Thursday, August 23, 2012

ಕಪ್ಪು ಬಣ್ಣಕ್ಕೆ ಹೊಗೆ ಇಲ್ಲ ಕಾಲ ಬದಲಾಗಿದೆ.

ಮಜ್ಜಿಗೆ ಕಪಾಟು ಅಂದರೆ ಅಡಿಗೆ ಮನೆಯಲ್ಲಿರುವ ಮರದ ಕಪಾಟು ಅಂಬೋದು ಅರ್ಥ ಅಂತಾದರೆ ನಿಮಗೆ ಸ್ವಲ್ಪ ತಲೆಕೆರೆದುಕೊಳ್ಳುವಷ್ಟು ಅಲ್ಲದಿದ್ದರೂ ಇದೇನಪ್ಪಾ ಮರದ ಕಪಾಟಿಗೆ ಮಜ್ಜಿಗೆಯ ಹೆಸರು ಅಂತ ನಿಮಗೆ ಅನ್ನಿಸದಿರದು. ನಮ್ಮ ಹಳ್ಳಿ ಮನೆಗಳಲ್ಲಿ ಒಂದುಕಾಲದ ಮನೆಯ ಗೃಹಲಕ್ಷ್ಮಿ...! ಯ ಅತ್ಯಂತ ಜತನವಾದ ಸ್ಥಳ ಅದು. ಅಡಿಗೆಮನೆಯ ಯಾವುದೋ ಒಂದು ಮೂಲೆಯಲ್ಲಿ ಕಪ್ಪುಬಣ್ಣದಲ್ಲಿರುವ, ಮರದ ಜಾತಿ ಯಾವುದು ಅಂತ ತಿಳಿಯದ ಹಂತದಲ್ಲಿರುವ ಈ ಕಪಾಟು ಮಜ್ಜಿಗೆ ಬೆಣ್ಣೆ ತುಪ್ಪ ಇಡುವ ಕಾರಣದಿಂದ ಆ ಹೆಸರು ಅದಕ್ಕೆ. ಹೆಸರಿಗೆ ತಕ್ಕಂತೆ ಅಷ್ಟೇ ಇಡುವ ಕಪಾಟಾಗಿದ್ದರೆ ಅದನ್ನ ನಾನು ಇಲ್ಲಿ ಬರೆಯುವ ಪ್ರಮೇಯ ಇರುತ್ತಿರಲಿಲ್ಲ. ಆದರೆ ಆ ಕಪಾಟು ಆ ಮನೆಯ ಗೃಹಿಣಿಯ ಎಲ್ಲಾ ಸ್ವತ್ತುಗಳನ್ನು ಜತನವಾಗಿ ಕಾಪಿಟ್ಟುಕೊಳ್ಳುವ ಜಾಗವಾಗಿದ್ದರಿಂದ ಅದಕ್ಕೊಂದು ಮಹತ್ವ ಸ್ಥಾನ. ಈಗ ಬಿಡಿ, ಕಬ್ಬಿಣದ ಸುವ್ಯವಸ್ಥಿತ ಪದ್ದತಿ ಬಂದಿದೆ ಹಾಗಾಗಿ ಮರದ ಮಜ್ಜಿಗೆ ಕಪಾಟು ತನ್ನತನ ಕಳೆದುಕೊಂಡು ಮಾಯವಾಗಿದೆ. ಈಗಿನದು ಬಿಟ್ಟು ಹಿಂದಿನದಕ್ಕೆ ತೆರಳೋಣ.

