಲಿ ಒಂದೇ ಒಂದು ದಿನ ಆಸ್ಪತ್ರೆ ಯತ್ತ ಮುಖ ಹಾಕಿಲ್ಲವಂತೆ. ದಿನಕ್ಕೆ ಒಂದೇ ಊಟ ಹಾಗೂ ಎರಡು ಬಾರಿ ಸರಾಯಿ. ಬೆಳಿಗ್ಗೆ ಮನಮನೆಗೆ ಹೋಗುವಾಗ ಅರ್ದ ಗಂಟೆ ಅವರು ಏರು ಸೂರ್ಯನನ್ನೇ ನೋಡುತ್ತಾ ಸಾಗುತ್ತಾರೆ, ಮತ್ತೆ ಸಂಜೆ ಮನಮನೆಯಿಂದ ವಾಪಾಸುಬರುವಾಗ ಇಳಿ ಸೂರ್ಯನನ್ನೇ ನೆನೆಯುತ್ತಾ ಮನೆ ಸೇರುತ್ತಾರೆ. ಇವರೀರ್ವರ ಜೀವನಪದ್ದತಿಯನ್ನು ನೋಡಿದ ನನಗೆ ಈಗ ಸೂರ್ಯಪಾನದಲ್ಲಿ ನಂಬಿಕೆ ಬರತೊಡಗಿದೆ. ಅದೂ ಸೂರ್ಯ ಮತ್ತು ಪಾನ ಬೇರೆಬೇರೆಯಾಗಿ...!
ಧ್ಯಾನ,ವನ್ನು ಬೆನ್ನು ಹತ್ತಿ ಆರೋಗ್ಯದಿಂದ ನಳನಳಿಸುತ್ತಾ ಇರುವವರೇನು ಸಾವಿರ ವರ್ಷ ಬದುಕಿಲ್ಲ. ಅವನ್ನೆಲ್ಲಾ ಬದಿಗಿಟ್ಟವರೂ ಹತ್ತೇ ವರ್ಷಕ್ಕೆ ಸತ್ತಿಲ್ಲ. ಇರಲಿ ಎಲ್ಲವೂ ಬೇಕು ಇಲ್ಲಿ. ನಮಗೆ ಸಿಕ್ಕಿದ್ದು ನಮಗೆ ದಕ್ಕಿದ್ದು ನಮಗೆ. ನಿಮಗೆ ಸಿಕ್ಕಿದ್ದು ನಿಮಗೆ ದಕ್ಕಿದ್ದು ನಿಮಗೆ. ಒಟ್ಟಿನಲ್ಲಿ ನಗುನಗುತಾ ನಲೀ ನಲೀ ಎಂದರೆ ಮುಗಿಯಿತು.

Thursday, November 20, 2008

ಹಳ್ಳಿಯಿಂದ ದಿಲ್ಲಿಯೋ ದಿಲ್ಲಿಯಿಂದ ಹಳ್ಳಿಯೋ...



ಮಧ್ಯಮ ವರ್ಗದವರು ಹೆಚ್ಚಿರುವ ಹಳ್ಳಿಗಳು ತುಂಬಾ ಚೆಂದ. ಅತ್ತ ಶ್ರೀಮಂತರೂ ಇಲ್ಲದ ಇತ್ತ ಕೂಳಿಗೆ ಗತಿ ಇರದ ಬಡವರೂ ಅಲ್ಲದ ಜನರು ತಮ್ಮದೇ ಲೋಕದಲ್ಲಿ ವಿಹರಿಸುತ್ತಾರೆ. ಅವರ ಗುರಿ ಹೆಚ್ಚಿನ ಪಾಲು ದೇವಸ್ಥಾನ ದೇವರು ಜ್ಯೋತಿಷ್ಯ ಜ್ಯೋತಿಶಿ, ಮತ್ತು ಪ್ರಸ್ತುತ ರಾಜಕೀಯ ಹೀಗೆ ಸುತ್ತಿತ್ತಿರುತ್ತದೆ. ಹಾ ಸ್ವಲ್ಪ ಗುಟ್ಟಾಗಿ ಹೇಳುತ್ತೀನಿ ಇದು ನಿಮ್ಮಲ್ಲಿಯೇ ಇರಲಿ ಸಂಜೆ ಹೊತ್ತು ಕದ್ದು ಬೇಲಿ ಹಾರುವುದು ಹಾಗೂ ಒಂದೇ ಒಂದು ಕ್ವಾಟರ್ ಗಟಗಟನೆ ಅಡಗಿ ಕುಡಿಯುವುದು ಕೆಲವರ ಚಾಳಿ. ನಾನು ನಮ್ಮನೆ ಇರುವುದು ಇಂತಹ ಹಳ್ಳಿಯಲ್ಲಿಯೇ. ಇದರ ಸಂಪೂರ್ಣ ಮಜವನ್ನು ನಾನು ಅನುಭವಿಸುತ್ತೇನೆ. ಸಾಮಾನ್ಯವಾಗಿ ಊರಲ್ಲಿ ಎರಡು ಪಾರ್ಟಿಗಳಿರುತ್ತವೆ. ಪಾರ್ಟಿಗಳಿವೆ ಎಂದಾಕ್ಷಣ ಎಂತದೋ ಒಂದು ಸಿದ್ದಾಂತದ ಮೇಲೆ ಅವು ನಿಂತಿವೆ ಎಂದು ಅಂದಾಜಿಸಬೇಡಿ ಒಟ್ಟು ಒಂದಿಷ್ಟು ಸುದ್ದಿ ರಗಳೆಯ ತತ್ವದ ಮೇಲೆ ಎರಡು ಪಾರ್ಟಿ. ಅದರ ಸದಸ್ಯರುಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತಾರೆ. ಹಾಗೆಯೇ ಒಂದು ನಾಲ್ಕೈದು ಜನ ನಾರದನ ಕೆಲಸಮಾಡುವವರು. ಅವರು ಯಾವ ಪಾರ್ಟಿಯ ಜತೆಯೂ ಗುರುತಿಸಿಕೊಳ್ಳುವುದಿಲ್ಲ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಇಲ್ಲಿಗೆ ಸುದ್ದಿವಾಚಕ ಕೆಲಸ ಅವರಿಗೆ. ಸಾಮಾನ್ಯವಾಗಿ ಇಂತಹ ಹಳ್ಳಿಗಳಲ್ಲಿ ಎರಡು ಪಾರ್ಟಿಗಳಾಗಲು ಮುಖ್ಯ ಕೇಂದ್ರ ಸ್ಥಾನ ಆಯಾ ಊರಿನ ದೇವಸ್ಥಾನ. ಅಲ್ಲಿ ಒಂದು ಕ್ಯಾತೆ ತೆಗೆದು ಪಕ್ಕಾ ಎರಡು ಬಣಗಳಾಗಿಬಿಡುತ್ತವೆ.. ಈಗ ಹತ್ತು ವರ್ಷದಿಂದೀಚೆ ಮಠ ಪರಿಷತ್ತು ಎಂದು ಹೊಸ ಸೇರ್ಪಡೆಯಾದ್ದರಿಂದ ಅದು ಇನ್ನಷ್ಟು ಅನುಕೂಲವಾಗುತ್ತದೆ. ಸಾರ್ವಜನಿಕ ಕೆಲಸದ ಸಮಯದಲ್ಲಂತೂ ಅವನ್ಯಾಕೆ ಬರಲಿಲ್ಲ ಇವನ್ಯಾಕೆ ಬರಲಿಲ್ಲ? ಹೀಗೆ ಅಲ್ಲಿ ಬಾರದಿದ್ದವರ ಬಗ್ಗೆ ಚರ್ಚೆ ಕುಚರ್ಚೆಗಳು ನಡೆಯುತ್ತವೆ. ಮಜ ತೆಗೆದುಕೊಳ್ಳಲು ನೀವು ನಿಂತಿರಾದರೆ ಬರಾಪ್ಪೂರ್ ವಿಷಯ.ಇಂತಹ ವಾತಾವರಣದಲ್ಲಿ ಬದುಕು ಕಳೆಯುತ್ತಿರುವ ನೂರಕ್ಕೆ ತೊಂಬತ್ತು ಜನ ತಮ್ಮ ಜೀವನದ ಬಗ್ಗೆ ತಮ್ಮ ಊರಿನ ರಸ್ತೆಯೆ ಬಗ್ಗೆ ತಮ್ಮ ಊರಿನ ಶಾಲೆಯ ಬಗ್ಗೆ ತಲೆ ಕಡಿಸಿಕೊಳ್ಳುವುದೇ ಇಲ್ಲ. ಆದರೆ ಅವರ ಮಾತುಗಳನ್ನು ಕೇಳಬೇಕು, ಅಮೆರಿಕಾದ ಒಬಾಮನ ವರೆಗೂ ಅಳೆದು ಗುಡ್ಡೆ ಹಾಕಿ ಸಾಪ್ಟ್ ವೇರ್ ಮುಳುಗಿ ಹೋಯಿತಂತೆ ಎನ್ನುವ ಸ್ವಯಂ ತೀರ್ಮಾನವನ್ನೂ ತೆಗೆದುಕೊಂಡುಬಿಡುತ್ತಾರೆ. ಕೆಲವರಂತೂ ತಾವು ಪರಮ ನಾಸ್ತಿಕರು ಎಂಬ ಫೋಸು ಬೇರೆ. ನಮ್ಮ ಪಕ್ಕದೂರಿನಲ್ಲಿ ಗಡ್ದದಾರಿ ವ್ಯಕ್ತಿ ಯೊಬ್ಬನಿದ್ದಾನೆ( ಪಾಪ ಹೆಸರು ಬೇಡ ಅವರು ಅವರದೇ ಲಹರಿಯಲ್ಲಿ ಇದ್ದಾರೆ , ಅವರನ್ನು ನಾವು ಅನ್ನೋದೇಕೆ?) ನಾನು ಬಾಲ್ಯದಿಂದ ಆತನನ್ನು ಗಮನಿಸುತ್ತಾ ಬಂದಿದ್ದೇನೆ. ತಾನು ಪರಮ ನಾಸ್ತಿಕ ಹಾಗೂ ಸಾಚಾ ಎಂದು ಬಿಂಬಿಸಿಕೊಂಡು ಮಿಕ್ಕವರೆಲ್ಲಾ ಒಂಥರಾ ಸರಿ ಇಲ್ಲದವರು ಎನ್ನುವ ವ್ಯಕ್ತಿತ್ವ. ಅವನ ಹರೆಯದಲ್ಲಿ ಅವನಂತಿರುವ ಒಂದು ಗುಂಪು ಕಟ್ಟಿಕೊಂಡು ದೇವಸ್ಥಾನಕ್ಕೆ ಜನರಲ್ ಬಾಡಿಯಲ್ಲಿ ತರ್ಲೆ ಎತ್ತುವುದು ಆತನ ಮುಖ್ಯ ಕೆಲಸ. ಸಂಜೆ ಒಂಚೂರು ರಂಗಾಗುವುದು ಹವ್ಯಾಸ. ಮಠ ಗುರುಗಳು ಎಂಬ ಹೊಸ ವಿಷಯ ಬಂದಮೇಲೆ ಆತನಿಗೆ ಇನ್ನಷ್ಟು ಹುರುಪು. ಗಂಟೆಗಟ್ಟಲೆ ಭಾಷಣ ಬಿಗಿದು ಮಠದ ವಿರುದ್ದ ತನ್ನ ಸಮರ ಎಂದ. ಜಾತಿಯ ವಿಷಯ ಆತನಿಗೆ ಒಗ್ಗದು. ಎಲ್ಲರೂ ಒಂದೇ ಜಾತಿ ಹಿಂದೂಗಳೆಲ್ಲಾ ಒಂದೇ ಅಂದ. ಸಾಬರು ಮಾತ್ರಾ ಬೇರೆ ಎಂದ. ವರ್ಷಗಳು ಉರುಳಿದವು. ಈಗ ಮಗಳು ಮದುವೆಗೆ ಬಂದಮೇಲೆ ಬ್ರಾಹ್ಮ್ಣಣ ಹುಡುಗನೇ ಆಗಬೇಕೆಂದು ಹುಡುಕಿ ಮದುವೆ ಮಾಡಿದ. ಅಳಿಯ ಮಗಳು ಮಠಕ್ಕೆ ಅಲೆದರೆ ಈತ ಸೈ ಸೈ ಅಂದ. ಗುರುತಿಸಿಕೊಳ್ಳಬೇಕು ಎಂಬ ಅಧಮ್ಯ ಆಸ್ದೆಯಿರುವ ಆತ ಡೈರಿ ನಿಲ್ಲಿಸುತ್ತೇನೆಂದ. ಅದು ನಿಲ್ಲಲಿಲ್ಲ. ಮಕಾಡೆ ಮಲಗಿದ. ಹೀಗೆ ಇಂಥಹಾ ವ್ಯಕ್ತಿಗಳು ನೂರಾರು ಸಿಗುತ್ತಾರೆ ನಮ್ಮ ಹಳ್ಳಿಗಳಲ್ಲಿ. ಮತ್ತೊಬ್ಬಾತ ಹರೆಯದಲ್ಲಿ ಆಟ ಆಡಿಸುತ್ತಾ ಉನ್ಮಾದದ ಉಮ್ಮೇದಿನಲ್ಲಿದ್ದ. ಅವನೂರಿನ ಒಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿತ್ತು. ಈತನದ್ದು ಅದನ್ನು ತಪ್ಪಿಸಲು ಹಗಲುರಾತ್ರಿ ಓಡಾಟ, ಕಾರಣ ಕೇಳಿದರೆ ಸನ್ಮಾನ ಪ್ರಶಸ್ತಿ ಎಲ್ಲಾ ಇರಬಾರದು ಎಂಬ ಒಣ ಸಿದ್ಧಾಂತ. ಈಗ ಆತನಿಗೆ ವಯಸ್ಸಾಗಿದೆ ತಿಂಗಳೊಪ್ಪತ್ತಿನಲ್ಲಿ ದೊಡ್ಡದಾಗಿ ಸನ್ಮಾನ ಕಾರ್ಯಕ್ರಮ ತಯಾರಿ ನಡೆದಿದೆ. ಸಂಜೆಯ ಬೇಲಿಯ ವ್ಯವಹಾರ ನಿತ್ಯ ಸಾಗಿದೆ. ಮತ್ತೊಬ್ಬನದು ಮತ್ತೂ ವಿಚಿತ್ರ. ಹತ್ತು ವರ್ಷದ ಹಿಂದೆ ದೇವಸ್ಥಾನದ ವಿಷಯದಲ್ಲಿ ಅ ವನದು ನಿತ್ಯ ರಗಳೆ. ಅವರು ಇಪ್ಪತ್ತೈದು ವರ್ಷದ ಹಿಂದೆ ಒಂದು ವರ್ಷ ಜನರಲ್ ಬಾಡಿ ಕರೆಯಲಿಲ್ಲ. ಅಷ್ಟು ತಿಂದರು ಇಷ್ಟು ತಿಂದರು ಹಾಗೆ ಹೀಗೆ. ನಂತರ ಊರವರು ಸತ್ಯ ಎಂದು ತಿಳಿದು ಇವನ ಪಟಾಲಂ ಗೆ ಅಧಿಕಾರ ಕೊಟ್ಟರು. ಈತ ಜನರಲ್ ಬಾಡಿ ಕರೆಯದೆ ಇವತ್ತಿಗೆಗೆ ಎಂಟು ವರ್ಷ.
ಇಂತಹ ಸಾವಿರ ಸಾವಿರ ಅಭಾಸಕರ ಕಥೆಗಳು ಹಳ್ಳಿಗಳಲ್ಲಿ ಧಾರಾಳ. ಅವುಗಳಲ್ಲಿ ತೊಡಗಿಕೊಳ್ಳದೆ ಹೊರ ನಿಂತು ನೋಡುತ್ತಿದ್ದರೆ ಮಜವೋ ಮಜ. ಅವರುಗಳ ಹುಟ್ಟುಗುಣವನ್ನಂತೂ ಯಾರಿಂದಲೂ ಬದಲಾಯಿಸಲಾಗದು, ಮಜ ತೆಗೆದುಕೊಳ್ಳಬಹುದಷ್ಟೆ. ಪಟ್ಟಣದಲ್ಲಿನ ಜನ ಹಳ್ಳಿಯ ಬಗ್ಗೆ ತಾತ್ಸಾರ ಹೊಂದಲು ಇದುವೆ ಮುಖ್ಯ ಕಾರಣ. ಕೆಲಸವಿಲ್ಲದ ಬಡಗಿ ಮಗನ ಕುಂಡೆ ಕೆತ್ತಿದಂತೆ ಆಗುತ್ತದೆ. ನಮ್ಮ ರಾಜ್ಯ ಮಟ್ಟದ ರಾಜಕಾರಣಿಗಳ ಕಿತ್ತಾಟ ಕಿರುಚಾಟ ದಿನನಿತ್ಯ ನೋಡಿದಾಗ ನನಗೆ ಇದು ಹೊರಟಿದ್ದು ಇಲ್ಲಿಂದಲೇಯಾ? ಎಂಬ ಅನುಮಾನ ಕಾಡುತ್ತದೆ. ಹಳ್ಳಿಯಿಂದ ದಿಲ್ಲಿಯವರಗೂ ಇದೇ ಅನಾವಶ್ಯಕ ಕಿತ್ತಾಟ. ಪರ ನಿಂದೆ ದ್ವೇಷ ಅಸೂಯೆ. ಇವುಗಳ ನಡುವೆ ಮನುಷ್ಯನಲ್ಲಿನ ರಚನಾತ್ಮಕ ಶಕ್ತಿ ಉಡುಗಿ ಹೋಗುತ್ತಿದೆ. ನನಗೂ ಒಮ್ಮೊಮ್ಮೆ ಭಯ ಕಾಡುತ್ತಿದೆ. ಒಕ್ಕಣ್ಣು ರಾಜ್ಯದಲ್ಲಿ ಬದುಕಲು ಎರಡು ಕಣ್ಣು ಇದ್ದವ ಒಂದು ಕಣ್ಣು ಮುಚ್ಚಿ ನಾಟಕ ಮಾಡಲು ಹೋಗಿ ಅವನೂ ಒಕ್ಕಣ್ಣ ನಾದಂತೆ ನನ್ನನ್ನೂ ಎಳೆದುಕೊಂಡು ಬಿಡುತ್ತದೆಯಾ..? ಎಂದು.

Wednesday, November 19, 2008

ಹೆಸರು ಹೆಸರೆಂದು

ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? /
ಕಸದೊಳಗೆ ಕಸವಾಗಿ ಹೋಹನಲೆ ನೀನು ? /
ಮುಸುಕಲೀ ಧರೆಯ ಮರೆವೆನ್ನನ್, ಎನ್ನುತ ಬೇಡು/
ಮಿಸುಕದಿರು ಮಣ್ಣಿನಲಿ -ಮಂಕುತಿಮ್ಮ//

ಹೀಗೆ ಮಂಕುತಿಮ್ಮನ ಕಗ್ಗದಲ್ಲಿನ ಚತುಷ್ಪದಿ ಹೇಳುತ್ತದೆ. ಹೆಸರಿಗಾಗಿ ಹಂಬಲಿಸದಿರು, ಈ ದೇಹ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತದೆ, ಕೀರ್ತಿಯ ಹಿಂದೆ ಬೀಳಬೇಡ. ಎಂಬುದು ಕಗ್ಗ ರಚಿಸಿದ ಡಿ.ವಿ.ಜಿ ಯವರ ಆಶಯ. ಇಂತಹ ಒಂದು ಕಗ್ಗ ರಚಿಸಲು ಅಪಾರ ತಾಕತ್ತಿರಬೇಕು. ಮಂಕುತಿಮ್ಮನ ಕಗ್ಗ ಓದಿದರೆ ಅದರಲ್ಲಿನ ಜೀವನಾನುಭವದ ಸಾರ ತಿಳಿಯುತ್ತದೆ. ಎಲ್ಲೋ ಲಕ್ಷಕ್ಕೊಬ್ಬರು ಇಂತಹ ಸಾರ್ವಕಾಲಿಕ ಅರ್ಥ ಕೊಡುವ ಕಗ್ಗಗಳನ್ನು ರಚಿಸಬಲ್ಲರು. ಸರ್ವಜ್ಞನಂತೆ. ಆತ ಯಾರು ಏನು ಎಂಬುದು ಯಾರಿಗೂ ಗೊತ್ತಿಲ್ಲ. ಆತ ಮಾತ್ರ ಅದ್ಬುತ ಜೀವನಾಮೃತಗಳನ್ನು ಹೇಳಿ ಹೋಗಿದ್ದಾನೆ. ಆತನಿಗೆ ಈ ಮೇಲಿನ ಚತುಷ್ಪದಿ ಅನ್ವರ್ಥ. ನನಗೆ ಸಣ್ಣದೊಂದು ಅನುಮಾನ ವೇಳುತ್ತದೆ ಹಾಗಂತ ಅದೇನು ಗಟ್ಟಿ ಎಂದಲ್ಲ. ಹೆಸರಿನ ವ್ಯಾಮೋಹ ತೊರೆ ಎಂಬ ಉತ್ತಮ ಕಗ್ಗ ರಚಿಸಿದ ಡಿವಿಜಿ ಅದೇಕೋ ಕಗ್ಗದ ಪುಸ್ತಕದಲ್ಲಿ ತಮ್ಮ ಹೆಸರನ್ನು ಕಾಣಿಸಿಬಿಟ್ಟಿದ್ದಾರೆ. ಇದರ ಅರ್ಥ ಇದೊಂದು ಕಗ್ಗದ ರಚನಾಕಾರ ಅವರಲ್ಲ ಅಥವಾ ಕಗ್ಗದ ಪುಸ್ತಕದಲ್ಲಿ ಅವರ ಹೆಸರು ಹಾಕುವುದು ಅವರಿಗೆ ಗೊತ್ತಿಲ್ಲ. ಯಾಕೆಂದರೆ ಹೆಸರಿನ ವ್ಯಾಮೋಹ ತೊರೆ ಎಂಬ ಸಂದೇಶ ನೀಡುವ ಕತೃ ತನ್ನ ಹೆಸರನ್ನು ಹಾಕಗೊಡುವುದಿಲ್ಲ. ಅಲ್ಲಿಗೆ ಅವರಿಗೂ ತಮ್ಮ ಹೆಸರಿನ ಬಗ್ಗೆ ಒಂದು ಸಣ್ಣ ವ್ಯಾಮೋಹ ಇದೆಯಾ ಎಂಬ ಅನುಮಾನ ನಮ್ಮಂತಹ ಪಾಮರರಿಗೆ ಏಳುತ್ತದೆ. ಇರಲಿ ನಾವೆಲ್ಲ ಡಿವಿಜಿಯಂತಹ ಮಹಾತ್ಮರ ಬಗ್ಗೆ ಹಾಗೆಲ್ಲ ಅಂದುಕೊಳ್ಳಬಾರದು ಅದೇಕೋ ಹಾಗಾಗಿದೆ ಅಂತ ನನಗಂತೂ ಗೊತ್ತಿಲ್ಲ. ಈಗ ನಾನು ಹೇಳಹೊರಟಿರುವುದು ಈ ಹೆಸರಿನ ವ್ಯಾಮೋಹದ ಬಗ್ಗೆ ಹಾಗಾಗಿ ಅಪ್ರಸ್ತುತವನ್ನು ಕೈಬಿಟ್ಟು ಮುಂದುವರೆಸೋಣ.
ಈ ಆರಡಿ ಬೆಳೆಯುವ ದೇಹ ಒಂದಡಿ ಇದ್ದಾಗ ಒಂದಿಂಚು ಉದ್ದದ ಹೆಸರೊಂದನ್ನು ನಮಗೆ ತಿಳಿಯದಂತೆ ಇಡುತ್ತಾರೆ. ಅಪ್ಪ ಕರೆದ ಅಮ್ಮ ಕರೆದಳು ಹಾಗೂ ನೆಂಟರು ಕೂಗಿದರು ಮತ್ತು ಅಕ್ಕಪಕ್ಕದವರು ಕೊಬ್ಬರಿದರು ಅಂತ ನಾವು ಓ ಅನ್ನಲು ಪ್ರಾರಂಬಿಸುತ್ತೇವೆ. ನಮಗೆ ಆ ಹೆಸರು ಇಷ್ಟವಿರಲಿ ಇಲ್ಲದಿರಲಿ ಚೋಟುದ್ದದ ನಾಮಾಂಕಿತಕ್ಕೆ ನಾವು ಎಷ್ಟು ಪ್ರತಿಕ್ರಿಯೇ ನೀಡುತ್ತೇವೆ ಎಂದರೆ ಗಾಢವಾದ ನಿದ್ರೆಯಲ್ಲಿದ್ದಾಗಲೂ ಯಾರಾದರೂ ಕೂಗಿದರೂ ನಾವು ಆ ಆ ಎಂದು ದಡಕ್ಕನೆ ಏಳುತ್ತೇವೆ. ಇಷ್ಟು ವ್ಯಾಮೋಹ ಹೊಂದಿರುವ ಒಂದಿಂಚು ಉದ್ದದ ಹೆಸರು ಬಾಲ್ಯ ಕಳೆದು ಯೌವನ ಮುಗಿದು ಅರೆಮುಪ್ಪು ಶುರುವಾದಾಗ ದುರಾಸೆಯನ್ನು ಎಬ್ಬಿಸಲು ಕಾರಣವಾಗುತ್ತದೆ. ನನ್ನದೊಂದು ಹೆಸರು ಅಲ್ಲಿ ಇರಬೇಕು, ತನ್ಮೂಲಕ ಜಗತ್ತಿಗೆ ತನ್ನೀ ದೇಹದ ಪರಿಚಯವಾಗಬೇಕು ನಂತರ ತನ್ನ ಆಲೋಚನೆಗಳು ಪ್ರಸರಿಸಬೇಕು ಅದಕ್ಕೆಲ್ಲ ಜನ ಯೆಸ್ ಯೆಸ್ ಅನ್ನಬೇಕು ಜೈಕಾರ ಹಾಕಬೇಕು ಹೀಗೆ ಮುಂದುವರೆಯುತ್ತದೆ. ಅವರು ರಾಜಕಾರಣಿಗಳಿರಲಿ ಬರಹಗಾರರಿರಲಿ, ವರದಿಗಾರರಿರಲಿ, ಮಂತ್ರ ಹೇಳುವ ಪುರೋಹಿತರಿರಲಿ ಎಲ್ಲರಿಗೂ ತಮ್ಮ ಹೆಸರಿನ ಬಗ್ಗೆ ಚಿಂತೆ. ಈ ಹೆಸರಿನ ಚಿಂತೆ ಇಲ್ಲದಿದ್ದರೆ ಏನೇನು ಆಗುತ್ತಿತ್ತು ಗೊತ್ತಿತ್ತಾ?. ಈಗ ಡಜನ್ ಗಟ್ಟಲೆ ಪತ್ರಿಕೆಗಳು , ಬ್ಲಾಗ್ ಗಳು ಇವೆಯೆಲ್ಲಾ ಅವುಗಳಲ್ಲಿ ಒಂದಿಂಚು ಉದ್ದದ ಹೆಸರು ಹೊತ್ತ ಲೇಖನಗಳು ಬರುತ್ತಿವೆಯೆಲ್ಲಾ ಅವೆಲ್ಲಾ ಇರುತ್ತಲೇ ಇರಲಿಲ್ಲ. ಪತ್ರಿಕೆಯ ಸಂಪಾದಕರುಗಳು ಬರಹಗಾರರಿಗೆ " ನೀವು ಕಥೆ ಕಳುಹಿಸಿ ಪ್ರಕಟಿಸುತ್ತೇವೆ ಆದರೆ ನಿಮ್ಮ ಹೆಸರು ಹಾಕುವುದಿಲ್ಲ" ಎಂಬ ಒಂದೇ ಠರಾವು ಹೊರಡಿಸಿದರೆ ಸಾಕು, ಶೇಕಡಾ ತೊಂಬತ್ತೊಂಬತ್ತು ಬರಹಗಾರರು ಬರೆಯುವುದನ್ನೇ ಕೈಬಿಡುತ್ತಾರೆ. ಮತಾಂತರದ ಕುರಿತು ಪುಟಗಟ್ಟಲೆ ಲೇಖನ ಬರುತ್ತಿದೆಯಲ್ಲಾ ಲೇಖಕರ ಹೆಸರೆಂಬ ಹೆಸರನ್ನು ಹಾಕದಿದ್ದರೆ ಅದು ಚರ್ಚೆಯೇ ಆಗುತ್ತಿರಲಿಲ್ಲ. ಹೆಸರನ್ನು ಹಾಕಬಾರದು ಎಂದಿದ್ದರೆ ಕೆಟ್ಟ ಕೆಟ್ಟ ಬೈಗುಳದ ಪ್ರತಿಕ್ರಿಯೆಗಳು ಮಾತ್ರಾ ಇರುತ್ತಿತ್ತು. ಇರಲಿ ರೆ ಪ್ರಪಂಚದ ಈಚೆ ಬಂದು ನೋಡಿದರೆ ಈ ಹೆಸರಿನ ಹಿಂದೆ ಬೀಳುವವರ ಕಥೆ ಸಾವಿರ ಇದೆ. ಗ್ರಾಮ ಪಂಚಾಯತಿ ಸದಸ್ಸನಿಂದ ಪ್ರಾರಂಭವಾಗಿ ಪ್ರಧಾನಿ ಪಟ್ಟದವರೆಗಿನ ಜನರ ತನಕವೂ ಈ ವ್ಯಾಮೋಹ ತಪ್ಪಿದ್ದಲ್ಲ. , ಹಳ್ಳಿಗಳಲ್ಲಿ ಈ ಹೆಸರಿನ ಮಹಿಮೆ ಅಪಾರ. ಪತ್ರಿಕಾ ಸಂಪಾದಕರೊಬ್ಬರು ಹೇಳುತ್ತಿದ್ದರು. ಉತ್ತರ ಕರ್ನಾಟಕದ ವರದಿಗಾರರ ಬಳಿ ಜನ ದುಂಬಾಲು ಬಿದ್ದು ತಮ್ಮ ಹೆಸರನ್ನು ಪತ್ರಿಕೆಯಲ್ಲಿ ಹಾಕಿಸಿಕೊಳ್ಳುತ್ತಾರಂತೆ. ಅದೂ ಎಲ್ಲಿ ಅಂತ ಅಂದುಕೊಂಡಿರಿ? ಕಾರ್ಯಕ್ರಮದ ಕೊನೆಯಲ್ಲಿ ಹಾಜರಿದ್ದರು ಎಂಬ ಹೆಸರು ಬರುತ್ತದಲ್ಲ ಅಲ್ಲಿ. ಅದಕ್ಕಿಂತ ಮಜ ಎಂದರೆ ನಮ್ಮ ಊರಿಗೆ ಬರುವ ನಾಟಕ ಕಂಪನಿಗಳದ್ದು. ಅವರೋ ತುಂಬಾ ಶಾಣ್ಯಾಗಳು. ನಾಟಕ ಪ್ರಾರಂಭವಾಗಿ ಅರ್ದದಲ್ಲಿ "ನಾಟಕದ ಸ್ತ್ರೀ ಪಾತ್ರಧಾರಿ ರುದ್ರೇಶನಿಗೆ ಭದ್ರಪ್ಪ ನವರಿಂದ ಇಪ್ಪತ್ತು ರೂಪಾಯಿ ಕಾಣಿಕೆ ಎಂದು ಮೈಕ್ ನಲ್ಲಿ ಘೋಷಣೆ ಮಾಡುತ್ತಾರೆ. ನಂತರ ತಮ್ಮ ಹೆಸರನ್ನು ಮೈಕಿನಲ್ಲಿ ಕೇಳಿಸಿಕೊಳ್ಳಲು ಜನರ ನೂಕು ನುಗ್ಗಲು ಆರಂಭವಾಗುತ್ತದೆ. ಅಂತಿಮವಾಗಿ ನಾಟಕದವರ ಜೇಬು ಭರ್ತಿ. ಪ್ರೇಕ್ಷಕರ ಜೇಬು ಖಾಲಿ ಅದೂ ಯಾತಕ್ಕಪಾ ಅಂದ್ರೆ ಅರೆಕ್ಷಣ ತಮ್ಮ ಹೆಸರನ್ನು ಮೈಕಿನಲ್ಲಿ ಕೇಳಿಸಿಕೊಳ್ಳಲು. ಇರಲಿ ಬೀಡಿ ಇದು ಪಾಮರರ ಕಥೆ.
ಇದು ಸಾಧು ಸಂತರನ್ನು ಕೈಬಿಟ್ಟಿಲ್ಲ. ಸರ್ವ ಬಿಟ್ಟ ಸಾಧು ಸಂತರಿಗೆ ನಮಗಿಂತ ಒಂದು ತೂಕ ಈ ಹೆಸರಿನ ವ್ಯಾಮೋಹ ಹೆಚ್ಚು. ನಮ್ಮ ಹೆಸರುಗಳು ಒಂದಿಂಚು ಉದ್ದ ಇದ್ದರೆ ಅವರ ನಾಮಾಂಕಿತಗಳು ಶ್ರೀ ಶ್ರೀ ಶ್ರೀ ಎಂದು ಪ್ರಾರಂಭವಾಗಿ ಮುಗಿಯುವ ಹೊತ್ತಿಗೆ ಬರೊಬ್ಬರಿ ಆರಿಂಚು ತಲುಪಿರುತ್ತದೆ. ಈ ಆರಿಂಚು ಉದ್ದದ ನಾಮಾಂಕಿತವನ್ನು ಶಾಶ್ವತಗೊಳಿಸುವ ಮಹದಾಸೆ ಅವರಿಗೆ ಪಾಮರರು ಅವರ ಕಾಲದಲ್ಲಿ ಅವರ ಹೆಸರು ವಿರಾಜಮಾನವಾಗಿರಲಿ ಎಂದಷ್ಟೇ ಆಲೋಚಿಸಿದರೆ ಶ್ರೀ ಶ್ರೀ ಶ್ರೀ ಗಳು ಮುಂದಿನ ತಲೆತಲಾಂತರದವೆರೆಗೂ ತಮ್ಮ ಹೆಸರು ಇರಬೇಕೆಂದು ಹವಣಿಸುತ್ತಾರೆ. ಇನ್ನು ಹೆಸರಿನ ಮೂಲಕ ಗುರುತಿಸಿಕೊಳ್ಳಹೊರಟವರಲ್ಲಿ ಎರಡು ವಿಧಾನವಿದೆ. ಮೊದಲನೆಯದು ಉತ್ತಮ ಕೆಲಸವನ್ನು ಮಾಡುವುದು. ಅದು ತುಂಬಾ ಕಷ್ಟಕರ ವರ್ಷಗಟ್ಟಲೆ ಕಾಲವನ್ನು ನುಂಗುತ್ತದೆ. ಎರಡನೆಯದು ವಿವಾದವನ್ನು ಎಬ್ಬಿಸಿ ತನ್ಮೂಲಕ ತಮ್ಮ ಹೆಸರನ್ನು ಜಗಜ್ಜಾಹೀರು ಗೊಳಿಸುವುದು. ಇದು ಅತ್ಯಂತ ಸುಲಭ ಮಾರ್ಗ ತಂಟೆ ತಕರಾರು ಎತ್ತಿದರೆ ಮುಗಿಯಿತು. ಹೆಸರು ಪ್ರಸಿದ್ಧಿಗೆ ಬರುತ್ತದೆ. ಹೀಗೆ ಹೆಸರಿನ ಕುರಿತು ಹೇಳುತ್ತಾ ಸಾಗಿದರೆ ನಿಮ್ಮ ಮನಸ್ಸಿನಲ್ಲಿ ನನ್ನ ಹೆಸರೇ ಇಲ್ಲದಷ್ಟು ಆಗುವಷ್ಟು ವಿಷಯ ಇದೆ. ಹಾಗೂ ಅಲ್ಲೂ ಮತ್ತೆ ಹೆಸರಿನದ್ಡೇ ವಿಚಾರವಿದೆ.ವಾರಗಟ್ಟಲೆ ಆಲೋಚಿಸಿ ಒಂದು ಕಥೆ ಬರೆದು ನಂತರ ಅದನ್ನು ಪತ್ರಿಕೆಗೆ ಕಳುಹಿಸಿ ಅದು ಪ್ರಕಟವಾದ ನಂತರ ಗುರುತು ಪರಿಚಯ ಇರುವವರ ಬಳಿ ಸುತ್ತಿ ಬಳಸಿ ಮಾತನಾಡಿ " ನನ್ನ ದೊಂದು ಕಥೆ ಬಂದಿದೆ ನೋಡಿದೆಯಾ?" ಎಂದು ಅಲವತ್ತು ಕೊಳ್ಳುವುದಿದೆಯಲ್ಲಾ ಅದೂ ಚೋಟುದ್ದದ ಹೆಸರಿಗಾಗಿಯೇ. ನಿಜವಾಗಿಯೂ ಕಥೆಗಳಲ್ಲಿ ತಾಕತ್ತು ಇದ್ದರೆ ಬರಹಗಳಲ್ಲಿ ಸತ್ವ ಇದ್ದರೆ ಬರೆದವನು (ನಮ್ಮಂತೆ) ಪ್ರಕಟವಾದ ಪತ್ರಿಕೆಯ ಲೀಂಕನ್ನು ಮೈಲ್ ಮಾಡುವ ಅಗತ್ಯ ಇರುವುದಿಲ್ಲ. ಅದು ತನ್ನಿಂದ ತಾನೆ ಮನಸ್ಸಿನಿಂದ ಮನಸ್ಸಿಗೆ ದಾಟುತ್ತದೆ. ಬರಹಗಳಲ್ಲಿ ಸತ್ವ ತುಂಬಲಾಗದವರು, ಪಾಮರರು ಅವರಿಗೆ ಹೀಗೆ ಹೆಸರನ್ನು ದಾಖಲಿಸುವ ಆಸೆ ,ಆವಾಗ ಇಂತಹ ಕೆಲಸ. ಟೀಕೆ ಹಾಗೂ ಟಿಪ್ಪಣಿ.
ಅಂತಿಮವಾಗಿ:
ಹಾರ ತುರಾಯಿ ಬೇಕು ಪಂಡಿತಂಗೆ
ಹೆಸರಿಸಿರೆ ಸಾಕು ಪಾಮರಂಗೆ
ಕೊಪ್ಪರಿಗೆ ಹಣ ಬೇಕು ಕೃಪಣಂಗೆ
ಮೌನವೊಂದೇ ಸಾಕು ಸುಖಿಪಂಗೆ

