Monday, December 20, 2010

ನವಿಲು ಮೊಟ್ಟೆ ಕೋಳಿ ಕಾವು


ಗುಡುಗುಡು ಸದ್ದಿಗೆ ನಾಟ್ಯವಾಡುವ ಮಯೂರವನ್ನು ನೋಡಲು ಅದೆಷ್ಟು ಸೊಬಗು, ಗರಿಬಿಚ್ಚಿ ಕುಣಿಯುವ ನವಿಲಿನ ನಾಟ್ಯಕ್ಕೆ ಮನ ಪುಳಕಗೊಳ್ಳದಿರಲು ಸಾದ್ಯವೇ ಇಲ್ಲ. ಅಂಥಹ ನವಿಲಿನ ನೃತ್ಯ ಹತ್ತಿರದಿಂದ ನೋಡಿ ಸವಿಯುವ ಭಾಗ್ಯ ನಮ್ಮ ನಿಮ್ಮದಾದರೆ ವಾವ್ ಎನ್ನಬಹುದು. ಆದರೆ ಮನುಷ್ಯರನ್ನು ದೂರದಿಂದ ಕಂಡರೆ ಕಂಬಿಕೀಳುವ ನವಿಲು ಅದಕ್ಕೆ ಅವಕಾಶ ನೀಡದು. ಕಾಡಿನಲ್ಲಿ ಸ್ವೇಚ್ಛೆಯಾಗಿ ಓಡಾಡಿಕೊಂಡಿರುವ ನಮ್ಮ ರಾಷ್ಟ್ರಪಕ್ಷಿ ನವಿಲು ಸಾಕುಪ್ರಾಣಿಯಲ್ಲ, ನವಿಲನ್ನು ಸಾಕಿದವರು ಅಂಥಹ ಅವಕಾಶ ಸಿಕ್ಕಿದವರು ಅತ್ಯಂತ ವಿರಳ. ಆದರೆ ನನಗೆ ಈ ವರ್ಷ ಅಂಥಹ ಅಪರೂಪದ ಅವಕಾಶ ಒದಗಿಬಂದಿದೆ.
ಕಳೆದ ತಿಂಗಳು ಮಳೆಗಾಲ ಮುಗಿದು ಇನ್ನೇನು ಚಳಿ ಶುರುವಾಯಿತು ಎನ್ನುವ ದಿವಸಗಳಲ್ಲಿ ತೋಟದ ಬದು ಚೊಕ್ಕಮಾಡುತ್ತಿದ್ದ ಹೆಣ್ಣಾಳುಗಳು "ಪಟಪಟ" ಎಂದು ಸದು ಮಾಡುತ್ತಾ ಏನೋ ಹಾರಿಹೋದ ಸದ್ದನ್ನು ಕೇಳಿ ಗಾಬರಿಯಾಗಿ ಕೂಗಿಕೊಂಡರು. ನಾನು ಹಾಗೂ ನಮ್ಮ ತೋಟದ ಮೇಸ್ತ್ರಿ ರಾಮಕೃಷ್ಣ ಹೆಣ್ಣಾಳುಗಳ ಚೀರಾಟ ಕೇಳಿ ಹತ್ತಿರ ಹೋಗಿ ನೋಡಿದಾಗ ಹಾಗೆ ಓಡಿಹೋಗಿದ್ದು ನವಿಲೆಂದು ತಿಳಿಯಿತು. ರಾಮಕೃಷ್ಣನ ಲೆಕ್ಕಾಚಾರದ ಪ್ರಕಾರ ನವಿಲು ಹಾಗೆ ಪೊದೆಯಲ್ಲಿ ಇತ್ತೆಂದರೆ ಅಲ್ಲಿ ಮೊಟ್ಟೆ ಇಟ್ಟಿದೆ ಎಂದರ್ಥ. ಸ್ವಲ್ಪ ಹೊತ್ತು ಪೊದೆಯ ಸಂದಿನಲ್ಲಿ ಹುಡುಕಿದಾಗ ರಾಮಕೃಷ್ಣನ ಲೆಕ್ಕಾಚಾರ ಸರಿಯಾಗಿತ್ತು. ಕೋಳಿ ಮೊಟ್ಟೆಗಿಂತ ಮೂರುಪಟ್ಟು ದೊಡ್ಡದಾಗಿರುವ ಐದು ನವಿಲುಮೊಟ್ಟೆಗಳು ಅಲ್ಲಿದ್ದವು. ಚೊಕ್ಕಟಮಾಡಲು ಬಂದ ಹೆಣ್ಣಾಳುಗಳಿಗೆ ಸಂಭ್ರಮ ಹೇಳತೀರದು, ಆದರೆ ಆ ಸಂಭ್ರಮಕ್ಕೆ ನನ್ನ ಇರುವಿಕೆ ಅವರಿಗೆ ತುಸು ಇರಿಸುಮುರಿಸನ್ನು ಉಂಟುಮಾಡಿತ್ತು. ಅಕಸ್ಮಾತ್ ಸಿಕ್ಕ ಭೂರಿ ಬೋಜನವನ್ನು ಮನೆಗೆ ಒಯ್ಯುವಂತಿರಲಿಲ್ಲ. ನಾನು ಅವೆಲ್ಲಾ ಅರ್ಥವಾಗದವನಂತೆ ಅವರಿಗೆ " ಅಲ್ಲಿ ಚೊಕ್ಕಮಾಡುವುದುಬೇಡ, ನವಿಲಿಗೆ ತೊಂದರೆಯಾಗುತ್ತದೆಯೆಂದು" ಅಣತಿಯಿಟ್ಟು ಮನೆ ಸೇರಿದೆ. ಅವರುಗಳು ಮೊಟ್ಟೆಯನ್ನು ಮನೆಗೆ ಒಯ್ಯಲಾರದೆ ಅರೆಮನಸ್ಸಿನಿಂದ ಮನೆ ಸೇರಿದರು. ಮಾರನೇ ದಿನ ರಾಮಕೃಷ್ಣ ಅಲ್ಲಿ ಹೋಗಿ ನೋಡಿ ಬಂದವನು ಆಘಾತಕಾರಿ ಸುದ್ದಿಯೊಂದನ್ನು ತಂದ. ಜನಸಂಚಾರ ಆಗಿರುವ ಆ ಜಾಗಕ್ಕೆ ತಾಯಿನವಿಲು ಹೆದರಿ ಮತ್ತೆ ಬರುವುದನ್ನು ಕೈಬಿಟ್ಟಿತ್ತು. ಈಗ ಮೊಟ್ಟೆ ತಾಯಿಯ ಕಾವಿಲ್ಲದೆ ಮರಿಯಾಗದು, ತಾಯಿ ಮನುಷ್ಯರ ಹೆದರಿಕೆಯಿಂದ ಅಲ್ಲಿಗೆ ಬಾರದು. ಸಮಸ್ಯೆ ವಿಚಿತ್ರರೂಪಕ್ಕೆ ತಿರುಗಿತು. ಪರಿಹಾರದ ಬಗ್ಗೆ ರಾಮಕೃಷ್ಣನಲ್ಲಿ ವಿಚಾರಿಸಿದಾಗ ಆತ " ಮೊಟ್ಟೆಯಿಟ್ಟ ಕೋಳಿ ಸಿಕ್ಕಿದರೆ ಬುಟ್ಟಿಯಲ್ಲಿಟ್ಟು ಕಾವು ಕೊಡಿಸಿ ಮರಿ ತೆಗೆಸಬಹುದು" ಎಂಬ ಸಲಹೆ ನೀಡಿದ