              ಕಟ್ಟಿಗೆಯ ಒಲೆಯ ಕಾಲ, ಹಾಗಂತ ತೀರಾ ನೂರು ವರ್ಷ ಹಿಂದಿನದಲ್ಲ ಜಸ್ಟ್ ನಲವತ್ತು ವರ್ಷ ಅಷ್ಟೆ. ನೆಲಕ್ಕೆ ಕುಳಿತು ಉಬಸಾ ಅಂಡೆ ಎಂಬ ಕಬ್ಬಿಣದ ಪೈಪ್ ನಿಂದ ವಿಚಿತ್ರ ಸದ್ದು ಮಾಡಿ ಒಲೆ ಉರಿಸಬೇಕು. ಅಡಿಗೆ ಮನೆಯಲ್ಲಿ ಒಂದೇ ಒಂದು ಕಪ್ ಕಾಫಿ ಮಾಡಿದರೂ ಹೊಗೆಯಿಂದ ತುಂಬಿ ತುಳುಕಾಡುವ ಸಮಯ. ಹೊಗೆಯ ಪ್ರಮಾಣ ಅಷ್ಟಿದ್ದಮೇಲೆ ಅಲ್ಲಿರುವ ಯಾವ ವಸ್ತು ಬೆಳ್ಳಗಿರಲು ಸಾದ್ಯ..? ಅಂತಹ ವಾತಾವರಣದಲ್ಲಿ ಈ ಮಜ್ಜಿಗೆ ಕಪಾಟು ಇರುತ್ತಿತ್ತು. ಅದಕ್ಕೊಂದು ಬಾಗಿಲು ಬಾಗಿಲಿಗೊಂದು ಚಿಲಕ. ಆ ಚಿಲಕ ಸಸೂತ್ರವಾಗಿ ನಿಂತಿದ್ದನ್ನು ನಾನಂತೂ ಯಾರಮನೆಯಲ್ಲಿಯೂ ನೋಡಿರಲಿಲ್ಲ. ಒಂದೋ ಹಲ್ಲುಕಚ್ಚಿ ತೆಗೆಯಬೇಕಾಗಿತ್ತು ಅಥವಾ ಚಿಲಕ ತೆಗೆಯುವ ಅವಶ್ಯಕತೆಯೇ ಇರುತ್ತಿರಲಿಲ್ಲ, ಓರೆಯಾಗಿ ಜೋತು ಬಿದ್ದಿರುತ್ತಿತ್ತು. ಅಂತಹ ಕಪಾಟಿನಲ್ಲಿ ಕೆಳಗಿನ ಅರೆಯಲ್ಲಿ ಸಾಲಾಗಿ ಮಜ್ಜಿಗೆ ಬೆಣ್ಣೆ ತುಪ್ಪ ಮುಂತಾದವುಗಳ ಸ್ಥಾನ, ಎರಡನೆ ಅಂದರೆ ಮಧ್ಯದ ಅರೆಯಲ್ಲಿ ನೆಂಟರಿಷ್ಟರು ತಂದಿರುವ ಗ್ಲುಕೋಸ್ ಬಿಸ್ಕತ್ತು ಮೂಸಂಬಿ ಹಣ್ಣು ಮುಂತಾದವುಗಳ ಸ್ಥಾನ. ನಮಗೆಲ್ಲಾ ಅತ್ಯಂತ ಇಷ್ಟವಾದ ಸ್ಟೆಪ್ ಅದು. ಮೇಲ್ಗಡೆ ಅರೆ ಗೃಹಣಿಯ ಸಾಸಿವೆ ಡಬ್ಬಿ ಯ ಸ್ಥಾನ. ಅಲ್ಲಿ ಮನೆಯೆಂಬ ಮಹಾಲಕ್ಷ್ಮಿಯ ಲಕ್ಷ್ಮಿ ಅವತಾರ ಅನಾವರಣ ಗೊಳ್ಳುತ್ತಿತ್ತು. ಯಾವುದೇ ಡಬ್ಬಿಯ ಅಡಿಬಾಗಕ್ಕೆ ಕೈಹಾಕಿದರೂ ಅಲ್ಲಿರುತ್ತಿತ್ತು ಚಿಲ್ಲರೆ ಕಾಸು. ಆ ಮೇಲಿನ ಸ್ಟೆಪ್ ಸಾಮಾನ್ಯವಾಗಿ ಹುಡುಗರ ಕೈಗೆ ಸಿಗದಷ್ಟು ಎತ್ತರದಲ್ಲಿರುತ್ತಿತ್ತು. ಕಾಸಷ್ಟೇ ಅಲ್ಲಿನ ವಾಸಸ್ಥಾನ ಅಲ್ಲ, ಸ್ವಲ್ಪ ದುಬಾರಿಯ ಪದಾರ್ಥಗಳಾದ ಗೋಡಂಬಿ ಕೇಸರಿ ದ್ರಾಕ್ಷಿಗಳ ಜತನತನವೂ ಅಲ್ಲಿಯೇ. ನಮಗೆಲ್ಲಾ ಆ ಕಾರಣದಿಂದ ಆ ಮೇಲಿನ ಸ್ಟೆಪ್(ಅರೆ) ತುಂಬಾ ಇಷ್ಟ. ಮನೆಯಲ್ಲಿ ಹಿರಿಯರು ಇಲ್ಲದಾಗ ಬಿಸ್ಕತ್ ಟಿನ್( ಬಿಸ್ಕತ್ ಗೆ ಉಪಯೋಗಿಸಿದ ಖಾಲಿ ಟಿನ್) ಮಗಚಿ ಇಟ್ಟು ಸರ್ಕಸ್ ಮಾಡಿ ಅಲ್ಲಿದ್ದ ಗೋಡಂಬಿ ಹೊಟ್ಟೆಗೆ ಸೇರಿಸಲು ಹರ ಸಾಹಸ ಮಾಡಿದ್ದಿದೆ. ಹಾಗೆ ಮಾಡಲು ಹೋಗಿ ದಡಾರನೆ ಬಿದ್ದು ಒದೆ ತಿಂದಿದ್ದೂ ಇದೆ. ಇವೆಲ್ಲಾ ಕಾರಣದಿಂದ ಕಪ್ಪುಮಸಿ ಬಣ್ಣದ ಮಜ್ಜಿಗೆಗೂಡು ನನ್ನ ಮಿದುಳಿನಲ್ಲಿ ಸಂಗ್ರಹವಾಗಿದೆ.
         ಈಗ ಮತ್ತೆ ಹೊಸ ಮನೆಯಲ್ಲಿ ಮಜ್ಜಿಗೆ ಗೂಡು ಮಾಡಿಸಿಯಾಗಿದೆ. ಆದರೆ ಮೊದಲನೇ ಸ್ಟೆಪ್ ಮಕ್ಕಳಿಗೆ ಸಿಗದಷ್ಟು ಎತ್ತರಕ್ಕೆ ಇಟ್ಟಾಗಿದೆ, ಕಾರನ ಈಗ ನಾವು ಮಕ್ಕಳ ಅನುಭವ ಪಡೆದ ದೊಡ್ಡವರು ಹಾಗಾಗಿ. ಆದರೆ ಕಪ್ಪು ಬಣ್ಣಕ್ಕೆ ಹೊಗೆ ಇಲ್ಲ ಕಾಲ ಬದಲಾಗಿದೆ.

