Wednesday, October 1, 2008

ಹನಿ ಹನಿ ಇಬ್ಬನಿ


ಚುಮು ಚುಮು ಬೆಳಗಾಗುತ್ತಿದ್ದಂತೆ ಹನಿ ಹನಿ ಇಬ್ಬನಿ ಬೀಳುವ ಚಳಿಗಾಲ ಶುರುವಾಗಿದೆ. ಒಂದು ಮಂಕಿ ಕ್ಯಾಪ್ ಧರಿಸಿ ಬೆಳಿಗ್ಗಿನ ವಾಕಿಂಗ್ ಹೊರಡುವವರಿಗೆ ಮೀಸೆಯಮೇಲೆಲ್ಲಾ ಹನಿ ಹನಿ ಇಬ್ಬನಿ . ಬಾಯಿಂದ ಹೊರಡುವ ಬೆಳ್ಳನೆಯ ಹೊಗೆ ಸಿಗರೇಟು ಸೇದದಿದ್ದರೂ ಪುಕ್ಕಟೆ ಬರುತ್ತದೆ. ಮೂರ್ನಾಲ್ಕು ಕಿಲೋಮೀಟರ್ ನಡೆದು ವಾಪಾಸು ಮನೆಗೆ ಬಂದು ಒಂದು ಸೌಟು ಕೊಬ್ಬರಿ ಎಣ್ಣೆ ಬಾಯಿಗೆ ಹಾಕಿ ಪುಚುಪುಚು ಆಯಿಲ್ ಪುಲ್ಲಿಂಗ್ ಮಾಡಿ ನಂತರ ಬಿಸಿಬಿಸಿ ಕಾಫಿ ಕುಡಿದರೆ ಆಹಾ ಎಂಥ ಮಧುರಾ ಯಾತನೆ ಎಂಬ ಹಾಡು ಗುಣುಗುಣಿಸಬಹುದು. ಆರೋಗ್ಯದ ಬಗ್ಗೆ ಪಕ್ಕದ ಮನೆಯವರೊಡನೆ ಗಂಟೆಗಟ್ಟಲೆ ಭಾಷಣ ಬಿಗಿಯಬಹುದು. ನಂತರ ಬಿಸಿಬಿಸಿ ದೋಸೆ ಆಮೇಲೆ ಆಫೀಸ್ ಇದ್ದರೆ ಅದರ ಕತೆ ಬೇರೆ. ಇದು ಸಿಟಿ ಜೀವನದ ಕತೆಯಾಯಿತು. ನಮಗೆ ನಮ್ಮಂತ ಹಳ್ಳಿಯಲ್ಲಿ ಕೂತವರಿಗೆ ಇದು ಮಹದಾನಂದದ ಕಾಲ.....!. ಬೆಳಿಗ್ಗಿನ ಚಳಿಗೆ ಏಳಲಾರದೆ ಎದ್ದು ಕೊಟ್ಟಿಗೆಗೆ ಹೋಗಿ ಕಮಟು ವಾಸನೆಯ ಸಗಣಿ ಬಾಚಬೇಕು. ಚಳಿಗಾಲ ಬಂತೆಂದರೆ ಆಕಳುಗಳು ಇಡಿ ಮೈಯನ್ನು ರಾಡಿ ಮಾಡಿಕೊಂಡು ಬಿಡುತ್ತವೆ. ಬೆಚ್ಚನೆಯ ಸಗಣಿಯ ಮೇಲೆ ಹೊರಳಿ ಹೊಳ್ಯಾಡಿ ದೇಹದ ತಾಪಮಾನವನ್ನು ಹೆಚ್ಚಿಸಿಕೊಳ್ಳುವ ಅವುಗಳ ಯತ್ನದಲ್ಲಿ ನಮಗೆ ಹಾಲು ಹಿಂಡಲು ಬರಲಾರದಷ್ಟು ರಾಡಿ. ಅವುಗಳ ಮೈ ತೊಳಸಿಯೇ ಹಾಲು ಕರೆಯಬೇಕು. ನಾವು ಇಂದು ಹಾಲು ಕರೆದು ಡೈರಿಗೆ ಹಾಕದಿದ್ದರೆ ನಾಳೆ ಸಿಟಿಯಲ್ಲಿ ವಾಕಿಂಗ್ ಮುಗಿಸಿ ಬಂದವರಿಗೆ ಬಿಸಿಬಿಸಿ ಕಾಫಿ ಇರುವುದಿಲ್ಲ ಎಂಬ ಕಾಳಜಿಯಿಂದ ನಾವೇನು ಕರೆಯುತ್ತಿಲ್ಲ. ಹೀಗೆ ಹಾಲು ಹಾಕಿ ನಾಲ್ಕಾರು ಕಾಸು ಕಂಡು ಅದರಿಂದ ನಮ್ಮ ಮಕ್ಕಳಾದರೂ ಸಿಟಿಯ ವಾಕಿಂಗ್ ಮುಗಿಸಿ ಕಾಫಿ ಕುಡಿಯುತ್ತಾರಾ ಎಂಬ ದೂರದ ಆಸೆ. ಈ ಆಸೆ ದೂರವಾಗುತ್ತಲೆ ಬಂದಿದೆ. ಕಾರಣ ಹಾಲು ಡೈರಿಗೆ ಹಾಕಿ ಲಾಭ ಮಾಡಿದ ಗಿರಾಕಿ ನಮ್ಮ ಮಲೆನಾಡಿನಲ್ಲಿ ಇಲ್ಲ. ದಿನ ದೂಡಬಹುದು ಅಷ್ಟೆ. ಹಾಗೆಯೇ ಭತ್ತ ಬೆಳೆಯುವ ಮಲೆನಾಡಿಗನೂ ಅದೇ ಕನಸು ಹೊತ್ತು ಹಲವಾರು ತಲೆಮಾರು ಕಳೆದಿದ್ದಾನೆ. ಸಮಾಜಕ್ಕೆ ಅಮೃತ ಉಣಿಸಿದವರು ತಾವು ಅರೆಹೊಟ್ಟೆಯಲ್ಲಿಯೇ ಇರಬೇಕು ಎಂಬುದು ಪ್ರಕೃತಿ ನಿಯಮವಾದಂತಿದೆ . ಹಾಗಾದರೆ ಹಣದ ವಿಷಯದಲ್ಲಿ ಗೆದ್ದವರ್ಯಾರು, ?
ಕಂಡೆ ನಾನು ಮೊನ್ನೆ ಬೆಂಗಳೂರು ಮೈಸೂರು ಹಾಗೂ ಮಡ್ರಾಸ್ ಗೆ ಹೋದಾಗ ಗೆದ್ದವರನ್ನು ಕಂಡೆ. ಅಬ್ಬಾ ಅದು ಎಂತಾ ಗೆಲುವು?. ಆದರೆ ಅವರು ಲಯಕರ್ತರು.

ಬೆಂಗಳೂರಿನಲ್ಲಿ ಪೆಜತ್ತಾಯರು ಯು.ಬಿ ಸಿಟಿಯಲ್ಲಿರುವ ರಾಜಧಾನಿ ಹೊಟೆಲ್ಲಿಗೆ ಊಟಕ್ಕೆ ಕರೆದೊಯ್ದಿದ್ದರು. ಆ ಹೊಟೆಲ್ಲಿನ ತಲೆಯಮೇಲೆ ವಿಜಯಮಲ್ಯನ ಹೆಲಿಪ್ಯಾಡ್ ಇದೆ. ಬಹು ಅಂತಸ್ತಿನ ಆ ಕಟ್ಟದವನ್ನು ಕುತ್ತಿಗೆ ಮುರಿದುಹೋಗುತ್ತದೆಯೇನೋ ಎನ್ನುವಷ್ಟು ತಲೆ ಎತ್ತಿ ನೋಡಬೇಕು. ಕೋಟಿ ಕೋಟಿ ರೂಪಾಯಿಯ ಒಡೆಯ ವಿಜಯ ಮಲ್ಯ ಹಾಗೂ ಅವನಪ್ಪ ವಿಠಲ ಮಲ್ಯ ಗಳಿಸಿದ್ದು ಗಳಿಸುತ್ತಿರುವುದು