Monday, November 8, 2010

ಕೈಗೆಟುಕದ ಲೇಡಿಸ್ ಫಿಂಗರ್


ತರಕಾರಿಯ ದರ ಆಕಾಶಕ್ಕೆ ಏರಿದೆ ಅಂತ ಗೊಣಗುಟ್ಟುವ ಜನರಿಗೆ ಯಾವತ್ತೂ ಕಡಿಮೆಯಿಲ್ಲ. ಇಲ್ಲೊಂದು ಬೆಂಡೆಗಿಡ ಆ ಮಾತಲ್ಲಿನ ಆಕಾಶಕ್ಕೆ ಎಂಬಷ್ಟೆ ಶಬ್ಧವನ್ನು ಅದೆಲ್ಲಿಯೋ ಕೇಳಿಸಿಕೊಂಡಿರಬೇಕು. ಹಾಗಾಗಿ ಎದೆಮಟ್ಟಕ್ಕೆ ಬೆಳೆದು ಫಸಲು ನೀಡಬೇಕಾಗಿದ್ದ ಬೆಂಡೆ ಗಿಡ ಬೆಳೆಯುತ್ತಲೇ ಸಾಗಿದೆ. ಅದೂ ಅಂತಿತಹ ಎತ್ತರವಲ್ಲ ಅನಾಮತ್ತು ಹದಿನೈದು ಅಡಿ. ಸಾಮಾನ್ಯವಾಗಿ ಬೆಂಡೆಗಿಡ ಎಂದರೆ ಮೂರ್ನಾಲ್ಕು ಅಡಿ ಎತ್ತರಕ್ಕೆ ಏರಿ ಗಣ್ಣು ಗಣ್ಣಿಗೂ ಕಾಯಿಬಿಟ್ಟು ಮನುಷ್ಯರ ಹೊಟ್ಟೆ ತಂಪಾಗಿಸುತ್ತದೆ. ಆದ್ರೆ ಈ ಗಿಡಕ್ಕೆ ಅದೇನನ್ನಿಸಿತೋ ಏನೋ ಬೆಳೆಯುತ್ತಲೇ ಸಾಗಿದೆ.
ಸಾಗರ ತಾಲ್ಲೂಕು ಕಡವಿನಮನೆಯ ಸವಿತ ಎಂಬುವವರು ನೆಟ್ಟ ಈ ಗಿಡ ಈಗ ಅವರ ಕೈಗೂ ಎಟುಕುವುದಿಲ್ಲ. ಹದಿನೈದು ಅಡಿ ಎತ್ತರದ ಮೇಲೆ ಒಂದು ಗೊಂಚಲು ಕಾಯಿಬಿಟ್ಟು ತೊನೆದಾಡುತ್ತಿದೆ. ಪೇಟೆಗೆ ಹೋಗಿ ಬೆಂಡೆ ಕೊಳ್ಳೋಣಾವೆಂದರೆ ದುಬಾರಿ ದರ ಕೈಗೆಟುಕದು ಎಂದು ಮನೆಯಲ್ಲಿ ಬೀಜ ಬಿತ್ತಿ ಗಿಡಬೆಳೆದು ತರಕಾರಿ ಕೊಯ್ದು ಜತೆಯಲ್ಲಿ ಬೆಳೆದ ಪೋಸ್ ಕೋಡೋಣ ಎಂದರೆ ದುರಂತ ನೋಡಿ ಇಲ್ಲೂ ಕೈಗೆಟುಕದೇ ಗಗನಕ್ಕೇರಿ ನಿಂತಿದೆ ಬೆಂಡೆ. ಬೆಂಡೆ ಗಿಡವನ್ನು ಬೆಂಡಾಗಿಸಿ ಕಾಯಿ ಕೊಯ್ಯೋಣವೆಂದರೆ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?. ಎಂಬ ಪ್ರಶ್ನೆ ಬೆಳೆದವರಿಗೆ. ತಳಕುತ್ತಾ ಬಳುಕುತ್ತಾ ಫಿಂಗರ್ ಗೆ ಎಟುಕದಂತೆ ಬೆಳೆದು ನಿಂತ ಈ ಲೇಡಿಸ್ ಫಿಂಗರ್ ನೋಡಲಂತೂ ಬಲು ಅಚ್ಚರಿಯೇ ಸರಿ.
(ಇಂದಿನ ವಿಕ ಲವಲವಿಕೆಯಲ್ಲಿ ಪ್ರಕಟಿತ)

