Saturday, July 17, 2010

ದುಡ್ಡು ಕೊಟ್ಟು ದನ ಬಿಡಿಸಿ

"ಇದೇನಪ್ಪಾ ದನದ ದೊಡ್ಡಿ ಇದ್ದಂಗೆ ಇದೆ" ಎಂಬ ಮಾತು ನೀವು ಯಾವಗಲಾದರೂ ಕೇಳಿಯೇ ಕೇಳಿರುತ್ತೀರಿ. ಆದರೆ ಕಚಡಾಗಳು ತುಂಬಿದಕ್ಕೆಲ್ಲಾ ದೊಡ್ಡಿ ಎಂದು ಕರೆಯಿಸಿಕೊಳ್ಳುವ ದೊಡ್ದಿ ನೋಡಿದ್ದು ಅಪರೂಪವೇ. ಬೇಲಿರಹಿತ ಕೃಷಿಯಿರುವ ಹಳ್ಳಿಗಳಲ್ಲಿ ಸರ್ಕಾರದಿಂದ ನಡೆಯಿಸಲ್ಪಡುವ ಜಾನುವಾರು ದೊಡ್ಡಿ ಇನ್ನೂ ಚಾಲ್ತಿಯಲ್ಲಿದೆ. ಜಾನುವಾರುಗಳು ದೊಡ್ಡಿ ಸೇರಲು ವಿಚಾರಣೆ ಇಲ್ಲದೆ, ವಕೀಲರ ವಶೀಲಿಬಾಜಿ, ಇಲ್ಲದೆ ಆರೋಪವೊಂದಿದ್ದರೇ ಸಾಕು . ಗದ್ದೆಗೆ ಬರುವ ಬೀಡಾಡಿ ದನಗಳು ಹಾಗೂ ಒಡೆತನದ ದನಗಳನ್ನು ನಾಲ್ಕಾರು ಜನ ಸೇರಿ ಅಟ್ಟಿಸಿಕೊಂಡು ದೊಡ್ಡಿ ಯ ತನಕ ಹೊಡೆದುಕೊಂಡು ಹೋಗಿ ಹೆಸರು ಬರೆಯಿಸಿ ಬಂದರಾಯಿತು. ಆಮೇಲೆ ಆ ಜಾನುವಾರು ಮಾಲಿಕರ ಕೆಲಸ ಶುರು. ಸಂಜೆ ಕಳೆದು ರಾತ್ರಿಯಾದರೂ ಮನೆಗೆ ಬರದ ಜಾನುವಾರುಗಳನ್ನು ನೆನೆದ ಮಾಲಿಕನಿಗೆ ಮೊದಲು ಯೋಚನೆ ಬರುವುದು ಈ ದೊಡ್ಡಿಯದು. ಬೆಳಿಗ್ಗೆ ದೊಡ್ಡಿಗೆ ಹೋಗಿ ಅಲ್ಲಿಯ ನಿರ್ವಾಹಕರು ವಿಧಿಸಿದ ದಂಡ ಕಟ್ಟಿ ಜಾನುವಾರು ಬಿಡಿಸಿಕೊಂಡು ಬಂದರೆ ಜಾನುವಾರುಗಳ ಜೈಲ್ ವಾಸ ಮುಗಿದಂತೆ. ಒಮ್ಮೊಮ್ಮೆ ಮಾಲಿಕ ಬರುವುದು ವಾರಗಟ್ಟಲೇ ತಡವಾಗಿ ಜಾನುವಾರುಗಳು ಜಾಮೀನುಸಿಗದ ಅಪರಾಧಿಯಂತೆ ದೊಡ್ಡಿಯಲ್ಲಿಯೇ ಕಾಲಕಳೆಯಬೇಕಾದ ಪ್ರಸಂಗ ಇರುತ್ತದೆ.
ದೊಡ್ಡಿಯೆಂಬುದು ಪೂಜೆಮಾಡುವ ಗೋಮಾತೆ ಗಾಗಿ ಅಲ್ಲ, ತುಡು ಮಾಡುವ ಜಾನುವಾರುಗಳಿಗಾಗಿ ಚಾಲ್ತಿಗೆ ಬಂದ ದೊಡ್ಡಿಯೆಂಬುದು ಅಕ್ಷರಶ: ಗಲೀಜು ಕೊಂಪೆಯಾಗಿರುತ್ತದೆ. ಅದನ್ನೊಂದು ಹೊರತುಪಡಿಸಿದರೆ ಮನುಷ್ಯರಿಗಿಲ್ಲದ ವಿಶೇಷ ಸವಲತ್ತು ಇಲ್ಲಿದೆ.....!. ಮನುಷ್ಯ ಹೊರಗೆ ಲೈಂಗಿಕ ಹಗರಣ ನಡೆಸಿ ಒಳಗೆ ಹೋದರೆ, ಇಲ್ಲಿ ಅವಕ್ಕೆಲ್ಲಾ ಒಳಗಡೆಯೂ ಮುಕ್ತ ಮುಕ್ತ. ಕಾರಣ ಹೋರಿ, ದನ ಎಮ್ಮೆ ಎತ್ತುಗಳೆಂಬ ಬೇಧಭಾವ ವಿಲ್ಲದೆ ಎಲ್ಲವುದಕ್ಕೂ ಒಂದೇ ಜಾಗ ಒಂದೇ ರೀತಿಯ ಆರೈಕೆ ಒಂದೇ ರೀತಿಯ ಸವಲತ್ತು. ಪುಕ್ಕಟ್ಟೆ ಹುಲ್ಲು ನೀರು ಸುಖ ನಿದ್ರೆ. ವಿಪರ್ಯಾಸವೆಂದರೆ ಜಾನುವಾರು ಸಾಕಾಣಿಕೆದಾರರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ದೊಡ್ಡಿಯ ಸಂಖ್ಯೆಯೂ ಇಳಿಮುಖವಾಗುತ್ತಿದೆ.
(ಇಂದಿನ ವಿಜಯ ಕರ್ನಾಟಕ ಲವಲವಿಕೆ ಯಲ್ಲಿ ಪ್ರಕಟಿತ)

