Thursday, May 14, 2009

ಗಂಗೆ ಬಾರೆ ...ಗೌರೀ ಬಾರೆ


ಗೋವಿನ ಆ ಹಾಡು ಕೇಳಲು ಎಂತಹಾ ಆನಂದ. ಅದಕ್ಕೊಂದು ರೂಪಕ ಅಳವಡಿಸಿದರೆ ಮುಗಿದೇ ಹೋಯಿತು ಒಂದೆರಡು ದಿವಸ "ಧರಣಿ ಮಂಡಲ ಮಧ್ಯದೊಳಗೆ" ಗುನುಗುತ್ತಿರಬೇಕು. ತೀರಾ ಭಾವುಕರಾದರೆ ಹಾಡನ್ನು ಕೇಳುತ್ತಾ ಕೇಳುತ್ತಾ ನಾಲ್ಕಾರು ಕಣ್ಣೀರು ಹನಿಗಳು ಉದುರಿದರೂ ಆಶ್ಚರ್ಯವಿಲ್ಲ. ಪಾಪದ ಗೋವು- ಸತ್ಯದ ಗೋವು-ತಾಯಿ ಮಮತೆಯ ಗೋವು ಹೀಗೆ ಹತ್ತಾರು ಭಾವಗಳನ್ನು ಹುಟ್ಟಿಸುತ್ತದೆ ಆ ಹಾಡಿನ ಮೂಲಕ. ಮುಸ್ಸಂಜೆಯಲ್ಲಿ ಮರಗಿಡಗಳ ಮಧ್ಯೆ ಪ್ರಪಂಚ ಮರೆತು ಅಂತಹ ಒಂದು ಪುಣ್ಯಕೋಟಿಯನ್ನು ನೆನಸಿಕೊಂಡು-ಕಲ್ಪಿಸಿಕೊಂಡು ಸುಖಿಸುವ ಮಜ ಅನುಭವಿಸಿದವರಿಗೆ ಗೊತ್ತು.
ಒಂದೇ ಒಂದು ಅಪ್ರಿಯ ಸತ್ಯದ ವಿಚಾರವೆಂದರೆ ಕಲ್ಪನೆಗಳಲ್ಲಿ ಇರುವ ಮಜ ಸುಖ ವಾಸ್ತವದಲ್ಲಿ ಇರುವುದಿಲ್ಲ. ಹಾಗಾಗಿ ದೂರದ ವಿಷಯಗಳನ್ನು , ವ್ಯಕ್ತಿಗಳನ್ನು, ತನಗೆಟುಕದ ಜಗತ್ತನ್ನು ಹೀಗೆ ಕಲ್ಪಿಸಿಕೊಂಡು ಮನುಷ್ಯ ಸುಖಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ ಲಾಗಾಯ್ತಿನಿಂದ. ಅಂತಹ ಒಂದು ಅಪೂರ್ವ ಸುಖದ ವಿಷಯ ಗೋವು.
ಆದರೆ ವಾಸ್ತವವೆಂದರೆ ಎಲ್ಲ ಗೋವುಗಳೂ ಪುಣ್ಯಕೋಟಿಯಲ್ಲ, ಕೆಲವೊಂದು ಹುಲಿರಾಯನಕಿಂತ ಕ್ರೂರವಿರುತ್ತದೆ. ಮನುಷ್ಯರನ್ನು ಮಾಂಸವನ್ನು ತಿನ್ನದು ಎನ್ನುವುದೊಂದು ಬಿಟ್ಟರೆ, ಪಟಾರನೆ ಎಲುಬು(ನಮ್ಮದು) ಮುರಿಯುವಂತೆ ಒದೆಯುವ ಆಕಳೂ, ಕೋಡಿನಿಂದ ದುಬಲ್ಲನೆ ಗುದ್ದುವ ದನಗಳೂ ಇರುತ್ತವೆ. ಆದರೆ ಅವುಗಳನ್ನು ಪುಣ್ಯಕೋಟಿಗೆ ಹೋಲಿಸಿಕೊಳ್ಳಬಾರದು ಅಷ್ಟೆ.