Tuesday, August 21, 2012

ಓಕೆ ಮಜಾ ಮಾಡಿ ಮುಂಜಾನೆಯೊಂದಿಗೆ.

             "ಮುಂಜಾನೆದ್ದು ಕುಂಬಾರಣ್ಣ ಹಾಲು ಬಾನುಂಡಾನ, ಹಾರಿ ಹಾರ್ಯಾಡಿ ಮಣ್ಣ ತುಳಿದಾನ.." ಪ್ರಾಯಶಃ ಹೀಗೆಯೇ ಇರಬೇಕು ಒಂದು ಜನಪದ ಹಾಡಿದೆ. ತುಂಬಾ ಚೆನ್ನಾಗಿದೆ. ಅದರ ದನಿ ಒಳ್ಳೆಯ ಖುಷಿ ಕೊಡುತ್ತದೆ. ನನಗೆ ಅದರಲ್ಲಿ "ಮುಂಜಾನೆ" ಎಂಬ ಪದ ಇನ್ನಷ್ಟು ಖುಷಿ ಕೊಡುತ್ತದೆ. ಹೊಸ ದಿನದ ಆರಂಭದ ಕ್ಷಣವಾದ ಮುಂಜಾನೆಯಲ್ಲಿ ನಮಗೆ ಎಲ್ಲವೂ ಹೊಸ ಹೊಸತು. ರಾತ್ರಿ ಮಲಗಿ ಬೆಳಗ್ಗೆ ಏಳುವ ನಮ್ಮನ್ನೇ ನಾವು ಮರೆತು ಹೋಗಿದ್ದ ಆ ಆರೇಳು ತಾಸು ನಮ್ಮ ನಿಯಂತ್ರಣಕ್ಕೆ ಸಿಗದ ಕನಸುಗಳು, ನಮ್ಮ ದೇಹವನ್ನೇ ನಾವು ಮರೆತ ಗಳಿಗೆಗಳು ಏನಂತ ಹೇಗಂತ ತೀರಾ ತರ್ಕಕ್ಕೆ ಒಳಪಡಿಸದೆ ಕೇವಲ ಅನುಭವಕ್ಕಷ್ಟೆ ಆಲೋಚಿಸಿದರೆ ಇದ್ದಕ್ಕಿದ್ದಂತೆ ಚುಮು ಚುಮು ಬೆಳಗಿನಲ್ಲಿ ಪಟಕ್ಕನೆ ಎಚ್ಚರವಾದರೆ ಅದು ಮುಂಜಾನೆಯೇ ಆಗಿದ್ದರೆ, ನಿಮ್ಮ ಮಂಚದ ಪಕ್ಕದಲ್ಲಿ ಒಂದು ಕಿಟಕಿಯಿದ್ದರೆ, ಆ ಕಿಟಕಿಯಲ್ಲಿ ಕೆಂಬಣ್ಣದ ಸೂರ್ಯ ಇಣುಕಲು ಸಿದ್ಧವಾಗಿದ್ದರೆ, ಅದು ಸುಂದರ, ಕೇವಲ ಸುಂದರವೇನು ವರ್ಣಿಸಲಸದಳ. ಆದರೆ ಈ ಮುಂಜಾನೆಯನ್ನು ಅನುಭವಿಸಲು ನಿಮ್ಮ ರಾತ್ರಿಯೂ ಸುಂದರವಾಗಿರಬೇಕು, ಇನ್ನೇನು ನಿದ್ರೆಗೆ ಜಾರುವ ಕ್ಷಣಗಳು ನಿಮ್ಮ ನಿಯಂತ್ರಣದಲ್ಲಿರಬೇಕು. ಆ ನಿದ್ರೆಗೆ ಜಾರುವ ಕ್ಷಣಗಳು ಸುಂದರವಾಗಿರಬೇಕು ಎಂದಾದರೆ ಮುನ್ನಾ ದಿನದ ದಿನಚರಿ ನಿಮ್ಮ ಮನಸ್ಸಿಗೆ ಮಜ ಕೊಟ್ಟಿರಬೇಕು. ಮತ್ತೆ ಮಜ ಎಂದರೆ ಮೋಜಲ್ಲ ಅದು ಶಾಂತ ನೆಮ್ಮದಿ ಮುಂತಾದ ಪದಗಳಲ್ಲಿನ ನಿಮ್ಮ ಆತ್ಮ ತೃಪ್ತಿಯ ಮಜ.