Friday, July 16, 2010

ಆದರೆ ಅಂದು ಶುಕ್ರವಾರವೇ ಆಗಿರಬೇಕಲ್ಲ.


ಘಂ ಅಂತ ಪರಿಮಳ ಮೂಗಿಗೆ ಅಡರುತ್ತಿದ್ದಂತೆ ಒಮ್ಮೆಲೆ ಆಹ್ ಎಂಬ ಉದ್ಘಾರ ತನ್ನಷ್ಟಕ್ಕೆ ಹೊರಡುತ್ತಿತ್ತು. ತೆಗೆದುಕೊಂಡ ಪರಿಮಳ ಸಮೇತ ಹಿಂದೆ ಸರಿಯುತ್ತಿದ್ದಂತೆ ಅಕ್ಕ ಅಥವಾ ಅಣ್ಣ ಪರಿಮಳ ಸ್ವಾದಕ್ಕೆ ಮುನ್ನುಗ್ಗುತಿದ್ದರು. ಆಗ ಅಮ್ಮ " ಥೋ ಸಾಕು ಸರ್ಕಳ್ರಾ... ಯಂಗೆ ಬೆಳಗ್ಗಿನ ಕೆಲ್ಸ ಆಗಲ್ಲೆ ಅಂತ ಬಡ್ಕತ್ತಾ ಇದ್ರೆ ಇವ್ರಿದ್ದೊಂದು ರಗಳೆ" ಎಂದಾಗ ಅಲ್ಲಿಂದ ದೌಡು. ಇದು ಪಕ್ಕಾ ಪಕ್ಕಾ ಮೂವತ್ತು ವರ್ಷಗಳ ಹಿಂದೆ ಪ್ರತೀ ಶುಕ್ರವಾರ ನಡೆಯುತಿದ್ದ ಘಟನೆ. ಇವತ್ತು ಶುಕ್ರವಾರ ಬೆಳಿಗ್ಗೆ ಚಪಾತಿ ಹಣ್ ಮೆಣ್ಸಿನಕಾಯಿ ಚಟ್ನೆ ಜೊತೆಗೆ ಘಂ ಎಂಬ ತುಪ್ಪ ಸಕ್ರೆ ನಂಜಿಕೊಂಡು ಮುಕ್ಕುವಾಗ ಹಳೇ ಕತೆ ನೆನಪಾಯಿತು.
ಪ್ರತೀ ಶುಕ್ರವಾರ ಬೆಣ್ಣೆ ಕಾಯಿಸಿ ತುಪ್ಪ ಮಾಡುವ ದಿವಸ. ನಮ್ಮ ಹಳ್ಳಿ ಮನೆಗಳಲ್ಲಿ ಹಾಲು ಮಜ್ಜಿಗೆ ತುಪ್ಪದ ಕುರಿತಾದ ಹಾಗೂ ವಾರಗಳಿಗೆ ತಳಕು ಹಾಕಿಕೊಂಡ ಒಂದಿಷ್ಟು ಶಾಸ್ತ್ರಗಳು ಇತ್ತು, ಇತ್ತು ಏನು ಇನ್ನೂ ಜೀವಂತವಾಗಿವೆ. ಸೋಮವಾರ ಹಾಗೂ ಶನಿವಾರ ಜನ್ನೆ ಬಿಡುವುದು. ಜನ್ನೆ ಎಂದರೆ ಆವತ್ತು ಮೊಸರು ಕಡೆಯದ ದಿವಸ ಅಂದರ್ಥ. ಅಮವಾಸೆಯಂದೂ ಹಾಗೆಯೇ. ಆ ದಿನಗಳು ಮೊಸರಿನ ಸುಗ್ರಾಸ ಭೋಜನ ಮನೆಮಂದಿಗೆಲ್ಲ. ಹಾಗೆಯೇ ಶುಕ್ರವಾರ ಬೆಣ್ಣೆ ಕಾಯಿಸಿ ತುಪ್ಪ ಮಾಡುವ ದಿವಸ. ವಾರಪೂರ್ತಿ ತಿಳಿನೀರಿನಲ್ಲಿ ತೇಲಿಸಿಟ್ಟ ಬೆಣ್ಣೆ ಶುಕ್ರವಾರ ಪಾತ್ರೆ ಸೇರಿ ಕೊತ ಕೊತ ಕುದಿಯಲಾರಂಬಿಸುತ್ತದೆ. ಅದರ ಸದ್ದೇ ಕೇಳಲು ಮಜ. ಪ್ರಾರಂಬಿಕ ಹಂತದಲ್ಲಿ ಅದು ಕೆಟ್ಟ ವಾಸನೆ, ನಂತರ ಬೆಣ್ಣೆ ಕಾದು ತುಪ್ಪವಾದಗ ಪರಿಮಳ ಇದೆಯಲ್ಲ ಅದರ ಸ್ವಾರಸ್ಯ ವರ್ಣಿಸಲಸದಳ. ನಾನು ಆರಂಭದಲ್ಲಿ ಹೇಳಿದ್ದ ವಾಕ್ಯಗಳು ಈ ಕ್ಷಣದ್ದು. ಹಾರಿ ಹೋಗುವ ವಾಸನೆಯನ್ನು ಮೂಗಿಗೆ ಸುರಿವಿಕೊಳ್ಳುವುದರಿಂದ ಅಮ್ಮನಿಗೂ ನಷ್ಟದ ಬಾಬತ್ತಿಲ್ಲ ಆದರೆ ಅಡಿಗೆ ಮನೆಯಲ್ಲಿ ಇದಕ್ಕಾಗಿ ಪೈಪೋಟಿಯ ಜಗಳದ ಕಾರಣ ಕೊಂಚ ಹುಸಿಮುನಿಸಷ್ಟೆ. ಈಗ ಅಮ್ಮನ ಕೆಲಸ ನನ್ನಾಕೆ ಮಾಡುತ್ತಿದ್ದಾಳೆ, ಆದರೆ ನನ್ನ ಕೆಲಸ ನನ್ನ ಮಗ ಮಾಡುತ್ತಿಲ್ಲ. ನನಗೆ ಇಂದೂ ಹಾಗೆ ತುಪ್ಪದ ಪಾತ್ರೆಗೆ ಬಗ್ಗಿ ವಾಸನೆ ತೆಗೆದುಕೊಳ್ಳುವ ಇರಾದೆ ಇದೆ, ಆದರೆ " ರೀ ನೀವು ಈಗ ಸಣ್ಣ ಹುಡುಗ್ರಲ್ಲ" ಅಂತ ಹೆಂಡತಿ ಅಂದುಬಿಟ್ಟರೆ...? ಒಂಥರಾ ಮರ್ಯಾದೆಗೆ ಕುತ್ತು ಬರುವ ಕೆಲಸವಲ್ಲವೇ..? ಹಾಗಾಗಿ ಘನಗಂಭೀರನಾಗಿರಲು ಯತ್ನಿಸಿ ಸುಮ್ಮನುಳಿಯುತ್ತೇನೆ. ಆದರೂ ಅಲ್ಲೇ ಆಚೀಚೆ ಅಡ್ಡಾಡಿ ತೀರಾ ಬಗ್ಗಿ ಅಲ್ಲದಿದ್ದರೂ ಹಾಗೆ ಗಾಳಿಯಲ್ಲಿ ಹಾರಾಡುವ ಪರಿಮಳ ಆಸ್ವಾದಿಸುತ್ತೇನೆ. ಇರಲಿ ನಂತರದ ಕತೆ ನೋಡೋಣ.
ತುಪ್ಪ ಕಾದು ಇಳಿಸಿದ ನಂತರ ಬಿಳಿಯದಾದ ಬಟ್ಟೆಯಲ್ಲಿ ಸೋಸಿ ನಂತರ ಉಳಿದ ಜಂಡಿನ ಪಾತ್ರೆ ಸಮೇತ ಗೋಡೆಗೆ ಒರಗಿಸಿ ಖಾಲಿಪಾತ್ರೆಯನ್ನು ಇಡುತ್ತಾರೆ. ಈಗಿನ ಕೆಲಸ ದೇವರಿಗೆ. ಮೊದಲೇ ಮಾಡಿಟ್ಟುಕೊಂಡಿದ್ದ ಹತ್ತಿಯ ಹೂಬತ್ತಿಯ ಕರಡಿಗೆಯನ್ನು ತಂದು ಉಳಿದ ತುಪ್ಪದ ಜೊಂಡಿನಲ್ಲಿ ಹೂಬತ್ತಿಯನ್ನು ಅದ್ದಿ ಡಬ್ಬಿಯೊಳಗೆ ಒಂದರ ಪಕ್ಕದಲ್ಲಿ ಒಂದು ಇಡುತ್ತಾರೆ. ಅದು ನಿತ್ಯ ವಾಸ್ತುಬಾಗಿಲಿನ ಮುಂದೆ ಹಚ್ಚಲು ತುಪ್ಪದ ಬತ್ತಿ. ಇದರ ಸಂಖ್ಯೆ ಮುಂದಿನ ಶುಕ್ರವಾರದ ವರೆಗೆ ಎಷ್ಟು ಬೇಕೋ ಅಷ್ಟೆ.
ಅಷ್ಟರಲ್ಲಿ ತುಪ್ಪ ತಣಿದು ಹೆರೆಗಟ್ಟುವತ್ತ ಸಾಗುತ್ತಿರುತ್ತದೆ. ಆಗ ಅವತ್ತಿನ ತಿಂಡಿಗೆ ಎಲ್ಲರಿಗೂ ಒಂದೊಂದು ಚಮಚ ಹಸಿ ಹಸಿ ಬಿಸಿ ಬಿಸಿ ಸುವಾಸನೆಯುಕ್ತ ತುಪ್ಪ... ವಾವ್ ಘಂ ಘಂ ಘಂ ಅಂತ ಪರಿಮಳ ಸೇವಿಸಲು ಒಮ್ಮೆ ಬನ್ನಿಯಲ್ಲ ಆದರೆ ಅಂದು ಶುಕ್ರವಾರವೇ ಆಗಿರಬೇಕಲ್ಲ.




