Tuesday, May 31, 2011

"ಚಂದಮಾಮ"


"ಚಂದಮಾಮ" ಎಂಬ ನಾಲ್ಕಕ್ಷರದ ಮೋಡಿ ಬಲ್ಲವನೇ ಬಲ್ಲ. ಮಕ್ಕಳ ಮನಸ್ಸಿಗೆ ಚಂದ್ರ ಎಂಬ ಬೆಳ್ಳನೆಯ ಗ್ರಹ ಅದ್ಬುತವಾಗಿ ಆಶ್ಚರ್ಯಕರವಾಗಿ ಕಂಡು ಅವರವರ ತಾಯಿಂದರ ಮೂಲಕ ಚಂದಮಾಮ ನಾಗಿ ಪುಳಕಗೊಳಿಸುತ್ತಾ ಬಂದಿದ್ದಾನೆ ಲಾಗಾಯ್ತಿನಿಂದಲೂ. ಮನಸ್ಸನ್ನು ಪ್ರಪುಲ್ಲಗೊಳಿಸುವ ವಿಷಯಗಳಿಗೆಲ್ಲ ಚಂದಮಾಮನೇ ಮೂಲಾಧಾರ. ಅದೇಕೆ ತಾಯಿಂದರು ಚಂದಮಾಮನಿಗೆ ಗಂಟುಬಿದ್ದದ್ದು?, ಮಕ್ಕಳೇಕೆ ಮರುಳಾದದ್ದು?, ಎಂಬ ಪ್ರಶ್ನೆಗೆ ಪರಿಪೂರ್ಣ ಉತ್ತರ ಕಂಡುಹಿಡಿಯಲಾಗದಿದ್ದರೂ "ಚಂದಮಾಮ" ಎಂಬ ಶಬ್ದ ತಂಪಾಗಿ ಮನಸ್ಸನ್ನು ಪುಳಕಗೊಳಿಸುವುದಂತೂ ನಿಶ್ಚಿತ. ಕಪ್ಪುಕತ್ತಲ ಆಕಾಶದಲ್ಲಿ ಬೆಳ್ಳನೆಯ ಗೋಲವಾಗಿ ತೋರುವ ಚಂದ್ರ ಮನುಷ್ಯನ ಮಿದುಳಿನಲ್ಲಿ ತಂಪಾಗಿ ಅಚ್ಚಾಗಿದ್ದಾನೆ. ಹಾಗಾಗಿ ಕವಿಗಳು ಚಂದ್ರನ ಬಗೆಗೆ ಧಾರಾಳತನ ತೋರಿ ವರ್ಣಿಸಿದ್ದಾರೆ. ಸರಿ ಇವೆಲ್ಲಾ ಪ್ರಪಂಚದ ಎಲ್ಲಾ ಮನುಷ್ಯರಿಗೆ ಸಕಲ ಜೀವಿಗಳಿಗೆ ಅವರವರ ಮನಸ್ಸಿನ ಭಾವನೆಗಳಿ ತಕ್ಕಂತೆ ಮೂಡಿ ನೆನಪಿನಂಗಳದಲ್ಲಿ ಅಚ್ಚೊತ್ತಿದ ಚಂದ್ರನ ಕತೆಯಾಯಿತು, ಆದರೆ ಅದೇ "ಚಂದಮಾಮ" ಎಂಬ ನಾಲ್ಕಕ್ಷರ ಭಾರತೀಯ ಮನಸ್ಸಿಗೆ ಬೇರೆಯದೇ ಆದ ರೂಪದಲ್ಲಿ ಮೂಡಿದೆ. ಅದುವೆ ದಶಕಗಳಿಂದ ಭಾರತೀಯರ ಬಾಲ್ಯವನ್ನು ಪುಳಕಗೊಳಿಸುತ್ತಾ ತಿಂಗಳಿಗೊಮ್ಮೆ ಪ್ರಕಟವಾಗುತ್ತಾ ಬಂದಿರುವ ಕಥಾ ಪುಸ್ತಕ.