ಹೆಂಡದಿಂದ. ಜನರಿಗೆ ಕುಡಿಸಿ ಬೆಳೆದವರು ಅವರು . ಅವರು ಉರಿಯಲು ಅದೆಷ್ಟು ಮನೆಯ ದೀಪಗಳು ಆರಿವೆಯೋ ಇರಲಿ. ಮೈಸೂರಿಗೆ ಹೋದಾಗ ಗಣೇಶ್ ಬೀಡಿಯ ಒಡೆಯರ ಆಸ್ತಿಯನ್ನು ಕಿವಿಯಾರೆ ಕೇಳಿದೆ. ಮೂರು ತಲೆಮಾರು ಹಾಸಿ ಹೊದೆಯುವಷ್ಟು, ಎಲ್ಲಿ ನೋಡಿದರಲ್ಲಿ ಅವರದ್ದೇ ಆಸ್ತಿ. ಆ ಆಸ್ತಿ ಹಾಗೆ ಬೆಳೆಯಲು ಎಷ್ಟು ಜನರ ಅಸ್ತಿ ನುಗ್ಗಾಗಿದೆಯೋ ಬಲ್ಲವರ್ಯಾರು. ಮಡ್ರಾಸ್ ಗೆ ಹೋದಾಗ ಮಾಣಿಕ್ ಚಂದ್ ಗುಟ್ಕಾ ಕಂಪನಿಯ ಒಡೆಯನ ಶ್ರೀಮಂತಿಕೆಯ ಕುರಿತು ವಿವರ ಹೇಳಿದರೊಬ್ಬರು. ಮೂರೇನು ಮೂವತ್ತು ತಲೆಮಾರು ತಿಂದರೂ ಕರಗದು ಅಷ್ಟಿದೆ ಆಸ್ತಿ. ಪಾಪ ಗುಟ್ಕಾ ತಿಂದು ಅದೆಷ್ಟು ಜನರು ದೇಣಿಗೆ ಕೊಟ್ಟರೋ ಜೀವವನ್ನ ಅಂತ ಅನ್ನಿಸಿತು. ನಾವಾದರೋ ಒಂದಿಷ್ಟು ಅಡಿಕೆ ಬೆಳೆದು ಹಣ ಕಂಡಿದ್ದೇವೆ. ಆದರೆ ಲಾಗಾಯ್ತಿನಿಂದ ಆಹಾರ ಬೆಳೆ ಬೆಳೆದು ಸಂಕಷ್ಟದಲ್ಲಿರುವ ರೈತರನ್ನು ನೆನೆದು ಬೇಸರವಾಗುತ್ತದೆ. ಇರಲಿ ಶ್ರೀಮಂತಿಕೆಯೊಂದೆ ಮಾನವಲ್ಲ ಅಂತ ಅಂದುಕೊಂಡು ಹಾಲು ಮಾರಿ ತರಕಾರಿ ಬೆಳೆದು ಭತ್ತ ಹಾಕಿ ದೇಶೋದ್ಧಾರ ಮಾಡಲು ಒಂದಿಷ್ಟು ಜನ ಬೇಕಲ್ಲ. ಅವರ ಸಾಲಿಗೆ ಅವರುಗಳು ಹಾಗೂ ನಾವುಗಳು ಎನ್ನುವ ಸಮಾಧಾನ.

ಕೊನೆಯದಾಗಿ: ಶ್ರೀಮಂತಿಕೆಯಲ್ಲಿ ನೆಮ್ಮದಿ ಇಲ್ಲವಂತೆ ಹೌದಾ..? ಎಂದು ಆನಂದರಾಮಾ ಶಾಸ್ತ್ರಿಗಳನ್ನು ಕೇಳಿದೆ. ಅದಕ್ಕವರು" ಹೌದು ಬಡವರು ಹಾಗಂದುಕೊಳ್ಳುವುದರಿಂದ ಬಡತನದಲ್ಲಿ ನೆಮ್ಮದಿ ಇದೆ" ಎಂದರವರು. ಅಂತರಾರ್ಥ ತಿಳಿದು ದಂಗಾದೆ.