ಈಗ ಮೊಟ್ಟೆ ಇಟ್ಟ ಕೋಳಿಯ ಹುಡುಕಾಟ ಆರಂಭವಾಯಿತು. ಸಂಜೆಯೊಳಗೆ ಕೋಳಿಸಿಗದಿದ್ದರೆ ಮೊಟ್ಟೆಗಳು ಒಂದೊಂದಾಗಿ ಕೆಡಲು ಆರಂಬಿಸುತ್ತವೆ ಎಂಬ ಭಯದ ನಡುವೆ ಮೂರ್ನಾಲ್ಕು ಜನರ ಬೈಕ್ ಸುತ್ತಮುತ್ತಲಿನ ಹಳ್ಳಿಯತ್ತ ಓಡಿಸಿಯಾಯಿತು. ನವಿಲುಮರಿಯ ಅದೃಷ್ಟವೋ ನಮ್ಮಗಳ ಶ್ರಮವೋ ಅಂತೂ ಸಂಜೆ ಆರುಗಂಟೆಗೆ ನಮ್ಮ ಮನೆಯಿಂದ ೧೫ ಕಿಲೋಮೀಟರ್ ದೂರದ ಪಡಗೋಡಿನಲ್ಲಿ ಕೋಳಿ ಇರುವುದಾಗಿಯೂ ಹಾಗೂ ಅದರ ಮೊಟ್ಟೆಗಳೆಲ್ಲ ಗುಡುಗಿನ ಕಾರಣಕ್ಕೆ ಕೆಟ್ಟುಹೋಗಿರುವುದಾಗಿಯೂ ಸುದ್ದಿ ಬಂತು. ಲಗುಬಗೆಯಿಂದ ರಾಮಕೃಷ್ಣ ಅಲ್ಲಿಗೆ ಹೋಗಿ ಕೋಳಿಯನ್ನು ತಂದ.
ದೊಡ್ಡಗಾತ್ರದ ಮೊಟ್ಟೆಯನ್ನು ನೋಡಿದ ಕೋಳಿ ಆರಂಭದಲ್ಲಿ ಕಾವುಕೊಡಲು ಕೂರಲಿಲ್ಲ. ಆದರೆ ಅದೇನು ಮನಸುಬಂತೋ ಮಾರನೇ ದಿವಸ ಬೆಳಿಗ್ಗೆಯಿಂದ ಐದುಮೊಟ್ಟೆಗಳಮೇಲೆ ಏರಿ ಕಾವು ನೀಡತೊಡಗಿತು ಕೋಳಿ. ಕಾವುಕೊಡಲು ಆರಂಭಿಸಿ ಹದಿನೈದು ದಿನಕ್ಕೆ "ಕುಂಯ್ ಕುಂಯ್" ಎನ್ನುತ್ತಾ ಮೊದಲ ಮರಿ ಹೊರಬಂತು. ಮತ್ತೆ ಕೆಲ ಕ್ಷಣಗಳಲ್ಲಿ ಇನ್ನೆರಡು ಹೊರಬಂದು ಕೋಳಿಯ ಸುತ್ತ ಸುತ್ತತೊಡಗಿತು. ಮತ್ತೆರಡು ಮೊಟ್ಟೆ ಅನಿರೀಕ್ಷಿತ ಮಳೆಗುಡುಗಿನ ಕಾರಣ ಫಲಿತಗೊಳ್ಳಲಿಲ್ಲ. ಕೋಳಿಯ ಭಾಷೆ ಅರ್ಥ ಮಾಡಿಕೊಳ್ಳುವಲ್ಲಿ ಆರಂಭದ ಒಂದೆರಡು ದಿವಸ ಎಡವಿದ ನವಿಲುಮರಿಗಳು ನಂತರ ಅದರ ಹಿಂದೆ ಸುತ್ತತೊಡಗಿವೆ ಹಾಗೂ "ಕಚಕಚ" ಎಂದು ಕೋಳಿ ಕೆದರಿಕೊಟ್ಟ ಆಹಾರ ತಿನ್ನುತ್ತಿವೆ. ಹೀಗೆ ಒಂದು ತಿಂಗಳು ಸಾಕಿ ಆನಂತರ ಕಾಡಿಗೆ ಬಿಡಬೇಕಿದೆ. ಅಂತೂ ಇಂತೂ ಹರಸಾಹಸಪಟ್ಟು ಮೂರು ನವಿಲು ಮರಿಯನ್ನು ಕೋಳಿಯ ಸಹಾಯದಿಂದ ರಕ್ಷಿಸಿದ ಸಮಾಧಾನ ಸಿಕ್ಕಿದೆ.