Thursday, December 31, 2009

ಕಂಡೀರಾ... ನಮ ಸಾಂಬಾಶಿವನ


ಸಾಕ್ಷತ್ ಗುರುವರನಾ... ಕಂಡೀರಾ... ನಮ ಸಾಂಬಾಶಿವನ, ಉರಿಗಣ ಬಿಟ್ಟ ಮನ್ಮಥ ಸುಟ್ಟ..." ಎಂಬ ಲಯಬದ್ಧವಾದ ಹಾಡು, ಲಡ ಲಡ ಲಡ ಎಂಬ ಡಮರುಗದ ಶಬ್ಧ ಹಾಗೂ ಗಂಟಾನಾದದೊಂದಿಗೆ ಒಂದು ಬರೊಬ್ಬರಿ ಆಶಿರ್ವಾದ ಇವಿಷ್ಟು ಅಡಿಕೆ ಶ್ರಾಯದಲ್ಲಿ ಮೈಲಾರ ಕುಂಡಿಗೆ ಎಂಬ ಜನರು ಮನೆಬಾಗಿಲೆಗೆ ಬಂದು ಮಾಡುವ ಕ್ರಿಯೆ. ಮಲೆನಾಡಿನ ಭಾಗದ ಓದುಗರು ನೀವಾಗಿದ್ದರೆ ಒಮ್ಮೆ ಹಳೇ ನೆನಪಿಗೆ ಜಾರಿ ಖಂಡಿತಾ ಮಜ ಅನುಭವಿಸುತ್ತೀರಿ ಇಷ್ಟೊತ್ತಿಗೆ. ಬಯಲು ಸೀಮೆಯ ಈ ಮೈಲಾರಕುಂಡಿಗೆ(ಹಾಗೆಯೇ ಇರಬೇಕು ಅವರ ಹೆಸರು) ಜನಾಂಗ ಭಿಕ್ಷುಕರಲ್ಲ. ಎಲ್ಲಾ ಅವರ ಜೀವನಕ್ಕೆ ಸಾಕಾಗುವಷ್ಟು ಇರುವವರೇ. ಆದರೆ ಅವರದು ಇದೊಂದು ಪದ್ದತಿ. ಸಂಭಾವನೆ ಭಟ್ಟರ ತರಹ. ಹಾಗೆಯೇ ಜನರೂ ಕೂಡ ಅವರನ್ನು ಗೌರವದಿಂದ ನಡೆಯಿಸಿಕೊಳ್ಳುತ್ತಾರೆ. ಓಂದು ಉಟ್ಟ ಬಟ್ಟೆ ಒಂದು ಹೊಸಬಟ್ಟೆ ಕೊಟ್ಟು ಸಿಕ್ಕಾಪಟ್ಟೆ ಲಡ ಲಡ ಲಡ ಶಬ್ಧದ ತಮಟೆಯೊಂದಿಗೆ ಆಶೀರ್ವಾದ ಪಡೆದುಕೊಂಡರೆ ಮನೆಯವರಿಗೂ ಅದೇನೋ ಒಂಥರಾ ನೆಮ್ಮದಿ.
ನಾನು ಸಣ್ಣಕ್ಕಿದಾಗಿನಿಂದ (ಸುಮಾರು ಮೂವತ್ತು ವರ್ಷದ ಹಿಂದಿನಿಂದ) ಅವರದೇ ಆದ ಒಂದೇ ಕುಟುಂಬದ ತಂಡ ಬರುತ್ತಲೇ ಇದೆ. ಮತ್ತು " ಅಯ್ಯಾ ಇದು ನಮ್ಮ ಕಾಲಕ್ಕೆ ಮುಗೀತು ಇನ್ನು ಮುಂದಿನ ವರ್ಷದಿಂದ ಯಾರೂ ಬರೋದಿಲ್ಲ ಸೋಮಿ, ಕೈಬಿಚ್ಚಿ ದಾನ ಮಾಡಿ" ಎಂಬ ಡೈಲಾಗ್ ಕೇಳುತ್ತಾ ಬಂದಾಗಿದೆ. ಹಾಗೂ ಅಂದು ಒಂದೇ ಇದ್ದ ತಂಡ ಇಂದು ಹಿಸೆಯಾಗಿ ನಾಲ್ಕಾಗಿದೆ. ಆದರೆ ಡಮರುಘ ದ ಶಬ್ಧದಲ್ಲಿ ಏನೋ ಮಜ ಇದೆ. ಬೆಂಗಳೂರಿನ ಡಕ್ಕಣಕ ಡಕ್ಕಣಕ ಶಬ್ಧದ ತರಹ.