Monday, November 17, 2008

ನಗುಮುಖ ಹೊರಗೆ ನಿಜ ಮುಖ ಒಳಗೆ


"ನಗುನಗುತಾ ನಲೀ ನಲೀ ಏನೇ ಆಗಲಿ" ಅನ್ನೋ ಹಳೆಯ ಹಾಡು ನಿಮಗೆಲ್ಲಾ ಗೊತ್ತಿದೆ. ಆದರೆ ಹಾಗೆ ಏನೇ ಆದರೂ ನಗುನಗುತ್ತಾ ಇರಲು ಇವತ್ತಿನವರೆಗೆ ಯಾರಿಗೂ ಆಗಿಲ್ಲ. ಮುಂದೆಯೂ ಆಗೋದಿಲ್ಲ. ಯಡ್ದಾದಿಡ್ಡಿ ಹಲ್ಲು ನೋವು ಬಂದಾಗ ಆ ಹಾಡಲ್ಲಿ ನಗುನಗುತಾ... ಎಂದು ಹೇಳಿದ್ದಾನೆ ಅಂದುಕೊಂಡು ನಗಿ ನೋಡೋಣ..? ಆಗೋದೇ ಇಲ್ಲ. ಇಲ್ಲ ಅದು ಹಾಗಲ್ಲ ನೂರಾರು ಜಂಜಡ ಬಂದಾಗ ಅದು ಆ ಕಾಣದ ದೇವನ ಲೀಲೆಯೆಂದು ನಗು ಅಂತ ಆ ಹಾಡಿನ ಅರ್ಥ. ಇರಲಿ ಅವರು ಹಾಡಿದ್ದು ನಾವು ಕೇಳಿದ್ದು ಎಲ್ಲಾ ಮುಗಿದಕತೆ ಈಗ ಲೈಫ್ ಎಂಬ ಲೈಫ್ ನಲ್ಲಿ ನಮ್ಮ ನಿಮ್ಮ ಜೀವನದಲ್ಲಿ ನಗು ಎಂಬುದು ಎಲ್ಲಿದೆ ಅಂತ ನೋಡೋಣ. ಬಾಲ್ಯದಲ್ಲಿ ನಾವೂ ನೀವು ಎಲ್ಲಾ ಗಿಟಿ ಗಿಟಿ ನಕ್ಕಿದ್ದು ಇದೆಯಂತೆ ಅಪ್ಪ ಅಮ್ಮ ನೆಂಟರು ಎಲ್ಲಾ ಹಾಗೆ ಹೇಳುವುದು ಇದೆ. ಆದರೆ ಅದು ನನಗೆ ನಿಮಗೆ ಇಬ್ಬರಿಗೂ ಗೊತ್ತಿಲ್ಲ. ಅಷ್ಟಾದ ಮೇಲೆ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ದಿನ ಇವತ್ತು ತಗಡಿನಂತಿರುವ "ವಿಚಿತ್ರ ವಾರ್ತೆಯೋ", ಫ್ಯಾನ್ಸಿ ಡ್ರೆಸ್ಸೋ" ನಮ್ಮ ನಿಮ್ಮನ್ನು ಬಿದ್ದು ಬಿದ್ದು ನಗಿಸಿದ್ದಿದೆ. ಆನಂತರ ಹೈಸ್ಕೂಲು ದಿನಗಳಲ್ಲಿ ಅತ್ತ ಪೂರ್ಣ ಪೋಲಿಯೂ ಅಲ್ಲದ ಇತ್ತ ಸ್ಟ್ಯಾಂಡರ್ಡೂ ಅಲ್ಲದ " ಮೇಸ್ಟರ ಡ್ರಾಯರ್ ಕಸೆ ಆಚೆ ಬಿದ್ದಾಗ, ಜಿಪ್ ಓಪನ್ ಆದಾಗ, ಮಳೆಗಾಲದಲ್ಲಿ ಮೇಡಂ ಸೊಯಕ್ ಅಂತ ಜಾರಿಬಿದ್ದಾಗ , ಶಾಲೆಯಲ್ಲಿ ಸಹಪಾಠಿ ಚಡ್ಡಿಯಲ್ಲಿ ಇಶ್ಯಿಶ್ಯಿ ಮಾಡಿಕೊಂಡಾಗ ಕಿಸಕ್ಕನೆ ನಕ್ಕಿದ್ದಿದೆ. ಅಂತಹ ನಗುವಿಗೆ ಮತ್ತೊಬ್ಬರ ಹೆದರಿಕೆ ಇತ್ತು ಬಿಡಿ. ಆನಂತರ ಕಾಲೇಜು ದಿನಗಳಲ್ಲಿ ನಕ್ಕಿದ್ದೇ ನಕ್ಕಿದ್ದು, ಪೂರ್ಣ ಪ್ರಮಾಣದ ಪೋಲಿ ಜೋಕ್ ಗಳು, ನಗಿಸಲು ಹೆಚ್ಚಿನ ದೇಣಿಗೆ ನೀಡಿತ್ತು. ಕಾಲೇಜು ಮುಗಿದು ಕೆಲಸದ ಬೇಟೆ ಆರಂಭವಾಯಿತು ನೋಡಿ ಅಲ್ಲಿಂದ ನಗು ಎಂಬುದು ಒಂತರಾ ಒತ್ತಾಯದ ಕ್ರಿಯೆ ಅನ್ನಿಸುವಂತೆ ಅನ್ನಿಸಿತು. ಆ ಕೆಲಸವೆಂಬ ಕೆಲಸ ಸಿಕ್ಕಿ ಸರಿ ಸುಮಾರು ಮದುವೆ ಅಂಬೋ ಒಂದು ಶಾಸ್ತ್ರ ಮುಗಿದ ಮೇಲೆ ಮನಸ್ಸುಬಿಚ್ಚಿ ನಕ್ಕದ್ದು ಕಡಿಮೆ ಅಂತ ಹೇಳುವುದು ತೀರಾ ಜೋಕಿಗೇನೂ ಅಲ್ಲ . ಇನ್ನು ಹಲವು ಬಾರಿ ಹೊರಗಿನವರಿಗೆ ನಕ್ಕಂತೆ ಕಂಡರೂ ಒಳಗೊಳಗೆ ಅದೇನೋ ನೋವು ಅಡಗಿರುತ್ತದೆ. ಹೆಂಡತಿಯ ಆಸೆ ಗಂಡನಿಗೆ ಭಾಷೆ ಮಕ್ಕಳ ಭವಿಷ್ಯ ಹೀಗೆ ಏನೇನೋ ಸೇರಿಕೊಂಡು ನಗು ಮಾಯವಾಗಿಬಿಡುತ್ತದೆ ಹಲವರ ಬಾಳಿನಲ್ಲಿ. ಆದರೆ ವಿಚಿತ್ರ ನೋಡಿ , ಅತಿಯಾಗಿ ನೋವು ತಿಂದವರು ಅದೇಕೋ ಹೆಚ್ಚು ನಗುತ್ತಾರೆ ಮತ್ತು ನಗಿಸುತ್ತಾರೆ.
ನಮ್ಮೂರಲ್ಲಿ ಶೇಷಜ್ಜ ಎಂಬ ವೃದ್ಧರು ತನ್ನ ಪತ್ನಿಯೊಡನೆ ಇದ್ದಾರೆ. ಎಪ್ಪತ್ತರ ಇಳಿವಯಸ್ಸಿನಲ್ಲಿಯೂ ಅವರಿಗೆ ನಗಲು ನಗಿಸಲು ನೂರಾರು ಕಾರಣಗಳು ಸಿಗುತ್ತವೆ. ಯಡ್ದಾದಿಡ್ಡಿ ದಮ್ಮಿನ(ಉಬ್ಬಸ) ಗಿರಾಕಿಯಾದ ಅವರು "ಯನ್ನ ಹತ್ತಿರ ಮಾತನಾಡಲು ನಿಂಗೆ ದಮ್ಮು ಇದ್ದನಾ ಯಂಗಾದ್ರೆ ನೋಡಿರೆ ಗೊತ್ತಾಕ್ತು. ಮಾತು ಶುರು ಮಾಡಕ್ಕಿಂತ ಮುಂಚೆ ನೋಡ್ಕ್ಯ" ಎನ್ನುತ್ತಾ ತಮಗಿರುವ ದಮ್ಮನ್ನು ತಾವೇ ಆಡಿಕೊಳ್ಳುತ್ತಾರೆ. ಯಾವಾಗಲೂ ನಗಿಸುವ ಅವರ ಕಥೆ ಮಾತ್ರಾ ದುರಂತದ್ದು. ಎರಡು ಗಂಡು ಮಕ್ಕಳು ಅಕಾಲ ಮೃತ್ಯುವಿಗೀಡಾಗಿದ್ದಾರೆ, ಇನ್ನುಳಿದ ಮೂವರು ಹೆಣ್ಣು ಮಕ್ಕಳಲ್ಲಿ ಒಬ್ಬಾಕೆಗೆ ಗಂಡ ತೀರಿಕೊಂಡಿದ್ದಾನೆ, ಇವರು ಗಂಡ ಹೆಂಡತಿ ಬಾಡಿಗೆ ಮನೆಯೊಂದರಲ್ಲಿ ದಿನ ತಳ್ಳುತ್ತಿದ್ದಾರೆ. ಆರೋಗ್ಯ ಏರುಪೇರಾದರೆ ಅವರೇ ವ್ಯವಸ್ಥೆ ಮಾಡಿಕೊಳ್ಳಬೇಕು. ಆದರೂ ನಮ್ಮ ಶೇಷಜ್ಜ ಜುಂ ಅಂತ ದಮ್ಮಿನ ಸೊಂಯ್ ಸೊಂಯ್ ಶಬ್ಧದ ನಡುವೆ ಗಿಟಿಗಿಟಿ ನಗುತ್ತಾರೆ ಹಾಗೂ ನಗಿಸುತ್ತಾರೆ. ನಿಮ್ಮ ಬಳಿಯೂ ಇಂತಹ ಹತ್ತಾರು ಕಥೆಗಳು ಸಿಗುತ್ತವೆ. ಆದರೆ ವಿಚಿತ್ರವೆಂದರೆ ದಿನವಿಡೀ ನಗುತ್ತಲೇ ಇರಬಹುದಾದಷ್ಟು ಸೌಲಭ್ಯ ಇರುವ ಎಲ್ಲವೂ ಸರಿಯಿರುವ ಜನರು "ಅಯ್ಯೋ ಬದುಕುವುದೇ ಕಷ್ಟ" ಅಂತ ಅಳುತ್ತಿರುತ್ತಾರೆ. ಇದು ಪ್ರಕೃತಿಯ ವೈಚಿತ್ರ್ಯ. ಹೀಗೆ ಮುಂದುವರೆಯುತ್ತದೆ ಕಾಲ..... ಆದರೂ ನಮ್ಮ ನಿಮ್ಮ ನಡುವೆ ನಿತ್ಯ ನಗುತ್ತಾ ಇರುವ ಹಲವಾರು ಜನರು ಸಿಗುತ್ತಾರೆ. ಅಂತಹ ನಗುವವರಿಂದ ನಾವೂ ನಗುವುದ ಕಲಿತು ಪಾವನರಾಗಬಹುದು. ಮನೆಯಲ್ಲಿ ನಗು ಮಾಯವಾಗಿ ಬೆಳೆಗ್ಗೆ ಮುಂಚೆ ಪಾರ್ಕಿನಲ್ಲಿ ಹಾ ಹಾ ಹ ಹ ಹ ಎಂದು ನಗುವ ನಗೆ ಕ್ಲಬ್ ಗಳೂ ಇಂದು ಇವೆ. ಸಹಜವಾಗಿದ್ದದ್ದನ್ನು ಕೃತಕವಾಗಿ ಪಡೆದಾದರೂ ಅನುಭವಿಸುತ್ತೇನೆ ಎಂಬ ಹಠ ಉತ್ತಮವೇ ನಿಜ.
ಕೊನೆಯದಾಗಿ: ನಗಿಸುವವ ಜೀವನ ಅದೇಕೆ ಅಳುತ್ತಿರುತ್ತದೆ .? ಎಂದು ಆನಂದರಾಮ ಶಾಸ್ತ್ರಿಗಳಲ್ಲಿ ಕೇಳಿದೆ."ಅವರು ಜೀವನದಲ್ಲಿ ಅತ್ತಿದ್ದಕ್ಕಾಗಿ ಇತರರನ್ನು ನಗಿಸುತ್ತಿದ್ದಾರೆ. ಈ ಮನುಷ್ಯ ಪ್ರಪಂಚ ಯಾವಾಗಲೂ ವಿಚಿತ್ರವೇ, ಸೂಟು ಬೂಟು ಹಾಕಿ ಮೆರಯಬಹುದಾಗಿದ್ದ ಗಾಂಧಿ ಎಲ್ಲಾ ಬಿಚ್ಚಿ ಎಸೆದರು, ಅಂಗಿಗೂ ಗತಿಯಿಲ್ಲದವರ ನೇತಾರ ಅಂಬೇಡ್ಕರ್ ನಿರಂತರ್ಐಷರಾಮಿನ ಧಿರಿಸಿನಲ್ಲಿಯೇ ಕಾಲ ಕಳೆದರು. ಅಲ್ಲಿಗೆ ಇದು ತಿಳಿದಿರಲಿ ಯಾರಿಗೆ ಯಾವುದು ಇರುತ್ತದೆಯೋ ಅದು ಬೇಡ ಯಾವುದು ಇಲ್ಲವೋ ಅದರತ್ತ ನಿರಂತರ ನೋಟ" ಎಂದು ಉತ್ತರಿಸಿದರು. ನನಗೆ ನಾನು ಕೇಳಿದ್ದಕ್ಕೂ ಅವರು ಹೇಳಿದ್ದಕ್ಕೂ ಸಂಬಂಧವೇ ಇಲ್ಲವೇನೋ ಅಂತ ಅನ್ನಿಸಿತು. ಆದರೂ ಉತ್ತರವನ್ನು ಯಥಾವತ್ತು ಟೈಪಿಸಿದ್ದೇನೆ ಕಾರಣ ನೀವು ಬುದ್ಧಿವಂತರು ನಿಮಗಾದರೂ ಅರ್ಥವಾಗುತ್ತೆ ಅಂತ
ಟಿಪ್ಸ್: ನಿಮಗೆ ಯಾರಾದರೂ ಸಿಟ್ಟಿನಿಂದ ಏನಾದರೂ ಅನ್ನಲು ಬಂದಾಗ ಮುಗಳ್ನಗಲು ಆರಂಬಿಸಿ ಆಗ ಅವರ ಪರಿಸ್ಥಿತಿ ನೋಡಿ ಮಜ ಅನುಭವಿಸಿ.

Sunday, November 16, 2008

ಕಥೆ ಕಥೆ ಕಾರಣ

ಹಾಯ್ ಪ್ರಿಯ ಓದುಗರೆ,

ನಾನು ಬರೆಯುತ್ತೇನೆ ಆದರೆ ಕವಿಯಲ್ಲ. ಅಡಿಕೆ ತೋಟ ಜೀವನ ನಿರ್ವಹಣೆಗೆ ಆಗುವಷ್ಟು ಇದೆ ಆದರೆ ಕೃಷಿಕನಲ್ಲ. ಕಾರು ಬಿಡುತ್ತೇನೆ ಡ್ರೈವರ್ ಅಲ್ಲ. ಜೇನು ಸಾಕಿದ್ದೇನೆ ಹಾಗಂತ ಜೇನುಕುಡುಬಿ ಅಲ್ಲ. ಹತ್ತೆಕೆರೆ ಜಾಗದಲ್ಲಿ ಸ್ನೇಹಿತರೊಡಗೂಡಿ ಸಹಜ ಅರಣ್ಯ ಬೆಳೆಸಿದ್ದೇನೆ ಹಾಗಂತ ತೀರಾ ಪರಿಸರಪ್ರೇಮಿ ಅಲ್ಲ. ಒಂದು ಜೇನಿನ ಹಿಂದೆ ಎಂಬ ಪುಸ್ತಕವೊಂದನ್ನು ಬರೆದಿದ್ದೇನೆ ಎಂದಾಕ್ಷಣ ಕಾದಂಬರಿಕಾರನಲ್ಲ. ಅಂತ್ಯಾಕ್ಷರಿ ಆಡುವಾಗ ಒಂದಿಷ್ಟು ಹಾಡು ಹೇಳುತ್ತೇನೆ ಹಾಗಂತ ಹಾಡುಗಾರನಲ್ಲ. ಸಿಕ್ಕಾಪಟ್ಟೆ ವಾಚಾಳಿ ಹಾಗಂತ ಭಾಷಣಕಾರನಲ್ಲ. ಕೈಯಲ್ಲಿ ಕಾಸಿದ್ದಾಗ ಒಂದಿಷ್ಟು ದಾನ ಮಾಡಿದ್ದೇನೆ ಹಾಗಂತ ಕರ್ಣನಲ್ಲ. ಈ ಅಲ್ಲಗಳ ನಡುವೆ ಈ ಭಾನುವಾರದ ಪ್ರಜಾವಾಣಿಯಲ್ಲೊಂದು ಕಥೆ ಪ್ರಕಟವಾಗಿಬಿಟ್ಟಿದೆ ನಿಮಗೆ ಪುರುಸೊತ್ತು ಇದ್ದರೆ ನೋಡಿ. http://prajavani.net/Content/Nov162008/weekly20081115104048.asp

Thursday, November 13, 2008

ಹಾಗೆಲ್ಲಾ..ಎಲ್ಲರಿಗೂ ಅನ್ನಿಸುತ್ತೆ ..



