Monday, September 13, 2010

ಹಿಪ್ಪಲಿ ಬುಡ ಕಾಳುಮೆಣಸಿನ ತಲೆ


ಕಾಳುಮೆಣಸಿಗೆ ಈಗ ಬಂಗಾರದ ಬೆಲೆ. ಬೆಲೆ ಬಂಗಾರದ್ದು ನಿಜ ಆದರೆ ಬೆಳೆ ಇಲ್ಲದೆ ಕೃಷಿಕರು ಕೈ ಹೊಸಕಿಕೊಳ್ಳುವಂತಾಗಿದೆ. ಕಾಳು ಮೆಣಸಿನ ಬೆಳೆ ಇರದಿರಲು ಪ್ರಮುಖ ಕಾರಣ ಮೆಣಸಿನ ಬಳ್ಳಿ ಹುಲುಸಾಗಿ ಬೆಳೆದು ಇನ್ನೇನು ಫಸಲು ನೀಡಿತು ಎನ್ನುವಾಗ ಸೊರಗುರೋಗ ಇಡೀ ಬಳ್ಳಿಯನ್ನು ಕಾಯಿಸಮೇತ ಒಣಗಿಸಿ ಸಾಯಿಸಿಬಿಡುತ್ತದೆ. ಹಾಗಾಗಿ ಎಂಟು ಹತ್ತು ಕ್ವಿಂಟಾಲ್ ಬೆಳೆ ತೆಗೆಯುತ್ತಿದ್ದ ಕೃಷಿಕರು ಕೆಜಿ ಲೆಕ್ಕದ ಫಸಲು ಕೊಯ್ಯುತ್ತಿದ್ದಾರೆ. ಕಾಳುಮೆಣಸಿನಲ್ಲಿ ನಾನಾ ತರಹದ ಜಾತಿಯ ಬಳ್ಳಿಗಳ ಸಂಶೋಧನೆಯಾಗಿದರೂ ಸೊರಗು ರೋಗ(ವಿಲ್ಟ್)ದ ಬಾಧೆಯಿಂದ ಮುಕ್ತವಾಗಿಲ್ಲ. ಈಗ ಕೃಷಿಕರು ತಮ್ಮದೇ ಆದ ದಾರಿಯೊಂದನ್ನು ಇದಕ್ಕೆ ಪರ್ಯಾಯವಾಗಿ ಹುಡುಕಿಕೊಳ್ಳುತ್ತಿದ್ದಾರೆ.
ಕಾಳುಮೆಣಸಿನ ಬಳ್ಳಿಯ ಪ್ರಬೇಧದ ಹಿಪ್ಪಲಿ(ಪೈಪರ್ ಲಾಂಗಂ) ಪೊದೆಯಾಗಿ ಬೆಳೆಯುವ ಸಸ್ಯ. ಇದಕ್ಕೆ ಸೊರಗುರೋಗದ ಬಾಧೆಯಿಲ್ಲ. ಇದರ ಸಶಕ್ತ ಬುಡವನ್ನು ಆಯ್ದುಕೊಂಡು ಸ್ಥಳೀಯ ಮೆಣಸಿನ ಬಳ್ಳಿಯ ತಲೆಯನ್ನು ಅದಕ್ಕೆ "ವಿ" ಕಸಿಯ ಮುಖಾಂತರ ಕಸಿಕಟ್ಟಿ ಯಶಸ್ವಿಯಾಗುತ್ತಿದ್ದಾರೆ. ಇದರ ಆರಂಭದಕ್ಷಿಣ ಕನ್ನಡದಲ್ಲಾದರೂ ಈಗ ಕಸಿ ಬಲ್ಲ ಕೃಷಿಕರೆಲ್ಲರೂ ಇದೇ ಹಾದಿ ತುಳಿಯುತ್ತಿದ್ದಾರೆ. ಒಮ್ಮೆ ಕಸಿ ಮೆಣಸು ಚಿಗುರಿದ ನಂತರ ಬುಡದಲ್ಲಿ ಹೊರಡುವ ಹಿಪ್ಪಲಿ ಗೆಲ್ಲುಗಳನ್ನು ಒಂದೆರಡು ತಿಂಗಳ ಕಾಲ ಚಿವುಟಿದರೆ ನಂತರ ತೋಟದಲ್ಲಿ ಬಳ್ಳಿ ಹಬ್ಬಲು ಸಿದ್ಧ. ಸೊರಗು ರೋಗ ಭಾಧೆಯಿಂದ ಆಚೆ ಬಂದರೆ ಅಡಿಕೆ ಬೆಳೆಗಾರರಿಗೆ ಕಾಳು ಮೆಣಸಿನ ಮೂಲಕ ಹೆಚ್ಚುವರಿ ಆದಾಯ ದೊರತಂತಾಗುತ್ತದೆ ಎಂಬುದು ಕೃಷಿಕರ ಮಾತು. ಈಗಷ್ಟೆ ಮರಕ್ಕೆ ಕಸಿ ಬಳ್ಳಿಗಳು ಹಬ್ಬಲು ಶುರುವಾಗಿರುವುದರಿಂದ ಸಾಧಕಬಾಧಕಗಳು ಇನ್ನು ನೋಡಬೇಕಿದೆ ಎನ್ನುತ್ತಾರೆ ಕೃಷಿಕ ಸಾಗರದ ಸಮೀಪದ ಕಡವಿನಮನೆ ಟಿ.ಎಲ್ ತಿರುಮಲ. ಕಸಿಯಲ್ಲಿ ಬದುಕುವ ಪ್ರಮಾಣ ಸ್ವಲ್ಪ ಕಡಿಮೆ ಇರುವುದರಿಂದ ನುರಿತ ಕಸಿಗಾರರು ಇದಕ್ಕೆ ಬೇಕು ಎನ್ನುವುದು ಅವರ ಅನುಭವದ ಮಾತು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ೦೮೧೮೩-೨೦೭೬೫೮ (ಬೆಳಿಗ್ಗೆ ೭-೮)
(ಇಂದಿನ ಲವಲವಿಕೆ ಯಲ್ಲಿ ಪ್ರಕಟಿತ)