Thursday, February 12, 2009

ಈಗ ರಾಣಿ ಗೂಡಿಗೆ -ಗಂಡು ಯಮನ ಬೀಡಿಗೆ!

ಮೈಸೂರು-ಬೆಂಗಳೂರು ಹೀಗೆ ಯಾವುದ್ಯಾವುದೋ ಕೆಲಸದ ಮೇಲೆ ಸುತ್ತಾಡಿ ಊರಿಗೆ ವಾಪಾಸು ಬರುವ ಹೊತ್ತಿಗೆ ಬರೊಬ್ಬರಿ ಒಂದು ವಾರ. ಇನ್ನು ಐವತ್ತು ಬ್ಲಾಗ್ ಬರಹಗಳಿಗೆ ಆಗುವಷ್ಟು ಸರಕು ತಲೆಯಲ್ಲಿ ತುಂಬಿಕೊಂಡಿದೆ. ಮನೆಗೆ ಬಂದು ಮೈಲ್ ಬಾಕ್ಸ್ ನೋಡಿದರೆ ಫುಲ್. ಅಲ್ಲೊಂದು ಜಿ.ಮೃತ್ಯುಂಜಯ ರವರ ಮೈಲ್ ಒಂದು ಬ್ಲಾಗ್ ಗೆ ಸರಕಾಗಿತ್ತು. ಅದನ್ನು ನೇರವಾಗಿ ನಿಮಗೆ-
ನಿನ್ನ ಬ್ಲಾಗಿನ 'ಹಾರುತ ದೂರ ದೂರ....' ಬರಹವನ್ನು ಓದಿ ನನ್ನ ಮನಸ್ಸು ೧೯೬೦ ನೇ ಇಸವಿಗೆ ಹೋಗಿ ಆಗ ನಾನು ಇದೇ ವಿಷಯದ ಮೇಲೆ ಬರೆದಿದ್ದ ಒಂದು ಕವನವನ್ನು ನೆನಪಿಸಿಕೊಂಡಿತು. ಅದರ ಬಗ್ಗೆ ಎರಡು ಮಾತು ಹೇಳಿದರೆ ನಿನಗೆ ಬೇಸರವಾಗದೆಂದುಕೊಂಡಿದ್ದೇನೆ.ಕಾಕೋಳು ರಾಘವೇಂದ್ರ ಅವರ ನೇತೃತ್ವದ ಬೆಂಗಳೂರಿನ ಸರಸ್ವತಿ ಕಲಾನಿಕೇತನ ಎಂಬ ಸಂಸ್ಥೆ ಅಖಿಲ ಕರ್ನಾಟಕ ಕವನ ಸ್ಪರ್ಧೆಯನ್ನು ಏರ್ಪಡಿಸಿತ್ತು. ಅದಕ್ಕೆ ನಾನು 'ಭ್ರಮರ ಪ್ರಣಯ' ಎಂಬ ಕವನವನ್ನು ಕಳಿಸಿದೆ. ಸ್ವಲ್ಪ ಸಮಯದ ನಂತರ, ನನ್ನ ಕವನಕ್ಕೆ ಮೊದಲ ಬಹುಮಾನ ಬಂದಿದೆಯೆಂದೂ, ಬಹುಮಾನ ವಿತರಣೆ ಸಮಾರಂಭವನ್ನು ಏರ್ಪಡಿಸಿರುವುದಾಗಿಯೂ, ಪು.ತಿ.ನ. ಅವರ ಹಸ್ತದಿಂದ ಬಹುಮಾನವನ್ನು ಸ್ವೀಕರಿಸಲು ಆ ಸಮಾರಂಭಕ್ಕೆ ಬೆಂಗಳೂರಿಗೆ ಬರಬೇಕಾಗಿಯೂ ಅವರಿಂದ ಪತ್ರ ಬಂತು. ಆಬ್ವಿಯಸ್ ಕಾರಣದಿಂದ ಅದಕ್ಕೆ ನಾನು ಹೋಗಲಿಲ್ಲ. (ಹೋಗಿದ್ದರೆ, ೪ಅಡಿ ೪ಅಂಗುಲ ಎತ್ತರದ, ೪೫ ಕೇಜಿ ತೂಗುತ್ತಿದ್ದ, ಮೀಸೆ ಬರದಿದ್ದ ನನ್ನನ್ನು ನೋಡಿ ಅವರು ಇದು ಕೃತಿಚೌರ್ಯದ ಕೇಸು ಎಂದುಕೊಳ್ಳುತ್ತಿದ್ದರೇನೋ!) ಸಮಾರಂಭದ ನಂತರ ಅವರಿಂದ ಮತ್ತೆ ಪತ್ರ ಬಂತು. ಪು.ತಿ.ನ. ಅವರು ಕವನವನ್ನು ಬಹಳವಾಗಿ ಮೆಚ್ಚಿಕೊಂಡರೆಂದೂ, ಅದನ್ನು ತುಂಬ ಶ್ಲಾಘಿಸಿ ಮಾತಾಡಿದರೆಂದೂ ಅದರಲ್ಲಿ ತಿಳಿಸಿದ್ದರು. ನಾಡಿನ ಶ್ರೇಷ್ಠ ಕವಿಯೋರ್ವರಿಂದ ಪ್ರಶಂಸಿಸಲ್ಪಟ್ಟಿದ್ದ ಆ ಕವನವನ್ನು ಈ ಕೆಳಗೆ ಬರೆದಿದ್ದೇನೆ.