ಪ್ರಾಂಕ್ಫರ್ಟ್ ನಗರದ ಅಗಲದ ರಸ್ತೆಯಲ್ಲಿ ಜೊಂಯ್ ಅಂತ ಕಾರಲ್ಲಿ ಹೋಗುತ್ತಿರುವಾಗ ನಮ್ಮ ದೇಶ ನೆನಪಾಗಿ ಅಲ್ಲಿನ ರಸ್ತೆಯನ್ನೂ ಹೀಗೆ ಮಾಡಬೇಕು ಅನ್ನಿಸುತ್ತೆ. ಆದರೆ ಇಲ್ಲಿ ಬಂದು ಕಿಷ್ಕಿಂದೆಯ ರಸ್ತೆಗೆ ಅಂಗಡಿ ಇಟ್ಟುಕೊಂಡವರನ್ನು ಅಲುಗಾಡಿಸಲಾಗದೆ ಸುಮ್ಮನಿರಬೇಕಾಗುತ್ತೆ. ನಮ್ಮ ರಾಜಕಾರಣಿಗಳು ಸರಿ ಇಲ್ಲ ಅವರು ಸರಿ ಇದ್ದಿದ್ದರೆ ಇವೆಲ್ಲಾ ಸರಿ ಇರುತ್ತಿತ್ತು ಅಂತ ಅನ್ನಿಸುತ್ತೆ ಆದರೆ ಎಂ.ಎಲ್.ಎ ಎಲೆಕ್ಷನ್ ನಲ್ಲಿ ಆತ ಒಂದು ಕೋಟಿ ರೂಪಾಯಿ ಹಂಚಿ ಗೆಲ್ಲಬೇಕಾದ ಪರಿಸ್ಥಿತಿ ಇದೆ ಎಂದು ಅರಿವಾದಾಗ ಮನ ಮುದುಡುತ್ತೆ . ಬೆಂಗಳೂರಿನ ಪ್ರತಿಷ್ಟಿತ ಕಂಪನಿಯಲ್ಲಿ ತಿಂಗಳು ತಿಂಗಳೂ ಸಂಬಳ ಎಣಿಸುತ್ತಾ ಡ್ಯೂಟಿ ಮಾಡುತ್ತಿರಬೇಕಾದರೆ ತತ್ ಇದು ಕತ್ತೆ ಚಾಕರಿ ಜೀತ ಬೆಳೆಗ್ಗೆದ್ದು ಆಫೀಸು ಟೆನ್ಷನ್ ಅದೇ ಊರಲ್ಲಿರುವ ಅಣ್ಣ ಜುಂ ಅಂತ ಇದ್ದಾನೆ ನಾವೂ ಅಲ್ಲಿ ಹೋಗಿಬಿಡೋಣ ಅಂತ ಅನ್ನಿಸುತ್ತೆ. ಆದರೆ ಹಳ್ಳಿಗೆ ಬಂದಾಗ ಕೈಯಲ್ಲಿ ಕಾಸಿಲ್ಲದೆ ಸಮಯಕ್ಕೆ ಸರಿಯಾದ ಕೆಲಸ ಇಲ್ಲದೆ ಹೊತ್ತೇ ಹೋಗದೆ ತತ್ ದರಿದ್ರ ಅಂತ ಅನ್ನಿಸುತ್ತೆ. ಊರಿಂದ ಅಮ್ಮ ಫೋನ್ ಮಾಡಿಕೊಂಡು ನಿನ್ನ ಅಣ್ಣ ಅತ್ತಿಗೆ ನಮ್ಮನ್ನು ಮುದುಕರು ಎಂದು ತಾತ್ಸಾರ ಮಾಡುತ್ತಿದ್ದಾರೆ ಎಂದಾಗ ಅಣ್ಣ ಅತ್ತಿಗೆಗೆ ಏನಾಗಿದೆ ದಾಡಿ? ವಯಸ್ಸಿನಲ್ಲಿ ಅಪ್ಪ ಅಮ್ಮ ಸಾಕಿಲ್ಲವೇ ಅವರನ್ನು ಇನ್ನು ಎಷ್ಟು ವರ್ಷ ಬದುಕುತ್ತಾರೆ ಅವರು ಚೆನ್ನಾಗಿ ನೋಡಿಕೊಳ್ಳಬೇಕಪ್ಪ, ಮಾತೃ ದೇವೋ ಭವ ಅಲ್ಲವೆ ಅಂತ ಅನ್ನಿಸುತ್ತೆ. ಅಪ್ಪ ಅಮ್ಮ ನನ್ನು ಸಿಟಿ ಯ ಮನೆಗೆ ಕರೆದುಕೊಂಡು ಬಂದು ಸುಖವಾಗಿ ಇಡೋಣ ಎಂದಾಗ ಹೆಂಡತಿ ಅದು ಸಾಧ್ಯವಿಲ್ಲದ ಮಾತು ಎಂದು ಸಿಡಿಮಿಡಿ ಗುಟ್ಟಿದಾಗ ಅಣ್ಣನ ಪರಿಸ್ಥಿತಿ ಅರಿವಾಗುತ್ತೆ. ಅದ್ಯಾರಿಗೋ ಬಿಪಿಯಂತೆ ಷುಗರ್ ಅಂತೆ ಯಾವಾಗಲೂ ತನ್ನ ಖಾಯಿಲೆಯದೇ ವರಾತವಂತೆ ,ಎಂದಾಗ ಸಿಕ್ಕಾಪಟ್ಟೆ ತಿಂತಾನೆ, ವಾಕಿಂಗ್ ಮಾಡಲ್ಲ ಕಾಯಿಲೆ ಬರದೆ ಇನ್ನೇನಾಗುತ್ತೆ?ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಅಂತ ಅನ್ನಿಸುತ್ತೆ. ನಳನಳಿಸುವ ಆರೋಗ್ಯದಿಂದಿದ್ದ ನಾವು ಇದ್ದಕ್ಕಿದ್ದಂತೆ ತಲೆತಿರುಗಿ ಬಿದ್ದಾಗ ಡಾಕ್ಟರ್ ನಿಮಗೆ ಬಿಪಿ ಇದೆ ಎಂದಾಗ "ಈ ದರಿದ್ರ ಕಾಯಿಲೆ ಅದು ಹೇಗೆ ಬರುತ್ತೋ.? ಈಗಿನ ಆಹಾರವೇ ವಿಷಯುಕ್ತ " ಅಂತ ಅನ್ನಿಸುತ್ತೆ. ಊರಿಂದ ದೂರದ ಪ್ರಯಾಣಕ್ಕೆ ಬಸ್ ಏರಿ ಕುಳಿತಾಗ ಹೆಂಗಸೊಬ್ಬಳು ವಯಕ್ ಅಂತ ವಾಂತಿಮಾಡಿದಾಗ ಏನು ದರಿದ್ರ ಜನರಪ್ಪಾ ಕಾಮನ್ ಸೆನ್ಸ್ ಇಲ್ಲ ಸಿಕ್ಕಿದ್ದೆಲ್ಲಾ ತಿಂತಾರೆ ಇಲ್ಲಿ ಬಂದು ಕಕ್ತಾರೆ ಅಂತ ಅನ್ಸುತ್ತೆ . ಆದರೆ ಮನದೆನ್ನೆ ಅದೇ ವಯಕ್ ಅಂತ ಶಬ್ದ ಮಾಡಿದರೆ "ಅಯ್ಯೋ ಏನ್ಮಾಡಕಾಗುತ್ತೆ ದರಿದ್ರ ಬಸ್ ನಲ್ಲಿ ಕೆಟ್ಟ ಬೆವರು ವಾಸನೆ ವಾಂತಿ ಬರ್ದೆ ಇನ್ನೇನಾಗುತ್ತೆ ಅನ್ನೋ ಡೈಲಾಗ್ ತನ್ನಿಂದ ತಾನೆ ಬರುತ್ತೆ. ಗೋಮಾತೆ ಮಾತೆ ಎನ್ನಿರೋ ಎಂದು ವೇದಿಕೆಯಲ್ಲಿ ಭಾಷಣ ಕೇಳುವಾಗ ಗೋವಿನ ಮಹತ್ವ ಕೇಳಿದಾಗ ನಾವೂ ಒಂದು ಒಳ್ಳೆಯ ಆಕಳು ಸಾಕೋಣ ಅಂತ ಅನ್ನಿಸುತ್ತೆ. ಮನೆಗೆ ತಂದ ಆಕಳು ಹಾಲು ಕರೆಯಲು ಹೋದಾಗ ದುಬುಲ್ ಅಂತ ಒದ್ದು ಮುಂಗೈ ಬುರುಬುರು ಅಂತ ಬೂರೆ ಗಡುಬಿನ ತರಹ ಉಬ್ಬಿದಾಗ ಭಾಷಣಕಾರ ಆಕಳು ಸಾಕಿಲ್ಲ ಕೇವಲ ಬೊಗಳೆ ಬಿಟ್ಟಿದ್ದಾನೆ ಅಂತ ಅರಿವಾಗುತ್ತೆ. ಜತೆಗೆ ಕೆಲಸ ಮಾಡುವ ಕಲೀಗ್ ಳ ಬಳುಕಾಟ ಕುಲುಕುಲು , ಗುಳಿಬೀಳುವ ಕೆನ್ನೆ ಕಂಡಾಗ ಮನೆಯಲ್ಲಿರುವ ಹೆಂಡತಿ ನೆನಪಾಗಿ ನಾನು ಅವಳ ಕಟ್ಟಿಕೊಳ್ಳುವುದರ ಬದಲು ಇವಳನ್ನೇ ಮದುವೆ ಮಾಡಿಕೊಂಡಿದ್ದರೆ ಸ್ವರ್ಗ ಕಾಣಬಹುದಿತ್ತು ಅಂತ ಅನ್ನಿಸುತ್ತೆ. ಅದೇ ಗೊಣಗಾಟವನ್ನು ಇದೇ ಕಲೀಗ್ ಳ ಗಂಡನೂ ಗುಣುಗುಣಿಸುತ್ತಿದ್ದಾನೆ ಎಂದು ಅರಿವಾದರೆ ಮದುವೆಯ ಮರ್ಮ ತಿಳಿಯುತ್ತೆ. ಧ್ಯಾನದಿಂದ ಬಿಪಿ ಷುಗರ್ ವಾಷ್ ಔಟ್ ಆಗಿಬಿಡುತ್ತೆ ಎಂದು ಧ್ಯಾನದ ಮಾಸ್ಟರ್ ಭಾಷಣ ಮಾಡುವಾಗ ನಾವೂ ಸಾವಿರ ರೂಪಾಯಿ ಕೊಟ್ಟು ಧ್ಯಾನ ಕಲಿತುಬಿಡಬೇಕು ಅಂತ ಅನ್ನಿಸುತ್ತೆ. ಅದೇ ಧ್ಯಾನದ ಟೀಚರ್ ಭಾಷಣ ಮುಗಿಸಿ ಮನೆಗೆ ಹೋಗಿ ಬಿಪಿ ಮಾತ್ರೆ ನುಂಗುವುದನ್ನು ಕಂಡರೆ ಒಹೋ ಅಂತ ಅನ್ನಿಸುತ್ತೆ. ನಾವು ಕಳೆದುಕೊಂಡಿದ್ದು ಮುಂದೆ ಗಳಿಸಬಹುದಾದದ್ದು ಮಕ್ಕಾಮಕ್ಕಿ ಹೇಳುವ ಜ್ಯೋತಿಷಿಯ ಕಂಡು ಮನ ಅಚ್ಚರಿಗೊಳಗಾಗುತ್ತೆ ಅದೇ ಜ್ಯೋತಿಷಿ ತಾನು ಕಳೆದುಕೊಂಡ ಪವಿತ್ರದುಂಗುರದ ಹುಡುಕಾಟಕ್ಕೆ ಹೆಂಡತಿಯ ಸಹಾಯ ಕೇಳುವುದು ಕಂಡರೆ ಇದು ಹೀಗಾ ಅಂತ ಅನ್ನಿಸುತ್ತೆ. ಆಫೀಸಿನಲ್ಲಿ ಬಾಸ್ ಕೆಲಸಕ್ಕಾಗಿ ಒತ್ತಡ ಹೇರಿದಾಗ ಶೊಷಣೆ ಅನ್ನಿಸಿ ಅವನ ಮುಖಕ್ಕೆ ಗುದ್ದಿಬಿಡೋಣ ಅಂತ ಅ ನ್ನಿಸುತ್ತೆ, ಕಾಲಾನಂತರ ನಾವೇ ಬಾಸ್ ಆದಾಗ ದರಿದ್ರ ಪೆಡ್ಡೆಗಳು ಜವಾಬ್ದಾರಿ ಇಲ್ಲ ಕೆಲಸ ಮಾಡೋಲ್ಲ ಕೇವಲ ಸಂಬಳ ತಿಂತಾರೆ ಅಂತ ಅನ್ನಿಸುತ್ತೆ. ಯಾರೋ ಬರೆದ ಲೇಖನ ಓದುವಾಗ ಇದು ಏನಂತ ಬರೆದಿದ್ದಾರೆ ಅಂತ ಅನ್ನಿಸುತ್ತೆ, ನಾವು ಬರೆಯಲು ಕೂತಾಗ ನಾಲ್ಕು ಪದಗಳ ಮುಂದೆ ಹೋಗದೆ ಇದೆಲ್ಲ ಕೆಲಸವಿಲ್ಲದವರು ಮಾಡುವ ಉದ್ಯೋಗ ಅಂತ ಅ ನ್ನಿಸುತ್ತೆ. ಬಗೆಹರಿಯದ ಸಮಸ್ಯ್ರೆ ಬಂದಾಗ ದೇವರೇ ನೀನೆ ಕಾಪಾಡು ಎಂದು ಪ್ರಾರ್ಥಿಸೋಣ ಅಂತ ಅನ್ನಿಸುತ್ತೆ ಸಮಸ್ಯೆ ಬಗೆಹರಿದಾಗ ನನ್ನ ತಾಕತ್ತಿನಿಂದ ಬಗೆಹರಿಸಿಕೊಂಡೆ ಅಂತ ಅನ್ನಿಸುತ್ತೆ. ಎಸಿ ರೂಮಿನಲ್ಲಿ ಕುಳಿತು ವರ್ಷಕ್ಕೆ ನಾಲ್ಕು ಲಕ್ಷದ ಸಂಬಳ ಪ್ಯಾಕೇಜ್ ಅನುಭವಿಸುತ್ತಿರುವಾಗ ನಿರುದ್ಯೋಗದವರನ್ನು ಕಂಡು ಅವರು ಅವಕಾಶ ಹುಡುಕಿಕೊಳ್ಳಲಿಲ್ಲ ಶ್ರಮ ಪಡಲಿಲ್ಲ ಸೋಮಾರಿಗಳು ಹಾಗಾಗಿ ಅವರ ಗತಿ ಅದು ಅಂತ ಅನ್ನಿಸುತ್ತೆ ಇದ್ದಕ್ಕಿದ್ದಂತೆ ಮಾರ್ಕೆಟ್ ಗೋತಾ ಆಗಿ ಇದ್ದ ಕೆಲಸ ಹೋಗಿ ಬೇರೆ ನಾಲ್ಕು ಲಕ್ಷದ ಪ್ಯಾಕೇಜ್ ಸಿಗದಾಗ ಎಲ್ಲಾ ಗ್ರಹಚಾರ ಅಂತ ಅನ್ನಿಸುತ್ತೆ. ರಾಮನ ವೇಷಧಾರಿ ಏಕಪತ್ನಿ ವೃತದ ಬಗ್ಗೆ ಅರ್ಥ ಹೇಳುವಾಗ ಆಟ ರಂಗೇರುತ್ತದೆ, ಆದರೆ ಆತನಿಗೆ ನಿಜಜೀವನದಲ್ಲಿ ಮೂರು ಹೆಂಡಿರು ಎಂದಾಗ ಪಿಚ್ ಎನ್ನಿಸುತ್ತೆ. ವಾರಗಿತ್ತಿ ಖರೀದಿಸಿದ ಸೀರೆ ತುಂಬಾ ಚೆನ್ನಾಗಿದೆ , ಗೆಳತಿಯ ಬೆಂಡೋಲೆ ಸೂಪರ್ ಅಂತ ಎಲ್ಲ ಹೆಂಗಸರಿಗೂ ಅನ್ನಿಸುತ್ತಿರುತ್ತೆ ಆದರೆ ಮನಬಿಚ್ಚಿ ಹೇಳಬಾರದು ಅಂತ ಒಳಗಿನಿಂದ ಏನೋ ಚುಚ್ಚುತ್ತೆ.

ಈ ಬ್ಲಾಗ್ ಓದುವಾಗ ಒಮ್ಮೊಮ್ಮೆ ಹೌದು ಮತ್ತೊಮ್ಮೆ ಹೌದೇ ಹೌದು ಹಾಗೂ ಮಗದೊಮ್ಮೆ ಅಲ್ಲವೇಅ ಲ್ಲ ಎಂಬ ಭಾವನೆ ಮೂಡಿ ಮುಗುಳ್ನಗೆ ಮೂಡುತ್ತೆ. ಆದರೆ ಮರುಕ್ಷಣ ಅಯ್ಯೋ ಇಂತಹ ಬರಹ ಸಾವಿರಾರು, ಮತ್ತೆ ಇವೆಲ್ಲಾ ನನಗೆ ಮೊದಲೇ ಗೊತ್ತಿತ್ತು ಎಂಬ ಭಾವನೆ ಮೂಡಿ ಇದರಲ್ಲಿ ಹೊಸತೇನಿದೆ ಅಂತ ಅನ್ನಿಸುತ್ತೆ.

ಒಮ್ಮೆ ಹಾಗೆ ಮತ್ತೊಮ್ಮೆ ಹೀಗೆ ಮಗದೊಮ್ಮೆ ಹೇಗೇ ? ಎಂಬ ಸುತ್ತಾಟದಲ್ಲೇ ಜೀವನ ಎಂಬುದು ಕಳೆದೇ ಹೋಯಿತಲ್ಲ ಅಂತ ಅನ್ನಿಸುತ್ತೆ. ಮತ್ತು ಹೀಗೆ ನೂರಾರು ಅನ್ನಿಸಿಕೆ ಗಳು ದಿನನಿತ್ಯ ಅನ್ನಿಸುತ್ತಲೇ ಇರುತ್ತೆ.

ಕೊನೆಯದಾಗಿ: ಇದೇಕೆ ಹೀಗೆ ಈ ಅನ್ನಿಸಿಕೆಗಳು? ಎಂದು ವಿಕ್ರಮಾದಿತ್ಯನ ಬೇತಾಳದ ತರಹ ಪ್ರಶ್ನೆಯನ್ನು ಆನಂದರಾಮ ಶಾಸ್ತ್ರಿಗಳಲ್ಲಿ ಕೇಳಿದೆ. "ಮನಸ್ಸು ಎರಡು, ಹೊರಮನಸ್ಸು ಹಾಗೂ ಒಳಮನಸ್ಸು ಅವುಗಳಲ್ಲಿ ಪ್ರಶ್ನೆಗೊಂದು ಉತ್ತರಕ್ಕೊಂದು ಎಂಬ ವಿಭಾಗ, ಪ್ರಶ್ನೆ ಒಳಗಿನದಾದರೆ ಉತ್ತರ ಸುಲಭ ಪ್ರಶ್ನೆ ಹೊರಗಿನದಾದರೆ ಹೀಗೆ ಯಡವಟ್ಟು. ಈ ಒಳಹೊರ ಮನಸ್ಸಿನ ಒಗ್ಗೂಡಿಸಿದರೆ ಸುಂದರ ಜೀವನ ಅದು ಸಾಧ್ಯವಾಗದಿದ್ದರೆ ಹೀಗೆ ಅನರ್ಥ, ಆಕಾಶಕ್ಕೆ ಏಣಿ ಸಾಚಿ ಚಂದ್ರನ ಹಿಡಿದಂತೆ, ದೂರದಿಂದ ಚಂದ್ರ ಆತನಿಗೆ ಸಿಕ್ಕಿದಂತೆ ಕಾಣಿಸುತ್ತದೆ , ಹತ್ತಿರ ಹೋದಾಗ ನಿಜವಾದ ದೂರ ತಿಳಿಯುತ್ತದೆ" ಎಂದು ಉತ್ತರಿಸಿದರು . ಉತ್ತರ ಚಾಟಿಯಿಂದ ನನಗೇ ಭಾರಿಸಿದಂತೆ ಇತ್ತು. ಬೆಪ್ಫಾಗಿ ಮುಗುಮ್ಮಾದೆ.
ಟಿಪ್ಸ್: ಏಕಾಗ್ರತೆ ಬರುತ್ತಿಲ್ಲ , ಯಾವ್ಯಾವುದೋ ಅನಾವಾಶ್ಯಕ ಯೋಚನೆಗಳು ವೃಥಾ ಕಾಡುತ್ತಿದೆ ಎಂಬ ಅನುಮಾನ ನಿಮ್ಮನ್ನು ಕಾಡುತ್ತಿದ್ದರೆ, ದಿನಕ್ಕೊಮ್ಮೆ ಹತ್ತು ನಿಮಿಷ ನಾಭಿಯ ವರೆಗಿನ ನಿಮ್ಮ ಉಸಿರಾಟವನ್ನೆ ಗಮನಿಸಿ. ಅದರ ಮಜ ನೋಡಿ .

Wednesday, November 12, 2008

ದೋಣಿ ಸಾಗಲಿ ಮುಂದೆ ಹೋಗಲಿ




ಸಾಲು ಸಾಲು ಬಿದಿರಿನ ಪೊದೆಗಳು, ಆಕಾಶದೆತ್ತರಕ್ಕೆ ಕೈಚಾಚಿ ನಿಂತಂತೆ ತೋರುತ್ತವೆ.. ನೂರಾರು ಜಾತಿಯ ಪಕ್ಷಿಗಳ ಕಲರವ. ಕಣ್ಣಿಗೆಟುಕುವಷ್ಟು ದೂರ ಶರಾವತಿ ನದಿಯ ಹಿನ್ನೀರು. ನೀರಿನ ಮಧ್ಯೆ ನಡುಗುಡ್ಡೆಗಳು. ನೀರಿನ ಬುಡದಲ್ಲಿ ಕಣ್ಮುಚ್ಚಿ ಕುಳಿತರೆ ಆ ನೀರವ ಮೌನ ಹಾಗೂ ತೆಕ್ಕಲಿನ ಪಟ ಪಟ ಶಬ್ಧ ಅದ್ಯಾವುದೋ ಲೋಕಕ್ಕೆ ಒಯ್ದುಬಿಡುತ್ತದೆ. ದಡದಲ್ಲಿ ಒಂದಿಷ್ಟು ದೋಣಿಗಳು ಹಾಗೆ ಸುಮ್ಮನೆ ಮಲಗಿರುತ್ತವೆ. ಒಂದು ದೋಣಿಯಲ್ಲಿ ನಾವು, ಹಾಗೂ ನೀವು ಹುಟ್ಟುಹಾಕುತ್ತಾ ಹೊರಟರೆ ಅದೇಕೋ ತನ್ನಿಂದ ತಾನೆ "ದೋಣಿ ಸಾಗಲಿ ಮುಂದೆ ಹೋಗಲಿ...." ಹಾಡು ಗುನುಗುಣಿಸಲು ಪ್ರಾರಂಭವಾಗುತ್ತದೆ. ಇದು ನಮ್ಮ ಮನೆಯಿಂದ ಎಂಟು ಕಿಲೋಮೀಟರ್ ದೂರದ ಹೊನ್ನೇಮರಡು ಎಂಬ ಪ್ರವಾಸಿ ತಾಣದ ಮಜ.

ನಾನು ತಿಂಗಳಿಗೊಮ್ಮೆಯಾದರೂ ಹೊನ್ನೆಮರಡುವಿಗೆ ಹೋಗುತ್ತೇನೆ. ಮನೆಗೆ ಬಂದ ನೆಂಟರಿಗೆ ಆ ನೀರವ ಮೌನ ಹಕ್ಕಿಗಳ ಕಲರವ ತೋರಿಸಬೇಕೆಂಬುದು ಒಳಗಿನ ಹಂಬಲ. ಅದರ ಬಗ್ಗೆ ಅಲ್ಲಿ ಬಂದು ಸೇರುವ ಜೇನುಗಳ ಬಗ್ಗೆ, ಜೇನಿನ ಜೀವನದ ಬಗ್ಗೆ, ಬಿದಿರಿನ ಮೊಳೆಗಳಿಗೆ ಅಲ್ಲಷ್ಟೇ ಜಾಗದಲ್ಲಿ ಕಟ್ಟೆರೋಗ ಬಾರದಿರುವುದಕ್ಕೆ ಕಾರಣ ಹೇಳಿ ಕೊರೆಯಬೇಕು ಅನ್ನಿಸುತ್ತಿರುತ್ತದೆ. ಆದರೆ ಅವರ್ಯಾರಿಗೂ ಅದು ಬೇಡ ಬೋಟ್ ರೈಡಿಂಗ್ ಅವರುಗಳು ಇಷ್ಟಪಡುತ್ತಾರೆ ಇನ್ನು ಕೆಲವರು ಜಾಕೆಟ್ ಹಾಕಿಕೊಂಡು ಸ್ವಿಮ್ಮಿಂಗ್ ಇಷ್ಟಪಡುತ್ತಾರೆ. ಸರಿ ಅವರಿಗಿಷ್ಟವಾದದ್ದು ಅವರಿಗೆ ಎಂದುಕೊಳ್ಳುತ್ತಾ ಸ್ವಾಮಿಯ ಬಳಿ ಜಾಕೆಟ್ ಗಾಗಿ ಅಥವಾ ಬೋಟಿಂಗ್ ಗಾಗಿ ಹಲ್ಲುಗಿಂಜುತ್ತೇನೆ. ಸ್ವಾಮಿಯೆಂಬ ಸ್ವಾಮಿ ಅಸಾದ್ಯ ವ್ಯಕ್ತಿತ್ವದ ಮನುಷ್ಯ. ಬೆಂಗಳೂರಿನ ಧಾವಂತದ ಬದುಕು ಬಿಟ್ಟು ಇಲ್ಲಿ ಅದೇನನ್ನೋ ಸಾಧಿಸಿದ್ದಾರೆ. ಪ್ರಪಂಚಕ್ಕೆ ಹೊನ್ನೇಮರಡುವನ್ನು ಪರಿಚಯಿಸಿದ್ದಾರೆ. ಪರಿಸರ ಪ್ರವಾಸೋದ್ಯಮವನ್ನು ಬೆಳಸಿದ್ದಾರೆ ಒಂದಿಷ್ಟು ಜಾಗದಲ್ಲಿ ಅದ್ಬುತ ಕಾಡನ್ನು ಬೆಳಸಿದ್ದಾರೆ, ಅದು ಅತ್ಯಂತ ಸಹಜವಾಗಿದೆ ಅದರ ಜತೆ ಜತೆ ಯಲ್ಲಿ ನೇರ ನಿಷ್ಟುರ ವರ್ತನೆಯಿಂದ ಸ್ಥಳೀಯ ಜನರನ್ನು ನಿಷ್ಠೂರ ಮಾಡಿಕೊಂಡಿದ್ದಾರೆ. ಸಾಧಾರಣ ಲುಂಗಿ ಪಂಚೆಯಲ್ಲಿ ಓಡಾಡುವ ಸ್ವಾಮಿ ಮತ್ತು ಅಷ್ಟೇ ಸಹಜವಾದ ಧಿರಿಸಿನ ಅವರ ಪತ್ನಿ ನೊಮಿಟೋ( ಈಕೆ ಗುಜಾರಾತಿ ಮಹಿಳೆ) ರನ್ನು ನೋಡಿದರೆ ಇವರಿಗೆ ಕನ್ನಡ ಬಿಟ್ಟು ಬೇರೆ ಭಾಷೆಯೂ ಬಾರದು ಅಬ್ಬೆಪಾರಿಗಳು ಅಂತ ಅನ್ನಿಸುವುದು ಸಹಜ. ಆದರೆ ವಾಸ್ತವ ಹಾಗಲ್ಲ ಅವರಿಗೆ ಬಾರದ ಭಾಷೆಗಳಿಲ್ಲ ಆದರೆ ವೃಥಾ ಮಾತನಾಡರು ಅಷ್ಟೆ. ಈ ದಂಪತಿಗಳಿಬ್ಬರು ಪ್ರಥಮ ಪರಿಚಯದಲ್ಲಿ ಒರಟರಂತೆ ಅನ್ನಿಸಿದರೂ ನಂತರದ ದಿನಗಳಲ್ಲಿ ಆತ್ಮೀಯರಾಗಿಬಿಡುತ್ತಾರೆ. ಪಟ್ಟಣದಲ್ಲಿ ಸಾಫ್ಟಾಗಿ ಸೂಪರ್ರಾಗಿ ಕಳೆಯಬಹುದಾಗಿದ್ದ ಜೀವನವನ್ನು ಚಾಲೆಂಜ್ ಎಂದು ಈ ಕಾಡನ್ನು ಆಯ್ಕೆಮಾಡಿಕೊಂಡಿರುವ ಈ ವಿದ್ಯಾವಂತ ದಂಪತಿಗಳು ನನಗೆ ಅಚ್ಚರಿಯ ಮೂಟೆ.

ಇರಲಿ ಇದು ಅವರ ಕಥೆಯಾಯಿತು ಈಗ ನಮ್ಮ ಕಥೆಗೆ ಬರೋಣ. ನಾನು ಸ್ವಾಮಿಯಬಳಿ ನಮ್ಮ ಮನೆಗೆ ಅತಿಥಿಗಳು ಬಂದಿದ್ದಾರೆ ಅವರಿಗೆ ಹೊನ್ನೆಮರಡುವಿನಲ್ಲಿ ಈಜಲು ಜಾಕೆಟ್ ಬೇಕಿತ್ತು ಎಂದು ಕೇಳಿದಾಗೆಲ್ಲಾ ಅಯ್ಯೋ ಬನ್ನಿ ಸ್ವಾಮಿ ಎಂದು ಒಕೆ ಕೊಡುತ್ತಾರೆ. ಆವಾಗ ನಾನೂ ನಮ್ಮ ಅತಿಥಿಗಳ ಜತೆ ಸೇರಿಕೊಂಡು ಮೀನಾಗುತ್ತೇನೆ. ನೀರಿಗೆ ಬೋಟಿನಿಂದ ದುಡುಂ ದುಡುಂ ಎಂದು ಹಾರಿ ಮಜ ಉಢಾಯಿಸುತ್ತೇನೆ. ನೀರಿನಿಂದೆದ್ದು ಗಡಗಡ ನಡುಗಿ ಸ್ವಲ್ಪ ಹೊತ್ತಿನಲ್ಲಿ ಮತ್ತೆ ಧುಮುಕುತ್ತೇನೆ. ಅಲ್ಲಿ ಹೀಗೆ ಇದ್ದಷ್ಟು ಹೊತ್ತು ಪ್ರಪಂಚ ಮರೆಯುತ್ತೇನೆ. ಜತೆಗೆ ಬಂದವರು ನೂರಾರು ಫೋಟೋ ಕ್ಲಿಕ್ಕಿಸುತ್ತಾರೆ ಎಲ್ಲರಿಗೂ ಮಜವೋ ಮಜ. ಈಜಾಡಿ ಸ್ವಾಮಿ ಉಳಿದುಕೊಳ್ಳಲು ಮಾಡಿಕೊಂಡ ಮನೆಯ ಬಳಿಯಿರುವ ರೌಂಡ್ ಗೆ ಬಂದು ಕುಳಿತುಕೊಂಡರೆ ಮಂಜುಳ ಘಮ ಘಮ ಪರಿಮಳದ ಚಾ ಕೊಡುತ್ತಾಳೆ. ಸಾರ್ ಸಾರ್ ಟಿ ಚೆನ್ನಾಗಿದೆಯಾ ಎಂದು ಹತ್ತು ಸಾರಿ ಕೇಳುವ ಮಂಜುಳಳ ಆತ್ಮೀಯತೆ ಚಾ ಕ್ಕಿಂತಲೂ ಉತ್ತಮ. ನನ್ನ ಮಗನ ಖುಷಿಯಂತೂ ಕೇಳುವುದೇ ಬೇಡ. ಅಲ್ಲಿಯ ತರಬೇತುದಾರರೆಲ್ಲ ಅವನ ದೋಸ್ತಿಗಳು. ಹೀಗೆ ತಿಂಗಳಿಗೊಮ್ಮೆಯಾದರೂ ನನ್ನ ಹೊನ್ನೆಮರಡುವಿನ ಯಾತ್ರೆ ನಡೆಯುತ್ತಿರುತ್ತದೆ. ಆ ಪೃಕೃತಿಯ ನಡುವೆ ಒಂದಿಷ್ಟು ಸಮಯ ಕಳೆದು ಬರುವುದಿದೆಯಲ್ಲ ಅದು ಅದ್ಬುತ. ಅಲ್ಲಿದ್ದಷ್ಟು ಹೊತ್ತು ಪ್ರಪಂಚ ಮರೆಯಬಹುದು.

ಇದಿಷ್ಟು ನನ್ನ ಕಥೆಯಾಯಿತು. ಈಗ ನಿಮ್ಮ ಸರದಿ ಒಮ್ಮೆ ಇತ್ತ ಕಡೆ ಬಂದಾಗ ಬನ್ನಿ ಹೊನ್ನೆಮರಡುವಿಗೆ ಹೋಗಿ ಬರೋಣ. ನೀವೂ ದುಡಿದು ದುಡಿದು ಹೈರಾಣಾಗಿದ್ದೀರಿ ಎಂದು ನನಗೆ ತಿಳಿದಿದೆ. ಆ ದುಡಿಮೆ ಎನ್ನುವುದು ಎಷ್ಟಾದರೂ ಮುಗಿಯದು. ಎಂಟು ಲಕ್ಷ ಡೆಪಾಸಿಟ್ ಮಾಡುವಷ್ಟರಲ್ಲಿ ಹತ್ತು ಲಕ್ಶಕ್ಕೆ ಮನಸ್ಸು ಹಾತೊರೆಯುತ್ತದೆ. ಹತ್ತು ಲಕ್ಷ ಸೇರುವಷ್ಟರಲ್ಲಿ ಇಪ್ಪತ್ತು ಲಕ್ಷದ ಯೋಚನೆ ಮನಸ್ಸಿನಲ್ಲಿ ಜತೆಗೆ ಅವನನ್ನು ನೋಡು ಅಷ್ಟು ಹಣ ಮಾಡಿದ ಎನ್ನುವ ಯೋಚನೆ ಹೀಗೆ ಮುಗಿಯದ ಕಥೆ ಅದು. ದುಡಿಮೆ ಧಾವಂತ ವನ್ನೆಲ್ಲಾ ಬದಿಗಿಟ್ಟು ಹೊನ್ನೆಮರಡುವಿನ ನೀರವ ಮೌನದಲ್ಲಿ ಮಿಂದೆದ್ದು ಹೋಗಿ. ನಾನೂ ಇರಬೇಕೆಂದಿಲ್ಲ ನೀವೆ ಬಂದು ಹೋಗಬಹುದು. ಕಾರಣ ನನ್ನ ಒಂದಿಷ್ಟು ಕೊರೆತವನ್ನು ತಪ್ಪಿಸಿಕೊಳ್ಳಬಹುದು . ಏನಂತೀರಿ?

ಕೊನೆಯದಾಗಿ: ಜನರೆಲ್ಲ ಜೀವನಕ್ಕಾಗಿ ದುಡಿಯುತ್ತಿದ್ದಾರೋ? ಹಣಕ್ಕಾಗಿ ದುಡಿಯುತ್ತಿದ್ದಾರೋ? ದುಡಿಮೆಗಾಗಿ ದುಡಿಯುತ್ತಿದ್ದಾರೋ? ಎಂದು ಆನಂದರಾಮಶಾಸ್ತ್ರಿಗಳಲ್ಲಿ ಕೇಳಿದೆ. ಶೂನ್ಯದಿಂದ ಆರಂಭ, ಆರೋಗ್ಯವನ್ನೂ ಲೆಕ್ಕಿಸದೆ ಸಂಪಾದನೆ. ನಂತರ ಸಂಪಾದಿಸಿದ್ದೆಲ್ಲ ಕಳೆದುಕೊಂಡಿದ್ದಕ್ಕೆ ವ್ಯಯ. ಮತ್ತೆ ಶೂನ್ಯದಲ್ಲಿ ಅಂತ್ಯ. ಎನ್ನುವ ವಿಚಿತ್ರ ಉತ್ತರ ಕೊಟ್ಟರು. ನನಗೆ ಅರ್ಥವಾಗಲಿಲ್ಲ. ನಿಮಗೆ ಅರ್ಥವಾದರೆ ಯೆಸ್ ಅನ್ನಿ ಇಲ್ಲದಿದ್ದರೆ ನನ್ನನ್ನು ಅನ್ನಬೇಡಿ.

ಟಿಪ್ಸ್: ದೀರ್ಘ ಪ್ರಯಾಣಕ್ಕೆ ಹೊರಡುವ ಮುನ್ನ ಎಳೆ ಸೌತೆ ಕಾಯಿ ತಿಂದು ಹೊರಟರೆ ಪ್ರಯಾಣದುದ್ದಕ್ಕೂ ಅಜೀರ್ಣ, ಫುಡ್ ಪಾಯಿಸನ್, ಡಿ ಹೈಡ್ರೇಷನ್ ಮುಂತಾದ ಕಿರಿ ಕಿರಿ ಇರುವುದಿಲ್ಲ.




Friday, November 7, 2008

ತುಂಬೆ ಇಳಕಲ ಬಿಳಿ ದೆವ್ವ.