Sunday, September 28, 2008

ಜಸ್ಟ್ ನೆಮ್ಮದಿಗಾಗಿ

ಮನುಷ್ಯ ಸಂಘಜೀವಿಯಾಗಿ ಬಾಳಿದರೆ ಉತ್ತಮ ಎಂದು ಪೂರ್ವಜರು ತಿಳಿದಿದ್ದರು. ತಾನು ಹೆಂಡತಿ ಮಕ್ಕಳು ಇಷ್ಟೇ ಎಂದರೆ ಒಂದಲ್ಲಾ ಒಂದು ದಿನ ನಿರಾಶರಾಗಬಹುದು ಹಾಗಾಗಿ ಒಂದಿಷ್ಟು ಹಬ್ಬ ಮತ್ತೊಂದಿಷ್ಟು ಹರಿದಿನ, ಜನ ಸಮೂಹ ಒಂದೆಡೆ ಸೇರಲು ದೇವಸ್ಥಾನ, ದೇವರು, ಹೀಗೆಲ್ಲಾ ಕಲ್ಪಿಸಿ ಅನುಷ್ಠಾನಕ್ಕೆ ತಂದರು.ಅಲ್ಲಿ ತರ್ಕ ಕುತರ್ಕ ಮುಂತಾದವುಗಳಿಗೆ ಅವಕಾಶ ಇಲ್ಲದೆ ಭಕ್ತಿ ಪ್ರಧಾನ ಕೇಂದ್ರ ವನ್ನಾಗಿಸಿದರು. ಅಂತಹ ಜೀವನ ಹಳ್ಳಿಗಳಿಗೆ ಅನಿವಾರ್ಯ ಕೂಡ ಆಗಿತ್ತು.ಅಂದಿನ ದಿನಗಳಲ್ಲಿ ಮನರಂಜನೆಗೆ ಹೆಚ್ಚು ಅವಕಾಶ ಇಲ್ಲದ್ದರಿಂದ ಜನ ಒಂದೆಡೆ ಸೇರಿ ಹಬ್ಬ ಹರಿದಿನಗಳನ್ನು ಆಚರಿಸುತ್ತಿದ್ದರು. ಬಡ ಮಧ್ಯಮ ವರ್ಗದ ಜನತೆಗೆ ಸಾಮೂಹಿಕ ಮನರಂಜನೆ ಭಕ್ತಿಯ ಮುಖಾಂತರ ಸಿಗುತ್ತಿತ್ತು. ಕಾರ್ತಿಕ ದೀಪೋತ್ಸವ, ದೀಪಾವಳಿ ಸಂಭ್ರಮ, ಗಣೇಶನ ಹಬ್ಬ, ವಾರ್ಷಿಕ ಸಂತರ್ಪಣೆ ಹೀಗೆ ನೂರಾರು. ದೇವಸ್ಥಾನದ ಕೆಲಸಗಳು ಸಾಂಗೋಪಸಾಂಗವಾಗಿ ನೆರವೇರಲು ಅದಕ್ಕೆ ಸಾರ್ವಜನಿಕರಿಂದ ವರಾಡ ಎಂಬ ರೂಪದಲ್ಲಿ ಹಣ ಸಂಗ್ರಹಣೆ ಅದನ್ನು ದೇವಸ್ಥಾನದ ಅಭಿವೃದ್ದಿಗೆ ಬಳಸುವುದು. ತನ್ಮೂಲಕ ಊರು ಪ್ರಗತಿ ಹೊಂದುವುದು ಪೂರ್ವಜರ ಕಲ್ಪನೆ. ಅದು ಸರಿಯೋ ತಪ್ಪೋ ಆದರೆ ಅದರಿಂದ ಊರಿನ ಜನರು ಒಂದೆಡೆ ಸೇರುತ್ತಿದ್ದರು. ಕುಶಲೋಪರಿ ನಡೆಯುತ್ತಿತ್ತು. ಈಗ..? ಕಾಲ ಬದಲಾಗಿದೆ. ಟಿ.ವಿ ಇಂಟರ್ನೆಟ್ ಮುಂತಾದ ಆಧುನಿಕತೆಯ ಸೊಗಡಿನ ಮನರಂಜನಾ ಮಾಧ್ಯಮಗಳು ಮನೆಯಲ್ಲಿಯೇ ಬಂದಿದೆ. ಇದರ ಪರಿಣಾಮ ಹಳ್ಳಿಗಳ ಮೇಲೆ ತೀವ್ರತರದಲ್ಲಿ ಆಗಿದೆ. ಸಾಂಘಿಕ ಜೀವನ ಅರ್ಥ ಕಳೆದುಕೊಂಡು ತಾರ್ಕಿಕ ಜೀವನ ಶುರುವಾಗಿದೆ. ಭಕ್ತಿಯ ಕೇಂದ್ರ ನಿದ್ರೆಯತ್ತ ಜಾರಿ ತರ್ಕದ ಕೇಂದ್ರ ಎದ್ದು ಕುಳಿತಿದೆ.