Thursday, July 15, 2010

ಕುಂತುಂಡ್ ಗುಪ್ಳ

ರಾಮಣ್ಣರವರ ನಮಸ್ಕಾರ ನಂ-೨ ಹಾಗೂ ಅಂತಿಮ ಭಾಗ ಅಪ್ಲೋಡ್ ಮಾಡಿದ್ದೇನೆ. ಹುಷಾರು ಅನುಸರಿಸಲು ಹೋಗಿ ಮಳ್ಳಂಡೆ ಏಟು ಮಾಡಿಕೊಂಡರೆ ನಾನಾಗಲೀ ಅಥವಾ ರಾಮಣ್ಣನಾಗಲೀ ಜವಾಬ್ದಾರಿಯಲ್ಲ ಅಂತ ನುಣುಚಿಕೊಳ್ಳಲು ಆಗುವುದಿಲ್ಲ ಹಾಗಾಗಿ ಸ್ವಲ್ಪ ಎಚರಿಕೆಯಿಂದ ನಮಸ್ಕಾರ ಮಾಡಿ. ನಮಸ್ಕಾರ

Wednesday, July 14, 2010

ದೇವರಿಗೆ ನಮಸ್ಕಾರ

ನಮ್ಮ ಊರಿನ ಪಕ್ಕದ ಊರಾದ ಬಂಜಗಾರು ರಾಮಣ್ಣ ಒಳ್ಳೆಯ ಕೃಷಿಕರು. ಅವರು ಅಸಾದ್ಯ ಪ್ರತಿಭಾವಂತರೂ ಹೌದು. ಮೊನ್ನೆ ಅವರ ಮನೆಗೆ ಹೋದಾಗ ಹಳೆ ಜನರ ನಿಯಮ ನಿಷ್ಠೆಗಳ ವಿಷಯ ಚರ್ಚೆಗೆ ಬಂತು. ಆವಾಗ ಹಳೆ ಜನರು ದೇವರಿಗೆ ನಮಸ್ಕಾರ ಮಾಡುತ್ತಿದ್ದ ನಮೂನೆಯನ್ನು ತೋರಿಸಿದರು. ಅದರ ಒಂದು ವಿಧಾನ ನಿಮಗಾಗಿ ಅಪ್ ಲೋಡ್ ಮಾಡಿದ್ದೇನೆ ವಿಡಿಯೋ ಸಮರ್ಪಕವಾಗಿ ಕಂಡರೆ ನೀವೂ ಹಾಗೆ ಕೈಮುಗಿಯಲು ಯತ್ನಿಸಿ. ಕಾಣಿಸದಿದ್ದರೆ ಸಾಕಪ್ಪಾ ಸಾಕು ನಿನ್ನ ಸಹವಾಸ ಎಂದು ನನಗೆ ಕೈ ಮುಗಿಯಬೇಡಿ.