           ಸರಿ ಮುನ್ನಾದಿನ ಯಾವ್ಯಾವುದೋ ಕಾರಣಕ್ಕೆ ಚಟಪಟ ಅಂತ ಮನಸ್ಸು ಅಂದಿದ್ದರೆ ಅಂದು ರಾತ್ರಿ ನಿಮ್ಮದೇಹ ನಿದ್ರೆಗೆ ಜಾರಿದ್ದರೂ ಮನಸ್ಸು ವಟವಟ ಅನ್ನುತ್ತಲಿರುತ್ತದೆ. ಈ ಪಟಪಟ ಸದ್ದು ರಾತ್ರಿ ಪೂರ್ತಿ ಕಾಡಿ ಮುಂಜಾನೆ ನಿಮಗೆ ಎಚ್ಚರವಾದಾಗ ಹೊಸತನವನ್ನು ಕಾಣಲು ಬಿಡುವುದಿಲ್ಲ. ಆವಾಗ ನವನವೀನ ಮುಂಜಾನೆಯ ಕ್ಷಣಗಳನ್ನು ಅನುಭವಿಸುವ ಮಜ ದಕ್ಕುವುದಿಲ್ಲ. ಆ ಮಜ ದಕ್ಕುವುದಿಲ್ಲ ಅಂದಾದ ಮೇಲೆ "ಮುಂಜಾನೆ" ಯು ಕಿರಿಕಿರಿಯಿಂದಲೆ ಆರಂಭ ಮತ್ತು ದಿನಪೂರ್ತಿ ಚಡಪಡಿಕೆ ಮತ್ತದೇ ರಾತ್ರಿ ಮತ್ತದೇ ಚಟಪಟ ಮನಸ್ಸಿನ ನಿದ್ರೆ ಮತ್ತದೇ ಕಿರಿಕಿರಿ ಮುಂಜಾನೆ. ಇಲ್ಲ ಅದು ಹಾಗಾಗಬಾರದು ದಿನನಿತ್ಯ ಹೊಸ ಮುಂಜಾನೆ ಹೊಸ ಸೂರ್ಯನ ಕಿರಣ ಹೊಸ ಮಜ ಆಗಬೇಕು ಅಂತಾದಲ್ಲಿ ಒಂದು ಸಣ್ಣ ಉಪಾಯವಿದೆ. ಅದನ್ನು ಹಲವರು ಹತ್ತುಬಾರಿ ನಿಮಗೆ ಹೇಳಿರಬಹುದು. ಆದರೂ ಮೊನ್ನೆ ನನೆಲ್ಲೋ ಓದಿದೆ ಅದನ್ನ ಇಲ್ಲಿ ಹೇಳಿಬಿಡುತ್ತೇನೆ. ಬೇಕಾದರೆ ಬಳಸಿಕೊಳ್ಳಿ ಬೇಡವಾದರೆ ಬಿಟ್ಟಾಕಿ.
             ನಮ್ಮ ಮಿದುಳಿಗೆ ಕೆಲಸವೆಂದರೆ ನೆನಪಿಟ್ಟುಕೊಳ್ಳುವುದು. ಅದು ನಮಗೆ ಬೇಕಾದ್ದರಿಲಿ ಬೇಡವಾದ್ದಿರಲಿ ನೆನಪಿಟ್ಟುಕೊಳ್ಳುತ್ತದೆ. ಭಯ ತರಿಸುವ ಧೈರ್ಯ ಕೊಡುವ ಎಲ್ಲಾ ಘಟನೆಗಳನ್ನು ಕಂಡಿದ್ದು ಕೇಳಿದ್ದರಲ್ಲಿ ಒಂದಿಷ್ಟು ಹೀಗೆ ನೆನಪಿಟ್ಟುಕೊಂಡು ಇದ್ದಕ್ಕಿದ್ದಂತೆ ದುತ್ತನೆ ನೆನಪಿಸುತ್ತದೆ. ಆ ನೆನಪಿನ ಶಕ್ತಿಯೇ ನಮಗೆ ಬಹು ಉಪಕಾರಿ ನಿಜ ಆದರೆ ಕೆಲವು ಬಾರಿ ಯಡವಟ್ಟುಕೊಡುತ್ತದೆ. ಆ ಯಡವಟ್ಟು ತಪ್ಪಿಸಲು ಸುಲಭ ಉಪಾಯವೆಂದರೆ ರಾತ್ರಿ ಮಲಗುವ ಮುನ್ನ ದೇಹವನ್ನು ದಣಿಸುವುದು. ತಕತಕ ಕುಣಿದರೂ ಸರಿಯೇ ಕಿಲೋಮೀಟರ್ ನಡೆದರೂ ಸರಿಯೇ ಒಟ್ಟಿನಲ್ಲಿ ದೇಹ ದಣಿಯಬೇಕು. ದೇಹ ದಣಿದ ಮರುಕ್ಷಣ ನಿದ್ರೆ ಆಳವಾಗಿ ಬರುತ್ತದೆ ಆವಾಗ ಮುಂಜಾನೆ ಸೂಪರ್. ಒಟ್ಟಿನಲ್ಲಿ ಮುಂಜಾನೆ ಸೂಪರ್ ಇರಬೇಕು ಎಂದಾದರೆ ಹೊಸತನದಿಂದ ಕೂಡಿರಬೇಕು ಎಂದಾದರೆ ಮುನ್ನಾದಿನ ಬಹುಮುಖ್ಯ. ಎಂಬಲ್ಲಿಗೆ ಜೀವನದಲ್ಲಿ ಎಲ್ಲಾ ದಿನಗಳು ಮುಖ್ಯ ಎಂದು ಹೊಸತಾಗಿ ಹೇಳಬೇಕಾಗಿಲ್ಲ ತಾನೆ?. ಆದರೆ ಈ ಜಂಜಡದಲ್ಲಿ ನಾವು ಎಲ್ಲಾ ದಿನಗಳನ್ನು ನಮಗೆ ಬೇಕಾದಂತೆ ಮಾಡಿಕೊಳ್ಳಲು ಆಗುವುದಿಲ್ಲ. ಅದು ಮಿಕ್ಕವರನ್ನೂ ಅವಲಂಬಿಸಿರುತ್ತದೆ. ಹಾಗಾಗಿ ಮಲಗುವ ಮುನ್ನ ನಮ್ಮನ್ನು ನಾವು ದಣಿಸಿಕೊಳ್ಳಬಹುದು. ಅದು ಸುಖ ನಿದ್ರೆಗೆ ಸುಲಭೋಪಾಯ, ಮತ್ತು ಶುಭ ಮುಂಜಾನೆಗೂ ಅದೇ ರಾಜಮಾರ್ಗ. ಓಕೆ ಮಜಾ ಮಾಡಿ ಮುಂಜಾನೆಯೊಂದಿಗೆ.

