Saturday, August 4, 2012

ಅಕ್ಕಿ ಕಾಳು ಮತ್ತು ಫ್ಯಾನ್ ಬೆಲ್ಟು

ಮೊನ್ನೆ ಗುರುವಾರ ಬ್ರಾಹ್ಮಣರಾದ(ಸರ್ಕಾರವೇ ನಿನ್ನ ಜಾತಿ ಯಾವುದು ಅಂತ ಕೇಳುತ್ತೆ, ಹಾಗಾಗಿ ನಾನು ಇಲ್ಲಿ ಹೇಳಬಹುದು ಬಿಡಿ) ನಮಗೆಲ್ಲ ಫ್ಯಾನ್ ಬೆಲ್ಟ್ ಬದಲಾಯಿಸುವ ದಿನ ಅದಕ್ಕೆ ನೂಲುಹುಣ್ಣಿಮೆ ಅಂತ ಹೆಸರು. ವರ್ಷಪೂರ್ತಿ ಬೆನ್ನು ಉಜ್ಜಿ ಉಜ್ಜಿ ಕಪ್ಪು ಬಣ್ಣಕ್ಕೆ ತಿರುಗಿದ ಜನಿವಾರವನ್ನು ಬದಲಾಯಿಸುವ ದಿನ. ಊರಿನ ದೇವಸ್ಥಾನದಲ್ಲಿ ಬೆಳಗಾಮುಂಚೆ ಸಂಧ್ಯಾವಂದನೆ....? ಸೌಟು ಹಾಗೂ ಬಟ್ಟಲೊಂದಿಗೆ ಹತ್ತಿಪ್ಪತ್ತು ಜನ ಸಾಲಾಗಿ ಕುಳಿತು ಪುರೋಹಿತರ ಅಣತಿಗೆ ತಕ್ಕಂತೆ ಆಚಮನ, ದ್ವಿರಾಚಮನ, ಜನಿವಾರ ಮಾಲಾಕಾರ ಹೀಗೆ ನೂರೆಂಟು ತರಹದ ವಿದಿವಿಧಾನ ಅನುಸರಿಸಿ ಫ್ಯಾನ್ ಬೆಲ್ಟ್ ಬದಲಾಯಿಸಿಕೊಳ್ಳುತ್ತೇವೆ. ಮಾರನೇ ದಿನದಿಂದ ತುಸು ಜೋರಾಗಿ ಗಸಗಸ ಸದ್ದಿನೊಡನೆ ಬೆನ್ನುತಿಕ್ಕಿಕೊಳ್ಳಬಹುದು ಕಾರಣ ಜನಿವಾರ ಹೊಸತಲ್ಲವೇ..? ಇರಲಿ ವ್ಯಂಗ್ಯ ಜಾಸ್ತಿಯಾಗಿ ನಂತರ ಯಾರಿಗಾದರೂ ಬೆಸರವಾದರೆ ಕಷ್ಟ. (ಕಾರಣ ನಾನು ಈಗ ಏನು ಬರೆದರೂ ಅದಕ್ಕೆ ಅಪಾರ್ಥ ಹುಡುಕಿ ಸೀದಾ ತಹಶೀಲ್ದಾರರಿಗೆ ಅರ್ಜಿ ಹಾಕುವ ಪರಿಸ್ಥಿತಿ ಇದೆ-ಇದು ಗುಟ್ಟು ಯಾರಿಗೂ ಹೇಳಬೇಡಿ)


ಇರಲಿ ನಾನು ಹೇಳಹೊರಟಿರುವ ವಿಷಯಕ್ಕೆ ಬರುತ್ತೇನೆ. ಫ್ಯಾನ್ ಬೆಲ್ಟ್ ಚೇಂಜ್ ಕಾರ್ಯಕ್ರಮದಲ್ಲಿ ನನಗೆ ಬೇಸರ ತರಿಸಿದ್ದು ಎಂದರೆ ಪುರೋಹಿತರು "ಈಗ ಅಕ್ಕಿಕಾಳು ತೆಗೆದುಕೊಂಡು ಒಂದು ಸೌಟು ನೀರು ಬಿಟ್ಟು ಚೆಲ್ಲಿ" ಎಂದು ಪದೇ ಪದೇ ಹೇಳುತ್ತಿದ್ದುದು. ಚಂದ ಚಂದದ ಬೆಳ್ಳನೆಯ ಅಕ್ಕಿಕಾಳು ಈಗ ಹೀಗೆ ವ್ಯರ್ಥವಾಗಿ ಚರಂಡಿ ಸೇರುತ್ತದಲ್ಲ ಎಂಬುದು ಸಹಿಸಲಾರದ ಸಂಕಟ. ಒಬ್ಬೊಬ್ಬರು ಒಂದೊಂದು ಮುಷ್ಠಿ ಆದರೆ  ಸಹಸ್ರ ಸಹಸ್ರ ಜನ ಇಂದು ಹೀಗೆ ಅಕ್ಕಿ ಕಾಳು ಎಲ್ಲೆಲ್ಲೋ ಚೆಲ್ಲುತ್ತಿದ್ದಾರಲ್ಲ, ಛೆ ಅನ್ನಿಸಿತು. ಏನಾದರಾಗಲಿ ಎಂದು ನಾನು ಒಂದು ಅಕ್ಕಿ ಕಾಳನ್ನೂ ಚೆಲ್ಲಲಿಲ್ಲ, ಜತನವಾಗಿ ಬಾಳೆ ಎಲೆಯಲ್ಲಿ ಹಾಗೆ ಮಡಚಿಟ್ಟುಕೊಂಡು ತಂದು ನಮ್ಮ ಹಂಸಗಳಿಗೆ ಹಾಕಿದೆ. ಅವು ಕುಷ್ ಕುಷಿಯಾಗಿ ಬಕಬಕನೆ ನನ್ನ ಕಣ್ಮುಂದೆ ತಿನ್ನುವುದನ್ನು ನೋಡಿ ಸಂತಸ ಪಟ್ಟೆ.

ಸರಿ ಸರಿ ಅದು ಸರಿ ಈ ಫೋಟೋಕ್ಕೂ ನಿನ್ನ ವರಾತಕ್ಕೂ ಎತ್ತಣದೆತ್ತಣ ಸಂಬಂಧ ಶರ್ಮಾಜಿ(ನನಗೆ ನಾನು ಗೌರವ ಕೊಟ್ಟುಕೊಳ್ಳುವುದು ಎಂದರೆ ಇದೇ ನೋಡಿ, ನನಗೂ ಗೊತ್ತು ನೀವು ಶರ್ಮಾಜಿ ಅಂತ ಅನ್ನುವುದಿಲ್ಲ ಅಂತ ಇರಲಿ) ಅಂತ ನೀವು ಕೇಳಬಹುದು. ಹೌದು ಕಣ್ರೀ ನಾವು ಅತ್ತ ಅಕ್ಕಿಕಾಳು ನೀರಲ್ಲಿ ತೇಲಿಬಿಡುತ್ತಿದ್ದಾಗ ನಮ್ಮೂರ ಹೆಣ್ಮಕ್ಕಳು ಮಳೆ ಛಳಿಯನ್ನದೇ ಅದೇ ಅಕ್ಕಿಕಾಳಿನ ಸೃಷ್ಟಿಯಲ್ಲಿ ತೊಡಗಿದ್ದರು. ಈ ಕೆಲಸ ತುಂಬಾ ಕಷ್ಟ ಕಣ್ರೀ ಆದರೆ ಜನ ಅಕ್ಕಿಕಾಳು ಸೃಷ್ಟಿಕರ್ತನಿಗಿಂತ ನೀರಲ್ಲಿ ತೇಲಿಬಿಟ್ಟವರತ್ತ ನೊಡುತ್ತಾರೆ. ಛೆ. ಇರಲಿ ಯದ್ಬಾವಂ ತದ್ ಭವತಿ.