Sunday, November 7, 2010

ಆಚೆ ಬಂತು ಕಟ್ಟು ಕತೆಯ ಕಟ್ಟು


ಕಟ್ಟು ಕತೆಯ ಕಟ್ಟು ಬಿಡುಗಡೆಯಾಯಿತು. ನಮ್ಮಂಥಹ ಪುಟ್ಟ ಹಳ್ಳಿಯಲ್ಲಿ ಅನಾಮತ್ತು ನೂರು ಜನ ಪಾಲ್ಗೊಂಡಿದ್ದರು. ಅರ್ಚನಾ ಶಿವಮೊಗ್ಗ ಹಾಡಿ ಅಕ್ಷರ ಹೆಗ್ಗೋಡು ಬಿಡುಗಡೆಯ ಮಾತನ್ನಾಡಿ ಹುರುಪು ತುಂಬಿದರು. ಕಟ್ಟು ಕತೆಯಲ್ಲಿನ ಕಟ್ಟಿಗಿಂತ ಅವರಿಗೆ ಇಷ್ಟವಾಗಿದ್ದು ಒಂದು ಜೇನಿನ ಹಿಂದೆ ಎಂಬ ನನ್ನ ಹಿಂದಿನ ಪುಸ್ತಕ. ನನಗೆ ಸುಮ್ಮನೆ ಹೊಗಳಿ ಅಟ್ಟಕ್ಕೇರಿಸುವ ಮನಸ್ಸಿಲ್ಲ ಇದ್ದುದ್ದನ್ನು ಇದ್ದಹಾಗೆಯೇ ಹೇಳುತ್ತೇನೆ ಒಂದು ಜೇನಿನ ಹಿಂದೆ ಎಂಬುದು ಬರಿದೇ ಜೀನು ಸಾಕಾಣಿಕೆಯ ಪುಸ್ತಕವಲ್ಲ ಅದರಲ್ಲಿ ನಾವು ಕಳೆದುಕೊಂಡ ಜೀವನವಿದೆ ಅದೇ ಕಟ್ಟು ಕತೆಯ ಕಟ್ಟಿನಲ್ಲಿ ಕೆಲವು ಕಡೆ ಮರುಕಳಿಸಿದೆ ಇಲ್ಲೊಂದು ಅದ್ಬುತ ಬರಹಗಾರ ಇದ್ದಾರೆ ಎಂಬುದೇ ಸಂತೋಷ ಎಂದರು.

ನನಗೆ ಅದೇನೋ ಒಂಥರಾ ಆನಂದ, ಆ ಆನಂದ ಅಕ್ಷರ ನನ್ನ ಹೊಗಳಿದ್ದಕ್ಕಲ್ಲ, ಅವರೂ ಹೊಗಳಲೂ ಇಲ್ಲ, ಒಂದು ಜೇನಿನ ಹಿಂದೆ ಎಂಬ ಪುಸ್ತಕ ಬರೆದ ಮೂರು ವರ್ಷದನಂತರ ಅದನ್ನು ನಾನು ಬರೆದ ಅರ್ಥದಲ್ಲಿ ಓದಿದವರೊಬ್ಬರು ಹಾಗೆಯೇ ಹೇಳಿದರಲ್ಲ, ಅದಕ್ಕೆ ಖುಷಿಯಾಯಿತು.

ಮಿಕ್ಕಂತೆ ನೀವೆಲ್ಲಾ ಹರಸಿದ್ದೀರಿ ಬ್ಲಾಗ್ ಓದುಗರು ಮೂವರು ಬಂದಿದ್ದರು ಇನ್ನು ನಿಮಗೆ ಹೇಗಾದರೂ ಮಾಡಿ ಪುಸ್ತಕ ತಲುಪಿಸಬೇಕಿದೆ. ತಲುಪುವಂತಹ ತಾಕತ್ತು ಅದರಲ್ಲಿ ಇದ್ದರೆ ತಡವಾಗಿಯಾದರೂ ತಲುಪುತ್ತೆ ಬಿಡಿ. ತಲುಪಿ ನಿಮ್ಮ ಮನಸ್ಸಿನೊಳಗೆ ಇಳಿದಮೇಲೆ ಸಿಗುತ್ತೀರಲ್ಲ ಆವಾಗ ಒಂದಿಷ್ಟು ಕತೆ ಹೇಳೋಣ ಅಲ್ಲಿಯವರೆಗೆ ಕಟ್ಟುತ್ತಲೇ ಕುಟ್ಟುತ್ತಲೇ ಇರೋಣ ಮತ್ತೊಮ್ಮೆ ಹ್ಯಾಪೀ ದೀಪಾವಳಿ.