ನಮ್ಮೂರಿನ ಬಚ್ಚಗಾರು ಶ್ರೀ ಮಹಾಗಣಪತಿ ದೇವಸ್ಥಾನ ಜ್ವಲಂತ ಉದಾಹರಣೆ. ಕಷ್ಟ ಬಂದಾಗ ಗಣಪತಿಗೆ ಒಂದು ಹಣ್ಣು ಕಾಯಿ ಹೇಳಿಕೊಂಡರೂ ಸಾಕು ಎನ್ನುವ ನಂಬಿಕೆ ಹಿಂದೆ ಇತ್ತು. ಆತ ಶಕ್ತಿ ಗಣಪತಿ ಎಂಬ ನಂಬಿಕೆ ಊರಲ್ಲಿ ಏನು ಪರ ಊರಲ್ಲಿಯೂ ವ್ಯಾಪಕವಾಗಿತ್ತು. ಅಲ್ಲಿ ಹೋಗಿ ಒಂದು ಹಣ್ಣು ಕಾಯಿ ಮಾಡಿಸಲು ನಿಂತರೆ ಅದ್ಯಾವುದೋ ಒಂದು ಭಕ್ತಿ ಮೂಡುತ್ತಿತ್ತು. ದೀಪಾವಳಿ ಎಂದರೆ ರಂಗೋ ರಂಗು. ಇಂತಹ ದೇವಸ್ಥಾನ ಎಂಟು ವರ್ಷದ ಹಿಂದೆ ನಾಸ್ತಿಕ ಎಂದು ಬೋರ್ಡ್ ತಗುಲಿಸಿಕೊಂಡ ಕುತರ್ಕದಿಂದ ವಾದಿಸುವ ಗಡ್ಡಧಾರಿ ಒಬ್ಬಾತನ ಸರ್ವಾಧಿಕಾರಕ್ಕೆ ಒಳಪಟ್ಟಿತು. ಆತ ತನ್ನಂತೆ ಕುತರ್ಕ ಮಾಡುವ ಒಂದು ಗುಂಪು ನಿರ್ಮಿಸಿಕೊಂಡ. ಅಲ್ಲಿಗೆ ದೇವಸ್ಥಾನ ಸತ್ತು ಹೋಯಿತು. ಕಳೆದ ಎಮ್ಟು ವರ್ಷದಿಂದ ಜನರಲ್ ಬಾಡಿಯೇ ಇಲ್ಲ. ಕಾಣಿಕೆ ಡಬ್ಬಿ ದುಡ್ಡು ಅವರು ಎಣಿಸಿಕೊಂಡಷ್ಟು ಅಲ್ಲಿ ಬಿದ್ದಷ್ಟು. ಯಾರಾದರೂ ಸಂಜೆ ಮುಂದೆ ಕೇಳಿದರೆ ಕಣ್ಣು ಕೆಂಪಗಾಗಿಸಿಕೊಂಡು ಮೈಮೇಲೆ ಬರುವ ಒಂದು ಸಣ್ಣ ಗುಂಪು ಸದಾ ರೆಡಿ. ಇಂತಂಹ ತರ್ಕದ ಜನರ ಆಡಳಿತಕ್ಕೆ ದೇವಸ್ಥಾನ ಒಳಪಟ್ಟಿದ್ದರಿಂದ ಎಂಟು ವರ್ಷದ ಈಚಿನ ತಲೆಮಾರಿಗೆ ದೇವಸ್ಥಾನದ ಪರಿಚಯವೇ ಇಲ್ಲದಂತಾಗಿದೆ. ದೇವಸ್ಥಾನಕ್ಕೆ ಹೋಗದಿದ್ದರೆ ನಾವೂ ಆರಾಮಾಗಿ ಇರಬಹುದು ಎಂದು ಹಲವಾರು ಜನರಿಗೆ ಗೊತ್ತಾಗಿದೆ. ದುಷ್ಪರಿಣಾಮ ದೀರ್ಘಕಾಲದ್ದು, ಊರಿನಿಂದ ಆಚೆ ಕೆಲಸಕ್ಕಾಗಿ ಹೋದವರು ವರ್ಷಕ್ಕೊಮ್ಮೆ ಊರಿಗೆ ಬಂದಾಗ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈಗ ಹಾಗೆ ಯಾರೂ ಹೋಗುವುದೇ ಇಲ್ಲ. ಹಾಗಾಗಿ ಸ್ಥಳೀಯರಿಗೆ ಹೊರಗಿನ ಜನರ ಸಂಪರ್ಕ ಕೊಂಡಿ ಕಳಚಿದಂತಾಗಿದೆ. ಎಲ್ಲರೂ ತಮ್ಮ ಪಾಡಿಗೆ ಜೀವನ ನಡೆಸಿಕೊಳ್ಳುವುದನ್ನು ಕಲಿತಿದ್ದಾರೆ. ಅಯ್ಯಾ ದೊರೆ ಹೀಗೆಲ್ಲಾ ಸಾರ್ವಜನಿಕರಿಂದ ದೇವಸ್ಥಾನ ತಪ್ಪಿಸಿ ಅವರೂ ಬದುಕುತ್ತಿದ್ದಾರಲ್ಲ, ನೀನೇನು ಕೊರಗುವುದು. ಅವರಂತೆ ಬದುಕು ಅಂತ ನೀವು ಕೇಳಬಹುದು. ಇಲ್ಲ ನೆಮ್ಮದಿಗಾಗಿ ಅವರೂ ಕೂಡ ಸಂಜೆ ಪರಮಾತ್ಮನ ಮೊರೆ ಹೋಗಿದ್ದಾರೆ. ಈಗ ಕೆಲ ವಿಕೆಟ್ ಗಳು ಬಿದ್ದಾಯಿತು. ಈ ಒಣ ಹಠ ದ್ವೇಷಗಳ ನಡುವೆ ಸಾಮಾಜಿಕ ಕಾಳಜಿಯ ಸಂತತಿ ಹಳ್ಳಿಯಲ್ಲಿ ತೀವ್ರತರದಲ್ಲಿ ಕಡಿಮೆಯಾಗುತ್ತಿದೆ. ಈಗಾಗಲೇ ಹಳ್ಳಿಗಳಲ್ಲಿ ವಯಸ್ಸಾದ ಒಂದಿಷ್ಟು ಜನರನ್ನು ಬಿಟ್ಟರೆ ಯುವಕರು ಕಾಣಿಸುತ್ತಿಲ್ಲ. ಇದ್ದವರ ನಡುವೆ ಇಂತಹ ಅವ್ಯವಸ್ಥೆ. ಇದು ಒಂದೂರಿನ ಕತೆಯಲ್ಲ, ಹವ್ಯಕರ ನೂರಾರು ಹಳ್ಳಿಗಳ ವ್ಯಥೆ. ನಾನು ನನ್ನದು ಎಂದಿಷ್ಟೇ ಬದುಕುವುದಾದರೆ ಮಿಕ್ಕೆಲ್ಲ ಜೀವಿಯಂತೆ ಮನುಷ್ಯನೂ ಬದುಕಬಹುದು. ಆದರೆ ಮನುಷ್ಯ ತುಸು ಬೇರೆ ಎಂದು ಹೇಳಲು ಈ ಸಾಂಘಿಕ ಜೀವನದ ವ್ಯವಸ್ಥೆ. ಅದು ಮಠ ಇರಬಹುದು ಮಂದಿರ ಇರಬಹುದು. ಮನಸ್ಸಿನ ಶಾಂತಿಗೆ ಆಗಾಗ ಮೂಡುವ ಕುತೂಹಲಕ್ಕೆ ಧುತ್ತನೆ ಬಂದೆರೆಗುವ ಆಘಾತಕ್ಕೆ, ಒಂದೇ ಒಂದು ದಿನದ ಸಂತೋಷಕ್ಕೆ, ಈ ದೇವರು ದೇವಸ್ಥಾನ ಸಾಮೂಹಿಕವಾಗಿ ಅತ್ಯವಶ್ಯಕ. ಆದರೆ ಅದೇ ಜೀವನವಲ್ಲ ಎಂಬುದೂ ಆಷ್ಟೇ ಸತ್ಯ. ಜೀವನದಲ್ಲಿ ಮಠ ಮಂದಿರ ಇದ್ದರೆ ಚೆನ್ನ.
ಆಧುನಿಕತೆಯ ಸೋಗಿನಲ್ಲಿ ನಾವು ಹಳೆಯದನ್ನು ಹೀಗೆಳೆಯುತ್ತಾ ಹೊಸತನ್ನು ಹುಡುಕಲಾರದೆ ಒದ್ದಾಡುವುದಕ್ಕಿಂತ ಇದ್ದುದ್ದರಲ್ಲೇ ನೆಮ್ಮದಿ ಹುಡುಕುವುದು ಸೂಕ್ತ. ಆದರೆ ಆ ಅಗಾದ ಪ್ರಕೃತಿಯ ಅಂದಾಜು ನಮಗೆ ತಿಳಿಯುವುದಿಲ್ಲ ಹಾಗಾಗಿ ಹೀಗೆಲ್ಲ...! ಒಂದಂತೂ ಸತ್ಯ ಇವೆಲ್ಲಾ ಜಸ್ಟ್ ನೆಮ್ಮದಿಗಾಗಿ.