ಭ್ರಮರ ಪ್ರಣಯ
ನೀಲದಾಳದಂತರಾಳ
ಪ್ರಕೃತಿಯೆಸೆದ ಮೋಹಜಾಲ
ಭೋಗಕೆಂದು ನೀಲ ನೂಲ
ನೆಯ್ದು ರಚಿಸಿದಾ ದುಕೂಲ.
ರಾಣಿಯೊಂದು ಮುಂದಕೆ
ದುಂಬಿವಿಂಡು ಹಿಂದಕೆ.
ಮೇಲೆ ಮೇಲೆ ಮೇಲೆ ಹಾರಿ
ಬಂದು ಎನ್ನ ಬಳಿಯ ಸೇರಿ
ಶಕ್ತರಲ್ಲದವರ ದಾರಿ
ಸುಗಮವಲ್ಲ ಹಿಂದೆ ಸಾರಿ
ಎಂಬ ರಾಣಿ ಮುಂದಕೆ
ದುಂಬಿಯೊಂದು ಹಿಂದಕೆ.
ಮೇಲೆ ಮೇಲೆ ಮೇಲೆ ಹಾರಿ
ಬಂದೆ ಎನ್ನ ಬಳಿಯ ಸೇರಿ
ನೀನೆ ಆಣ್ಮ ಓ! ವಿಹಾರಿ
ವಿರಮಿಸೆನ್ನ ತೋಳ ಸೇರಿ
ಎಂದು ರಾಣಿಯುಲಿಯಿತು
ಭ್ರಮರದಾತ್ಮ ನಲಿಯಿತು.
ಪ್ರಿಯೆಯ ಪ್ರೇಮ ಸತ್ಯ ಅಮರ
ಮಧುರದಧರ ನಿತ್ಯ ರುಚಿರ
ಜಗದ ಸೊಗದ ಬಾಳ್ವೆ ಮಧುರ
ಎಂದು ನಕ್ಕಿತಾಗ ಭ್ರಮರ.
ಕಾಲದೂತ ಫಕ್ಕನೆ
ಅದರ ಹಿಂದೆ ನಕ್ಕನೆ?
ಪ್ರಕೃತಿಯಾಟ ಅದಕೆ ಅರಿದು
ಬಂಧ ಸಡಿಲಲುದರ ಬಿರಿದು
ಕರುಳು ಕಿತ್ತು ಹೊರಗೆ ಹರಿದು
ಚಣದಿ ಶಾಂತವಾಯ್ತು ಮೊರೆದು.
ರಾಣಿ ಭ್ರಮರ ಯೋಗವು
ಮಾದ್ರಿ ಪಾಂಡು ಭೋಗವು.
ನೀಲದಾಳದಂತರಾಳ
ಕಾಲನೆಸೆದ ಮೃತ್ಯುಜಾಲ
ಬೀಸಿ ಮೊದಲು ಮೋಹಜಾಲ
ಸೊಗದ ಕಾಲಕಿರಿವ ಶೂಲ!
ಈಗ ರಾಣಿ ಗೂಡಿಗೆ
ಗಂಡು ಯಮನ ಬೀಡಿಗೆ!
ಒಮ್ಮೆ ಓದಿ ಮತ್ತೊಮ್ಮೆ ಓದಿ ಅರ್ಥ ಮಾಡಿ ಸುಖಿಸಬಹುದಾದ ಅದ್ಬುತ ಕವನ ಅಂತ ನನ್ನ ಭಾವನೆ. ಪುತಿನ ಮೆಚ್ಚಿದ್ದರಲ್ಲಿ ಆಶ್ಚರ್ಯ ಇರೋಲ್ಲ ಅಲ್ಲವೆ?