ಅಮಾವಾಸೆಯಾದ್ದರಿಂದ ಎಲ್ಲೆಲ್ಲೂ ಗಾಢಾಂಧಕಾರ. ಬೆಳಕಿನ ಹುಡುಕಾಟಕ್ಕೆ ನಕ್ಷತ್ರಗಳನ್ನಾದರೂ ಅವಲಂಬಿಸೋಣ ಎಂದರೆ ಮೋಡಗಳು ಅವನ್ನು ಮರೆಮಾಚಿದ್ದವು. ಸಾಗರದಿಂದ ಕನಿಷ್ಟ ೧೨ ಕಿಲೋಮೀಟರ್ ದೂರದ ಮನೆಗೆ ಹೋಗಲು ಬಸ್ಸೂ ಇರಲಿಲ್ಲ. ಇನ್ನೇನು ಮಾಡುವುದು ಲಟಾರಿ ಸೈಕಲ್ಲೇ ಗತಿ ಎಂದು ಅನಿವಾರ್ಯವಾಗಿ ಮನೆಯತ್ತ ಪೆಡಲ್ ತುಳಿಯತೊಡಗಿದೆ. ವರದಳ್ಳಿ ಕ್ರಾಸ್ ವರೆಗೆ ಜೋಗಕ್ಕೆ ಹೋಗುವ ವಾಹನಗಳ ಬೆಳಕು ಸಿಕ್ಕಿತು. ನಂತರ ಕರ್ಕಿಕೊಪ್ಪದ ಕಡೆ ತಿರುಗಿದಾಗ ಬೆಳಕಿಲ್ಲದೆ ಕಂಗಾಲಾದೆ. ಡೈನಮೋ ದುರಸ್ತಿ ಮಾಡಲು ಹೆಣಗಿದೆ. ಬಡಪೆಟ್ಟಿಗೆ ಅದು ಬಗ್ಗಲಿಲ್ಲ ಗರಗರ ಸದ್ದು ಬಂತೇ ಹೊರತು ಬೆಳಕು ಬರಲಿಲ್ಲ. ಬೆಳಕು ಇಲ್ಲದ ಸೈಕಲ್ ತುಳಿಯುವುದೊಂದೇ ಅನಿವಾರ್ಯ.ಕಣ್ಣು ನಿಧಾನ ಕತ್ತಲೆಗೆ ಹೊಂದಿಕೊಂಡಿತು. ತುಳಿಯುತ್ತಾ ಸಾಗಿದೆ. ಕರ್ಕಿಕೊಪ್ಪ ದಾಟಿದ ಮೇಲೆ ಬೆಂಕಟವಳ್ಳಿತನಕ ಘಟ್ಟದ ರಸ್ತೆ ನಂತರ ಭರ್ಜರಿ ಇಳಿಜಾರು. ಘಟ್ಟದಲ್ಲಿ ಸೈಕಲ್ ತುಳಿಯಲಾರದೆ ದಬ್ಬಿಕೊಂಡು ಹೊರಟೆ. ಸೈಕಲ್ ಘಟ್ಟದಲ್ಲಿ ದಬ್ಬಿ ದಬ್ಬಿ ಬೆವರು ಗುದುಕುತ್ತಿತ್ತು . ಅಂತೂ ಇಂತೂ ಸುರಿವ ಬೆವರಿನೊಡನೆ ಘಟ್ಟದ ರಸ್ತೆ ಮುಗಿಯಿತು. ಇಳಿಜಾರು ಪ್ರಾರಂಭವಾದ್ದರಿಂದ ಸ್ವಲ್ಪ ಹಿತ . ಪೆಡಲ್ ಮಾಡದೆ ೨ ಕಿಲೋಮೀಟರ್ ಸಾಗಬಹುದು ಎಂದು ಆಲೋಚಿಸುತ್ತಾ ಸೈಕಲ್ ಹತ್ತಿ ಕುಳಿತು ಒಂದೆರಡು ಮಾರು ದೂರ ಸಾಗಿದ್ದೆ. ಇದ್ದಕ್ಕಿದ್ದಂತೆ ಪಳಕ್ಕನೆ ಸೈಕಲ್ ಡೈನಮೋ ಹತ್ತಿಕೊಂಡಿತು. ಅನಿರೀಕ್ಷಿತವಾದ ಆಘಾತಕ್ಕೆ ಬೆಚ್ಚಿದೆ. ನಂತರ ತುಸು ಸಾವಾರಿಸಿಕೊಂಡು ತನ್ನಿಂದತಾನೆ ಹತ್ತಿರಬೇಕೆಂದು ಆಲೋಚಿಸುತ್ತಾ ಮುಂದೆ ಸಾಗಿದೆ. ಸ್ವಲ್ಪ ದೂರ ಹೋಗುವಷ್ಟರಲ್ಲಿ ಹಿಂದಿನ ಸೀಟಿನಲ್ಲಿ ಯಾರೋ ಕುಳಿತುಕೊಂಡ ಅನುಭವಾಯಿತು. ನನ್ನ ಸೊಂಟದ ಬಳಿ ಬಿಳಿಯದಾದ ಎರಡು ಉದ್ದನೆಯ ಕೈಗಳು ನೇತಾಡುತ್ತಿದ್ದವು. ಒಮ್ಮೆಲೆ ಮೈ ಮರಗಟ್ಟಿದ ಅನುಭವವಾಯಿತು. ಈಗ ನನಗೆ ಸೈಕಲ್ ಡೈನಾಮೋ ತನ್ನಿಂದ ತಾನೆ ಹತ್ತಿಕೊಂಡದ್ದರ ರಹಸ್ಯ ತಿಳಿಯಿತು. ಘಟ್ಟದ ರಸ್ತೆಯಲ್ಲಿ ಸೈಕಲ್ ದಬ್ಬುವಾಗಲೂ ಅಷ್ಟೊಂದು ಬೆವರು ಗುದುಕಿರಲಿಲ್ಲ. ಅಂಗಿ ಚೊಣ್ಣ ಎಲ್ಲೂ ಎಲ್ಲೆಲ್ಲೂ ನೀರು ದುಮ್ಮಿಕ್ಕುತ್ತಿದೆ. ಯಾವ ರಗಳೆಯೂ ಬೇಡ ಸೈಕಲ್ ನಿಲ್ಲಿಸಿ ಬಿದ್ದು ಓಡಿಬಿಡೋಣ ಎಂದು ಬ್ರೆಕ್ ಹಾಕಿದೆ. ಇಲ್ಲ ಬ್ರೇಕ್ ಎಷ್ಟು ಗಟ್ಟಿಯಾಗಿ ಅಮುಕಿದರೂ ಅದು ಕೆಲಸ ಮಾಡುತ್ತಿಲ್ಲ. ಕಾಲನ್ನಾದರೂ ನೆಲಕ್ಕೆ ಊರೊಣ ಎಂದರೆ ಕಾಲು ಸೈಕಲ್ ಪೆಡಲ್ಲಿಗೆ ಅಂಟಿಕೊಂಡಿದೆ. ಇಷ್ಟಾದ ಮೇಲೆ ನನಗೆ ಮನವರಿಕೆಯಾಯಿತು ಇಷ್ಟು ದಿವಸ ನಾನು ಚೌಡಿ ಭೂತ ದೆವ್ವ ಎನ್ನುವುದೆಲ್ಲಾ ಬೋಗಸ್ ಎನ್ನುತ್ತಿದ್ದೆ. ಆದರೆ ಇಂದು ಸ್ವಯಂ ನನಗೆ ಅನುಭೂತಿಯಾಗುತ್ತಿದೆ. ಮಾಡುವುದೇನು? ಎಂದು ತೋಚುತ್ತಿಲ್ಲ. ಒಂದೇಸವನೆ ಗಾಯಿತ್ರಿ ಮಂತ್ರ ಹೇಳಲೆತ್ನಿಸಿದೆ. ಆದರೆ ಅರ್ದದ ವರೆಗೆ ಗಾಯಿತ್ರಿ ಮಂತ್ರ ಬಂತು ಮುಂದೆ ನೆನಪಾಗುತ್ತಿಲ್ಲ. ಇಲ್ಲ ಇವೆಲ್ಲ ಸತ್ಯ ಅಲ್ಲ ನಾನು ಭ್ರಮೆಗೊಳಗಾಗಿದ್ದೇನೆ ಎಂದು ಹೊರಮನಸ್ಸಿಗೆ ಧೈರ್ಯ ತುಂಬಿಸಲೆತ್ನಿಸಿದೆ. ಅಷ್ಟರಲ್ಲಿ ನನ್ನ ಕಿರುಗಣ್ಣಿಗೆ ಕಾಣುತ್ತಿದ್ದ ಬಿಳಿಯ ಕೈಗಳದ್ದೇ ಇರಬೇಕು ಧ್ವನಿ ಹೊರಟಿತು. "ಹ ಹ ಹ ಮೂರ್ಖ ನಿನ್ನ ಪ್ರಯತ್ನ ಬಿಡು, ". ಈಗ ಮಾತ್ರ ಇವ್ಯಾವುದೂ ನನ್ನ ಭ್ರಮೆಯಲ್ಲ ಎಂಬುದು ಅರಿವಿಗೆ ಬಂತು. ತಿರುಗಿ ನನ್ನ ಹಿಂದೆ ಕುಳಿತಿರುವುದು ಏನು ಎಂದು ನೋಡಿಬಿಡೋಣ, ಎಂಬ ಭಯಮಿಶ್ರಿತ ಕುತೂಹಲದಿಂದ ತಿರುಗಲೆತ್ನಿಸಿದೆ ಆದರೆ ಕುತ್ತಿಗೆ ತಿರುಗುತ್ತಿಲ್ಲ. ಯಾರೋ ಹಿಂದಿನಿಂದ ಕುತ್ತಿಗೆ ಒತ್ತಿ ಹಿಡಿದಂತೆ ಆಯಿತು. ಜತೆಗೆ ಹಿಂದಿನ ದನಿ ಹೇಳಿತು " ಮೂರ್ಖ ತಿರುಗಿ ನನ್ನನ್ನೇನು ನೋಡುತ್ತೀ... ಮುಂದೆ ನೋಡು ಅಲ್ಲೇನಿದೆ ಅಂತ" ಎಂದಿತು. ನನ್ನ ಸೈಕಲ್ಲಿನ ಅನತಿ ದೂರದಲ್ಲಿ ಕಾಲೇ ಇಲ್ಲದ ವಿಕಾರ ಮುಖದ ಆಕೃತಿ ಸೈಕಲ್ ಜತೆಜತೆಗೆ ತೇಲುತ್ತಾ ಬರತೊಡಗಿತು. ಅಮ್ಮಾ ಇದ್ಯಾವ ಮಾಯೆ. ದೆವ್ವ ಅಂಬೋದು ಮನುಷ್ಯ ಸೃಷ್ಟಿ ಎಂದು ನಾಸ್ತಿಕ ವಾದ ಮಾಡಿ ಎಲ್ಲರನ್ನೂ ಸೋಲಿಸುತ್ತಿದ್ದ ನನಗೆ ಇಂಥಹಾ ಅನುಭವ ವಾಯಿತಲ್ಲ. ಏನು ಮಾಡಲಿ ಈಗ ಒಟ್ಟಿನಲ್ಲಿ ಇನ್ನು ನಾನು ಬದುಕಲಾರೆ ಎನ್ನುವ ಹಂತ ತಲುಪಿದೆ. ಅಂತಿಮವಾಗಿ ಶ್ರೀಧರ ಸ್ವಾಮಿಗಳು ನೆನಪಾದರು. "ಶ್ರೀಧರ ಸ್ವಾಮಿ ಕಾಪಾಡು ತಂದೆ" ಎಂದು ಕಿರುಚಿಕೊಂಡೆ. ಮರುಕ್ಷಣ ಎಲ್ಲಾ ಮಾಯವಾಯಿತು. ನಾನು ನನ್ನ ಬಡಕಲು ಸೈಕಲ್ ನಲ್ಲಿ ಘಟ್ಟದ ರಸ್ತೆಯ ಆರಂಭದಲ್ಲಿ ಇದ್ದೆ. ಇಷ್ಟೊತ್ತು ಕಂಡಿದ್ದು ಭ್ರಮೆ ಎನ್ನುವಷ್ಟರಮಟ್ಟಿಗೆ ಎಲ್ಲ ತಿಳಿಯಾಗಿತ್ತು. ಶ್ರೀಧರ ಸ್ವಾಮಿಗಳ ಮಹಿಮೆ ನೆನೆದು ಪುಳಕಿತನಾದೆ. ಎಲ್ಲರೀಗೂ ಈ ಸತ್ಯದ ಘಟನೆ ಹೇಳಬೇಕೆಂದುಕೊಂಡು ಸುಲಲಿತವಾಗಿ ಮನೆ ಸೇರಿದೆ.
ಇದೊಂದು ಘಟನೆ ನಡೆದು ಸುಮಾರು ನಲವತ್ತು ವರ್ಷಗಳು ಸಂದಿವೆ. ಈಗ ವಾಸ್ತವದ ಕತೆ ಹೇಳುತ್ತೇನೆ. ಮೇಲೆ ನಿಮಗೆ ವಿವರಿಸಿದ ಅನುಭವ ನನ್ನದಲ್ಲ. ನನ್ನ ಬಾಲ್ಯದಲ್ಲಿ ಸುಬ್ಬಣ್ಣ ಎಂಬ ನನಗೆ ವಾರಿಗೆಯಲ್ಲಿ ಅಣ್ಣನಾದವನ ಕಥೆ ಇದು. ನಮ್ಮನ್ನೆಲ್ಲಾ ಸುತ್ತು ಕೂರಿಸಿಕೊಂಡು ಇಂತಹ ಹಸಿ ಹಸಿ ಸುಳ್ಳಿನ ಕತೆಗಳನ್ನು ತೇಲಿಬಿಡುತ್ತಿದ್ದ. ನಮಗೆಲ್ಲಾ ಅವನು ಕಥೆ ವಿವರಿಸುವ ಪರಿಯಿಂದ ಮೈಮೇಲೆ ಮುಳ್ಳುಗಳು ಏಳುತ್ತಿದ್ದವು. ಅವನು ಇವನ್ನೆಲ್ಲಾ ಗೆದ್ದ ವೀರನಂತೆ ತೋರುತ್ತಿದ್ದ. ಹಾಗಾಗಿ ಮನಸ್ಸಿನ ಮೂಲೆಯಲ್ಲಿ ಈ ದೆವ್ವ ಭೂತಗಳು ಅಚ್ಚೊತ್ತಿ ಕುಳಿತು ಬಿಟ್ಟಿದೆ. ಅವೆಲ್ಲಾ ಪರಮ ಸುಳ್ಳು ಎಂದು ತಿಳಿದ್ದಿದ್ದರೂ ಹುಲ್ಕೋಡಿಗೆ ಹೋಗುವಾಗ ಕರ್ಕಿಕೊಪ್ಪ ದಾಟಿದಮೇಲೆ ತುಂಬೆ ಇಳಕಲು ಇಳಿಯುವಾಗ ಸುಬಣ್ಣನ ಕಥೆಗಳು ನೆನಪಾಗುತ್ತವೆ. ಅಕಸ್ಮಾತ್ ರಾತ್ರಿಯಾಗಿದ್ದರೆ ಒಂದು ಕ್ಷಣ ಮೈಮೇಲೆ ಮುಳ್ಳುಗಳೆದ್ದು ಮಾಯವಾಗುತ್ತದೆ. ಸುಬ್ಬಣ್ಣ ಹೀರೋ ಆಗಲು ಹೋಗಿ ಇಂತಹ ಓಳಿನ ಕಥೆಗಳು ಬಾಲ್ಯದಲ್ಲಿ ಸ್ವಲ್ಪ ಯಡವಟ್ಟು ನಂಬಿಕೆಗಳು ಉಳಿದಿವೆ. ಆದರೆ ನಾನಂತೂ ಸಣ್ಣ ಹುಡುಗರಿಗೆ ಇಂತಹ ಕಥೆಗಳನ್ನು ಹೇಳುವುದಿಲ್ಲ. ನೀವೂ ಹಾಗೆಯೇ ಅಂತ ಅಂದುಕೊಂಡಿದ್ದೇನೆ. ಅವು ತುಂಬಾ ತುಂಬಾ ದುಷ್ಪರಿಣಾಮ ಮಾಡಿಬಿಡುತ್ತವೆ. ಏನಂತೀರಿ.?
ಕೊನೆಯದಾಗಿ: ಭೂತ ದೆವ್ವ ವೆಂಬುದು ಭ್ರಮೆಯೋ ..ವಾಸ್ತವವೋ ..? ಎಂದು ಆನಂದರಾಮ ಶಾಸ್ತ್ರಿಗಳನ್ನು ಕೇಳಿದೆ. ಅದಕ್ಕವರು ಭೂತವೆಂಬುದು ವಾಸ್ತವ ದೆವ್ವವೆಂಬುದು ಭ್ರಮೆ ಎಂದುತ್ತರಿಸದರು, ನಾನು ಬೂತವನ್ನು ಹೊಡೆದು ಪ್ರಶ್ನೆ ಕೇಳಿದ್ದರಿಂದ ಅಂತಹ ಉತ್ತರ ಬಂತು. ಮತ್ತೆ ಮರುಪ್ರಶ್ನಿಸಲಿಲ್ಲ.
ಟಿಪ್ಸ್: ಹುಳುಕು ಹಲ್ಲಿನ ಕಾಟ ತಪ್ಪಿಸಿಕೊಳ್ಳಲು ಎಲೆ ಅಡಿಕೆ ಜತೆ ತಂಬಾಕನ್ನು ಅಗಿಯಿರಿ. ಇದರಿಂದಾಗಿ ತಂಬಾಕು ಹಾಕುವುದಕ್ಕೆ ಕಾರಣ ಸಿಗುವುದು ಸುಲಭವಾಗುತ್ತದೆ
ಅಂತಿಮವಾಗಿ : ಸುಶ್ರುತ ದೊಡ್ಡೇರಿಯವರು ಬರೆದ ಸಂಪಿಗೆ ಮರದ ಬರಹವನ್ನು ಇದು ಹೋಲುತ್ತದೆ ಎಂಬ ಕಾಮೆಂಟ್ ಮಾಡಿದ್ದಾರೆ. ಹೋಲುವುದು ನಿಜ. ಅದನ್ನು ಅಂದು ಓದಿದ ನಾನು ಇದನ್ನು ಬರೆಯಬೇಕೆಂದು ಅಂದೇ ತೀರ್ಮಾನಿಸಿದ್ದೆ. ಆದರೆ ಇಂದು ತದ್ಗತ್ ಆಯಿತು.