ನಮ್ಮ ಹಳ್ಳಿಗಳಲ್ಲಿ ತುಡು ಮಾಡುವ ಬೀಡಾಡಿ ದನಗಳನ್ನು ಕಂಡರೆ ಮೈಮೇಲೆ ಮುಳ್ಳುಗಳೇಳುತ್ತವೆ. ಮಟ ಮಟ ಮಧ್ಯಾಹ್ನ ಬಿರುಬಿಸಿಲಿನಲ್ಲಿ ಲಘು ವಿಶ್ರಾಂತಿ ತೆಗೆದುಕೊಳ್ಳಲೋಸುಗ ಮಲಗಿದಾಗ ಚಟಚಟನೆ ಬೇಲಿ ಮುರಿಯುವ ಸದ್ಧು ಕೇಳಿತೆಂದರೆ ಅದು ತುಡು ದನದ್ದೇ ಅಂತ ಲೆಕ್ಕ. ಲಗುಬಗೆಯಿಂದ ಎದ್ದು ಹೋಗಿ ನೋಡಿದರೆ ಕುಂಬಳ ಬಳ್ಳಿ-ಹಾಗಲ ಬಳ್ಳಿ-ತಿಂಗಳವರೇ ಬಳ್ಳಿ ಅದಾಗಲೇ ಅರ್ದ ದನದ ಹೊಟ್ಟೆ ಸೇರಿರುತ್ತದೆ. ಆವಾಗ ಮಾತ್ರ ಕೈಗೆ ಸಿಕ್ಕ ಕೋಲಿನಿಂದ ಅಟ್ಟಿಸಿಕೊಂಡು ಹೊಡೆಯಿಸಿಕೊಳ್ಳಲು ಅದು ಸಿಗದೆ ಬಾಲ ಎತ್ತಿಕೊಂಡು ಓಡಿ ಹೋದಾಗ ಬರುವ ಸಿಟ್ಟು ಅನುಭವಿಸಿದವರಿಗೇ ಗೊತ್ತು. "ಗೋ ಮಾತೆಯಂತೆ ಗೋಮಾತೆ" ಎಂಬ ಗೊಣಗಾಟದೊಂದಿಗೆ ಮತ್ತೆ ಮಂಚ ಸೇರಬೇಕಾಗುತ್ತದೆ. ಆದರೂ ಆ ದನ ಅವರ ಮನೆಗೆ ಗೋಮಾತೆಯೇ ಕಾರಣ ಮಾಯವಾಗಿದ್ದು ನಮ್ಮ ಮನೆಯ ಕುಂಬಳ ಬಳ್ಳಿ ಅಲ್ಲವೇ?.
ಇಷ್ಟೆಲ್ಲಾ ರಗಳೆ ಇದ್ದರೂ ಗೋ ಮಾತೆ ಒಂಥರಾ ಗೋಮಾತೆಯೇ. ನಮ್ಮ ಮನೆಯ ದನ ಆಗಿರಬೇಕು ಅಷ್ಟೆ . ಸಂಜೆಯಾಗುತ್ತಿದ್ದಂತೆ ಜಗುಲಿಯಲ್ಲಿ ಕುಳಿತು "ಧರಣಿ ಮಂಡಲ" ಹಾಡು ಕೇಳಿದಾಗ ಎಲ್ಲ ಮರೆತು ಸೌಮ್ಯ ಭಾವ ಮೂಡತೊಡಗುತ್ತದೆ ಗೋವಿನ ಬಗ್ಗೆ.