ಹಣ್ ಮೆಣ್ಸಿನಕಾಯ್ ಗೊಜ್ಜು

ಅದೊಂದು ಮಾತ್ರಾ ಸಾದ್ಯವಿಲ್ಲ ನೋಡಿ. ಇದರ ರುಚಿ ಸವಿಯಲು ನೀವು ಬಳಸಬೇಕಾದ್ದು ಗಿಡದಲ್ಲಿಯೇ ಹಣ್ಣಾದ ಮೆಣಸಿನಕಾಯಿ.ಈ ಬರಹ ಓದಿ ಮುಗಿದನಂತರ ನೀವು, "ಒಣ ಕೆಂಪು ಮೆಣಸಿನಕಾಯಿ ಬಳ್ಸಬಹುದಾ?, ತರಕಾರಿ ಅಂಗಡಿಯಲ್ಲಿ ಹಸಿಮೆಣಸಿನಕಾಯಿ ಜೊತೆ ಕೆಲವು ಹಣ್ಣು ಇರುತ್ತಲ್ಲಾ ಅದನ್ನ ಬಳಸಬಹುದಾ? ಒಣಮೆಣಸು ನೆನಸಿ ಒದ್ದೆ ಮಾಡಿ ಹಸಿಯಾದಾಗ ಬಳಸಬುದಾ? "ಇಲ್ಲವೇ ಇಲ್ಲ ಹಾಗೆಲ್ಲಾ ಮಾಡಿದರೆ ಬಾಯಿ ಚಪ್ಪರಿಸುವ ಲೊಚಗರಿಯುವ ಚಟ್ ಎಂದು ತಿಂದು ನಾಲಿಗೆ ಬಡಿದು ಹೊರಡಿಸುವ ಶಬ್ಧದ ರುಚಿ ಬರೋದೇ ಇಲ್ಲ ಅಂತ ನನ್ನಾಕೆ ಖಡಾಕಂಡಿತವಾಗಿ ಹೇಳಿಬಿಟ್ಟಿದ್ದಾಳೆ. ಮನೆಯಲ್ಲಿ ಅದಕ್ಕಾಗಿಯಾದರೂ ಒಂದು ಬ್ಯಾಡಗಿ ಮೆಣಸಿನ ಗಿಡ ನೆಟ್ಟುಕೊಳ್ಳಿ, ಅದು ಗುಜ್ಜು ಗುಜ್ಜು ಕಾಯಿ ಬಿಟ್ಟು ಕಚ್ಚಿ ತಿಂದು ಬಿಡೋಣ ಎಂಬಂತಹ ಕೆಂಪು ಬಣ್ಣಕ್ಕೆ ತಿರುಗಿದಾಗ ಬಾಣಲೆಯಲ್ಲಿಟ್ಟು ಸ್ವಲ್ಪ ಹುರಿಯಿರಿ ಹಾಗೂ ಸಾಸಿವೆ ಜೀರಿಗೆ ಹುರಿದು ಹಾಕಿ ಒರಳಿನಲ್ಲಿ ಬೀಸಿ. ಉಪ್ಪನ್ನು ಮತ್ತೆ ಹೇಳಬೇಕಾಗಿಲ್ಲ ತಾನೆ. ಬೀಸುವಾಗ ನಿಂಬೆ ಹುಳಿಯನ್ನು ಸೇರಿಸುತ್ತಾ ರುಬ್ಬಿ, ಆ ನಂತರ ಗಾಜಿನ ಬರಣಿಗೆ ತುಂಬಿ ಇಡಿ. ಮಾರನೇ ದಿವಸದಿಂದ ನಂಜಿಕೊಳ್ಳಲು-ಅನ್ನಕ್ಕೆ ಕಲಸಿಕೊಳ್ಳಲು-ಹಾಗೆ ಒಂಚೂರು ನೆಕ್ಕು ಬಾಯಿ ಚಪ್ಪರಿಸಲು ರೆಡಿ. ಒಂದಿಷ್ಟು ನಿಂಬೆಹಣ್ಣಿನ ಬಾಗವನ್ನು ಸೇರಿಸಿದರೆ ದಿಡೀರ್ ನಿಂಬು ಉಪ್ಪಿನಕಾಯಿಗೂ ಸೈ. ರುಚಿ ಮಾತ್ರಾ ಸೂಪರ್ ಅಂದ್ರೆ ಸೂಪರ್. ಆದರೆ ಅಂತಹದ್ದೇ ರುಚಿ ಬರಲು ಮತ್ತೆ ಮೊದಲಿನಿಂದ ಓದಬೇಕು ಯಾಕಾಗಿ ಎಂದರೆ ನಿಮ್ಮ ಪ್ರಶ್ನೆ "ಒಣಮೆಣಸಿನಕಾಯಿ.....?"
(ಅಯ್ಯೋ ಇದು ಎಲ್ಲರಿಗೂ ಗೊತ್ತು ಬರೆಯುವುದು ಬೇಡ ಅಂತ ನನ್ನವಳ ಬಳಿ ಅಂದೆ, ಅವಳು"ಬರೀರಿ ಇರ್ಲಿ, ದುಡ್ಡು ಕೊಡಕ ಧೂಪ ಹಾಕಕ" ಅಂದದಕ್ಕಾಗಿ ಬರೆದಿದ್ದೇನೆ. ರುಚಿ ನೆನೆಸಿಕೊಂಡರೆ ಬರೆದದು ಸಾರ್ಥಕ ಬಿಡಿ)