"ಚಂದಮಾಮ" ನಮ್ಮೆಲ್ಲರ ಬಾಲ್ಯದ ಸವಿನೆನಪು ಎಂದರೆ ತಪ್ಪಾಗಲಾರದು. ಬಾಲಮಿತ್ರ ಮಕ್ಕಳ ಪ್ರಪಂಚ ಎಂಬ ಹತ್ತು ಹಲವು ಕಥಾಪುಸ್ತಕಗಳು ಪ್ರಕಟಗೊಳ್ಳುತ್ತಿದ್ದರೂ ಚಂದಮಾಮ ಎಂಬ ಕಥಾ ಪುಸ್ತಕಕ್ಕೆ ವಿಶೇಷ ಸ್ಥಾನ. ೧೯೪೭ ರಲ್ಲಿ ಪ್ರಾರಂಭವಾದ ಚಂದಮಾಮ ಮಧ್ಯದಲ್ಲಿ ಕೆಲಕಾಲ ಸ್ಥಗಿತಗೊಂಡರೂ ತದನಂತರ ಮುಂದುವರೆಯುತ್ತಾ ಬಂದಿದೆ. ಬಿ.ನಾಗಿರೆಡ್ಡಿ ಹಾಗೂ ಚಕ್ರಪಾಣಿ, ಈ ಚಂದಮಾಮದ ಸೃಷ್ಟಿಕರ್ತರು. ಈ ಮಾಸಿಕವನ್ನು " ಭಾರತೀಯರ ಬಾಲ್ಯವನ್ನು ಸಾಂಪ್ರದಾಯಿಕ ಕತೆಗಳ ಮೂಲಕ ವಿದ್ಯಾವಂತರನ್ನಾಗಿಸುವ" ಪ್ರಮುಖ ಉದ್ದೇಶದೊಂದಿಗೆ ಆರಂಭಿಸಲಾಯಿತು.(ಕಿರು ಪರಿಚಯಕ್ಕೆ ಬಾಕ್ಸ್ ನೋಡಿ) ಬಾಲ್ಯ ಎಂಬುದು ಮನುಷ್ಯನಿಗೆ ಬಹು ಮುಖ್ಯ ಘಟ್ಟ. ಹಸಿಮಣ್ಣಿನ ಗೋಡೆಯಂತಹ ಮನಸ್ಸಿನ ಬಾಲ್ಯ ಅಚ್ಚೊತ್ತಿಕೊಳ್ಳುವ ವಿಧಾನದ ಮೂಲಕ ಪ್ರಪಂಚಕ್ಕೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಆಡುತ್ತಾ ನೋಡುತ್ತಾ, ಗಮನಿಸುತ್ತಾ ತಿಳಿದುಕೊಳ್ಳುವ ಬಾಲ್ಯಕ್ಕೆ ಸುತ್ತಮುತ್ತಲಿನ ಪರಿಸರವೇ ಆಹಾರ. ನೋಟದ ಹಂತ ದಾಟಿದ ಬಾಲ್ಯಕ್ಕೆ ಕೇಳುವ ಹಂತ. ಅಲ್ಲಿ ಕತೆ ಹೇಳುವ ಅಜ್ಜಂದಿರು ಅಜ್ಜಿಯಂದಿರು ಇದ್ದರೆ ಅಂತಹ ಮನುಷ್ಯರ ಬಾಲ್ಯಕ್ಕೆ ಗಟ್ಟಿತನ ತನ್ನಷ್ಟಕ್ಕೆ ಮೂಡುತ್ತದೆ. ಕತೆ ಕೇಳುವ ಹಂತ ದಾಟಿದಾಗ ಪ್ರಾರಂಭವಾಗುವುದು ಓದಿ ಅರ್ಥೈಸಿಕೊಳ್ಳುವ ಹಂತ. ಕಣ್ಣುಗಳ ಮೂಲಕ ಅಕ್ಷರಗಳು ಸಾಗಿ ಮಿದುಳಿನ ಕೋಶಗಳಲ್ಲಿ ಚಿತ್ರಣಮೂಡಿ ಘಟನೆಗಳು ಅಚ್ಚೊತ್ತಬೇಕು. ಆಗ ಅಲ್ಲಿ ಒಂದು ಗಟ್ಟಿಯಾದ ಭವಿಷ್ಯದ ರೂಪುರೇಷೆಗಳು ಮೂಡತೊಡಗಬೇಕು. ಅದಕ್ಕೊಂದು ಉತ್ತಮ ಮಾದ್ಯಮ ಬೇಕು. ಈ ಎಲ್ಲಾ ಬೇಕುಗಳನ್ನು ಮಕ್ಕಳ ಮನಸ್ಸಿಗೆ ಉಣಬಡಿಸಿದ್ದು "ಚಂದಮಾಮ" ಎಂಬ ಕಥಾ ಪುಸ್ತಕ ಎಂದರೆ ತಪ್ಪಾಗಲಾರದು.