Photo:  SriakantaDatta Bangalore

Monday, August 20, 2012

ನನ್ನದಂತೂ ಆಸೆ ಅಷ್ಟೆ.

ಅಕ ಇಕ ಎನ್ನುವುದರೊಳಗೆ ನಾನು ಹೊಚ್ಚಹೊಸ ಕಾರು ತೆಗೆದುಕೊಂಡು ಒಂದು ವರ್ಷವಾಗುತ್ತಿದೆ
. ಸ್ಯಾಂಟ್ರೊ ಬರೊಬ್ಬರಿ ೧೮೧೫೦ ಕಿಲೋಮೀಟರ್ ನನ್ನನ್ನು ಸುತ್ತಾಡಿಸಿ ಇನ್ನೂ ಮಿರಿಮಿರಿ ಮಿಂಚುತ್ತಿಲ್ಲದಿದ್ದರೂ ಚೆನ್ನಾಗಿದೆ. ಕಾರ್ ಕಾರ್ ಕಾರ್ ಎಲ್ನೊಡಿ ಕಾರ್ ಎನ್ನುವಂತೆ ಒಂದು ಕಾಲದ ಐಷಾರಾಮಿಯಾಗಿದ್ದ ಕಾರುಗಳು ಈ ದಶಕದಲ್ಲಿ ಭಾರತದಂತಹ ಮಧ್ಯಮವರ್ಗದ ಜನರ ಸಂಖ್ಯೆ ಜಾಸ್ತಿಯಿರುವ ಇಂಡಿಯಾದಲ್ಲಿಯೂ ಅವಶ್ಯಕತೆಯ ಮಟ್ಟಕ್ಕೆ ಇಳಿದಿರುವುದು ಒಂಥರಾ ಸಂತಸದ ಸಂಗತಿ. ೪೦ ಸಾವಿರ ರೂಪಾಯಿಗಳು ಜೇಬಲ್ಲಿದ್ದರೆ ಅದಕ್ಕೆ ರಕ್ಕೆ ಬಂದಿದ್ದರೆ ಒಂದು ಸೆಕೆಂಡ್ ಹ್ಯಾಂಡ್ ಕಾರ್ ಕೊಂಡು ಕನಸು ನನಸು ಮಾಡಿಕೊಳ್ಳಬಹುದು ಎಂದಾದರೆ ಕನಸು ಕಾಣದೆ ಭಾಗ್ಯ ಕಳೆದುಕೊಳ್ಳಬೇಕೇ ವಿನಹ ನನಸಿಗೇನು ತೊಂದರೆಯಿಲ್ಲ ಎನ್ನುವಷ್ಟರಮಟ್ಟಿಗೆ ಇದೆ ಸ್ಥಿತಿ ಪರಿಸ್ಥಿತಿ. ಪುಟ್ಟ ಮನೆಯ ಮಜಕೊಡುವ ಕಾರ್ ಒಮ್ಮೆ ಅಭ್ಯಾಸವಾಯಿತೆಂದರೆ ಆಮೇಲೆ ಆರ್ಥಿಕ ಪರಿಸ್ಥಿತಿ ಕಣ್ಣಿಗೆ ಮನಸ್ಸಿಗೆ ಗೋಚರಿಸದು. ಮಜ ಇದೆ ಅಲ್ಲಿ ಅನುಭವಿಸುವ ಮನಸ್ಸು ಇರಬೇಕು ಅಥವಾ ಯೋಗದ ನಂಟು ಬಯಸುವ ಮಂದಿಯ ದೃಷ್ಟಿಯಲ್ಲಿ ಅದಿರಬೇಕು ಯೋಗಾಯೋಗ. ಅಂತೂ ಏನೋ ಒಂದು ವರ್ಷವಂತೂ ಯೋಗವಿತ್ತು ಮುಂದಿನದು..? ಯಾರಿಗೆ ಗೊತ್ತು....! ನನ್ನದಂತೂ ಆಸೆ ಅಷ್ಟೆ.

Sunday, August 19, 2012

ಅಷ್ಟಕ್ಕೆ ಬಿಟ್ಟರೂ ಓಕೆ.

           ನೀವು ಅಷ್ಟರಮಟ್ಟಿಗೆ ಬೆಳೆದಿರಿ ಎಂತಾದರೆ ಪ್ರಪಂಚವನ್ನೇ ಗೆದ್ದಂತೆ ಬಿಡಿ. ಅಷ್ಟರಮಟ್ಟಿಗೆ ಎಂದರೆ ಎಷ್ಟರಮಟ್ಟಿಗೆ ಎಂದಿರಾ...? ಸರಿ ಹಾಗಾದರೆ ನಾನೇನು ಮಾಡಲಿ ಕೊರೆಯಿಸಿಕೊಳ್ಳಲು ನೀವೇ ಬೈರಿಗೆ ಕೊಟ್ಟಂತಾಯಿತು . ಅಯ್ಯ ನಾನೆಲ್ಲಿ ಎಷ್ಟರಮಟ್ಟಿಗೆ..? ಎಂದೆ ಎಂದಿರಾ ಹಾಗಾದರೆ ಅದಕ್ಕೂ ನಾನು ತಯಾರು , ಮುಂದೆ ಹಾಗಂದವರು ಓದದಿದ್ದರಾಯಿತು. ಗೊಂದಲ ಬೇಡ ಸುಮ್ಮನೆ ಹೋಗೋಣ ಅಲ್ಲವೇ..?