Wednesday, May 13, 2009

ಈಚಲು


ಖರ್ಜೂರದ ರುಚಿಯಿರುವ ಈಚಲು ಅವಸಾನದ ಅಂಚಿನಲ್ಲಿದೆ. ಇದಕ್ಕೆ ಮುಖ್ಯ ಕಾರಣ ಹಳ್ಳಿಗಳ ಜನರು ಈಚಲು ಗಿಡದ ಗೆಲ್ಲುಗಳು ಚಾಪೆ ನೆಯ್ಗೆಗೆ ಬಳಸುತ್ತಿರುವುದರಿಂದ ಗಿಡ ಬೆಳೆದಂತೆಲ್ಲಾ ಗೆಲ್ಲುಗಳು ಮಾಯವಾಗಿಬಿಡುತ್ತದೆ. ಅರಿಶಿನ ಬಣ್ಣದ ಕಾಯಿ ಹಣ್ಣಾದಾಗ ಕಡುಕಪ್ಪು ಬಣ್ಣಕ್ಕೆ ತಿರುಗುತ್ತದೆ. ಗಟ್ಟಿ ಬೀಜವನ್ನು ಹೊಂದಿದ್ದು ಗಂಟೆಗಟ್ಟಲೆ ಅಡಿಕೆಯಂತೆ ಮೆಲ್ಲುತ್ತಾ ಇರಬಹುದು. ಹಣ್ಣು ಬೀಜ ಸೊಪ್ಪು ಎಲ್ಲವೂ ಬಳಕೆಗೆ ಬರುತ್ತದೆಯಾದ್ದರಿಂದ ಈ ಸಸ್ಯ ನಾಶವಾಗುತ್ತಿದೆ.

ಕೌಳಿ


ಕೌಳಿ : ಪೊದೆಗಳ ನಡುವೆ ಬೆಳೆಯುವ ಕೌಳಿ ಹಣ್ಣು ಕೊಯ್ಯುವುದೇ ಸಾಹಸದ ಕೆಲಸ. ಹೆಬ್ಬೆಟ್ಟು ಗಾತ್ರದ ಮುಳ್ಳಿನ ನಡುವೆ ಕಪ್ಪು ಬಣ್ಣದ ಹಣ್ಣುಗಳು ತುಂಬಾ ರುಚಿಯಾಗಿರುತ್ತದೆ. ಕೌಳಿಯ ಹಸಿರುಬಣ್ಣದ ಕಾಯಿ ಉಪ್ಪಿನ ಕಾಯಿಗೆ ಹೇಳಿಮಾಡಿಸಿದಂತಿದೆ. ಹಣ್ಣು ಕೊಯ್ಯುವಾಗ ಬಿಳಿ ಬಣ್ಣದ ಅಂಟು ಒಸರಿ ಮೈ ಕೈಗಳನ್ನೆಲ್ಲಾ ಮೇಣ ಮಾಡುತ್ತದೆ. ಮಕ್ಕಳು ಮನೆಯಲ್ಲಿ ಹೆಚ್ಚು ಬಯ್ಸಿಕೊಳ್ಳುವುದು ಈ ಹಣ್ಣಿನ ಮೇಣದಿಂದ ಹಾಳಾಗುವ ಬಟ್ಟೆ ಯ ಕಾರಣದಿಂದ ಆದರೆ ಇದರ ರುಚಿ ಬಯ್ಗುಳವನ್ನು ತಡೆದುಕೊಳ್ಳುವಷ್ಟರಮಟ್ಟಿಗೆ ಇದೆ.