ಮಕ್ಕಳ ಮನಸ್ಸನ್ನು ಮುದಗೊಳಿಸಲು ಅವರಿಗೆ ಓದಿನಲ್ಲಿ ಆಸಕ್ತಿ ಮೂಡಿಸಲು ಅವಶ್ಯಕತೆ ಪುರಾಣಪುಣ್ಯ ಕತೆಗಳು ಹಾಗೂ ಕುತೂಹಲ ಮೂಡಿಸುವ ವಿಷಯಗಳು. ಅವರ ಮನಸ್ಸುಗಳು ತರ್ಕ ವಿಶ್ಲೇಷಣೆ ಮುಂತಾದವುಗಳತ್ತ ಗಮನಹರಿಸುವಷ್ಟು ಪಕ್ವವಾಗಿರುವುದಿಲ್ಲ. ಹಾಗಾಗಿ ಅದನ್ನು ತಿಳಿಹೇಳುವ ತಾಳ್ಮೆ ಮಕ್ಕಳ ಕತೆಗಾರರಿಗೆ ಇರಬೇಕಾದ ತಾಕತ್ತು. ಚಂದಮಾಮ ಮಕ್ಕಳ ಈ ಮನಸ್ಸನ್ನು ಚನ್ನಾಗಿ ಅರಿತುಗೊಂಡಿತ್ತು ಹಾಗೂ ಅರಿತುಗೊಂಡಿದೆ. ಬಣ್ಣ ಬಣ್ಣದ ಚಿತ್ರಗಳು, ವಿಕ್ರಮ ಬೇತಾಳನ ಕತೆಗಳು, ರಾಮಯ್ಯ-ಸೋಮಯ್ಯ ನ ಕತೆಗಳು ಹೀಗೆ ಮಕ್ಕಳಿಗೆ ಏನು ಬೇಕು ಎಂಬ ನಾಡಿಮಿಡಿತವನ್ನು ಅರಿತುಕೊಂಡ ಕತೆಗಾರರ ತಂಡವನ್ನೇ ಚಂದಮಾಮ ಹೊಂದಿ ಯಶಸ್ಸಿನತ್ತ ಸಾಗುತ್ತಾ ಬಂದಿದೆ. ನಮ್ಮ ಬಾಲ್ಯಗಳಂತೂ ಟಿವಿ ಮೊಬೈಲ್ ಡಿಷ್ ಇಲ್ಲದ ದಿವಸಗಳು ಅಲ್ಲಿ ನಮಗೆ ಚಂದಮಾಮದ ಮೂಲಕ ಹೊರಗಿನ ಪ್ರಪಂಚ ನೋಡಿದ್ಡೇ ನೆನಪು. ವಿಕ್ರಮರಾಜನಿಗೆ ಬೇತಾಳ ಕತೆಯನ್ನು ಹೇಳುತ್ತಾ ಕತೆ ಕುತೂಹಲ ಘಟ್ಟಕ್ಕೆ ಬಂದಾಗ ದಿಡೀರನೇ ನಿಲ್ಲಿಸಿ ಪ್ರಶ್ನೆ ಕೇಳಿದಾಗ ನಮಗೆಲ್ಲಾ ಮೈಪರಚಿಕೊಳ್ಳುವಂತಹಾ ಪರಿಸ್ಥಿತಿ ಇಂದಿಗೂ ನೆನಪಿನ ಕೋಶದಲ್ಲಿ ಹಸಿರಾಗಿಯೇ ಇದೆ. ವಿಕ್ರಮನ ತಾಳ್ಮೆ, ಬೇತಾಳನ ಪ್ರಶ್ನೆ ಹಾಗೂ ನಂತರ ರಾಜ ನೀಡುವ ಉತ್ತರ ಮತ್ತೆ ಮೌನ ಮುರಿದ ರಾಜಾ ವಿಕ್ರಮನ ಹೆಗಲಿನಿಂದ ಪಳಕ್ಕನೆ ಮಾಯವಾಗುವ ಪರಿ ಹಾಗೂ ಆ ವಿಕ್ರಮರಾಜ ಮತ್ತೊಂದು ಬೇತಾಳ ಹೆಗಲಮೇಲೇರಿಸಿಕೊಳ್ಳಲು ಹೊರಡುವ ಸ್ಥಿತಿ ಮುಂತಾದವುಗಳೆಲ್ಲಾ ಮತ್ತೆ ಮತ್ತೆ ನಮ್ಮ ಜೀವನದ ಉದ್ದಕ್ಕೂ ನೆನಪಾಗಿ ತನ್ನದೇ ಆದಂತಹ ಛಾಪು ಮೂಡಿಸುತ್ತಿದೆ ಎಂದರೆ ಅದಕ್ಕೆ ಚಂದಮಾಮ ಹಾಗೂ ಅದನ್ನು ಓದಿದ ನಮ್ಮ ಬಾಲ್ಯವೇ ಕಾರಣ.
(ಈ ತಿಂಗಳ ಢರ್ಮಭಾರತಿಯಲ್ಲಿ ಪ್ರಕಟಿತ)