           ಕಸ್ತೂರಿ ಕನ್ನಡಿಗರಾದ ನಾವು ನೀವುಗಳು ಒಂದಿಷ್ಟು ಜನಕ್ಕೆ ನೀವು ಎನ್ನುತ್ತೇವೆ, ಮತ್ತೊಂದಿಷ್ಟು ಜನಕ್ಕೆ ನೀನು ಎಂದು ಸಂಬೋಧಿಸುತ್ತೇವೆ. ವ್ಯಕ್ತಿಗತವಾಗಿ ನೀವು ಎಂಬ ಬಹುವಚನವೂ ಹಾಗೂ ನೀನು ಎಂಬ ಏಕವಚನವೂ ಇಂಗ್ಲೀಷ್ ನಲ್ಲಿ ಇಲ್ಲ ಅಂತ ಬಲ್ಲವರು ಹೇಳಿದ್ದು ಕೇಳಿದ್ದೇನೆ. ಇರಲಿ ಅವರ ಕತೆ ನಮಗೆ ಬೇಡ. ನಮ್ಮದೇ ನಮಗೆ ಹಾಸಿ ಹೊದ್ದುಕೊಳ್ಳುವಷ್ಟು ಬಿದ್ದಿದೆ ಅಲ್ಲೇಲ್ಲೋ ಇರೋರ ಕತೆ ಯಾಕೆ ಈಗ ಹಾಗಾಗಿ ವಿಷಯದತ್ತ ಹೊರಳೋಣ.
            ಈ ನೀನು ನೀವು ಗುದ್ದಾಟವನ್ನು ಒಮ್ಮೆ ಹೀಗೆ ಸುಮ್ಮನೆ ಕುಳಿತಾಗ ಆಲೋಚನೆ ಮಾಡಿ ನೋಡಿ. ಚಿತ್ರವಿಚಿತ್ರ ಹೊಳವಿನತ್ತ ಯೋಚನೆ ಸಾಗುತ್ತದೆ. ಸರ್ವಾಂತರ್ಯಾಮಿ ಸರ್ವಶಕ್ತನಾದ ಆ ಭಗವಂತನನ್ನು ನಾವು ನೀನು ಅಂತ ಏಕವಚನದಲ್ಲಿ ಕರೆಯುತ್ತೇವೆ. ದೇವರ ವಿಚಾರ ವಿಷಯಗಳಲ್ಲಿ ನಾವು ಪಕ್ಕಾ ಏಕವಚನ. ಮನೆಗೆ ಕಂಠಮಟ್ಟ ಕುಡಿದು ಬರುವ ಗಂಡನಿಂದ ಹಿಡಿದು ಸಕಲ ಜವಾಬ್ದಾರಿ ನಿಭಾಯಿಸುವ ಗಂಡಸಿನವರೆಗೂ ನಮ್ಮ ಮಹಿಳೆಯರು "ನೀವು" ಬನ್ನಿ ಹೋಗಿ" ಮುಂತಾಗಿ ಗೌರವ ಸೂಚಕ ಪದಗಳನ್ನು ಬಳಸುತ್ತಾರೆ. ಅಯ್ಯ ಇದೆಂತಾ ವಿಪರ್ಯಾಸ ಅಂತ ನನಗೆ ಕಾಡಿದ್ದಿದೆ. ಪರಿಚಯ ಆದ ತಕ್ಷಣ ನೀವು ಎಂಬ ಪದಗಳಿಂದ ಆರಂಭವಾಗುವ ಮಾತುಗಳು ತೀರಾ ಹತ್ತಿರವಾಗುತ್ತಿದ್ದಂತೆ ನೀನು ಎಂಬ ಮಾತಿಗೆ ತಿರುಗುತ್ತದೆ. ಈ ಏಕವಚನ ಎಂಬುದು ಆತ್ಮೀಯತೆಯ ಸಂಕೇತ ಅಂತ ಕೆಲವರು ಹೇಳುತ್ತಾರಪ್ಪ. ಸರಿ ಅದು ಆತ್ಮೀಯತೆಯ ಸಂಕೇತ ಅಂದಾದರೆ ಗಂಡನ ಬಳಿ ಹೆಂಡತಿಗೆ ಆತ್ಮೀಯತೆ ಇಲ್ಲವೇ..? ಎಂಬ ಪ್ರಶ್ನೆ ಬಡಕ್ಕನೆ ಎದ್ದು ನಿಲ್ಲುತ್ತದೆ. ಇಲ್ಲ ಆತ್ಮೀಯತೆಯೊಂದೇ ಅಲ್ಲಿ ಗೋಚರಿಸುವುದಿಲ್ಲ ನೀವು ಎಂಬುದು ಗೌರವ ಸೂಚಕ ಅಂತ ಅದಕ್ಕೆ ಪುಷ್ಠಿ. ಆದರೆ ಮರುಕ್ಷಣ ಹಾಗಾದರೆ ಆ ಮಹಾನುಭಾವ ದೇವರಿಗೆ ಗೌರವ ಸೂಚಕದ ಅವಶ್ಯಕೆತೆ ಇಲ್ಲವೇ..? ಎಂಬ ಕುಚೋದ್ಯವಲ್ಲದ ಕ್ವಶ್ಚನ್ ಹುಟ್ಟುವುದು ಸ್ವಾಭಾವಿಕ.
          ದೇವರಿಗೆ ಇಲ್ಲದ ಗೌರವ ಸೂಚಕ ಆ ಭಗವಂತನ ಅರ್ಚಕರಾದ ಪುರೋಹಿತರುಗಳಿಗೆ ಪುಗಸಟ್ಟೆ ಸಿಗುತ್ತದೆ. ಅಕಸ್ಮಾತ್ ಬಾಯಿತಪ್ಪಿ ಪುರೋಹಿತರುಗಳಿಗೆ ನೀವುಗಳು ಅಥವಾ ನಾವುಗಳು...! ಏಕವಚನದಲ್ಲಿ ಕರೆದಿವಿ ಅಂತಾದಲ್ಲಿ ಸ್ವತಃ ಅವರಿಂದ ಹಿಡಿದು ಮನೆಯಲ್ಲಿರುವ ಇವರ ವರೆಗೂ ಕೆಂಡಾಮಂಡಲ ಕೋಪ ಬರುತ್ತದೆ. ಅದು ಎಷ್ಟರಮಟ್ಟಿಗೆ ಎಂದರೆ ಮನೆಯಲ್ಲಿ ಶಾಂತಿ ನೆಮ್ಮೆದಿ ನೆಲಸುವ ಸಲುವಾಗಿ ಹಾಕಿಕೊಂಡ ಕಾರ್ಯಕ್ರಮ ಗಬ್ಬೆದ್ದು ಹೋಗುವಷ್ಟು.
          ಇದೆ, ವಿಷಯ ಇದೆ ಎಷ್ಟಪ್ಪಾ ಎಂದರೆ "ನೀವು ನಾವು" ಎಂಬ ವಿಷಯದ ಮೇಲೆ ಒಂದು ಕಾದಂಬರಿ ಬರೆಯುವಷ್ಟು ವಿಷಯ ಇದೆ. ಆದರೆ ಅದು ಎಷ್ಟು ಹೇಳಿದರೂ ಮತ್ಯಾರೋ ಕಾಮೆಂಟಿನಲ್ಲಿ ಒಂದೇ ಸಾಲಿನಲ್ಲಿ "ನೀನು ನೀನೆ ನಾನು ನಾನೆ" ಅಂತ ಒಂದೇ ಸಾಲಿನಲ್ಲಿ ಜಡಿದು ನಾನು ಕೈಬೆರಳು ನೋಯಿಸಿಕೊಂಡ ಶ್ರಮವನ್ನು ವ್ಯರ್ಥಮಾಡಿಬಿಡುತ್ತಾರೆ. ಹಾಗಾಗಿ ನಿಮ್ಮ ಹೈ ಐಕ್ಯೂ ಇರುವ ಮಿದುಳಿಗೆ ಹೀಗೊಂದು ವಿಷಯ ಬಿಟ್ಟಿದ್ದೇನೆ. ಅದು ಯಾವ್ಯಾವ ಹೊಳವನ್ನ ಪಡೆಯುತ್ತದೆಯೋ ನೋಡೋಣ. ಅಷ್ಟಕ್ಕೆ ಬಿಟ್ಟರೂ ಓಕೆ ಈಗ ನಿಮಗೆ ಅರ್ಥವಾಗಿರಬೇಕು ಎಷ್ಟರಮಟ್ಟಿಗೆ ಬೆಳೆದರೆ ಎಂದು.