Friday, October 31, 2008

ಜೇನಿನಂತ ಜೇನು ಕೊನೆಯಲ್ಲಿ ಕನ್ನಡ




ನವೆಂಬರ್ ತಿಂಗಳು ಬಂತೆಂದರೆ ನನಗೆ ದಿನಾಲೂ ಜೇನು ಪೆಟ್ಟಿಗೆಯನ್ನು ನೋಡುವ ಕೆಲಸ ಆರಂಭವಾಗುತ್ತದೆ. ಮಳೆಗಾಲದ ಅಬ್ಬರ ಕಳೆದು ತಣ್ಣನೆಯ ಚಳಿ ಕೊರೆಯಲು ಆರಂಭವಾಗುವ ಈ ದಿನಗಳಲ್ಲಿ ವಾತಾವರಣ ಆಹ್ಲಾದಕರ. ಮಲಗಿದ್ದವನ ಹಿಡಕೊಂಡೆ ಎದ್ದವನಿಂದ ಒದೆಸಿಕೊಂಡೆ ಎನ್ನುವುದು ಚಳಿಯ ಧ್ಯೇಯ ವಾಕ್ಯ. ಹಪ್ಪರೆ ಮೈನವರಿಗೆ ಮೈಯೆಲ್ಲಾ ಉರಿಉರಿ. ಕೊಬ್ಬರಿ ಎಣ್ಣೆ ಹಾಕಿ ತಿಕ್ಕಿ ತಿಕ್ಕಿ ಸಾಫ್ ಮಾಡಬೇಕು. ಅಂತಹ ಚಳಿಗಾಲದಲ್ಲಿ ಜೇನುಪೆಟ್ಟಿಗೆಯಲ್ಲಿ ಅದೊಂದು ನಿರ್ಧಾರ ಮೊಳಕೆಯೊಡೆಯುತ್ತದೆ. ರಾಣಿ ಎಂಬ ಹೆಣ್ಣು ನೊಣ ತನ್ನ ಆ ನಿರ್ಧಾರವನ್ನು ಕೆಲಸಗಾರ ನೊಣಕ್ಕೆ ರವಾನಿಸುತ್ತದೆ. ಆ ನಿರ್ಧಾರ ಯಾವುದೆಂದು ಕೇಳಿದಿರಾ..? ಅದೇ ನಮ್ಮ ವಂಶದ ರಥ ಮುಂದುವರೆಯಲು ಗಂಡಿನ ಅವಶ್ಯಕತೆಯಿದೆ ಗಂಡು ಮೊಟ್ಟೆಯನ್ನಿಡಿ. ನಾನಿಡುವ ಲಾರ್ವಾ ಗಂಡು ನೊಣವಾಗಬೇಕು ಹಾಗಾಗಿ ಅದಕ್ಕೆ ಗಂಡುನೊಣವಾಗುವ ಆಹಾರ ನೀಡಿ. ಎಂದು ಫರ್ಮಾನು ಹೊರಡಿಸುತ್ತದೆ. ಜೂನ್ ತಿಂಗಳಿನಿಂದ ಗೂಡಿನಿಂದ ಅಕ್ಷರಶಃ ಮಾಯವಾಗಿದ್ದ ಗಂಡು ನೊಣಗಳು ನವೆಂಬರ್ ಹದಿನೈದು ಇಪ್ಪತ್ತರ ಹೊತ್ತಿಗೆ ಒಂದೊಂದೆ ಜೇನಿನ ಪ್ರಪಂಚದಲ್ಲಿ ಕಣ್ಣುಬಿಡಲಾರಂಭಿಸುತ್ತವೆ. ಜೇನಿನ ಪ್ರಪಂಚದಲ್ಲಿ ಗಂಡು ಎಂಬುದು ಕೇವಲ ಸಂತಾನೋತ್ಪತ್ತಿಯ ಕೆಲಸಕ್ಕೆ ಸೀಮಿತ. ಒಂದು ಗೂಡಿನ ಒಂದು ನೊಣಕ್ಕೆ ಆ ಭಾಗ್ಯ. ಅದು ಭಾಗ್ಯವೆನ್ನುತ್ತೀರೋ ಅಥವಾ ಅಬ್ಬಾ ಅನ್ನುತ್ತೀರೋ ಅದು ನಿಮಗೆ ಬಿಟ್ಟ ವಿಚಾರ. ಈಗ ಕತೆಗೆ ಬರೊಣ. ಹೀಗೆ ನವೆಂಬರ್ ತಿಂಗಳು ಮುಗಿಯುವ ಹೊತ್ತಿಗೆ ನೂರಾರು ಗಂಡು ನೊಣಗಳು ಪ್ರಾಯಕ್ಕೆ ಬಂದುಬಿಡುತ್ತವೆ. ಆವಾಗ ರಾಣಿ ನೊಣ ತನ್ನ ಕೆಲಸಗಾರ ನೊಣಗಳಿಗೆ ಮತ್ತೊಂದು ಫರ್ಮಾನು ಹೊರಡಿಸುತ್ತದೆ. ನಾವು ಈಗ ಹಿಸ್ಸೆ ಮಾಡಿಕೊಳ್ಳಬೇಕು, ಆ ಕಾರಣದಿಂದ ಹಿಸ್ಸೆಯಾಗಬೇಕು ಎಂದಾದಾಗ ಯಜಮಾನಿಕೆಗೆ ರಾಣಿ ನೊಣದ ಅವಶ್ಯಕತೆಯಿದೆ ಹಾಗಾಗಿ ನಾನು ಇಡುವ ಮೊಟ್ಟೆ ರಾಣಿಯಾಗುವಂತೆ ರಾಜಾಷಾಹಿ ಆಹಾರ ಕೊಡಿ ಎನ್ನುತ್ತದೆ. ಕೆಲಸಗಾರ ನೊಣಗಳು ತಮ್ಮ ಕುಟುಂಬದ ಎಲ್ಲಾ ನೊಣಗಳನ್ನು ಲೆಕ್ಕ ಮಾಡಿ ಎಷ್ಟು ರಾಣಿ ಮೊಟ್ಟೆಗಳನ್ನು ಇಡಬಹುದೆಂದು ಎಣಿಸಿ ಒಂದೈದು ಹೊಸ ರಾಣಿಮೊಟ್ಟೆ ಸಿದ್ಧಪಡಿಸುತ್ತವೆ. ರಾಣಿ ಮೊಟ್ಟೆ ೧೩ ರಿಂದ ೧೫ ದಿವಸಗಳೊಳಗೆ ರಾಣಿಯಾಗುತ್ತವೆ. ಅಲ್ಲಿಂದ ಹಿಸ್ಸೆ ಪ್ರಕ್ರಿಯೆ ಷುರು. ಹೊಸ ರಾಣಿ ಒಂದೊಂದಾಗಿ ಹೊರಬಂದಂತೆ ಗಂಡು ನೋಣಗಳು ಮೀಸೆಯಮೇಲೆ ಕೈ ಅಲ್ಲಲ್ಲ ಕಾಲನ್ನಿಟ್ಟು ತಿರುವಿಕೊಳ್ಳಲು ಪ್ರಾರಂಭಿಸುತ್ತವೆ. ಹೊಸರಾಣಿ ಹೊರ ಬಂದು ನಾಲ್ಕೈದು ತಾಸಿನೊಳಗೆ ಒಂದಿಷ್ಟು ಗಂಡು ನೊಣ ಹಾಗೂ ಮತ್ತೊಂದಿಷ್ಟು ಕೆಲಸಗಾರ ನೊಣವನ್ನು ಕಟ್ಟಿಕೊಂಡು ಬೇರೆ ಗೂಡಿಗೆ ರೈಟ್. ಗೂಡು ಸೇರಿ ಕೆಲಸಗಾರ ನೊಣ ತತ್ತಿಕಟ್ಟುವ ಕೆಲ್ಸ ಆರಂಬಿಸುತ್ತಿದ್ದಂತೆ ರಾಣಿ ನೊಣ ಮಿಲನ ಮಹೋತ್ಸವದ ಹಾರಾಟ ಆರಂಬಿಸುತ್ತದೆ. ಒಂದಿಷ್ಟು ಗಂಡು ನೊಣದೊಂದಿಗೆ ಎತ್ತರಕ್ಕೆ ಎತ್ತರದೆತ್ತರಕ್ಕೆ ಏರುವ ರಾಣಿ ತನ್ನಷ್ಟು ಎತ್ತರಕ್ಕೇರುವ ಒಂದೇ ಒಂದು ಗಂಡಿನೊಂದಿಗೆ ಬಾನಲ್ಲಿ ಮಧುಚಂದ್ರವನ್ನು ಆಚರಿಸುತ್ತದೆ. ರಾಣಿಯೊಡನೆ ಮಿಲನ ಹೊಂದಿದ ಮರುಕ್ಷಣ ಆ ಗಂಡುನೊಣ ಸಾವನ್ನಪ್ಪುತ್ತದೆ. ಮಿಕ್ಕ ಗಂಡು ನೊಣಕ್ಕೆ ರಾಣಿಯೊಡನೆ ಸೇರುವ ಅವಕಾಶದೊರೆಯದಿದ್ದರೂ ಜೀವದಾನವಾಗಿರುತ್ತದೆ. ಮತ್ತೆ ಜೂನ್ ತಿಂಗಳು ತನಕ ಪುಕ್ಕಟ್ಟೇ ಕೆಲಸಮಾಡದೇ ತುಪ್ಪ ತಿನ್ನುತ್ತಾ ಆರಾಮಾವಾಗಿರುವ ಯೋಗ.ಒಮ್ಮೆ ಗಂಡನ್ನು ಸೇರಿದ ರಾಣಿ ನೊಣ ಅದರ ಜೀವಿತಾವಧಿಯಾದ ಮೂರು ವರ್‍ಷಗಳ ತನಕ ನಿರಂತರ ಅವಶ್ಯಕತೆ ಇದ್ದರೆ ದಿನವೊಂದಕ್ಕೆ ಒಂದೂವರೆ ಸಾವಿರ ಮೊಟ್ಟೆಗಳವರೆಗೂ ಇಡುತ್ತಾ ಸಂಸಾರ ನಡೆಸುತ್ತದೆ. ಮತ್ತೆ ಜೂನ್ ತಿಂಗಳು ಆರಂಭವಾಗುತ್ತಿದಂತೆ ಪ್ರಕೃತಿಯಲ್ಲಿ ಜೇನಿಗೆ ಬೇಕಾದ ಆಹಾರ ಸಿಗದ ಕಾರಣ ಅನಾವಶ್ಯಕ ಗಂಡು ನೊಣಗಳ ಜೀವಕ್ಕೆ ಮೊದಲ ಕುತ್ತು. ಎಲ್ಲಾ ಗಂಡುನೊಣಗಳನ್ನು ಆಹಾರ ಕೊಡದೆ ಫಿನಿಶ್ ಮಾಡಿಬಿಡುತ್ತದೆ.ಮತ್ತೆ ನವೆಂಬರ್ ಗೆ ಹೊಸ ಸೃಷ್ಟಿ. ಇದು ಪ್ರಕೃತಿಯ ವಿಚಿತ್ರದಾಟ.

ಹಾ ಈ ಸೃಷ್ಟಿ ರಹಸ್ಯವನ್ನು ಹೆಂಗಸರಿಗೆ ಹೇಳಬೇಡಿ .....ಮತ್ತೆ ಅನುಕರಿಸಿದರೆ ನಮ್ಮ ಗತಿ... !

ನಾನು ಗಂಡು ನೊಣ ಪೆಟ್ಟಿಗೆಯಲ್ಲಿ ಕಂಡೊಡನೆ ಅವುಗಳನ್ನು ಕೃತಕವಾಗಿ ಹಿಸ್ಸೆಮಾಡಿಸಬೇಕು. ಇಲ್ಲದಿದ್ದರೆ ನೀವು ನಮ್ಮಲ್ಲಿಗೆ ಬಂದಾಗ ಕೊಡಲು ಒಂದು ತೊಟ್ಟೂ ತುಪ್ಪ ಇರುವುದಿಲ್ಲ. ಹಾಗಾಗಿ ನಿತ್ಯ ಪೆಟ್ಟಿಗೆಯ ಮುಚ್ಚಳ ತೆಗೆದು ಬಂದೆಯಾ.. ಹೀರೋ..! ಎಂದು ನೋಡುತ್ತಲಿದ್ದೇನೆ. ಜೇನಿನ ಜೀವನದಲ್ಲಿ ಇಂತಹ ಹತ್ತಾರು ಅಚ್ಚರಿಯ ವಿಷಯಗಳಿವೆ ನಮ್ಮ ನಿಮ್ಮ ಜೀವನದಲ್ಲಿ ಇರುವಂತೆ. ಆದರೂ ಅದೇನೆ ಇರಲಿ ಜೇನು ನಮ್ಮ ಕನ್ನಡಕ್ಕೂ ತುಂಬಾ ನಂಟು ಎಂಬ ಹೊಸ ವಿಚಾರವನ್ನು ಸೇರಿಸಬಹುದು. ಕಾರಣ ಕನ್ನಡ ವರ್ಷಕ್ಕೊಮ್ಮೆ ಶುರುವಾಗುವುದು ನವಂಬರ್ ಒಂದರಿಂದ ಮತ್ತು ಜೇನಿನ ಹೊಸ ಜೀವನ ಚಕ್ರದ ಚ ಟುವಟಿಕೆ ಯ ಆರಂಭವೂ ನವೆಂಬರ್ರೇ.... ಹ್ಯಾಪಿ ಕನ್ನ್ಡಡ ರಾಜ್ಯೋತ್ಸವ, ವಣಕ್ಕಂ, ನಮಸ್ಕಾರಮು.

ಕೊನೆಯದಾಗಿ: ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಇಂದು ಸಿಕ್ಕಿದೆ!ಸಿರಿಗನ್ನಡಂ ಗೆಲ್ಗೆ!ನಮ್ಮದು ಪರಿಪೂರ್ಣ ಭಾಷೆ!ಇಷ್ಟು ಪರಿಪೂರ್ಣವಾಗಿ ಬರೆಯಲು ಮತ್ತು ಉಚ್ಛರಿಸಲುಬೇರಾವ ಭಾಷೆಯಲ್ಲಿ ಸಾಧ್ಯ?
ಶಾಂತಿ ಸೌಹಾರ್ಧ ಕನ್ನಡ ನಾಡಿನಲ್ಲಿ ಮತ್ತು ನಮ್ಮ ದೇಶದಲ್ಲಿ ನೆಲೆಸಲಿ!ಇಂದು ಎಲ್ಲರಿಗೂಸಂತೋಷದ ರಾಜ್ಯೋತ್ಸವ! ಎಂದು ಪೆಜತ್ತಾಯ ಮೈಲ್ ಮಾಡಿದ್ದಾರೆ ಅವರಿಗೆ ಏನೆಂದು ಉತ್ತರಿಸಲಿ ಎಂದು ಆನಂದ ರಾಮಾ ಶಾಸ್ತ್ರಿಗಳನ್ನು ಕೇಳಿದೆ ಅದಕ್ಕವರು ಓಕೆ, ಥ್ಯಾಂಕ್ಯೂ ಸೇಮ್ ಟು ಯೂ ಅಂತ ಉತ್ತರಿಸು ಅದೇ ಸರಿಯಾದ ಕನ್ನಡ ಎಂದು ಬಿಡೋದೆ