Tuesday, May 12, 2009

ಜಾವಣಿಗೆ ಹಣ್ಣು:


"ಈಗ ರಾಸಾಯನಿಕ ಬಳಸುವುದರಿಂದ ಹಣ್ಣುಗಳಲ್ಲಿ ಮೊದಲಿನ ರುಚಿಯೇ ಇಲ್ಲ". ಎಂದು ಗೊಣಗುತ್ತಾ ಫ್ರೂಟ್ ಸ್ಟಾಲ್ ನಿಂದ ಕೊಂಡು ತಂದು ತಿನ್ನುವ ಹಣ್ಣುಗಳು ಎಲ್ಲರಿಗೂ ಗೊತ್ತು. ಹೆಚ್ಚೆಂದರೆ ಮಾರುಕಟ್ಟೆಯಲ್ಲಿ ಹತ್ತಿಪ್ಪತ್ತು ಜಾತಿಯ ಹಣ್ಣಿನ ಹೊರತುಪಡಿಸಿ ಅಂಗಡಿಯವನಬಳಿ ಹಲಗೆ ಹಣ್ಣು, ಜಾವಣಿಗೆ ಹಣ್ಣು, ಮುಳ್ಳಹಣ್ಣು, ಕುನ್ನೇರ್ಲೆ ಹಣ್ಣು ಇದೆಯಾ? ಎಂದು ಕೇಳಿ ನೋಡಿ ಆತ ಅರ್ಥವಾಗದೆ ಕಣ್ಣು ಕಣ್ಣು ಬಿಟ್ಟಾನು. ಆದರೆ ಅವೇ ಪಟ್ಟಣಿಗರು ಕೇಳರಿಯದ ಈ ಹಣ್ಣಿನ ಹೆಸರು ಮತ್ತು ರುಚಿಯನ್ನು ಮಲೆನಾಡಿಗರನ್ನು ಕೇಳಿ , "ವಾವ್ ನೆನಪಿಸಬೇಡಿ ಬಾಯಲ್ಲಿ ಚೊಳ್ ಅಂತ ನೀರು ಬರುತ್ತದೆ ",ಎಂದಾರು, ಹಾಗೂ ಬಾಲ್ಯದಲ್ಲಿ ವರ್ಷಪೂರ್ತಿ ಗುಡ್ಡ ಕಾಡುಮೆಡು ಅಲೆಯುತ್ತಾ ಪುಕ್ಕಟ್ಟೆ ತರಹಾವಾರಿ ಹಣ್ಣುಗಳ ರುಚಿ ನೋಡುತ್ತಿದ್ದುದನ್ನು ನೆನಪಿಸಿಕೊಂಡಾರು. ಬೇಸಿಗೆ ರಜದಲ್ಲಿ ಮಲೆನಾಡ ಮಕ್ಕಳ ಮೊದಲ ಆಯ್ಕೆ ಕಾಡುಸುತ್ತುವುದು, ಕಾಡಿನಂಚಿನ ಗುಡ್ಡ ಹತ್ತುವುದು. ನೇರಲಹಣ್ಣು, ಹಲಗೆ ಹಣ್ಣು ಮುಂತಾದ ನೂರಾರು ಜಾತಿಯ ಹಣ್ಣನ್ನು ಹೊಟ್ಟೆಗಿಳಿಸಿ ಮನೆಗೆ ಬಂದು ಊಟ ಮಾಡದೆ ಹಿರಿಯರ ಬಳಿ ನಾಳೆಯಿಂದ ಯಾರೂ ಗುಡ್ಡಕ್ಕೆ ಹೋಗಬೇಡಿ ಎಂಬ ಕಟ್ಟಪ್ಪಣೆಯೊಂದಿಗೆ ಉಗಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಮತ್ತೆ ಮಾರನೇ ದಿನ ಯಥಾಪ್ರಕಾರ ಗುಡ್ಡ ಹತ್ತುವುದೂ ಅಷ್ಟೇ ಸಾಮಾನ್ಯವಾದ ಸಂಗತಿ. ಕಾಡು ಹಣ್ಣುಗಳ ರುಚಿಯೇ ಅಂತಾದ್ದು. ಮಕ್ಕಳ ಶಾಲೆಯ ಬಿಡುವಿಗೆ ಸರಿಯಾಗಿ ಏಪ್ರಿಲ್ ಹಾಗೂ ಮೆ ತಿಂಗಳಿನಲ್ಲಿ ಹೆಚ್ಚಾಗಿ ಹಣ್ಣಾಗುವ ಕಾಡಹಣ್ಣುಗಳು ಸ್ವಾದಿಷ್ಟ, ಹಾಗೂ ಔಷಧೀಯ ಗುಣವನ್ನು ಹೊಂದಿರುವುದು ಮಕ್ಕಳ ಆರೋಗ್ಯಕ್ಕೆ ಉತ್ತಮ ಎನ್ನುವುದರಲ್ಲಿ ಸಂಶಯವಿಲ್ಲ. ಹೌದು ಅಷ್ಟೋಂದು ರುಚಿಕಟ್ಟಾದ ಪ್ರಕೃತಿ ಸಹಜವಾಗಿ ಬೆಳೆಯುವ ನೂರಾರು ಜಾತಿಯ ಹಣ್ಣುಗಳೇಕೆ ಇನ್ನು ಮಾರುಕಟ್ಟೆ ಪ್ರವೇಶಿಸಿಲ್ಲ?.ಅದನ್ನೇಕೆ ನಮ್ಮ ರೈತರು ತಮ್ಮ ಹೊಲಗಳಲ್ಲಿ ಬೆಳೆಯುತ್ತಿಲ್ಲ, ಪಟ್ಟಣಿಗರ ಬಾಯಿರುಚಿ ತಣಿಸಲು ಕೆಲವೇ ಕೆಲವು ಜಾತಿಯ ಹಣ್ಣುಗಳಿಗೆ ಮಾತ್ರ ಯಾಕೆ ಮಣೆಹಾಕಿದ್ದಾರೆ? ಎಂಬ ಯಕ್ಷ ಪ್ರಶ್ನೆಗೆ ಉತ್ತರ ಸಮರ್ಪಕವಾಗಿ ಸಿಗದಾದರೂ ಕಾಡಿನ ಹಣ್ಣು ನಾಡಿನಲ್ಲಿ ಬೆಳೆಯುವುದು ಕಷ್ಟ ಹಾಗು ಈಗ ಸಧ್ಯ ಅವಷ್ಟಕ್ಕೆ ಬೆಳೆಯುವ ಹಣ್ಣುಗಳು ಮಾರುಕಟ್ಟೆಗೆ ಪೂರೈಸುವಷ್ಟು ದೊರಕದು ಎಂಬ ಉತ್ತರ ಕಂಡುಕೊಳ್ಳಬಹುದಾದರೂ ಅದೇ ಸತ್ಯ ಎಂದು ಹೇಳಲಾಗುವುದಿಲ್ಲ. ಮತ್ತು ಅದಕ್ಕೆ ಸರಿಯಾದ ಉತ್ತರ ದೊರಕುವುದಿಲ್ಲ.ಮತ್ತೊಂದು ದೃಷ್ಟಿಯಿಂದ ಯೋಚಿಸಿದರೆ ಅದು ಮಾರುಕಟ್ಟೆ ಪ್ರವೇಶಿಸದೆ ಇರುವುದು ಪಕ್ಷಿಗಳ ಹಿತದೃಷ್ಟಿಯಿಂದ ಒಳ್ಳೆಯದೇ ಅಂತ ಅನ್ನಿಸುತ್ತದೆ. ಆದರೆ ದುರಂತದ ವಿಷಯವೆಂದರೆ ಅತಿಯಾದ ಕಾಡುನಾಶ ದಿಂದಾಗಿ ಮಲೆನಾಡಿನ ಸಹಜ ಕಾಡುಗಳಲ್ಲಿ ಬೆಳೆಯುತ್ತಿದ್ದ ಸಾಂಪ್ರದಾಯಕ ಹಣ್ಣುಗಳು ನಿಧಾನವಾಗಿ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿರುವುದಂತೂ ನಿಜ. ಸರ್ಕಾರದ ಒಡೆತನದ ಅರಣ್ಯ ಇಲಾಖೆ ಇದರ ಕಾಳಜಿ ತೆಗೆದುಕೊಳ್ಳದಿದ್ದರೆ ಇನು ಕೆಲವೇ ವರ್ಷಗಳಲ್ಲಿ ಚಿತ್ರಗಳಲ್ಲಿ ಮಾತ್ರ ಕಾಣಬೇಕಾಗುತ್ತದೆ. ಸ್ಥಳೀಯ ಪರಿಸರಕ್ಕನುಗುಣವಾಗಿ ಹಾಗೂ ಋತುಚಕ್ರಗನುಗುಣವಾಗಿ ಪಕ್ಷಿಗಳ ಆಹಾರ ಪೂರೈಕೆಗಾಗಿ ಪ್ರಕೃತಿ ಸೃಷ್ಟಿಸಿದ ಹಣ್ಣುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಲ್ಲಿ ದೊರಕುವ ನೂರಾರು ಜಾತಿಯ ಕಾಡಹಣ್ಣುಗಳ ಉಳಿಸಬೇಕಾದ ಜವಾಬ್ದಾರಿ ಯಾರದ್ದು? ಅಂತ ಕೇಳಿಕೊಳ್ಳಬೇಕಾದ ಸಮಯದ ಜತೆ ಆಯಾ ಪರಿಸರದ ಸ್ಥಳೀಯರು ಅವರದೇ ಆದ ಹೆಸರಿನಿಂದ ಕರೆಯುವ ಕೆಲವೇ ಕೆಲವು ಹಣ್ಣುಗಳ ಕಿರುಪರಿಚಯ ಇಲ್ಲಿದೆ.

ಜಾವಣಿಗೆ ಹಣ್ಣು: ಮಧ್ಯಮಗಾತ್ರದ ಮರದಲ್ಲಿ ಬೆಳೆಯುವ ಅರಿಶಿನ ಬಣ್ಣದ ಈ ಹಣ್ಣು ನೋಡಲು ಕಿತ್ತಳೆಹಣ್ಣನ್ನು ಹೋಲುತ್ತದೆ. ಆದರೆ ತೊಳೆ ಇರುವುದಿಲ್ಲ. ಬೀಜದ ಸುತ್ತಲಿರುವ ಲೋಳೆ ರುಚಿಯಲ್ಲಿ ಹುಳಿಮಿಶ್ರಿತ ಸಿಹಿ. ಮೆ ತಿಂಗಳಿನಲ್ಲಿ ಇದು ಹಣ್ಣಾಗುತ್ತದೆ. ದಿನಕ್ಕೆ ಒಂದೆರಡು ಹಣ್ಣು ಮಾತ್ರ ಓಕೆ. ಜಾಸ್ತಿ ತಿಂದರೆ ರಕ್ತ ಬೇಧಿಯಾದೀತು ಜೋಕೆ. ಹಿಂದೆ ವ್ಯಾಪಕವಾಗಿದ್ದ ಜಾವಣಿಗೆ ಮರ ಈಗ ಉರುವಲು ಹಾಗೂ ಸೊಪ್ಪಿನ ಬಳಕೆಯಿಂದ ವಿರಳವಾಗುತ್ತಿದೆ.

Sunday, May 10, 2009

ಏನಂತೀರಿ?

ಆಸ್ಥಾನದಲ್ಲಿ ರಾಜ ಒಡ್ಡೋಲಗವನ್ನಿತ್ತಿದ್ದ. ಇಬ್ಬರು ಮಹಿಳೆಯರು ಸಮಸ್ಯೆಯನ್ನುಹೊತ್ತು ತಂದರು. ಸಮಸ್ಯೆ ಏನಪಾ ಅಂತಂದ್ರೆ. ಒಂದು ಮಗು. ಆ ಮಗುವಿನ ಹೆಸರಲ್ಲಿ ಹೇರಳ ಆಸ್ತಿ. ಇಬ್ಬರು ಹೆಂಗಸರೂ ಮಗು ತನ್ನದು ತನ್ನದು ಎನ್ನುತ್ತಿದ್ದಾರೆ. ಮಗುವಿಗೆ ಇವಳೇ ನನ್ನ ಅಮ್ಮ ಅನ್ನುವ ವಯಸ್ಸಲ್ಲ. ರಾಜನಿಗೆ ಪೀಕಲಾಟ.ಯಾವ್ಯಾವ ತರಹದ ಪ್ರಶ್ನೆ ಕೇಳಿದರೂ ಇಬ್ಬರೂ ಸಮರ್ಪಕವಾಗಿ ಉತ್ತರಿಸುತ್ತಿದ್ದಾರೆ. ಹೇಗೆ ಬಗೆಹರಿಸುವುದು ಎಂದು ರಾಜನಿಗೆ ಸಮಸ್ಯೆಯಾಯಿತು. ಆಗ ರಾಜ ಸಮಸ್ಯೆಯಿಂದ ಹೊರಬರಲು ವೃದ್ಧ ಜ್ಞಾನಿಯ ಮೊರೆಹೊಕ್ಕ.
ವೃದ್ಧ ತಾನು ಸಮಸ್ಯೆಯನ್ನು ಬಗೆಹರಿಸುವುದಾಗಿ ಆಸ್ಥಾನಕ್ಕೆ ಬಂದ. ಒಂದರ್ದ ಗಂಟೆ ಹೆಂಗಸರ ಅಹವಾಲು ಕೇಳಿ ನಂತರ "ಓಹೋ ಹಾಗಾದರೆ ಇದಕ್ಕೆ ಒಂದೇ ಪರಿಹಾರ ಮಗುವನ್ನು ಅರ್ದ ತುಂಡರಿಸಿ ಇಬ್ಬರಿಗೂ ಸಮನಾಗಿ ಹಂಚುವುದೊಂದೇ ಸಮರ್ಪಕವಾದ ಮಾರ್ಗ" ಎನ್ನುತ್ತಾ ರಾಜನ ಓರೆಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಮಗುವಿನತ್ತ ಧಾವಿಸಿದ. ಅವನ ರಭಸಕ್ಕೆ ಒಬ್ಬ ಮಹಿಳೆ ಓಡಿಬಂದು ವೃದ್ಧನ ಕಾಲು ಹಿಡಿದು " ಸ್ವಾಮಿ ಮಗು ನನ್ನದಲ್ಲ ನೀವು ಅದನ್ನು ತುಂಡರಿಸುವುದು ಬೇಡ ಆಕೆಗೆ ಕೊಟ್ಟುಬಿಡಿ" ಎನ್ನುತ್ತಾ ಬೋರಲು ಬಿದ್ದಳು. ತಕ್ಷಣ ವೃದ್ಧ "ಸುಲಭವಾಗಿ ಪರಿಹಾರವಾಯಿತಲ್ಲ ಸಮಸ್ಯೆ ಮಗು ಈಕೆಯದೇ ಇವಳಿಗೆ ನೀಡಿ" ಎಂದು ತೀರ್ಪನ್ನಿತ್ತ. ಎಲ್ಲರಿಗೂ ಆಶ್ಚರ್ಯ. ಮಗು ತನ್ನದಲ್ಲ ಎಂದವಳಿಗೆ ಮಗು ಕೊಡಿ ಎಂದನಲ್ಲ ಎಂದು. ವೃದ್ದ ಅದಕ್ಕೆ "ನಿಜವಾದ ತಾಯಿ ಮಗುವನ್ನು ಕತ್ತರಿಸಲು ಬಿಡಲಾರಳು ವ್ಯಾಮೋಹ ಅದು ಹಾಗಾಗಿ ಹೀಗೆ" ಎಂದ. ಜನರು ವೃದ್ಧನ ಬುದ್ದಿವಂತಿಕೆಗೆ ಮನ ಸೋತರು.
ಇದು ಕತೆಯಾಯಿತು. ಅಕ್ಷರ ರೂಪ ತಳೆಯಿತು. ಕಾಲ ಕಳೆಯಿತು.