Tuesday, July 13, 2010

ಅದರಿಂದ ನೆಂಟರು ಅದರಿಂದ ಇಷ್ಟರು


ಮಧ್ಯಾಹ್ನ ದ ಊಟಯ ಸಮಯ ಹತ್ತಿರ ಬಂದಾಗ ಅಮ್ಮ ನ ಬಳಿ "ಇವತ್ತು ಎಂತ ಆಸೆ(ಪದಾರ್ಥ) " ಅಂತ ಕೇಳುವುದು ನಿತ್ಯದ ಸಂಪ್ರದಾಯ. ಆವಾಗ ಅಮ್ಮ "ಅದರಿಂದ ನೆಂಟರು ಅದರಿಂದ ಇಷ್ಟರು" ಅಂತ ಹೇಳಿದರೆ ಯಾವುದೋ ಕಾಡು ಸೊಪ್ಪಿನ ತಂಬುಳಿ ಹಾಗೂ ಗೊಜ್ಜು ಅಂತ ಅರ್ಥ. ಅಯ್ಯ ಅದಕ್ಕೆ ಹಾಗೇಕೆ ಹೇಳಬೇಕು ಅಂತ ನಿಮ್ಮ ಪ್ರಶ್ನೆಯಾದರೆ ಉತ್ತರ ಹೀಗಿದೆ. ಸೊಪ್ಪಿನ ಗೊಜ್ಜು ಬೀಸಿದ ಒರಳನ್ನು ತೊಳೆಯುತ್ತಾರೆ ತೊಳೆದ ನೀರು ತಂಬುಳಿಯಾಗಿ ಮಾರ್ಪಡುತ್ತದೆ. ಅದರ ರುಚಿಯ ಬಲ್ಲವನೇ ಬಲ್ಲ. ಈ ಮಳೆಗಾಲ ಬಂತೆಂದರೆ ನಿತ್ಯ ಮನೆಯಲ್ಲಿ ಕಾಡುಸೊಪ್ಪಿನದೇ ಪದಾರ್ಥಗಳು. ಬಿದಿರಿನ ಮೊಳಕೆಯಿಂದ ಪ್ರಾರಂಭವಾಗಿ ಚೊಗಟೆ, ಎಲವರಿಗೆ,ಚಿತ್ರಮೂಲ, ಗೋಳಿ, ಬಸಳೆ, ನೆಲಮಾವು, ಮುಂತಾದ ನೆಲಸೊಪ್ಪಿನಿಂದ ಆರಂಭವಾಗಿ ಮರದ ಕೆಸದ ತನಕ ಸಾಗಿ ನಿಲ್ಲುತ್ತದೆ. ಇವು ರೋಗನಿರೋಧಕವಂತೆ ಆರೋಗ್ಯದ ಮೂಟೆಯಂತೆ ಎಂಬ ಅಂತೆಕಂತೆಗಳು ಈಗಿನ ಕಾಲದ ಡೈಲಾಗ್ ಗಳಾದರೂ ಅಂದಿನ ಕಾಲದಲ್ಲಿ ವ್ಯಾಪಕ ಮಳೆಯಿಂದಾಗಿ ಪೇಟೆ ತರಕಾರಿ ತರಲು ಆಗದ್ದರಿಂದಾಗಿ ಆರ್ಥಿಕ ಹಿಂಜರಿತವಿದ್ದ ಪರಿಣಾಮವಾಗಿ ಮಲೆನಾಡಿನಲ್ಲಿ ಈ ಸೊಪ್ಪುಸದೆಗಳು ಪದಾರ್ಥವಾಗಿ ಬಳಕೆಗೆ ಬಂದಿವೆ. ಇವತ್ತಿನ ಸಾಂಬಾರು ಪದಾರ್ಥಗಳು ಆ ಕಾಲದ ಸೊಪ್ಪಿನ ಗೊಜ್ಜುಗಳ ಜತೆ ಸೇರಿ ವಿಶಿಷ್ಠ ಅದ್ಭ್ತತ ರುಚಿಯನ್ನು ತಂದೊಡ್ಡಿವೆ.
ಇವತ್ತು ಎಲವುರುಗ ಸೊಪ್ಪಿನ ಗೊಜ್ಜು ಮತ್ತು ತಂಬಳಿ. ರಸ್ತೆ ಬದಿಯಲ್ಲಿ ಜೂನ್ ತಿಂಗಳ ನಂತರ ತನ್ನಷ್ಟಕ್ಕೆ ಹುಟ್ಟುವ ಈ ಗಿಡ ಈಗ ಬಲಿತು ನಿಂತಿದೆ. ಅದರ ಎಲೆಯನ್ನು ಕೊಯ್ದು ಹುರಿದು ಅದಕ್ಕೆ ಜೀರಿಗೆ ಕಾಳುಮೆಣಸು ಕೊಬ್ಬರಿ ಸೇರಿಸಿ ಗೊಜ್ಜು ಹಾಗೂ ಒಳ್ಳು ತೊಳೆದ ನೀರಿಗೆ ಬೆಲ್ಲ ಹಾಕಿ ಒಂದು ಒಗ್ಗರಣೆ ಹಾಕಿ ತಂಬುಳಿ ಸಿದ್ಧವಾಗಿದೆ. ಇನ್ನೂ ಇಳಿಸುವುದೊಂದೇ ಬಾಕಿ. ಪುರುಸೊತ್ತು ಇದ್ದರೆ ನೀವು ಬನ್ನಿರಲ್ಲ. ಬಾರಿಸೋಣ, ಆರೋಗ್ಯವಾಗಿರೋಣ, ಅದೊಂದಿದ್ದರೆ ಸಂಪತ್ತು ಇದ್ದಂತೆಯಂತೆ. ಹಾಗೆ ಹೇಳುವುದು ಕೇವಲ ಆರೋಗ್ಯವೊಂದಿದ್ದು ಸಂಪತ್ತು ಇಲ್ಲದಿರುವ ಜನ ಅಂತ ಹೇಳುವುದು ಸತ್ಯವಲ್ಲದಿದ್ದರೂ ತೀರಾ ಸುಳ್ಳಂತೂ ಅಲ್ಲ. ಹ್ಯಾಪಿ ಊಟ.