ಮತ್ತೊಂದು ದಿನ ಮತ್ತೊಬ್ಬ ರಾಜನ ಆಸ್ಥಾನಕ್ಕೆ ಇದೇ ತರಹದ ಸಮಸ್ಯೆ ಬಂತು. ರಾಜ ಈ ಹಳೇ ಕತೆಯನ್ನು ಓದಿದ್ದ. ಹಾಗಾಗಿ ಈ ಸಮಸ್ಯೆಯನ್ನು ಬಗೆಹರಿಸುವುದು ಸುಲಭ ಎಂದು" ಓಹೋ ಹಾಗಾದರೆ ಇದಕ್ಕೆ ಒಂದೇ ಪರಿಹಾರ ಮಗುವನ್ನು ಅರ್ದ ತುಂಡರಿಸಿ ಇಬ್ಬರಿಗೂ ಸಮನಾಗಿ ಹಂಚುವುದೊಂದೇ ಸಮರ್ಪಕವಾದ ಮಾರ್ಗ" ಎನ್ನುತ್ತಾ ರಾಜ ಓರೆಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡು ಮಗುವಿನತ್ತ ಧಾವಿಸಿದ . ಆದರೆ ಈಗ ಇಬ್ಬರೂ ಮಹಿಳೆಯರೂ "ಬೇಡ ಮಹಾರಾಜ ಮಗು ನನ್ನದಲ್ಲ ಅವಳಿಗೆ ಕೊಡಿ" ಎಂದು ಹೇಳುತ್ತಾ ಒಟ್ಟಿಗೆ ಬಂದು ರಾಜನ ಕಾಲು ಹಿಡಿದರು. ರಾಜ ಈಗ ತಬ್ಬಿಬ್ಬಾದ. ರಾಜನಂತೆ ಆ ಮಹಿಳೆಯರೂ ಈ ಕತೆಯನ್ನು ಓದಿಬಿಟ್ಟಿದ್ದರು. ಮತ್ತೆ ಈ ರಾಜನಿಗೂ ಜ್ಞಾನಿಯ ಮೊರೆ ಹೋಗುವುದು ಅನಿವಾರ್ಯ ವಾಯಿತು. ಜ್ಞಾನಿ ಬಂದು "ನ್ಯಾಯ ಸುಲಭ, ಮಗುವನ್ನು ಈಕೆಗೆ ಕೊಡಿ ಆಸ್ತಿಯನ್ನು ಆಕೆಗೆ ಕೊಡಿ" ಎಂದ. ತಕ್ಷಣ ಮಗು ಪಾಲಿಗೆ ಬಂದಾಕೆ " ಮಗು ನನ್ನದಲ್ಲ ಆಕೆಯದೇ" ಎಂದಳು. ಮರುಕ್ಷಣ ಜ್ಞಾನಿ " ಆಸ್ತಿ ಮತ್ತು ಮಗುವನ್ನೂ ಆಕೆ ಕೊಡಿ " ಎಂಬ ತೀರ್ಪನ್ನಿತ್ತ. ಜನ ಈಗಲೂ ನಿಬ್ಬೆರಗಾದರು ಅದು ಹೇಗೆ? ಎಂದರು. ಜ್ಞಾನಿ ಹೇಳಿದ " ಈಕೆಯ ಆಸ್ತಿ ಮೋಹ ಮಗು ಯಾರದೆಂಬ ಸತ್ಯವನ್ನು ಹೊರಡಿಸಿತು ಎಂದ.
ಇದೂ ಕೂಡ ಕತೆಯಾಗುತ್ತದೆ . ಮತ್ಯಾರೋ ಓದುತ್ತಾರೆ ಅನುಷ್ಠಾನಕ್ಕೆ ತರುತ್ತಾರೆ. ಮತ್ತು ತೀರ್ಪು ಹೇಳಲಾಗದೆ ಪಿಗ್ಗಿ ಬೀಳುತ್ತಾರೆ. ಹಾಗಾಗಿ ಅನುಕರಣೆ ಯಾವಾಗಲೂ ಕಷ್ಟ. ಸ್ವಯಂ ಜ್ಞಾನ ಎಲ್ಲರಿಗೂ ಪರಿಹಾರ. ಏನಂತೀರಿ?