Monday, July 12, 2010

ಹೆಣ್ಣು ಕೊಡುವುದಿಲ್ಲ ಬಿಡಿ.

ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜ
ಕಿವಿ ಕೇಳಿಸದು, ಪಾಪ ವಯಸ್ಸಾಗಿದೆ ಬಿಡಿ
ಬಳೆ ಸದ್ದು ಗಜ್ಜೆ ಸಪ್ಪಳ
ಮಾತ್ರ ಕೇಳಿಸುವುದು, ಕುಹಕ ಮಾಡಬೇಡಿ

ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜ
ಕಣ್ಣು ಕಾಣಿಸದು, ಪಾಪ ವಯಸ್ಸಾಗಿದೆ ಬಿಡಿ
ಸೀರೆಯ ಬಣ್ಣ ಜಡೆಯ ಉದ್ದ
ಮಾತ್ರ ಕಾಣಿಸುವುದು, ವ್ಯಂಗ್ಯಮಾಡಬೇಡಿ.

ನಮ್ಮೂರಲ್ಲೊಬ್ಬ ಅಜ್ಜಿಯಿಲ್ಲದ ಅಜ್ಜ
ನಿಲ್ಲಲಾಗದು, ಪಾಪ ವಯಸ್ಸಾಗಿದೆ ಬಿಡಿ
ಕಾಲೇಜು ಬಸ್ಸಿನಲ್ಲಿ

ಮಾತ್ರಾ ನಿಲ್ಲುವುದು, ತಮಾಷೆ ಮಾಡಬೇಡಿ

ಕತೆ ಕೇಳಿದ ನೀವು ಅಜ್ಜನ ಬಳಿ ಸಾಗಿ ಸಣ್ಣಗೆ ಹೇಳಿಬಿಡಿ
"ಅಜ್ಜಾ ನೀವು ಮದುವೆಯಾಗಿಬಿಡಿ"
ಹೇಳುವನು ಅಜ್ಜ ಕಣ್ಣಗಲಿಸಿ

ಕೊಟ್ಟರೆ ಈ ಕ್ಷಣ ಹೆಣ್ಣ ಮದುವೆಗೆ ನಾನು ರೆಡಿ.